ನನಗೆ ಈಗ 90 ವರ್ಷ. ಗರಡಿ ಮನೆ ಹೇಳ್ತಿದೆ ಕಥೆ...!

ನನಗೆ ಈಗ 90 ವರ್ಷ. ಗರಡಿ ಮನೆ ಹೇಳ್ತಿದೆ ಕಥೆ...!

90 ವರ್ಷದ ಗರಡಿ ಮನೆ. ಅಲ್ಲಿ ಯಾರೂ ಇಲ್ಲ. ಆದರೂ ಅದು ಚೆನ್ನಾಗಿದೆ. ಮುಳಗುಂದಲ್ಲಿದೆ ಈ ಗರಡಿ ಮನೆ. ಮಸೀದಿ ಪಕ್ಕವೇ ಇದೆ. ಭಾವೈಕತೆಯ ಬಿಂಬಿಸೋವಂತೆ. ಅಲ್ಲಿ ಕಾಲಿಟ್ಟಾಗ ಅದೇನೋ ಖುಷಿ. ಸುಲ್ತಾನ್ ನೆನಪು ಮನದಲ್ಲಿ ಅರಳಿತು. ಸಲ್ಮಾನ್ ಖಾನ್ ನಿಜಕ್ಕೂ ಗರಡಿ ಮನೆ ಪೈಲ್ವಾನರ ಕಥೆ ಹೇಳ್ತಿದ್ದಾರೆ.
-----
ಸಲ್ಮಾನ್ ಖಾನ್  ಸುಲ್ತಾನ್ ಚಿತ್ರದ ಟ್ರೈಲರ್ ನೋಡಿದಾಗಿನಿಂದ ಏನೋ ಒಂದು ಸೆಳೆತ. ನಮ್ಮ ಹಳ್ಳಿಗಳ ಗರಡಿ ಮನೆಯ ನೆನಪು ಕಾಡುತ್ತಿದೆ.ನಾನೆಂದೂ ಗರಡಿ ಮನೆಗೆ ಕಾಲಿಟ್ಟವನೂ ಅಲ್ಲ. ಅಲ್ಲಿ ಬೈಟಕ್ಕೂ ಹೊಡೆದಿಲ್ಲ. ಅದೇನೋ ಸೆಳೆತ ಶುರುವಾಗಿದೆ.

ಅದೇ ಮೋಹವೇ ನನ್ನ, ಮೊನ್ನೆ ಗರಡಿ ಮನೆಗೆ ಕರೆದೊಯ್ತು.ನಮ್ಮ ಮಾವನ ಊರದು. ಗದಗ ಜಿಲ್ಲೆಯ ಮುಳುಗುಂದ ಅದರ ಹೆಸರು. ಅಲ್ಲಿ ಹೋದಾಗ ಮೊದಲು ಕಣ್ಣಿಗೆ ಬಿದ್ದದೇ ಗರಡಿ ಮನೆ. ಗದೆ ಹಿಡಿದು ನಿಂತ ಪೈಲ್ವಾನ್ ಚಿತ್ರ ಗೋಡೆ ಮೇಲಿದೆ. ಪಕ್ಕದಲ್ಲಿಯೇ ಚಿಕ್ಕದೊಂದು ಬಾಗಿಲು. ಬಾಗಿಲು ಕಡೆಗೆ ನೋಡಿದರೆ ಅಲ್ಲಿ ಏನೋ ಗೊತ್ತಾಗೊದಿಲ್ಲ.ಕತ್ತಲು ಕತ್ತಲು.

ಒಳಗೆ ಇಳಿದಾಗ ಅಲ್ಲಿ ಆಗೋ ಅನುಭವವೇ ಬೇರೆ. ಒಂದು ಕ್ಷಣ ನನಗೆ ಅಕಾಡದಲ್ಲಿ ಕುಸ್ತಿ ಆಡೋ ಸಲ್ಮಾನ್ ನೆನಪಿಗೆ ಬಂದೇ ಬಿಟ್ಟ.ಕಾರಣ, ಅಲ್ಲೂ ಕೆಂಪು ಮಣ್ಣಿತ್ತು. ಹದವಾಗಿ ಅದನ್ನ ಸಡಿಲು ಗೊಳಿಸಲಾಗಿತ್ತು. ಕಾಲಿಟ್ಟಾಗ ಮೆತ್ತನೆ ಅನುಭವ. ಸುತ್ತಲೂ ಕಟ್ಟೆ. ಒಂದು ಕಡೆಗೆ ಆಂಜನೇಯನ ಪುಟ್ಟ ಫೋಟೋ. ಕೆಳಗಡೆ ತಾಲೀಮು ಮಾಡಲು ಬೇಕಾಗೋ ಸಾಧನಗಳು.

ನೋಡಿ ಖುಷಿ ಆಯ್ತು. ಪೈಲ್ವಾನ್ ಆಗಬೇಕೆಂಬ ಆಸೆ ಏನೂ ಎಂದೂ ಇರಲಿಲ್ಲ. ಆದರೆ, ಗರಡಿ ಮನೆ ಸೆಳೆತ ಈಗೀಗ ಹೆಚ್ಚಾಗಿದೆ. ಹೊಸದೊಂದು ಅನುಭವವನ್ನೂ ನೀಡಿದೆ. ಅದನ್ನ ಸುಮ್ಮನೆ ಬಿಟ್ಟರೆ ಸರಿಯೇ. ಹಾಗೆ ಅನಿಸಿದ್ದೇ ತಡ. ಕ್ಯಾಮೆರಾದಲ್ಲಿ ಸಾಧ್ಯವಾದಷ್ಟು ಎಲ್ಲವನ್ನೂ ಕ್ಲಿಕ್ಕಿಸಿದೆ.

ಹೊರೆಗಡೆ  ಊರ ಜನ ಕುಳಿತಿದ್ದರು. ಅವರೊಂದಿಗೆ ಒಂದಷ್ಟು ಫೋಟೋ. ಸೆಲ್ಫಿ ಎಲ್ಲವೂ ತೆಗೆಸಿಕೊಂಡು ಖುಷಿಪಟ್ಟದ್ದು ಆಯ್ತು. ಆದರೆ, ಮಾಹಿತಿ ಕೇಳಬೇಕೆನಿಸಿತು. ಆಗ ಅಲ್ಲಿದ್ದ ಹಿರಿಯ ಹೇಳಿದರು. 90 ವರ್ಷ ಆಗಿದೆ ಈ ಗರಡಿ ಮನೆಗೆ ಅಂತ. ಅದಕ್ಕೆ ಸಾಕ್ಷಿಯಾಗಿ ಗರಡಿ ಮನೆಯ, ಗೋಡೆ ಮೇಲೆ ಕನ್ನಡ ಅಕ್ಷರದಲ್ಲಿ 4.01.1926 ಅಂತಲೂ ಬರೆಯಲಾಗಿದೆ.

ಅಲ್ಲಿಗೆ 90 ವರ್ಷದ ಲೆಕ್ಕ ನಮಗೆ ಸಿಕ್ಕು ಬಿಡುತ್ತದೆ.ಅಷ್ಟು ವರ್ಷದ ಈ ಗರಡಿ ಮನೆ ಇನ್ನೂ ಚೆನ್ನಾಗಿದೆ. ದೊಡ್ಡವರು ಯಾರೂ ಗರಡಿ ಮನೆಯಲ್ಲಿ ತಾಲೀಮು ಮಾಡೋದಿಲ್ಲ. ಚಿಕ್ಕವರೇ ಆಗೊಮ್ಮೆ ಈಗೊಮ್ಮೆ ತಾಲೀಮು ಮಾಡಲು ಬರೋದಿದೆ. ಅವರೊಂದಿಗೆ ಫೋಟೋ ತೆಗೆಸೋ ಹುಚ್ಚು ಹೆಚ್ಚಾಗಿತ್ತು. ಆದರೂ, ಅದು ಮಿಸ್ ಆಯ್ತು. ಮತ್ತೊಮ್ಮೆ ಆಕಡೆಗೆ ಹೋದಾಗ ಪೈಲ್ವಾನರ ಜೊತೆಗೆ ಫೋಟೋ ತೆಗೆದು ಕೊಂಡು ಅವರ ಅನುಭವನ್ನೂ ತಿಳಿಯೋ ಆಸೆ ಇದೆ. ನೋಡೋಣ.

-ರೇವನ್ ಪಿ.ಜೇವೂರ್​