ಪರ್ವತಾರೋಹಣ ಮತ್ತು ಹವ್ಯಾಸ

ಪರ್ವತಾರೋಹಣ ಮತ್ತು ಹವ್ಯಾಸ

ಪರ್ವತಾರೋಹಣ ನನಗಿಷ್ಟವಾದ ಹವ್ಯಾಸಗಳಲ್ಲಿ ಒಂದು.ರಜೆ ಸಿಕ್ಕಿತೆಂದರೆ ಬ್ಯಾಗ್ ರೆಡಿಮಾಡಿ ಹೊರಟೇ ಬಿಡುವೆನು.ಪಶ್ಚಿಮದ ಕರಾವಳಿಯ ಸಮೀಪವಿರುವ ಶಿರಾಡಿ,ಚಾರ್ಮಾಡಿ,ಆಗುಂಬೆ ಪರ್ವತಗಳನ್ನು ಅದೆಷ್ಟು ಬಾರಿ ಹತ್ತಿ ಇಳಿದಿದ್ದೇನೋ ಲೆಕ್ಕವೇ ಇಲ್ಲ.ಮೊದಮೊದಲು ಹತ್ತುವಾಗ ಸುತ್ತುಮುತ್ತಲಿನ ದೃಶ್ಯಗಳನ್ನು ನೋಡಿ ನನಗೆ ತಲೆಸುತ್ತಿದಂತಾಗಿ ವಾಂತಿ ಬರುತಿತ್ತು.ಆಗಿನಿಂದ ಹಿರಿಯರ ಸೂಚನೆಯಂತೆ ಕಣ್ಣುಮುಚ್ಚಿಯೇ ಹತ್ತಿ‌ಇಳಿಯುವುದು ಮಾಡಿದೆ. ಈಗ ನನ್ನ ಜತೆಯಲ್ಲಿದ್ದವರು ಮಾತನಾಡಿಸಿದರೆ ಮಾತ್ರ ಕಣ್ಣು ತೆರೆಯುವೆನು. ಅಭ್ಯಾಸ ಮಾಡಿದರೆ ಯಾವುದೂ ಕಷ್ಟವಿಲ್ಲ ಬಿಡಿ.
ಕಳೆದ ರಜೆಯಲ್ಲಿ ನನ್ನ ಮಿತ್ರ ನನಗೊಂದು ಚಾಲೆಂಜ್ ಮಾಡಿದ-“ಬೆಂಗಳೂರಿಗೆ ಬಾ.ಇಲ್ಲೇ ಸಮೀಪದಲ್ಲೊಂದಿದೆ.ಕಂಡಿಷನ್ ೧-ಕಣ್ಣು ತೆರೆದೇ ಹತ್ತಬೇಕು. ೨-ಹತ್ತುವಾಗ ಎಲ್ಲೂ ನಿಲ್ಲಬಾರದು. ೩-ಹಿಂದೆ ತಿರುಗಿ ನೋಡಬಾರದು.” ಬೆಂಗಳೂರಿಗೆ ಹೊರಟೇ ಬಿಟ್ಟೆ.ಬೆಳಗ್ಗೆ ಹೊರಟವರು ಆ ಸ್ಥಳ ತಲುಪುವಾಗ ಮಧ್ಯಾಹ್ನ ಮೀರಿತು.ರಸ್ತೆ ನಮ್ಮೂರಿನಷ್ಟು ಹದಗೆಟ್ಟಿಲ್ಲವಾದರೂ ತೀರಾ ಆಮೆಗತಿಯಲ್ಲಿ ನಿಂತು ನಿಂತು ಹೇಗೋ ತಲುಪಿದೆವು.ಕಾರಿಂದ ಇಳ್ದು ಒಮ್ಮೆ ಕೆಳಗಿಂದ ಮೇಲಿನ ತನಕ ನೋಡಿದೆ. ಸೊಗಸಾಗಿದೆ. ನನ್ನಂತಹ ಪರ್ವತಾರೋಹಿಗೆ ಚಾಲೆಂಜ್ ಮಾಡುವಷ್ಟು ಎತ್ತರವೇನಿಲ್ಲ. “೩ ಕಂಡಿಷನ್ ನೆನಪಿಟ್ಟುಕೊಂಡು ಹೊರಡು.ನಿನ್ನ ಹಿಂದೆಯೇ ನಾನಿರುತ್ತೇನೆ” ಎಂದ ಗೆಳೆಯ.ಏರಲು ಸುರುಮಾಡಿದೆ. ಸುತ್ತು ಬಳಸಿದ ದಾರಿ. ಅನೇಕ ಜನ ಹತ್ತುತ್ತಾ/ಇಳಿಯುತ್ತಾ ಇರುವವರು ಸಿಕ್ಕಿದರು. ನನ್ನ ಗಮನ ಆದಷ್ಟು ಬೇಗ ಮೇಲೆ ತಲುಪುವುದಾಗಿತ್ತು.ಅದೇ ವೇಳೆಗೆ ಎಲ್ಲಿಂದಲೂ ಒಂದು ಗುಂಪು ಜಿಂಕೆಗಳು ಬಂದುವು. ಜಿಗಿಯುತ್ತಾ ಬರುತ್ತಿರುವ ಜಿಂಕೆಗಳನ್ನು ನೋಡದಿರಲಾಗಲಿಲ್ಲ. ಹಿಂದೆ ಗರಿಬಿಚ್ಚಿ ನಲಿಯುತ್ತಲಿದೆಯೋ ಎಂಬಂತೆ ಎರಡು ನವಿಲುಗಳನ್ನು ಕಂಡೆ.
ಕಂಡೆ ನಾ... ... “ಸೋತೆ ನೀ”ಎಂಬ ಗೆಳೆಯನ ಮಾತು ಕೇಳಿದಾಗಲೇ ಎಚ್ಚರವಾಯಿತು.
(ಈ ಸ್ಥಳಕ್ಕೆ ಗರುಡಾ ಮಾಲ್ ಎನ್ನುವರಂತೆ. ಅಂದ ಹಾಗೆ ಶಿರಾಡಿ ಇತ್ಯಾದಿ ಘಾಟ್ ಹತ್ತಿ ಇಳಿದದ್ದು ಬಸ್ಸಲ್ಲಿ.)

Rating
No votes yet

Comments