ಇಂಟರ್ನೆಟ್ ಗಾಗಿ ಏನೆಲ್ಲ (೨)

ಇಂಟರ್ನೆಟ್ ಗಾಗಿ ಏನೆಲ್ಲ (೨)

 

ಇಂಟರ್ನೆಟ್ ಗಾಗಿ ಏನು ಮಾಡೋದು?

 

([:http://sampada.net/blog/hpn/07/12/2007/6573|ಮೊದಲ ಕಂತು ಇಲ್ಲಿ ಬರೆದಿದ್ದೆ].)

ಬಹಳ ಕಡಿಮೆ ಖರ್ಚಿಗೆ ಸಿಕ್ಕ ಈ ರಿಲಯನ್ಸ್ ಇಂಟರ್ನೆಟ್ ಕನೆಕ್ಷನ್ ಬಹಳ ವೇಗದ್ದೆಂಬುದು ಖುಷಿ ಕೊಟ್ಟಿತ್ತು. ವೇಗದ್ದಾದರೂ ಇದು ಆಗಾಗ ಕೆಲಸ ಮಾಡದೇ ಇರುವುದು, ಕನೆಕ್ಟ್ ಆಗದೇ ಇರುವುದು ಅಥವ ತಂತಾನೆ session close ಮಾಡಿ ಬಳಸುವವರನ್ನು ಒದ್ದು ಹೊರಗೋಡಿಸುವುದು - ಇವೆಲ್ಲ ತೊಂದರೆಗಳನ್ನು ಹೊತ್ತುಕೊಂಡೇ ಬಂದದ್ದು. ತೆಗೆದುಕೊಂಡು ಸುಮಾರು ಒಂದು ವಾರ ಕಳೆದ ನಂತರ ಸಂಪೂರ್ಣವಾಗಿ ಕೈಕೊಟ್ಟಿತ್ತು! ಈ ಸಮಯ ಅದು ಎಲ್ಲೆಡೆ ಹೋಗಿತ್ತಂತೆ.
ರಿಲಯನ್ಸ್ ಕಸ್ಟಮರ್ ಕೇರ್ ನಂಬರುಗಳು ಯಾವ ನೆಟ್ವರ್ಕಿನಿಂದಲೂ ಸಿಗದಂತಾಗಿಬಿಟ್ಟಿದ್ದವು. ಬೈಸಿಕೊಳ್ಳಬೇಕಾಗುವುದು ಎಂದು ನಂಬರುಗಳನ್ನೇ "ಟೆಂಪರರಿಲಿ ಔಟ್ ಆಫ್ ಸರ್ವೀಸ್" ಮಾಡಿಕೊಂಡುಬಿಟ್ಟಿದ್ದರು ರಿಲಯನ್ಸಿನವರು! ಹಲವು ದಿನಗಳ ನಂತರ ಅದು ಹೇಗೋ ತಂತಾನೆ ಸರಿಹೋಗಿತ್ತು - ಸದ್ದಿಲ್ಲದೆ. ರಿಲಯನ್ಸಿನವರ ಕಸ್ಟಮರ್ ಕೇರ್ ನಂಬರುಗಳೂ ಪುನಃ ಲಭ್ಯವಾಗಿಬಿಟ್ಟಿದ್ದವು!

ತದನಂತರವಾದರೂ ಕೈಕೊಡದು ಎಂದೆಣಿಸಿದ್ದು ಸುಳ್ಳಾಯಿತು. ಒಂದು ವಾರವೂ ಕಳೆದಿರಲಿಲ್ಲ, ಆಗೀಗ ಕೈಕೊಡುತ್ತಿದ್ದ ನೆಟ್ವರ್ಕು ಮತ್ತೆ ದಿನಗಟ್ಟಲೆ ಮಾಯ. ವಿಚಾರಿಸಲಾಗಿ "ನಿಮ್ಮ ಅಕೌಂಟು ಕ್ರೆಡಿಟ್ ಲಿಮಿಟ್ ಮೀರಿದೆ, ದಯವಿಟ್ಟು ಕೂಡಲೆ ಮೂರೂವರೆ ಸಾವಿರ ಪಾವತಿ ಮಾಡಿ" ಎಂದು ರಿಲಯನ್ಸಿನಿಂದ ಉತ್ತರ ಬಂತು. ನನಗಾದ ಶಾಕ್ ಹೇಳತೀರದು. "ಸದ್ಯಕ್ಕೆ ನಿಮ್ಮ ಅಕೌಂಟು ಡಿಸೇಬಲ್ ಮಾಡಲಾಗಿದೆ" ಎಂದ ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಗೆ "ತೆಗೆದುಕೊಂಡು ಎರಡು ವಾರ ಕಳೆದಿಲ್ಲ, ಅಲ್ಲದೇ ತಾರೀಫ್ (tariff) ಇರೋದು unlimited plan ಎಂದು - ಅದು ಹೇಗೆ ಈಗಲೇ ದುಡ್ಡು ಕಟ್ಟುವಂತಾಯಿತು" ಎಂದು ಕೇಳಿದರೆ ಬದಲಿಲ್ಲ!

 

ವಾಸ್ತವದಲ್ಲಿ ನಡೆದದ್ದು ಇಷ್ಟೆ: ರಿಲಯನ್ಸಿನ Wimax ಕೊಂಡಾಗ ಅಕೌಂಟು unlimited ಬಳಕೆಯ ಪ್ಯಾಕ್ ನಲ್ಲಿದ್ದದ್ದು - ಅಂದರೆ ಎಷ್ಟು ಬಳಸಿದರೂ ತಿಂಗಳ ಕೊನೆಗೆ ೧೦೦೦/- ಕೊಟ್ಟರಾಯಿತು. ಕನೆಕ್ಷನ್ ಪಡೆದ ಎರಡು ದಿನಗಳಿಗೇ ವೈಮ್ಯಾಕ್ಸ್ ಬಂದ ಖುಷಿಯಲ್ಲಿ ಇನ್ನೂ ಉತ್ತಮ ಬ್ಯಾಂಡ್ ವಿಡ್ತ್ ಇರುವ unlimited ತಾರಿಫ್ ಗೆ ಬದಲಾಯಿಸಿ ಎಂಬ ಕೋರಿಕೆ ಸಲ್ಲಿಸಿದ್ದೆ. ಬದಲಾಯಿಸುವಾಗ ಅದು ಹೇಗೋ ತಪ್ಪು ಮಾಡಿಕೊಂಡು ತಮಗನ್ನಿಸಿದ (ಬಳಸಿದ ಪ್ರತಿ ಮೆಗಾ ಬೈಟ್ ಗೆ ಚಾರ್ಜ್ ಆಗುವಂತಹ) ತಾರಿಫ್ ಗೆ ಬದಲಾಯಿಸಿಬಿಟ್ಟಿದ್ದರಂತೆ. ಇದ್ಯಾಕೆ ಹೀಗಾಯ್ತು? ನಾನು ಕೇಳದ ತಾರಿಫ್ ಗೆ ಯಾಕೆ ಬದಲಾಯಿಸಿದಿರಿ ಎಂದರೆ ಬದಲಿಲ್ಲ. "ಸರ್, ಈ ಸಾರಿ ಮೂರುವರೆ ಸಾವಿರ ಕಟ್ಬಿಡಿ. ಮುಂದಿನ ಬಿಲ್ಲುಗಳಲ್ಲಿ ಎಲ್ಲ ಸರಿ ಮಾಡಿಬಿಡುತ್ತೇವೆ. ನೀವು ದುಡ್ಡು ಕಟ್ಟಲಿಲ್ಲ ಅಂದ್ರೆ ಇದು ಸರಿಯಾಗಲ್ಲ" ಎಂದು ಮುಂಬೈ ಕಾಲ್ ಸೆಂಟರಿನಿಂದ ಮುರುಕು ಕನ್ನಡದಲ್ಲಿ ಕೇಳಿಬಂದ ಧ್ವನಿ ಕೇಳಿ ನಗಬೇಕೋ ಬೈಯಬೇಕೋ ಗೊತ್ತಾಗಲಿಲ್ಲ. ಅಕೌಂಟು ಡಿಸೇಬಲ್ ಅಗೋದಕ್ಕೆ ಪರೋಕ್ಷವಾದದ್ದು ಇದು!

ರಿಲಯನ್ಸಿನವರ ಮಾತಿನ ವೈಖರಿ, ನಡುವಳಿಕೆ ಹಾಗೂ ಒಟ್ಟಾರೆ ನಡೆದುಕೊಂಡ ರೀತಿ ನನಗೆ ಸಂಶಯ ಹುಟ್ಟಿಸಿತು. ಇವರು ಬೇಕೆಂದಲೇ ಹೀಗೆ ಮಾಡುತ್ತಿರುವ ಸಾಧ್ಯತೆಗಳೂ ಇರಬಹುದು ಎಂದನಿಸಿತು. ಕುತೂಹಲದಿಂದ ಇಂಟರ್ನೆಟ್ ನಲ್ಲಿ ಹುಡುಕಿ ನೋಡಿದೆ. ರಿಲಯನ್ಸ್ ಹೀಗೆ ಬೇಕಾಬಿಟ್ಟಿ ಓವರ್ ಬಿಲ್ ಮಾಡಿರುವ ಹಾಗೂ ಹೀಗೆ ಟೋಪಿ ಹಾಕಿಸಿಕೊಂಡ ಹಲವರ ಅಹವಾಲುಗಳು ಸಿಕ್ಕವು.

(ಮುಂದುವರೆಯುವುದು)
Rating
No votes yet

Comments