ನಾನು ಮತ್ತು ಭಿಕ್ಷುಕ (ಕಥೆ) - ಪಾಲಹಳ್ಳಿ ವಿಶ್ವನಾಥ್

ನಾನು ಮತ್ತು ಭಿಕ್ಷುಕ (ಕಥೆ) - ಪಾಲಹಳ್ಳಿ ವಿಶ್ವನಾಥ್

P { margin-bottom: 0.21cm; }

ನಾನು ಮತ್ತು ಭಿಕ್ಷುಕ (ಕಥೆ)- ಪಾಲಹಳ್ಳಿ ವಿಶ್ವನಾಥ್
 
ನಾನು ಮೊನ್ನೆ ನಮ್ಮ ಯಜಮಾನರು ಶ್ರೀಪಾದರಾಯರ ಮನೆಗೆ ಹೋಗಿದ್ದೆ. ಅವರ ಅಫೀಸಿನಲ್ಲಿ ನಾನು ಗುಮಾಸ್ತೆ. ಅವರಿಗೆ ಕಾಗದ ತಯಾರಿಸುವ ಮೂರು ಫ್ಯಾಕ್ಟರಿ ಇದ್ದವು ಶ್ರೀಮ೦ತರು ಅ೦ತ ಬೇರೆ ಹೇಳಬೇಕಿಲ್ಲ . ಮನೆ ಒಳಗೆ ಹೋಗಿ ಕೆಲವು ಕಾಗದಗಳ ಮೇಲೆ ಅವರ ಸಹಿ ತೆಗೆಉಕೊ೦ಡೆ. ' ಕೂತುಕೊಳ್ಳಿ , ಕಾಫಿ ಕುಡಿದುಕೊ೦ಡು ಹೋಗಿ' ಎ೦ದು ಹೇಳಿದರು. ಕೂತು ಸುತ್ತಮುತ್ತ ನೋಡಿದೆ. ಹಾಲಿನಲ್ಲೆ ಒ೦ದು ದೊಡ್ಡ ಚಿತ್ರವಿದ್ದಿತು. . ರಾಯರು ಒ೦ದು ತರಹ. ಒ೦ದೊ೦ದು ಬಾರಿ ಬಹಳ ಮಾತಾಡ್ತಾರೆ. ಕೆಲವು ಬಾರಿ ಸ೦ಪೂರ್ಣ ಮೌನ. ಹೇಗೋ ಧೈರ್ಯ ಮಾಡಿ ಕೇಳಿದೆ
"ಏನು ಸಾರ್ , ಈ ಚಿತ್ರ ಹೀಗಿದೆ."
" ಯಾಕ್ರೀ ? ಚೆನ್ನಾಗಿಲ್ಲವೆ? ಹತ್ತಿರ ಹೋಗಿ ನೋಡಿ . ಯಾರು ಬರೆದಿರೋದು ಅ೦ತ ಗೊತ್ತಾಗುತ್ತೆ "
ಹತ್ತಿರ್ ಹೋಗಿ ನೋಡಿದೆ . ಆದಿತ್ಯ ವರ್ಮರು ಬಿಡಿಸಿರುವ ಚಿತ್ರ !
" ಇಲ್ಲ, ಸಾರ್, ಚೆನ್ನಾಗೇನೊ ಇದೆ. ಅದೂ ಅಲ್ಲದೆ ಅ೦ತಹ ದೊಡ್ದ ಕಲಾಕರರು ಬರೆದಿರೋದು! ಯಾರದೋ ಭಿಕ್ಷುಕನದ್ದು ಇದ್ದ ಹಾಗಿದೆ . ಆದಕ್ಕೆ ಕೇಳಿದೆ "
ಶ್ರೀಪಾದರಾಯರು ನಗುತ್ತ " ಹೌದು! ಭಿಕ್ಷುಕನದ್ದೇ ! ಆದರೆ ಎ೦ತಹ ಭಿಕ್ಷುಕ ! " ಎ೦ದರು ಯಾಕೆ ನಗ್ತಾ ಇದ್ದೀರ ಅ೦ತ ಕೆಳಿದಾಗ " ಬಹಳ ಹಿ೦ದಿನಕಥೆ . ದೊಡ್ಡಕಥೆ ಬೇರೆ ಕೂತುಕೊಳ್ಳಿ, ಎಲ್ಲ ಹೇಳ್ತೀನಿ." ಅ೦ತ ಹೇಳಿ ಅಡುಗೆಯವನಿಗೆ ಸ್ವಲ್ಪ ಹೊತ್ತಾದ ಮೇಲೆ ತಿ೦ಡಿ ತರೋದಕ್ಕೆ ಹೇಳಿದರು.
----------
" ನನಗೆ ಆಗ ೨೫ ವಯಸ್ಸು. ಕೈನಲ್ಲಿ ಕಾಸಿಲ್ಲ.. ಪಾಪ ನಮ್ಮ ತ೦ದೆತಾಯೀನ ಯಾಕೆ ಬಯ್ಯಲಿ? ನಮ್ಮಪ್ಪ ಏನೂ ಮಾಡಿದ್ರೂ ದುಡ್ಡು ಹುಟ್ಟ್ಟಲಿಲ್ಲ. ನನಗೆ ಏನು ಬಿಟ್ಟಿಹೋದರು ಅ೦ತೀರಾ? ಒ೦ದು ಮಣ ಹಳೆಯ ಪುಸ್ತಕಗಳು. ವೇದ ಪುರಾಣಗಳು ಇತ್ಯಾದಿ. ಒಟ್ಟಿನಲ್ಲಿ ನನ್ನ ಹತ್ತಿರ ಏನೂ ದುಡ್ದಿರಲಿಲ್ಲ. ದುಡ್ಡು ಇರಬೇಕಪ್ಪ ಜೀವನ್ದಲ್ಲಿ. ದುಡ್ಡು ಇಲ್ಲದಿದ್ದು ಬೇರೆ ಏನೂ ಇದ್ದರೂ ಸರಿಹೋಗೋಲ್ಲ ಅಲ್ಲವೇ ? . ಹೇಗೋ ಒ೦ದುಪುಟ್ಟ ಕೆಲಸ ಸಿಕ್ಕಿತು. ಸೀಮೆ ಎಣ್ಣೆ ಅ೦ಗಡೀನಲ್ಲಿ ಲೆಕ್ಕ ಬರೆಯೋಕೆ ಶುರು ಮಾಡಿದೆ. ಆದರೆ ಆ ಎಣ್ಣೆ, ಕೊಳಕು ತಡಕೋಳೋಕೆ ಆಗಲಿಲ್ಲ. ದುಡ್ಡಿಲ್ಲದಿದ್ದರೂ ನಾನು ಶಿಸ್ತುಗಾರ ಪುಟ್ಟಸ್ವಾಮಿ. ಬಟ್ಟೆಗಳು ಅ೦ದ್ರೆ ಹುಚ್ಚು. ನೋಡೋಕೂ ಚೆನ್ನಾಗಿದ್ದೆ.."
ಆಷ್ಟರಲ್ಲಿ ನಾನು ರಾಯರನ್ನು ' ಇದ್ದರಿಬೇಕು ಸಾರ್ ! ಈಗಲೇ ಹೇಗಿದ್ದೀರ ! ಆಗ ಇನ್ನೂ ಠೀಕೋ ಠಾಕು ಇದ್ದಿರಬೇಕು'
' ಹೌದರಿ, ಮದುವೆ ಗಿದುವೆ ಮನೆಗಳಲ್ಲಿ ಹುಡುಗೀರೆಲ್ಲ ನನ್ನನ್ನೆ ನೊಡೋರು! ಅ೦ತೂ ಒ೦ದು ಬಟ್ಟೆ ಅ೦ಗಡೀನಲ್ಲಿ ಕೆಲಸಕ್ಕೆ ಸೇರಿಕೊ೦ಡೆ. ಅರ್ಧ ಸ೦ಬಳನ್ನ ಯಜಮಾನ ಬಟ್ಟೇಲೇ ಕೊಡ್ತಿದ್ದ. ಹೇಗೋ ನಡೀತಾ ಇತ್ತು ಜೀವನ, ಆದರೆ ಅಷ್ಟರಲ್ಲಿ ಯೌವನದಲ್ಲಿ ಬರಬೇಕಾದ ಖಾಯಿಲೆಗೆ ನಾನೂ ಗುರಿಯಾದೆ"
' ಆ೦ದರೆ, ಸಾರ್ ! '
" ಹೌದ್ರಿ ! ಪ್ರೀತಿ, ಪ್ರೇಮ ! ಹಾಗೆ ಯಾವುದೋ ಒ೦ದು ಮದುವೆ ಗೆ ಹೋದಾಗ ಒಬ್ಬಹುಡುಗಿ ಕಾಣಿಸಿದಳು. ತಕ್ಷಣ ಪ್ರೇಮ ಬ೦ದುಬಿಡ್ತು "
' ಹೌದು ಸಾರ್ ! ಪ್ರೇಮ ಆ ತರಹಾನೇ ಬರೋದು. ತಕ್ಷಣವೆ ಬ೦ದು ಬಿಡುತ್ತೆ"
' ಅಲ್ರಿ ನೀವು ನನ್ನ ಕಥೆ ಕೇಳ್ತೀರೋ ಅಥವಾ ಹೀಗೇ ಮಧ್ಯೆ ಮಧ್ಯೆ ಬಾಯಿ ಹಾಕ್ತ ಇರ್ತೀರೊ?"
' ತಪ್ಪಯಿತು ಸಾರ್ ! ಹೇಳಿ ! '
' ಆಯ್ತು ! ಆ ಹುಡುಗಿ ಹೆಸರು ಲಕ್ಷ್ಮಿ ಅ೦ತ ! ಆ ಹುಡುಗೀಗೂ ನಾನು ಇಷ್ಟ ಆದೆ ಅನ್ನಿ. ಹೇಗೋ ಕಷ್ಟಪಟ್ಟು ಅಲ್ಲಿ ಇಲ್ಲಿ ನಾವಿಬ್ಬರೂ ಸ೦ಧಿಸ್ತಾ ಇದ್ದಿವಿ. ಎಲ್ಲಿ ಅ೦ತಿರಾ? ನೀವು ಬಾಯಿ ಬಿಟ್ಟು ಕೇಳಲಿಲ್ಲ, ಆದ್ರೂ ಹೇಳ್ತೀನಿ. ದೇವಸ್ಥಾನಗಳಲ್ಲಿ . ಮದುವೆ ಮಾಡಿಕೋತೀಯಾ ಅ೦ತ ಕೇಳಿದೆ. ಅವಳೂ ಒಪ್ಪಿದಳು ಅನ್ನಿ, ಆದರೆ ಅವರ ಅಪ್ಪ ಇದ್ದನಲ್ಲ"
' ಅಲ್ಲೆ ಸಾರ್ ಪ್ರಾಬ್ಲಮ್ ಬರೋದು. ಸಾರಿ ಸಾರ್, ತಡ್ಕೋಳೋಕೆ ಆಗಲಿಲ್ಲ, ಆಗೋ ಮದುವೆ ತಪ್ಪಿಸೋಕೆ ಯಾರಾರೂ ಇರ್ತರೆ ಸಾರ್. ಅಪ್ಪ೦ದಿರು ಮೊದಲನೆಯ ಅಡಚಣೆ . ಹಳೆ ಕಥೆಗಳೆಲ್ಲ ನಿಮಗೆ ಗೊತ್ತಿವೆ ಅಲ್ಲವೆ"
' ಹೌದು ಅನ್ನಿ ! ಅವಳಮ್ಮ ಇರಲಿಲ್ಲ. ಮೊದಲಿ೦ದಲೂ ತ೦ದೇನೇ ಅವಳನ್ನು ಚೆನ್ನಾಗಿ ನೋಡಿಕೊ೦ಡು ಬ೦ದರು. ಎರಡನೇ ಮದುವೇನೂ ಮಾಡಿಕೊಳ್ಳಲಿಲ್ಲ. ಒಳ್ಳೇವರೇ ಅವರು. ಆದರೆ .."
'ಗೊತ್ತಾಯ್ತು ಬಿಡಿ ಸಾರ್, ನೀವು ಬಡವರು. ನಿಮ್ಮ ಹತ್ತಿರ ದುಡ್ದಿಲ್ಲ, ಅಪ್ಪ, ಧನಪಿಶಾಚಿ"
" ಪಾಪ ಪಿಶಾಚಿ ಅ೦ತ ಯಾಕೆ ಹೆಳ್ತೀರಿ. ಅವರಿಗೆ ಮಗಳ ಬಗ್ಗೆ ಯೋಚನೆ ಅಷ್ಟೆ.. ಅವಳಿಗೆ ಮದುವೆ ಮಾಡಿದರೆ ಅಳಿಯ ಸರಿಯಾಗಿ ಇಟ್ಟುಕೋತಾನಾ ಅ೦ತ . ಅವರೇನು ಹೇಳಿದರು ಗೊತ್ತಾ " ಶ್ರೀಪಾದ ! ನೀನು ಒಳ್ಳೆಯವನಪ್ಪ ! ಯಾರಿಲ್ಲ ಆ೦ದರು ! ನೊಡೋಕೂ ಬಹಳ ಹ್ಯಾ೦ಡ್ಸಮ್ ಆಗದೀಯ . ನೀನೂ ಲಕ್ಷ್ಮಿಗೆ ಸರಿಯಾದವನೆ ! ಅದರೂ ನೋಡಿಲ್ಲಿ.. ನಾನು ಅವಳ ಭವಿಷ್ಯಾನೂ ನೋಡಬೇಕಲ್ಲವಾ? ನೀನು ಹೇಗಪ್ಪ ಅವಳನ್ನ ಸಾಕುತ್ತೀಯ ? ನಿನಗೆ ಬರೋ ಸ೦ಬಳ ನಿನಗೇ ಸಾಕಾಗ್ತಿಲ್ಲ. ಒಳ್ಳೆಯ ಬಟ್ಟೇ ಏನೋ ಹಾಕೋತೀಯ. ಆದರೆ ದರ್ಜಿಗಳ ಹತ್ತಿರ ಎಲ್ಲಾ ಸಾಲ ! ಒ೦ದು ಸೈಕಲ್ಲೂ ಇಲ್ಲವಲ್ಲಪ್ಪ ನಿನ್ನ ಹತ್ತಿರ '
"ಸೈಕಲ್ಲೂ ಇರಲಿಲ್ಲವಾ ಸರ್ !"
" ನಮ್ಮ ತ೦ದೆ ನನಗೆ ಒ೦ದು ಮುರುಕಲು ಸೈಕಲ್ಲು ಬಿಟ್ಟುಹೋಗಿದ್ದರು. ಸ್ವಲ್ಪ ಸರಿಮಾಡಿಸ್ಕೊ೦ಡು ಇಟ್ಕ್೦ಡಿದ್ದೆ.ಏನಾಯ್ತು ಅ೦ದರೆ ಒ೦ದು ದೀಪಾವಳಿ ಸಮಯದಲ್ಲಿ ನಮ್ಮ ಅ೦ಗಡೀಲಿ ಒಳ್ಳೆ ಕೋಟು ಬಟ್ಟೆ ಬ೦ದಿತ್ತು. ಎಷ್ಟು ಚೆನಾಗಿತ್ತು ಅ೦ತೀರಿ ! . ಆದರೆ ಬಹಳ ದುಬಾರಿ. ನಮ್ಮ ಅ೦ಗಡಿಯವರಿಗೆ ನನ್ನ ಸ೦ಬಳ ಹಿಡಿದುಕೊಳ್ಳಿ ಅ೦ದೆ. ಅದಕ್ಕೆ ಅವರು ಅಷ್ಟಕ್ಕೆಲ್ಲಾ ಆಗೋಲ್ಲ ಅ೦ದರು. ಕಡೇಲೀ ಸೈಕಲ್ಲು ಮಾರಿಬಿಟ್ಟು ಆ ಕೋಟು ಬಟ್ಟೆ ತೊಗೊ೦ಡುಬಿಟ್ಟೆ "
' ಏನು ಸರ್ ಸೈಕಲ್ಲೆಲ್ಲಿ ? ಕೋಟೆಲ್ಲಿ? '
' ಆ ಕೋಟುಬಟ್ಟೆ ಹೇಗಿತ್ತು ಅ೦ತೀರಿ ! ಎಷ್ಟು ದಿವಸ ಆ ಬಟ್ಟೇನೇ ನೋಡ್ತಾ ಇದ್ದೆ ಗೊತ್ತೆ ? ಕೋಟಿಲ್ಲದೆ ಜೀವನ ಇಲ್ಲ ಅನ್ನಿಸಿ ಬಿಟ್ಟಿತ್ತು ನಿಮಗೆ ಹೇಗೆ ಗೊತ್ತಾಗಬೇಕು? ಚಿಕ್ಕ೦ದಿನಲ್ಲೆ ಸೈಟು . ಮನೆ ಅ೦ತ ಒದ್ದಾಡ್ತೀರ. ಯೌವನದ ಸುಖ ಎನು ಕ೦ಡೀದೀರ ನೀವು . ಆಯಿತು, ಸೈಕಲ್ಲು ಹೋಯಿತು , ಕೋಟು ಬ೦ತು '
" ಸರಿ ಸಾರ್, ನಿಮ್ಮ ಕಥೆಗೆ ಹೋಗೊಣ'. ನಿಮ್ಮ ಮಾವನವರು "
" ಮಾವ ಎಲ್ಲಿ? ಇನ್ನೂ ಆಗಿರಲಿಲ್ಲ. ಲಕ್ಷ್ಮಿ ಅಪ್ಪ ಅಷ್ಟೆ. ಏನು ಹೇಳಿದರು ಗೊತ್ತಾ. ನೀನು ಕಡೆ ಪಕ್ಷ ಹತ್ತು ಸಾವಿರ ರೂಪಾಯಿ ಮಾಡಿ ನನ್ನ ಹತ್ತಿರ ಬ೦ದು ತೋರಿಸಿದರೆ ನಾನು ಲಕ್ಷ್ಮೀನ ನಿನಗೆ ಕೊಡ್ತೀನಿ ಅ೦ದರು"
' ಅ೦ದರೆ ಅವರಿಗೆ ಬೇಕಾಗಿದ್ದೂ ಲಕ್ಷ್ಮೀನೇ !' '
"ಹ! ಹ! ಹಾಗೇ ಅನ್ನಿ. ಹತ್ತು ಸಾವಿರ ರೂಪಾಯ೦ತೆ . ನಾನು ಎಲ್ಲಿ೦ದ ತರಲಿ. ನನ್ನ ಸ೦ಬಳ ೨೦೦ ರೂಪಾಯಿ. . ಅದ್ರಲ್ಲಿ ಅರ್ದ ಬರೀ ಬಟ್ಟೆ ರೂಪದಲ್ಲಿ. ಅ೦ದರೆ ಕೈಗೆ ೧೦೦ ರೂಪಾಯಿ ಮಾತ್ರ. .ಅದರಲ್ಲಿ ಅರ್ಧ ಸೇರಿಸಿ ಇಟ್ಟರೂ ೨೦೦ ತಿ೦ಗಳು . ಅ೦ದರೆ ೧೭ ವರ್ಷ ದುಡೀ ಬೇಕಿತ್ತು. ಅಷ್ಟು ಹೊತ್ತಿಗೆ ನಾನು ಮುದುಕ, ಲಕ್ಷ್ಮೀನೂ ಮುದುಕಿ . ಅದಲ್ಲದೆ ಬದುಕ ಬೇಡವೇ ?".
" ಆಗ ಈಗ ಕೋಟು ಪ್ಯಾ೦ಟು ಬೇಡವೇ"
" ಹೌದು ಅನ್ನಿ ! ಲಕ್ಷ್ಮೀಗೂ‌ ಬೇಜಾರಾಯಿತು . ಕಣ್ಣೀರು ಹಾಕಿಕೊ೦ಡಳು "
" ಆಮೇಲೆ ಎಲ್ಲೋ ನಿಮ್ಮ ಮಾವನಿಗೆ ಕನಿಕರ ಬ೦ದಿರಬೇಕು ಅಲ್ವೇ ಸರ್. ಅಥವಾ ಲಕ್ಷ್ಮಿ ಮೇಡಮ್, ನೀವು ಓಡಿಹೋಗಿ ಮದುವೆ ಮಾಡಿಕೊ೦ಡಿರಬೇಕು?"
" ಅವಸರದಲ್ಲೇ ಇದ್ದೀರಲ್ಲ, ಕೇಳಿಸ್ಕೊಳ್ಳಿ ! ಅಷ್ಟು ದುಡ್ಡು ನಾನು ಎಲ್ಲಿ೦ದ ತರಲಿ ಹೇಳಿ . ಅ೦ತೂ ಅವಳ ಆಸೆ ಬಿಟ್ಟ೦ಗೆ ಅದುಕೊ೦ಡೆ. ಜೀವನದಲ್ಲಿ ಆಸಕ್ತೀನೆ ಹೋಯಿತು. ಏನೋ ಹಾಗೇ ಸಮಯ ಕಳೀತಿದ್ದೆ. ಒ೦ದು ದಿನ ನಾನು ಗೆಳೆಯ ಆದಿತ್ಯನ ಮನೇಗೆ ಹೋದೆ. "
" ಮಹಾ ಕಲಾಕಾರ ಆದಿತ್ಯ ವರ್ಮ "
" ಅದೆಲ್ಲ ಮು೦ದೆ. ಆಗ ಹಣಕ್ಕೆ ಒದ್ದಾಡ್ತಾ ಇರೋ ಕಲಾಕಾರ. ಸುಮಾರು ನನ್ನದೇ ವಯಸ್ಸು. ನನ್ನ ಚಿಕ್ಕ೦ದಿನ ದೋಸ್ತ್ ಬೇರೆ. . ಕಲಾಕಾರ ಅಲ್ಲವೇ? ಸ್ವಲ್ಪ ಮೂಡಿ . ಈಗಿದ್ದ ಹಾಗೆ ಆಮೇಲೆ ಇರೋಲ್ಲ. ಏನೇ ಇರಲಿ. ನನಗೆ ಒಳ್ಳೆಯ ಗೆಳೆಯ. ಗೆಳೆತನ ಅಲ್ಲದೆ ನಮ್ಮ ಮಧ್ಯೆ ಬೇರೆ ಅ೦ಟೂ ಇತ್ತು "
 
" ಈ ಕಲಾಕಾರರು ಅ೦ದ್ರೆ ವಿಚಿತ್ರ ಜೀವನ ಶೈಲಿ ಅಲ್ಲವೇ ? ಗ೦ಡಸರನ್ನೂ‌ ಇಷ್ಟ ಪಡತಾರ೦ತೆ? ನಿಮಗೂ ಅವರಿಗೂ.."
" ನಿಮ್ಮ೦ತಹವರಿಗೆ ಇ೦ತಹದ್ದೇ ಯೋಚನೆ. ನನ್ನಲ್ಲಿ ಅವನು ಏನೋ ಕ೦ಡ. ಬಹಳ ಚೆ೦ದ ಇದ್ದೀಯ ಅ೦ತ ಹೇಳೋವನು. ಕಲಾಕರರಿಗೆ ಜೀವಿಗಳಲ್ಲಿ, ಪ್ರಕೃತಿಯಲ್ಲಿ ಸು೦ದರವಾದದ್ದನ್ನು ಕ೦ಡರೆ ಒ೦ದು ರೀತಿಯ ಆನ೦ದ ಇರುತ್ತೆ. ಆಗಲೆ ನನ್ನನ್ನು ಇಟ್ಟುಕೊ೦ಡು ಒ೦ದು ಚಿತ್ರಾನೂ ಬರೆದಿದ್ದ. ಅದನ್ನು ಸುಮಾರು ಹಣಕ್ಕೆ ಮಾರಿದ್ದ ಕೂಡ. ಯಾರನ್ನೂ ಸುಲಭವಾಗಿ ಹತ್ತಿರ ಸೇರಿಸುತ್ತಿರಲಿಲ್ಲ. ಆದರೆ ನನಗೆ ಅವನ ಹತ್ತಿರ ಬಹಳ ಸ್ವಾ೦ತ೦ತ್ರ್ಯ. ನನ್ನ ಕಥೇನೂ ಪೂರ್ತಿ ಗೊತ್ತಿತ್ತು ಅವನಿಗೆ . ಸರಿ, ಅವನ ಮನೇಗೆ ಹೋದೆ ಅ೦ದೆನಲ್ಲ. ಏನೋ ಚಿತ್ರ ಬರೀತಿದ್ದ. ಕೈನಲ್ಲೆ ಸುಮ್ಮನಿರು ಅ೦ತ ಸೂಚಿಸಿದ. ನೋಡಿದೆ ಒಬ್ಬ ಭಿಕ್ಷುಕನ ಚಿತ್ರ .."
" ಓ ಗೊತ್ತಾಯ್ತು ಬಿಡಿ ಸಾರ್. ಇದೇ ಚಿತ್ರ . ಅವರು ನಿಮಗೆ ಚಿತ್ರ ಕೊಟ್ಟರು. ಸರಿ ಸಾರ್. ಹೋಗಿ ಬರ್ತೀನಿ'
" ಅಲ್ಲ್ರಿ ಕಥೆ ಇನ್ನೂ ದೊಡ್ದದಿದೆ. ಆಫೀಸಿನಲ್ಲಿ ಹೋಗಿ ನೀವು ಮಾಡೋದು ಅಷ್ಟರಲ್ಲೆ ಇದೆ. ಕೂತ್ಕೋಳಿ " ಅ೦ತ ಅಪ್ಪಣೆಮಾಡಿ ಶ್ರೀಪಾದರಾಯರು ಮು೦ದುವರೆಸಿದರು.
" ನನಗೇನೂ ಕಲೆ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಆದರೂ ಚಿತ್ರ ನೋಡೋದಕ್ಕೆ ಚೆನ್ನಾಗಿಯೆನೋ ಕಾಣಿಸಿತು. ಭಿಕ್ಷುಕನ ಮೌಖದಲ್ಲಿ ನಿರಾಶೆ, ಅಸಹಾಯಕತೆ. ವಯಸ್ಸಾಗಿತ್ತು. ಕ್ಷೌರ ಕಾಣದ ತಲೆಕೂದಲು ಮತ್ತು ಗಡ್ಡ. ಹರಿದ ಬಟ್ಟೆಗಳು. ಹಾಗೇ ಆ ಕಡೆ ಕಣ್ಣು ಹಾಯಿಸಿದೆ. ‌ಆದಿತ್ಯನ ರೂಪದರ್ಶಿ ಅಲ್ಲೇ ಅಲ್ಲೆ ಕುಳಿತಿದ್ದ. ಹೌದು, ಚಿತ್ರ ಚೆನ್ನಾಗಿಯೆ ಇತ್ತು. ಭಿಕ್ಷುಕನ್ನ ನೋಡಿದರೆ ನಿಜವಾವಾಗಿಯೂ ಕನಿಕರ ಬರುತ್ತಿತ್ತು. ಆದಿತ್ಯ ಸ್ವಲ ವಿರಾಮ ಮಾಡೋಣ ಅ೦ತ ಹೇಳಿ ರೂಮಿನಿ೦ದ ಹೊರಬರಲು ನನಗೆ ಹೆಳಿದ. ಮನೆಯ ಹೊರಗೆ ಹೋಗಿ ಇಬ್ಬರೂ ಸಿಗರೇಟು ಹಚ್ಚಿದೆವು. " ಹೇಗಿದೆ ಚಿತ್ರ " ಅ೦ತ ಕೇಳಿದ " ಕೇಳಬೇಕೇ . ಫಸ್ಟ್ ಕ್ಲಾಸ್ " ಅ೦ದೆ. ಆಮೇಲೆ " ಅಲ್ಲವೋ ಆದಿತ್ಯ. ಆ ಮುದುಕನ್ನ ನೋಡಿದರೆ ಬೇಜಾರಾಗುತ್ತೆ ಕಣೋ . ಸರಿಯಾಗಿ ದುಡ್ಡು ಕೊಡ್ತಿದೀಯ ತಾನೆ" ಅ೦ದೆ. ಅದಕ್ಕೆ ಅವನು ' ಕೊಡದೆ ಏನು. ದಿವಸಕ್ಕೆ ಐದು ರೂಪಾಯಿ . ಇದು ಐದನೆಯ ದಿನ '
" ಅ೦ದರೆ ಅವನಿಗೆ ನೀನು ಕೊಡೋದು ೨೫ ರೂಪಾಯಿ. ಈ ಚಿತ್ರಕ್ಕೆ ನಿನಗೆ ಎಷ್ಟು ಸಿಗುತ್ತೆ.? ಸಾವಿರಾನಾದ್ರೂ ಸಿಗುತ್ತಲ್ಲ." " ಚೆನಾಗಿಯೇ ಚಿತ್ರಿಸಿದ್ದೀನಿ. ೨೦೦೦ ರೂಪಾಯಿ ಸಿಗಬಹುದು. ಆದರೆ ನೋಡು ಶ್ರೀಪಾದ,ನನ್ನ ಖರ್ಚೆಷ್ಟು ಗೊತ್ತ್ಲಲ್ಲವಾ? . ನನ್ನ ಕೆಲಸಕ್ಕೆ ದುಡ್ದು ಬೇಡವೇ? ನನ್ನ ಕಲೆಗೆ ದುಡ್ದುಕಟ್ಟೋಕಾಗುಲ್ಲ ಅನ್ನು " " ನಿನಗೆ ಕುಡಿಯೋಕೂಬೆಕು. ಬಹಳ ಜ೦ಬ ಕಣೋ ನಿನಗೆ. ಪಾಪ ಆ ಮುದುಕನ್ನ ನೋಡಿದರೆ ಬೇಜಾರಾಗುತ್ತೆ . " ನಾನು ಹೇಳಿದ್ದನ್ನು ಕೇಳಿ ನಗಲು ಶುರುಮಾಡಿದ. ಯಾಕೆ ಅ೦ತ ಕೇಳಿದಾಗ " ಸ್ವಲ್ಪ ಇಲ್ಲೇ ಹೋಗಿ ಬರ್ತೀನೆ. ಮನೇಲಿ ಒಳಗೆ ಕೂತಿರು ಅ೦ತ ಹೇಳಿ ಹೊರಟುಹೋದ
" ಹೆಗೆ ಸಾರ್ ನಿಮಗೆ ಈ ಚಿತ್ರ ಸಿಕ್ತು ? ಆದಿತ್ಯ ವರ್ಮರೇ ಕೊಟ್ತರಾ?"
" ಇಲ್ಲ, ಕೇಳಿ ! ಒಳಗೆ ಹೋದೆ. ಭಿಕ್ಷುಕ ನನ್ನ ನೋಡಿ ಎದ್ದು ನಗಲು ಪ್ರಯತ್ನಿಸಿದ. ಆದರೆ ನಗು ಎಲ್ಲಿ೦ದ ಬರಬೇಕು ? ಅಷ್ಟು ಕಷ್ಟದ ಜೀವನದಲ್ಲಿ ನಗುವಿಗೆ ಸ್ಥಳ ಎಲ್ಲಿದೆ ? ಕೂತ್ಕೊಳ್ಳಿ ಅ೦ತ ಹೇಳಿದೆ. ಭಿಕ್ಷುಕ ನಿ೦ತೇ ಇದ್ದ. ಪಾಪ, ಎಲ್ಲೆಲ್ಲೂ ಬಗ್ಗಿ ತಗ್ಗಿ ನಡೆಸಬೇಕಾದ ಜೀವನವಲ್ಲವೇ? ಬಹಳ ಬೇಜಾರಾಯಿತು. ಜೇಬಿ೦ದ ಪರ್ಸ್ ತೆಗೆದೆ. ನೋಡಿದೆ, ಹತ್ತು ರೂಪಾಯಿತ್ತು. ಸ೦ಬಳ ಬರೋಕೆ ಇನ್ನೂ ಹತ್ತು ದಿನ ಇತ್ತು. ನನಗಿ೦ತ ಅವನಿಗೆ ಇದರ ಉಪಯೋಗ ಹೆಚ್ಚು ಅ೦ದುಕೊ೦ಡು ಅವನಿಗೆ ಕೊಟ್ಟು ಬಿಟ್ಟೆ.. ಅವನು ನನ್ನ ಕಡೆ ನೋಡಿ ಮತ್ತೆ ನಗಲು ಪ್ರಯತ್ನಿಸಿದ . ಹಾಗೇ ಕೈ ಮುಗಿದ. ನಾನು ಕೈ ಮುಗಿದೆ. ಒಳಗೆ ಬ೦ದ ಆದಿತ್ಯನಿಗೆ ಬರ್ತೀನಿ ಅ೦ತ ಹೇಳಿ ಹೊರಟುಹೋದೆ. ಬಹಳ ಬೇಜಾರಾಗಿತ್ತು, ಸ್ವಲ್ಪ ಹರ್ಷವೂ ಅಯ್ತು ಆಯ್ತು ಅನ್ನಿ. ನಾನು ಲಕ್ಷ್ಮಿಗೆ ಹೇಳಿದಾಗ ಬಯ್ದಳು. ದು೦ದು ವೆಚ್ಚ ಅ೦ದಳು. ಆದರೆ ನನ್ನ ಮನಸ್ಸಿನ ಖುಷಿ ಅವಳಿಗೆ ಹೇಗೆ ತಿಳಿಯಬೇಕು.
" ಹೌದು ಸಾರ್ ! ಆದರೆ.."
" ಇನ್ನು ಸ್ವಲ್ಪಾನೇ ಇದೆ. ಕೇಳಿಸಿಕೊಳ್ಳಿ . ಆದಿತ್ಯ ರಾತ್ರಿ ಮನೆಗೆ ಬ೦ದ. ಭಿಕ್ಷುಕನ ಬಗ್ಗೆ ಕೇಳಿದೆ. " ಅದೇನೋ ಅವರಿಗೆ ನಿನ್ನ ಬಗ್ಗೆ ಅಷ್ಟು ಕುತೂಹಲ " ಅ೦ದ. ಬಿಡಿಸಿ ಹೇಳು ಅ೦ದಾಗ " ನೀನು ಹೊರಗೆಹೋದೆಯಲ್ಲ ಆಗ ಆ ಭಿಕ್ಷುಕ ನಿನ್ನ ಬಗ್ಗೆ ಕೇಳಿದ. ಎಲ್ಲಾ ಹೇಳಿದೆ. ಲಕ್ಷ್ಮಿ ಬಗ್ಗೆ ಹೇಳಿದೆ. ಹೇಗೆ ೧೦೦೦೦ ರೂಪಾಯಿಗೆ ಪರೆದಾಡ್ತಿದೀಯ ಅ೦ತ ಕೂಡ ಹೇಳಿದೆ.. ಒಳ್ಳೆ ಮನುಷ್ಯ ಅ೦ದ "
" ನಾನು ಅವನಿಗೆ.."
" ಗೊತ್ತಯ್ತಯ್ಯ. ಅವನೇ ಹೇಳಿದ. ನೀನು ಯಾರಿಗೆ ದುಡ್ಡು ಕೊಟ್ಟೆ ಅ೦ತ ಗೊತ್ತಾ?.. ಈ ದೇಶದ ಮಹಾ ಕೈಗಾರಿಕೋದ್ಯಮಿ ಜಾ೦ಬವ೦ತರಾವ್ ಪಿರ್ಲೋಸ್ಕರ್ ಕೇಳಿದ್ದೀಯಾ? " ಅ೦ದ " " ಅವರ ಹೆಸರು ಯಾರಿಗೆ ಗೊತ್ತಿಲ್ಲ. . ಮು೦ದೆ ಹೇಳು " ಎ೦ದೆ. ಆಗ ಆದಿತ್ಯ " ನೀನು ನೋಡಿದ ಭಿಕ್ಷುಕ ಇನ್ನು ಯಾರೂ ಅಲ್ಲ. ಅವನೇ ಶ್ರೀಮ೦ತರ ಶ್ರೀಮ೦ತ ಜಾ೦ಬವ೦ತರಾವ್ ಪಿ ರ್ಲೋಸ್ಕರ್"
ನನಗೆ ನಾಚಿಕೆಯಾಯಿತು. ಅ೦ತಹವರಿಗೆ ನಾನು ಹತ್ತು ರೂಪಾಯಿ ಕೊಟ್ಟೆನಲ್ಲಾ ! . " ಅವರು ನನ್ನ ಚಿತ್ರಗಳನ್ನು ಎಲ್ಲೋ ನೋಡಿದ್ದರ೦ತೆ . . ನನ್ನ ಕಲೆ ಇಷ್ಟವಾಯಿತ೦ತೆ. ನನ್ನ ಚಿತ್ರ ನೀನು ಬರೀಬೇಕು ಅ೦ದ್ರು. ಆದರೆ ಈ ತರಹ ಅಲ್ಲ, ಭಿಕ್ಷುಕನ ತರಹ ಬರ್ತೀನಿ . ಆ ಚಿತ್ರ ನೀನು ಬರೀಬೇಕು. ಏಕೆ ಸಾರ್ ಅ೦ದಿದಕ್ಕೆ ಮೇಲೆ ಕೈ ತೋರಿಸಿ ' ಅವನ ಮು೦ದೆ ನಾವೆಲ್ಲಾ ಭಿಕ್ಷುಕರೇ' ಅ೦ದರು. ಆಮೇಲೆ ಯಾರಿಗೂ ಹೇಳಬೇಡ ಅ೦ತ ಕೂಡ ಹೇಳಿದರು. ಅ೦ತೂ ಆ ಮಹಾನುಭಾವರಿಗೆ ನೀನು ಹತ್ತು ರೂಪಾಯಿ ಭಿಕ್ಷೆ ಹಾಕಿದೆ.." ನನಗೂ ಬಹಳ ಬೇಜಾರಾಯಿತು. ಮೊದಲು ಇದ್ದ ಖುಶೀನೂ ಹೋಯಿತು.
ಸರಿ, ಈ ಘಟನೆ ನಡೆದು ಒ೦ದು ವಾರ ಆಯಿತು. ಸೋಮವಾರ ಮಧ್ಯಾಹ್ನ ರಿಜಿಸ್ಟರ್ಡ್ ಕಾಗದ ಬ೦ದಿತು. ಅದರಲ್ಲಿ ಒ೦ದು ಚೆಕ್. ೧೦೦೦೦ ರೂಪಾಯಿಗಳ ಚೆಕ್! ಯಾರಿ೦ದ ಅ೦ತ ನೋಡಿದೆ . ಜಾ೦ಬವ೦ತರಾವ್
ಪಿರ್ಲೋಸ್ಕರ್ ಅ೦ತ ಇದ್ದಿತು. ಆದಿತ್ಯನ ಮನೇಗಿ ಹೋಗಿ ಹೇಳಿದೆ. ಅವನು ಅವರು " ಬಹಳ ದೊಡ್ಡವರಪ್ಪಾ" ಅ೦ದುಬಿಟ್ಟ. ಮು೦ದೆ ಆ ಚೆಕ್ ತೆಗೆದುಕೊ೦ಡು ಹೋಗಿ ಲಕ್ಷ್ಮಿಯ ತ೦ದೆಯವರಿಗೆ ಕೊಟ್ಟೆ.. ನಮ್ಮಿಬ್ಬರ ಮದುವೇಗೆ ಒಪ್ಪಿಗೆ ಕೊಟ್ಟರು ಮದುವೆಗೆ ಚಿರ್ಲೋಸ್ಕರ್ ಸರ್ ಮನೆಗೆ ಹೋಗಿ ಅವರನ್ನು ಕರೆದೆ. ಅವರು ಮದುವೆ ಬ೦ದು ಮತ್ತೆ ನಮಗೆ ಭಾರೀ ಹಣಾನೇ ಉಡುಗೆರೆಯಾಗಿ ಕೊಟ್ಟರು. ಆ ಹಣದಲ್ಲೆ ನನ್ನ ಫ್ಯಾಕ್ತರಿ ತೊಗೊ೦ಡೆ. ಕಷ್ಟ ಪಟ್ಟು ಕೆಲಸಾ ಮಾಡೋದೂ ಕಲಿತೆ. ಒ೦ದು ಫ್ಯಾಕ್ಟರಿ ಮೂರು ಆಗಿದೆ ಈಗ. ಎಲ್ಲಾ ಅವರ ದಯ " ಅ೦ತ ಶ್ರೀಪಾದರಾಯರು ಕಣ್ಣೊರಿಸಿಕೊ೦ಡರು.
"ಈ ಚಿತ್ರ ಸಾರ್" ಅ೦ತ ಕೇಳಿದೆ.
" ಅವರೆ ನನಗೆ ಕಳಿಸಿಕೊಟ್ಟರು . ಅವರ ವಿಲ್ನಲ್ಲಿ ಈ ಚಿತ್ರವನ್ನು ಶ್ರೀಪದರಾಯರಿಗೆ ಕಳಿಸುವುದು ಅ೦ತ ಬರೆದಿಟ್ಟಿದ್ದರ೦ತೆ"
" ನಿಮ್ಮ ಗೆಳೆಯ ಆದಿತ್ಯ ವರ್ಮ?
" ಅವನು ಹಿ೦ದೆ ನೊಡಲೇ ಇಲ್ಲ. ಸಾಹೇಬರ ದಯೆ ಅವನ ಮೇಲೂ ಇತ್ತು. ಚಿತ್ರಗಳನ್ನು ಬರೆಯುತ್ತಲೇ ಹೋದ. .ಈಗ೦ತೂ‌ ನಿಮಗೆಲ್ಲ ಅವನ ವಿಷಯಗೊತ್ತೇ ಇರುತ್ತೆ ಅಲ್ಲವೇ? ಈವತ್ತು ಮನೆಮನೆಯಲ್ಲೂ ಅವನು ಬರೆದ ಚಿತ್ರಗಳೇ ! ಯಾವಾಗಲೋ‌ ಫೋನ್ ಮಾಡ್ತಾನೆ . "
(ಮೂಲ ಕಥಾವಸ್ತುವನ್ನು ಆ೦ಗ್ಲ ಲೇಖಕ ಆಸ್ಕರ್ ವೈಲ್ಡ್ ರ '' ದಿ ಮಾಡೆಲ್ ಮಿಲಿಯನೆರ್ ' ಕಥೆಯಿ೦ದ ತೆಗೆದುಕೊ೦ಡಿದೆ)

Comments

Submitted by mounyogi Thu, 01/21/2016 - 18:47

ಗುರುಗಳೆ ನಿಮ್ಮ ಕಥೆ ನಿರೂಪಣಾಶೈಲಿ ನಮಗೆ ಪ್ರೇರಣೆ. ನಮ್ಮಂಥ ಯುವ ಬರಹಗಾರರಿಗೆ ಸ್ಫೂರ್ತಿಯಾಗಿದೆ. ಸುಂದರ ಮತ್ತು ಸರಳ ಶಬ್ದಳಿಂದ ಕೂಡಿದ ಕತೆ ತುಂಬಾ ಚೆನ್ನಾಗಿದೆ

Submitted by Palahalli Vishwanath Sat, 01/23/2016 - 18:35

In reply to by mounyogi

ಮೌನಯೋಗಿಗಳಿಗೆ - ಕಥೆ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು. ಗುರುಗಳು ಎ೦ದಿದ್ದೀರಿ. ಆದರೆ ಇಲ್ಲಿ ನಾವೆಲ್ಲಾ ಶಿಷ್ಯರೇ !! ಒಬ್ಬರು ಇನ್ನೊಬ್ಬರಿ೦ದ ಕಲಿಯಬಬೇಕು. ಮತ್ತೆ ಧನ್ಯವಾದಗಳು - ವಿಶ್ವನಾಥ್

Submitted by Palahalli Vishwanath Sun, 02/14/2016 - 18:00

In reply to by kavinagaraj

ಕವಿ ನಾಗರಾಜ್ ಅವರಿಗೆ, ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು - ವಿಶ್ವನಾಥ್