ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಮೂರನೆಯ ಕಂತು

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಮೂರನೆಯ ಕಂತು

ಬರಹ

ಬಸ್ಸಿನಲ್ಲಿ ಕೇಳದ, ಆದರೆ ಕೂಡುವ ಕ್ಷಣದಲ್ಲಿ ತಪ್ಪದೆ ಬರುವ ಮತ್ತೊಂದು ಪ್ರಶ್ನೆ ಇದೆ. ಏರುತ್ತಿರುವ ಅಂತಿಮ ಉದ್ರೇಕದ ಗಳಿಗೆಯಲ್ಲಿ ಮತ್ತೆ ಮತ್ತೆ ಕೇಳುತ್ತಾರೆ "ಎಷ್ಟು ಗಂಡಸರೊಂದಿಗೆ ಮಲಗಿದ್ದೀ ಹೇಳು, ಎಷ್ಟು ಜನರೊಂದಿಗೆ? ಹಾದರಗಿತ್ತಿ, ನಿನಗೆ ನಾಚಿಕೆಯಾಗುವುದಿಲ್ಲವೆ?" ಪ್ರೇಮಿಸುವ ಉತ್ತುಂಗ ಕ್ಷಣದಲ್ಲಿ ಬೇರೆ ಎಲ್ಲಕ್ಕಿಂತ, ಅವರನ್ನು ಉದ್ರೇಕಿಸುವ ಅಂತಿಮ ಪದವೆಂದರೆ "ಬಿಚ್". ಎಷ್ಟೋ ಬಾರಿ ನನಗೆ ತಡೆದುಕೊಳ್ಳಲಾಗದೆ ಪಕ್ಕೆ ಹಿಡಿದು ನಕ್ಕಿದ್ದೇನೆ.

ಈ ಎಲ್ಲ ಜನಗಳ ಜೊತೆ ಮಲಗುವುದು ನನಗೂ ಇಷ್ತವೆಂದೇನಲ್ಲ. ಆದರೆ ನಾನು ಹಾಗೆ ಮಾಡಬೇಕೆಂದು ನನಗನ್ನಿಸಿತು. ಯಾಕೆ ಅಂತ ತಿಳಿಯದಿದ್ದರೂ ನಾನು ಒಳ್ಳೆಯದನ್ನೇ ಮಾಡುತ್ತಿದ್ದೇನೆ ಅನ್ನಿಸಿತು. ಇದನ್ನು ನನಗೆ ನಾನೇ ವಿವರಿಸಿಕೊಳ್ಳಲಾಗಲಿಲ್ಲ. ಅವರೆಲ್ಲರಲ್ಲಿ ಒಬ್ಬ ಮಾತ್ರ ನನ್ನ ಜೊತೆ ಮಾತನಾಡಿದ್ದು- ಅಂದರೆ ಪ್ರೇಮಿಸುತ್ತಿರುವವರು ಒಟ್ಟಾಗಿ ಹೇಗೆ ಮಾತಾಡಬೇಕೆಂಬ ನಿರೀಕ್ಷೆ ಇರುತ್ತದೋ ಹಾಗೆ. ಬರೀ ದೈಹಿಕವಾಗಿ ಹತ್ತಿರ ಬರುವುದಲ್ಲದೆ ತಮ್ಮ ಅಂತರಾಳದಲ್ಲಿ ಏನಿದೆ ಅನ್ನುವುದನ್ನು ಇನ್ನೊಬ್ಬರಿಗೆ ತೆರೆದುತೋರಿಸುವ ಮಾತು. ಅವನೊಬ್ಬ ಬಸ್ಸಿನಲ್ಲಿದ್ದ ಮಧ್ಯವಯಸ್ಸಿನ ಸಹಪ್ರಯಾಣಿಕ. ಬಸ್ಸು ದಾರಿಬದಿಯ ಟೀ ಸ್ಟಾಲ್‌ನ ಬಳಿಯಲ್ಲಿ ನಿಂತಾಗ ನಾವು ಮಾತಿಗಿಳಿದೆವು. ನಾನು ಇಂಥಕಡೆ ಹೋಗುತ್ತಿದ್ದೇನೆ. ಇಳಿದುಕೊಳ್ಳಲು ಜಾಗವಿಲ್ಲ ಅಂದಾಗ ಹಿಂದೆ ಎಷ್ಟೋ ಜನ ಹೇಳಿದಹಾಗೆ "ನಮ್ಮ ಮನೆಗೇ ಬಂದು ಇರು" ಅಂದ. ನಾನೂ ಹಿಂದೆ ಎಷ್ಟೋ ಸಾರಿ ಹೇಳಿದಂತೆ "ಆಗಲಿ" ಅಂದೆ. ನಾವಲ್ಲಿಗೆ ಹೋದಾಗ, ಅದು ಒಂದು ಹೋಟೆಲ್- ಮನೆಯಲ್ಲ ಅನ್ನುವುದು ತಿಳಿಯಿತು. ಅದು ಬಜಾರ್‌ನ ಒಂದು ಇಕ್ಕಟ್ಟಿನ ಸ್ಥಳ. ನಾವು ಕಡಿದಾದ, ವಾಸನೆಯಿಂದ ಕೂಡಿದ್ದ ಕಲ್ಲಿನ ಮಹಡಿಯ ಮೆಟ್ಟಿಲುದ್ದಕ್ಕೂ ತಡವೆಕೊಂಡೇ ಹೋಗಬೇಕಾಯ್ತು. ಅಲ್ಲೊಂಡು ಸಣ್ಣ ಕೋಣೆ. ಅದರಲ್ಲಿ ಬರೀ ಒಂದು ಹಗ್ಗದ ಮಂಚ ಮತ್ತು ಒಂದು ಮಣ್ಣಿನ ಹೂಜಿ ಇದ್ದವು. ಅಲ್ಲಿ ಒಂದೇ ಹಾಸಿಗೆ ಇದ್ದ ಬಗ್ಗೆ ಅವನು ಹಾಸ್ಯಚಟಾಕಿ ಹಾರಿಸಿದ. ಯಾವುದರ ಬಗ್ಗೆ ಹೆಚ್ಚು ಯೋಚಿಸಲಾದರೂ ನನಗೆ ತೀರಾ ದಣಿವಾಗಿತ್ತು. ನನಗೆ ಅದನ್ನು ಬೇಗ ಮುಗಿಸಿ ನಿದ್ರೆ ಹೋದರೆ ಸಾಕಾಗಿತ್ತು. ಹತ್ತಿರ ಹತ್ತಿರ ಅರ್ಧರಾತ್ರಿಯಾಗಿದ್ದರೂ ಎಲ್ಲ ಅಂಗಡಿಗಳೂ ತೆರೆದಿದ್ದವು. ಒಂದು ಬೀದಿಯಿಂದ ಏಳುತ್ತಿದ್ದ ಗಲಾಟೆಯಿಂದಾಗಿ ಮಲಗುವುದು ಅಸಾಧ್ಯವೆಂದು ಆಮೇಲೆ ತಿಳಿಯಿತು. ಜನರಿಗೆ ಚೆನ್ನಾಗಿ ಹೊತ್ತು ಹೋಗುತ್ತಿದ್ದ ಹಾಗಿತ್ತು. ಯಾವುದೋ ಹಳೆಯ ಪ್ರೇಮಗೀತೆಯೊಂದನ್ನು ಕಿರುಗುಟ್ಟುತ್ತಿದ್ದ ಹಳೆಯ ಗ್ರಾಮೋಫೋನ್ ಸಹ ಇತ್ತು. ನನ್ನ ಜೊತೆಗಾರನಿಗೂ ಮಲಗಲಾಗಲಿಲ್ಲ. ಅವನು ಹಾಸಿಗೆ ಬಿಟ್ಟೆದ್ದು ಕಿಟಕಿಯ ಬಳಿ ನೆಲದ ಮೇಲೆ ಕೂತು ಒಂದಾದ ನಂತರ ಒಂದರಂತೆ ಸಿಗರೇಟ್ ಸೇದುತ್ತಿದ್ದ. ಅವನು ಒಂದು ಥರಾ ಆಲೋಚನಾಮಗ್ನನಂತೆಯೂ ದು:ಖಿಯಂತೆಯೂ ಕಂಡ. ಅವನಿಗೆ ಸಾಧಾರಣ ಒಳ್ಳೆಯ ಮುಖವಿತ್ತ್ತು. ಗಟ್ಟಿ ಮೂಳೆಗಳೂ, ದೊಡ್ದ ಬಾಯಿ ಮತ್ತು ಹೆಚ್ಚಿನ ಭಾರತೀಯರಿಗಿರುವಂತೆ ದು:ಖ ಸೂಸುವ ಹೆಣ್ಣುಗಣ್ಣುಗಳಿದ್ದವು.

ನಾನು ಹೋಗಿ ಅವನ ಪಕ್ಕದಲ್ಲಿ ಕುಳಿತೆ. ಅಲ್ಲಿದ್ದ ಕಿಟಕಿ ಅಂದರೆ, ಮೇಲಿಂದ ಶುರುವಾಗಿ ನೆಲ ಮುಟ್ಟುವ ಕಮಾನು. ಅದರಿಂದ ನಾನು ಹೊರಗಿನ ಬಜಾರನ್ನು ನೋಡಬಹುದಿತ್ತು. ಉರಿಯುವ ದೀಪಗಳಿಂಡ ಅಲ್ಲಿ- ಕೆಳಗಿನ ಬಜಾರಲ್ಲಿ ಎಲ್ಲ ಉಲ್ಲಾಸಮಯವಾದಂತಿತ್ತು. ತಂಪು ಪಾನೀಯದ ಅಂಗಡಿಯಲ್ಲಿ ಗ್ರಾಮೋಫೋನ್ ಹಾಡುತ್ತಿತ್ತು. ತುಂಬಾ ಜನರು ಸುತ್ತ ನೆರೆದು ಬಾಟಲುಗಳಲ್ಲಿದ್ದ ಗಾಢಬಣ್ಣಗಳ ತಂಪು ಪಾನೀಯಗಳನ್ನು ಸವಿಯುತ್ತಿದ್ದರು. ಅದರ ಪಕ್ಕದ ಅಂಗಡಿಯೊಂದರಲ್ಲಿ ಒಂದು ಕಂಬಕ್ಕೆ ಪಿಂಕ್ ಮತ್ತು ನೀಲಿ ಬಣ್ಣದ ಬ್ರಾಗಳನ್ನು ನೇತುಹಾಕಿದ್ದರು. ಅಂಗಡಿಗಳ ಮೇಲ್ಭಾಗದಲ್ಲಿ ಜಾರ್ಜೆಟ್ ಉಟ್ಟ ಹುಡುಗಿಯರು ಸೆಖೆಯಲ್ಲಿ ತಂಪು ಮಾಡಿಕೊಳ್ಳಲು ನವಿಲುಗರಿಯ ಬೀಸಣಿಕೆಗಳನ್ನು ಬೀಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ರಸ್ತೆಯಲ್ಲಿದ್ದ ಗಂಡಸರು ತಲೆ ಎತ್ತಿ ಅವರ ಜೊತೆ ಮಾತಾಡಿ ನಗುತ್ತಿದ್ದರು. ಪ್ರತಿಯಾಗಿ ಅವರೂ ಮಾತನಾಡಿ ನಗುತ್ತಿದ್ದರು. ನಾವು ಸೂಳೆಗೇರಿಯಲ್ಲಿದ್ದ್ದುದು ನನಗೆ ತಿಳಿಯಿತು. ನಾನಿದ್ದ ಹೋಟೆಲ್ ಕೂಡ ಒಂದು ಸೂಳೆಗೇರಿಯೇನೋ!

"ನನ್ನನ್ನು ಇಲ್ಲಿಗೇಕೆ ಕರೆದುಕೊಂಡು ಬಂದೆ?"-ನಾನು ಕೇಳಿದೆ.
ಅದಕ್ಕೆ ಅವನು "ನೀನ್ಯಾಕೆ ಬಂದೆ?" ಅಂದ. ಒಳ್ಳೆಯ ಪ್ರಶ್ನೆಯೇ ಸರಿ. ಅವನು ಕೇಳಿದ್ದೂ ಸರಿಯೆ! ಅಲ್ಲಿಗೆ ಬಂದದ್ದಕ್ಕೆ ನನಗೆ ಪಶ್ಚಾತ್ತಾಪವೇನೂ ಆಗಲಿಲ್ಲ. ನನಗೇಕೆ ಪಶ್ಚಾತ್ತಾಪವಾಗಬೇಕು?
"ಇರಲಿ ಬಿಡು, ನನಗೂ ಇಷ್ಟವಾಯಿತು" ಅಂದೆ. "ಇಷ್ಟವಂತೆ ಇಷ್ಟ" ಅಂದುಕೊಂಡು ಅವನು ನಕ್ಕ. ಸ್ವಲ್ಪ ಹೊತ್ತು ಬಿಟ್ಟು ಮಾತಿಗಾರಂಭಿಸಿದ. ಅವನು ಅದೇ ತಾನೆ ಕೆಲವು ತಿಂಗಳ ಹಿಂದೆ ಮದುವೆಯಾಗಿದ್ದ ಮಗಳನ್ನು ನೋಡಿಕೊಂಡು ಬರಲು ಹೋಗಿದ್ದು; ಅವಳು ತನ್ನ ಅತ್ತೆಯ ಮನೆಯಲ್ಲಿ ಸುಖವಾಗಿಲ್ಲದ್ದು; ಅವನು ಅಲ್ಲಿಂದ ಹೊರಟಾಗ ಅವಳೂ ಅವನಿಗಂಟಿಕೊಂಡು ತನ್ನನ್ನೂ ಮನೆಗೆ ಕರೆದುಕೊಂಡು ಹೋಗಲು ಗೋಗರೆದದ್ದು; ಇವನು ಅವಳಿಗೆ ವಿವೇಕ ಹೇಳಿದಷ್ಟೂ ಅವಳು ಅತ್ತು ಕರೆದು ಮತ್ತಷ್ಟು ಅವನಿಗೆ ಅಂಟಿಕೊಂಡಿದ್ದು; ಕಡೆಗೆ ಬನ್ನುತಪ್ಪಬಾರದೆಂದು ಅವನು ಬಲಾತ್ಕಾರದಿಂದ ಅವಳಿಂದ ಬಿಡಿಸಿಕೊಂಡು ಬಂದಿದ್ದು, ಹೀಗೇ. ಅವಳ ಬಗ್ಗೆ ಅವನಿಗೆ ಮರುಕವಿತ್ತು. ಆದರೆ ಅವನಾದರೂ ಏನು ಮಾಡಬಹುದಿತ್ತು? ಅವನು ಅವಳನ್ನು ಮನೆಗೆ ಕರೆದುಕೊಂಡು ಬಂದಿದ್ದರೆ ಅವಳ ಅತ್ತೆ ಮನೆಯವರು ಅವಳನ್ನು ವಾಪಸ್ ಕರೆಸಿಕೊಳ್ಳಲು ಒಪ್ಪದೆ ಅವಳ ಬದುಕು ಮೂರಾಬಟ್ಟೆಯಾಗುತ್ತದೆ. ಮುಂದೆ ಹೇಗೂ ಅವಳಿಗೇ ಅಭ್ಯಾಸವಾಗುತ್ತದೆ. ಯಾವಾಗಲೂ ಹಾಗೇ. ಕೆಲವರಿಗೆ ಹೆಚ್ಚು ದಿನ ಹಿಡಿಯುತ್ತದೆ, ಹೆಚ್ಚು ಕಷ್ಟವಾಗುತ್ತದೆ. ಕಡೆಯಲ್ಲಿ ಎಲ್ಲರೂ ಪಳಗುತ್ತಾರೆ. ಅವನ ಹೆಂಡತಿ ಕೂಡ ಹಾಗೆಯೇ! ಮದುವೆಯಾದ ಮೊದಲ ವರ್ಷ ಅವಳೂ ಅತಿಯಾಗಿ ಅತ್ತೂ ಕರೆದೂ ರಂಪ ಮಾಡಿದ್ದಳು.

(ಮುಂದುವರೆಯುತ್ತದೆ)