ಪದಬೆಳಗು:೨: ಬದುಕು!

ಪದಬೆಳಗು:೨: ಬದುಕು!

‘ಬದುಕಿ’ನಲ್ಲಿ ಏನು ವಿಶೇಷ ಅಂದಿರಾ?
ನಾನಾಗ ಶಿವಮೊಗ್ಗದಲ್ಲಿದ್ದೆ. ನಮ್ಮ ಕಾಲೇಜಿನ ಕನ್ನಡ ಅಧ್ಯಾಪಕರೊಬ್ಬರು ಈ ಇಂಗ್ಲಿಷ್ ಅಧ್ಯಾಪಕನ ಹತ್ತಿರ ಬಂದು ‘ಬರ್ದಿಲರು’ ಅಂದರೆ ಏನು ಸಾರ್ ಎಂದು ಕೇಳಿದರು. ಅವರು ಅಂದು ಕನ್ನಡ ವಿದ್ಯಾರ್ಥಿಗಳಿಗೆ ಗೋವಿಂದ ಪೈ ಅವರ ‘ಬರ್ದಿಲರು’ ಪದ್ಯ ಪಾಠ ಮಾಡಬೇಕಾಗಿತ್ತು. ನನಗೂ ಗೊತ್ತಿರಲಿಲ್ಲ. ಅವರನ್ನೂ ಕರೆದುಕೊಂಡು ಲೈಬ್ರರಿಗೆ ಹೋಗಿ ಕಿಟಲ್ ನಿಘಂಟು ಹುಡುಕಿದೆ. ಬರ್ದಿಲ ಅಂದರೆ ದೇವತೆ ಅನ್ನುವ ಅರ್ಥ ದೊರೆಯಿತು. ‘ಬರ್ದು’ ಅಂದರೆ ಸಾವು, ‘ಇಲ’ ಅನ್ನುವುದು ನಿಷೇಧವನ್ನು ಸೂಚಿಸುವ ಪದ ಅನ್ನುವ ವಿವರಣೆ ಹೊಳೆಯಿತು. ಇಲ ಅನ್ನುವುದೇ ಈಗ ಇಲ್ಲ ಎಂದಾಗಿದೆ. ಕೇಶಿರಾಜ ನಾಣಿಲಿವೆಣ್ =ನಾಚಿಕೆ ಇಲ್ಲದ ಹೆಣ್ಣು, ಪಲ್ಲಿಲಿವಾಯ್=ಹಲ್ಲಿಲ್ಲದ ಬಾಯಿ ಅನ್ನುವ ಉದಾಹರಣೆ ಕೊಟ್ಟಿದ್ದು ನೆನಪಿಗೆ ಬಂದಿತು.
ಸರಿ. ಬರ್ದಿಲ ಎಂದರೆ ‘ಸಾವು ಇಲ್ಲದವನು’ ಅಂದರೆ ದೇವತೆ ಅನ್ನುವುದು ಸರಿ. ಬರ್ದುಂಕು, ಬರ್ದುಕು, ಬದುಕು ಇದು ರೂಪಗೊಂಡದ್ದರ ಬಗ್ಗೆ ಕುತೂಹಲ ಹುಟ್ಟಿತು.
ಬರ್ದು-ಸಾವು ಇರುವುದು ಬದುಕು! ಉಂಕು ಅನ್ನುವುದು ಪದಗಳ ಕೊನೆಗೆ ಸೇರುವ ಪ್ರತ್ಯಯ. ಅವುಂಕು (ಅಮುಕು) ಇತ್ಯಾದಿ ಪದಗಳಲ್ಲಿ ಕಾಣುತ್ತದೆ. ಹಾಗಾದರೆ ಬದುಕು ಪದದ ಅರ್ಥವ್ಯಾಪ್ತಿ ಎಷ್ಟು ವಿಶೇಷ ಅನ್ನಿಸತೊಡಗಿತು.
ಸಾವಿನಿಂದ ಆವೃತ್ತವಾದದ್ದು, ಸಾವನ್ನು ಒಳಗೊಂಡದ್ದು, ಸಾವು ಇರುವಂಥದ್ದು ಅದೇ ಬದುಕು. ಬದುಕು ಅನ್ನುವ ಪದ ತನ್ನ ಹೊಟ್ಟೆಯೊಳಗೆ ‘ಸಾವು’ ಇಟ್ಟುಕೊಂಡಿದೆಯೋ, ಅಥವಾ ‘ಸಾವು’ ಅನ್ನುವುದರ ಹೊಟ್ಟೆಯೊಳಗೆ ಬದುಕು ಅಡಗಿದೆಯೋ! ಸಾವು ಬೇರೆಯಲ್ಲ, ಬದುಕು ಬೇರೆಯಲ್ಲ ಎರಡೂ ಒಂದೇ ಎಂಬಂತೆ ವಿರುದ್ಧವಾದವನ್ನೆಲ್ಲ ಒಂದೇ ಪದದೊಳಗೆ ಅಡಗಿಸಿಕೊಂಡಿರುವ ಕನ್ನಡ ಎಷ್ಟು ವಿಚಿತ್ರ, ಎಷ್ಟು ಶ್ರೀಮಂತ!

Rating
No votes yet