ಹಿನ್ನೀರಿನಲ್ಲಿ ಬೆರೆತ ಕಣ್ಣೀರು (ರಕ್ತಕಣ್ಣೀರು?)

ಹಿನ್ನೀರಿನಲ್ಲಿ ಬೆರೆತ ಕಣ್ಣೀರು (ರಕ್ತಕಣ್ಣೀರು?)

ಬರಹ

ವಾರಾಹಿ ಹಿನ್ನಿರಿನಿಂದ ಸುತ್ತುವರೆಯಲ್ಪಟ್ಟಿರುವ ಕೆಲವು ಹಳ್ಳಿಗಳು ಚಿತ್ರವಿಚಿತ್ರ ಸಮಸ್ಯೆಗಳಿಂದ ಬಳಲುತ್ತಿವೆ. ಮೆಲ್ಸುಂಕ ಎಂಬ ಗ್ರಾಮವೊಂದರ ಕಥೆ ಇಲ್ಲಿದೆ.
ಯಡೂರಿನಲ್ಲಿ ಒಂದಿಬ್ಬರಿಗೆ ಮೆಲ್ಸುಂಕದ ದಾರಿ ತೋರಿಸಬನ್ನಿ ಎಂದು ಕರೆದರೆ ‘ಅದು ನಕ್ಸಲರ ಅಡ್ಡ ಕಣ್ರೀ’ ಎಂದು ಹೆದರಿಸಿದರು. ಅವರನ್ನು ಹೇಗೋ ಒಪ್ಪಿಸಿ ಮಾಣಿ ಆಣೆಕಟ್ಟೆಯ ಮೂಲಕ ಕರ್ರಗಿನ ಕಾಡಿನ ನಡುವೆ ಕಚಡಾ ರಸ್ತೆಯಲ್ಲಿ ೧೮ ಕಿಮೀ ದೂರದ ಉಳ್ತಿಗ ತಲುಪುವಷ್ಟರಲ್ಲಿ ನಮ್ಮ ಬೈಕು ಪಂಚರ್ ಅಗದಿದ್ದುದೇ ಅದ್ರಷ್ಟ. ಅಲ್ಲಿಂದ ಮೆಲ್ಸುಂಕಕ್ಕೆ ಕಾಲ್ನಡಿಗೆ.
ಮೇಲ್ಸುಂಕದ ಜನ ೨೫ ವರ್ಷಗಳ ಹಿಂದೆ ಮುಳುಗಡೆಯ ಪರಿಹಾರ ಪಡೆದಿದ್ದಾರೆ, ಅದರೆ ಕಂತುಗಳಲ್ಲಿ. ಕೈಯಲ್ಲಿ ಹಣ ನಿಂತಿಲ್ಲ, ನೀರು ಹತ್ತದ ಎತ್ತರದ ಜಾಗದಲ್ಲಿ ಮನೆ-ಜಮೀನು ಮಾಡಿದ್ದಾರೆ. ಅಲ್ಲಿಂದ ಕೆಪಿಸಿಯ ನಿರ್ಭಂಧಿತ ಪ್ರದೇಶದಲ್ಲಿ ಅವರ ವಾಸ. ರಸ್ತೆ-ಕರೆಂಟು ಅಂತ ಯಾವ ಸೌಲಭ್ಯವನ್ನೂ ಅಲ್ಲಿ ಕೇಳಬೇಡಿ. ಏನೇ ಬೇಕಾದರೂ ಯಡೂರಿಗೆ ನಡೆಯಲೇಬೇಕು. ಒಂದಿಷ್ಟು ತೋಟ ಗದ್ದೆ, ಕಣ್ಣು ಹರಿದಷ್ಟು ದೂರ ಹಿನ್ನೀರು, ಬಿದಿರಿನ ಬುಟ್ಟಿ ಹೆಣೆಯುವುದು ಇದೇ ಜೀವನ. ನಕ್ಸಲರಿಗೆ ಆದರ್ಷ ಅಡಗುತಾಣ.
ದಟ್ಟ ಕಾಡಿನ ನಡುವೆ ಉಡುಪಿ ಜಿಲ್ಲೆಯ ಕೆಳಸುಂಕಕ್ಕೆ ಇಲ್ಲಿಂದ ಒಂದು ತಾಸಿನ ಕಾಲುಹಾದಿ. ಅಮಾಸೆಬೈಲು ಪ್ರದೇಶದಲ್ಲಿ ನಕ್ಸಲರಿಗೂ, ಪೋಲೀಸರಿಗೂ ಘರ್ಷಣೆ ಅದಾಗಲೆಲ್ಲ ನಕ್ಸಲರು ಮೇಲ್ಸುಂಕಕ್ಕೆ ಬರುತ್ತಾರೆ ಅನ್ನೋದು ಪೋಲೀಸರಿಗೂ ಗೊತ್ತು. ಅಲ್ಲಿಗೆ ಹೋಗುವುದು ಎಷ್ಟು ಅಪಾಯದ ಕೆಲಸ ಅಂತಾನೂ ಗೊತ್ತು.
ಅಲ್ಲಿ ನಕ್ಸಲರನ್ನು ನೆಂಟರು ಅಂತ ಕರೀತಾರೆ. “ಅವರಿಂದ ನಮ್ಗೆ ಏನೂ ತೊಂದರೆ ಇಲ್ಲ. ಅರಣ್ಯ ಇಲಾಖೆಯವರ ಕಾಟವೂ ತಪ್ಪಿದೆ” ಅಂತಾರೆ ಜನ. ಹಾಗಂತ ಪೊಲೀಸರ ಬಗ್ಗೆನೂ ಅವರಿಗೆ ಏನೂ ಅಸಮಾಧಾನ ಇಲ್ಲ. ಈದು ಎನ್ ಕೌಂಟರ್ ನಲ್ಲಿ ಸತ್ತ ಪಾರ್ವತಿ ಈ ಊರಿನವಳು. ಇಲ್ಲಿಯ ಯುವಕರು ನಿಧಾನಕ್ಕೆ ನಕ್ಸಲವಾದದತ್ತ ಆಕರ್ಷಿತರಾಗುತ್ತಿದ್ದಾರೆ ಅನ್ನೋದೇ ಆತಂಕ.
ಹಳ್ಳಿಗರ ಪ್ರಕಾರ ಅಭಿವ್ರದ್ಧಿ ಆದರೆ ಸಮಸ್ಸ್ಯೆ ಬಗೆಹರಿದೀತು. ಹಿನ್ನೀರಿಗೊಂದು ಸೇತುವೆ, ರಸ್ತೆ, ವಿದ್ಯುತ್ತು, ವಾಹನ ಸಂಚಾರ, ಹೀಗೆ. ಇನ್ನು ಕೆಲವರಿಗೆ ಬೇರೆ ಊರಿನಲ್ಲಿ ಜಾಗ, ಒಂದಿಷ್ಟು ಹಣ, ಕೆಪಿಸಿಯಲ್ಲಿ ಉದ್ಯೋಗ ತಮ್ಮೆಲ್ಲ ಕಷ್ಟಗಳಿಗೂ ಅಂತ್ಯ ಹಾಡೀತು ಅನ್ನುವ ಅನಿಸಿಕೆ.