ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ನಾಲ್ಕನೆಯ ಕಂತು

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ನಾಲ್ಕನೆಯ ಕಂತು

ಬರಹ

"ಇಂಥ ಮದುವೆಗಳ ಏರ್ಪಾಟು ಒಳ್ಳೆಯದೆ?" ಎಂದು ನಾನು ಅವನನ್ನು ಕೇಳಿದೆ. ಅವನು ನನ್ನ ಕಡೆ ತಿರುಗಿ "ನೀನಾದರೆ ಏನು ಮಾಡುತ್ತಿದ್ದೆ?" ಎಂದು ಪ್ರಶ್ನಿಸಿದ. ನಾನು ಪ್ರೀತಿ -ಗೀತಿ ಅಂತ ಏನೋ ಹೇಳಹೊರಟಾಗ ಅವನಿಗೆ ನಗು ಬಂತು. ಅದೆಲ್ಲ ಬರೀ ಸಿನೆಮಾಕ್ಕೆ ಮಾತ್ರ ಅಂತ ಅವನು ಹೇಳಿದ. ನನಗೆ ನನ್ನ ಅಭಿಪ್ರಾಯ ಸಮರ್ಥಿಸಿಕೋಬೇಕು ಅಂತ ಅನ್ನಿಸಲಿಲ್ಲ. ನಿಜ ಹೇಳಬೇಕೆಂದರೆ ನನ್ನ ಮಾತು ಬಾಲಿಶ ಅಂತಲೂ, ಅವನಿಗೆ ನನಗಿಂತಲೂ ತುಂಬಾ ಹೆಚ್ಚು ತಿಳಿದಿದೆ ಅಂತಲೂ ಅನ್ನಿಸಿತು. ಅವನಲ್ಲಿ ಮತ್ತೆ ಶೃಂಗಾರಭಾವ ಮೂಡತೊಡಗಿತು. ಈ ಬಾರಿ ಹೆಚ್ಚು ಉದ್ರೇಕವಿಲ್ಲದ್ದರಿಂದ ಹೆಚ್ಚು ಸುಧಾರಿಸಿದ್ದ. ಈಗಾಗಲೇ ನಾನು ಅವನನ್ನು ಬಹುವಾಗಿ ಮೆಚ್ಚತೊಡಗಿದ್ದೆ ಕೂಡ. ಮದುವೆಯಾದ ಹೊಸದರಲ್ಲಿ ಆವನು ಮತ್ತು ಅವನ ಹೆಂಡತಿ- ತಂದೆ, ತಾಯಿ, ತಮ್ಮ ಮತ್ತು ತಂಗಿ ಹೀಗೆ ಇಡೀ ಕುಟುಂಬದೊಡನೆ ಒಂದೇ ಕೋಣೆಯನ್ನು ಹಂಚಿಕೊಳ್ಳಬೇಕಿತ್ತು. ಏನೇ ಮಾಡಬೇಕಾದರೂ ಯಾರಾದರೂ ಎದ್ದುಬಿಟ್ಟಾರೆಂಬ ಭಯದಲ್ಲಿ ಸದ್ದಿಲ್ಲದೆ ಬೇಗ ಬೇಗ ಮಾಡಿ ಮುಗಿಸಬೇಕಿತ್ತು. ಇದನ್ನೆಲ್ಲ ಅವನು ಆಮೇಲೆ ನನಗೆ ಹೇಳಿದ. ಆ ಕ್ಷಣದಲ್ಲಿ ನನಗೆ, ನನ್ನ ಬಟ್ಟೆಯನ್ನೆಲ್ಲ ಕಳಚಿ ಬತ್ತಲಾಗಿ ಕೋಣೆಯಲ್ಲಿ ಅತ್ತಿಂದಿತ್ತ ಶತಪಥ ಹಾಕಬೇಕೆಂಬ ವಿಲಕ್ಷಣ ಭಾವ ಮೂಡಿತು. ರಸ್ತೆಯಲ್ಲಿರುವ ಎಲ್ಲ ಗಂಡಸರ ದೃಷ್ಟಿಯೂ ಒಬ್ಬಳ ಮೇಲೆ ಒಟ್ಟಾಗುವ ಹೋಲಿಕೆ ನನ್ನ ಮನಸ್ಸಿಗೆ ಬಂತು. ಅವರೆಲ್ಲರ ಕಣ್ಣಿನ ಭಾವನೆ- ಕಬ್ಬಿಣದ ಸಲಾಕಿಯ ಹಿಂದಿನ ಕೈದಿಗಳು ಹೊರಪ್ರಪಂಚದ ಕಡೆಗೆ ನೋಡುವಾಗಿನ ಭಾವನೆಯಂತೆ ಎನ್ನುವ ಅನಿಸಿಕೆ ಮೊದಲ ಬಾರಿಗೆ ಮನಸ್ಸನ್ನು ತಟ್ಟಿತು. ಅವರ ಹೊರಪ್ರಪಂಚ ನಾನೇ ಇರಬಹುದೆಂದುಕೊಂಡೆ. ನಾನು ಅಲ್ಲಿ ಇಲ್ಲಿ ಹೋಗುವ ರೀತಿ, ಮಾತಾಡಿ ಎಲ್ಲರೊಂದಿಗೆ ನಗುವ ಧಾಟಿ, ಮನಬಂದಂತೆ ನಡೆದುಕೊಳ್ಳುವ ಪರಿ ಇವೆಲ್ಲದರಿಂದ ಅವರು ತಾನಿದ್ದಲ್ಲೇ ಎಟುಕಿಸಿಕೊಳ್ಳಲಾರದ ಮರ, ನದಿಗಳೇ ನಾನಿರಬಹುದು ಎಂದುಕೊಂಡೆ. ಓಹ್! ನನಗೆಷ್ಟು ಕೆಟ್ಟೆನಿಸುತ್ತಿತ್ತು! ನನಗೆ ಏನೆಲ್ಲ ಮಾಡಬೇಕಿತ್ತು! ಅದರ ಆರಂಭಕ್ಕಾಗಿ ನಾನು ನನ್ನ ಜೊತೆಗಾರನೆಡೆಗೆ ನೆಗೆದು ಮುತ್ತಿಕ್ಕಿ ಬಲವಾಗಿ ಅಪ್ಪಿಕೊಂಡು ಅವನ ಮೇಲೆ ಮಲಗಿದೆ. ಅವನನ್ನು ಆವರಿಸಿದೆ. ಅವನ ಮುಖದ ಮೇಲೆ ನನ್ನು ಕೂದಲನ್ನು ಹರಡಿದೆ. ಈ ಕೋಣೆ, ಅವನ ಮಗಳು, ಹೆಂಡತಿ, ಜಾರ್ಜೆಟ್ ಬಟ್ಟೆ ಧರಿಸಿ ಬಾಲ್ಕನಿಯಲ್ಲಿ ನಿಂತ ಹುಡುಗಿಯರು ಹೀಗೆ ನಾನಲ್ಲದ ಯಾವುದೂ ಅವನಿಗೆ ನೆನಪಿರದಂತೆ ಮಾಡಬೇಕಿತ್ತು ನನಗೆ. ಅವನಿಗೆ ಎಲ್ಲ ಹೊಚ್ಚಹೊಸದೆನಿಸುವಂತೆ, ಆದಷ್ಟೂ ಸುಂದರವೆನಿಸುವಂತೆ ಮಾಡಬೇಕಿತ್ತು. ಅವನಿಗೆ ಅದು ಸ್ವಲ್ಪ ಹೊತ್ತು ಇಷ್ಟವಾಯಿತು. ಆದರೆ ಬಹುಬೇಗ ದಣಿದುಬಿಟ್ಟ. ಅವನಿನ್ನೂ ಅಂಥ ಯುವಕನಲ್ಲದ್ದರಿಂದ ಇರಬೇಕು ಬಹುಶ:. <1--break-->

ಈ ಘಟನೆಯ ಕೆಲವೇ ದಿನಗಳ ನಂತರ ನಾನು ಅಹ್ಮದ್‌ನನ್ನು ಭೇಟಿಯಾದೆ. ಅವನೊಬ್ಬ ಹದಿನೆಂಟು ವರ್ಷದ ಸಂಗೀತಗಾರ. ನೆನಪು ಹಿಂದಕ್ಕೆ ಹೊರಳುವಷ್ಟೂ ಅವನ ಪೀಳಿಗೆಯವರು ಸಂಗೀತಗಾರರಾಗಿದ್ದರು. ಅವರು ವಾಸಿಸುತ್ತಿದ್ದ ಓಣಿಯ ತುಂಬ ಬೇರೆ ಸಂಗೀತಗಾರರೂ ಇದ್ದರು. ಆ ಓಣಿಯಲ್ಲಿ ಹೆಜ್ಜೆ ಹಾಕಿದರೆ ಸಂಗೀತ ಮತ್ತು ನಾದಮಯವಾದ ಯಕ್ಷಿಣಿಯ ಕಾಡಿನಲ್ಲಿ ನಡೆದ ಹಾಗಾಗುತ್ತಿತ್ತು. ಇಕ್ಕಟ್ಟಾಗಿ ಗಲೀಜಾಗಿದ್ದ ಆ ಓಣಿಯಲ್ಲಿ ಯಾವ ಯಕ್ಷಿಣಿಯೂ ಇರಲಿಲ್ಲ ಅಷ್ಟೆ! ಮನೆಗಳು ಎಷ್ಟು ಹಳೆಯವಾಗಿದ್ದವೆಂದರೆ, ಬಿರುಸಿನ ಮಳೆ ಬಂದಾಗಲೆಲ್ಲ ಒಂದೋ ಎರಡೋ ಕುಸಿದು ಬೇಳುತ್ತಿದ್ದವು. ನಾನೆಂದೂ ಅಹ್ನದ್‌ನ ಮನೆಯೊಳಗೆ ಅವನ ಕುಟುಂಬದವರನ್ನು ಕಂಡಿರಲಿಲ್ಲ. ನನ್ನ ಬಗ್ಗೆ ಅವರಿಗೆ ತಿಳಿದಿದ್ದರೆ ಆಘಾತವಾಗಿ ಪ್ರಾಣ ಬಿಡುತ್ತಿದ್ದರು. ಅವರು ತೀರಾ ಬಡವರೆಂದೂ, ಮದುವೆ ಮನೆ ಹಾಗೂ ಇತರ ಸಮಾರಂಬಗಳಲ್ಲಿ ವಾದ್ಯ ನುಡಿಸಿ ಹೇಗೋ ಹೊಟ್ಟೆ ಹೊರೆದುಕೊಳ್ಳುತ್ತಿದ್ದರೆಂದೂ ನನಗೆ ಗೊತ್ತಿತ್ತು. ಅಹ್ಮದ್ ಬಳಿ ಎಂದೂ ಹಣವಿದ್ದದ್ದೇ ಇಲ್ಲ. ಅದೃಷ್ಟವಿದ್ದಾಗ ಪಾನ್ ಕೊಳ್ಳಲು ಅವನಿಗೆ ಬಿಡಿಗಾಸುಗಳು ಸಿಕ್ಕುತ್ತಿದ್ದವು. ಆದರೆ ಅವನು ಯಾವಾಗಲೂ ಗೆಲುವಾಗಿ ಸಂತೋಷದಿಂದಿದ್ದು ತನಗೇನೇ ಸಿಕ್ಕಿದರೂ ಅದರಲ್ಲೇ ಸಂತೋಷಪಡುತ್ತಿದ್ದ. ಅವನಿಗೆ ಮದುವೆಯಾಗಿತ್ತು. ಆದರೆ ಅವನ ಹೆಂಡತಿ ಸಂಸಾರ ಮಾಡಲು ಚಿಕ್ಕವಳಾದ್ದರಿಂದ ಬೇರೊಂದು ಊರಲ್ಲಿ ಸಂಗೀತಗಾರನಾಗಿದ್ದ ತಂದೆಯ ಮನೆಗೆ ಕಳಿಸಿದ್ದರು.

ಮೊದಲ ಬಾರಿ ಅಹ್ಮದ್‌ನನ್ನು ನಾನು ಸಂಧಿಸಿದಾಗ ಒಂದು ಹಾಸ್ಟೆಲ್‌ನಲ್ಲಿದ್ದೆ. ಅದು ಒಂದು ದೇವಸ್ಥಾನಕ್ಕೆ ಹೊಂದಿಕೊಂಡಿದ್ದು ತೀರ್ಥಯಾತ್ರಿಗಳಿಗೆ ಉಚಿತವಾಗಿ ದೊರೆಯುತ್ತಿತ್ತು. ಆದರೆ ಆಮೇಲೆ ನನಗೂ ಅಹ್ಮದ್‌ಗೂ ಇರಲು ಒಂದು ಸ್ಥಳ ಬೇಕಿತ್ತು. ನಾನು ಹೆನ್ರಿಗೆ ಇನ್ನೂ ಹೆಚ್ಚು ಹಣ ಕಳಿಸಲು ಟೆಲಿಗ್ರಾಂ ಕಳಿಸಿದೆ. ಹೆನ್ರಿ ದುಡ್ಡೇನೋ ಕಳಿಸಿದ. ಆದರೆ ಅದರ ಜೊತೆಗೆ ದೂರಿನ ದೊಡ್ದ ಪತ್ರವೂ ಇತ್ತು. ನಾನದನ್ನೂ ಪೂರ್ತಿ ಓದಲೂ ಇಲ್ಲ. ಹೋಟೆಲ್‌ನಲ್ಲಿ ಒಂದು ರೂಂ ತೆಗೆದುಕೊಂಡೆ. ಅದು ಊರಾಚೆ ಇತ್ತು. ಪೂರ್ತಿ ಕಟ್ಟಿ ಮುಗಿಸದ ಕೆಲವು ಮನೆಗಳನ್ನು ಬಿಟ್ಟರೆ ಉಳಿದಂತೆಲ್ಲ ಬೀಳು ಬಿದ್ದ ಸ್ಥಳವದು. ನಮ್ಮ ಹೋಟೆಲ್ ಸಹ ಒಂದು ಪೂರ್ತಿ ಮುಗಿಯದ ಕಟ್ತಡ. ಮಾಲೀಕನ ಕೈ ಬರಿದಾದ್ದರಿಂದ ಹಾಗಾಗಿತ್ತು. ಆ ಜಾಗ ಯಾತಕ್ಕೂ ಬಾರದ್ದರಿಂದ ಹೋಟೇಲ್ಲಿನ ಕಟ್ಟಡ ಪೂರ್ತಿಯಾಗುವ ಭರವಸೆಯೂ ಇರಲಿಲ್ಲ. ಅದು ಊರಿಂದ ತೀರಾ ಆಚೆ ಇದ್ದದ್ದರಿಂದ ಅಲ್ಲಿಗೆ ಎಂದೂ ಯಾರೂ ಬರುತ್ತಿರಲಿಲ್ಲ. ಆದರೆ ಅದು ನಮಗೆ ತೀರಾ ಒಗ್ಗಿತು. ನಮಗೆ ದೊರೆತ ಒಂದು ಕೋಣೆ ಪಿಂಕ್ ಬಣ್ಣದ್ದಾಗಿದ್ದು ಹಾಸಿಗೆ ಮತ್ತು ಡ್ರೆಸಿಂಗ್ ಟೇಬಲ್ ಹೀಗೆ ಎರಡು ಪೀಠೋಪಕರಣಗಳ ಹೊರತು ಇನ್ನೇನೂ ಇರಲಿಲ್ಲ. ಅವೆರಡು ಹೊಚ್ಚಹೊಸದಾಗಿದ್ದು ಥಳಥಳಿಸುತ್ತಿದ್ದವು. ಅಹ್ಮದ್‌ಗೆ ಅದು ತುಂಬಾ ಇಷ್ಟವಾಯಿತು. ಅವನು ಇಲ್ಲಿಯವರೆಗೆ ಇಂಥ ಜರ್ಬಿನ ರೂಮಿನಲ್ಲಿ ತಂಗಿಯೇ ಇರಲಿಲ್ಲ. ಅವನು ಮೆತ್ತೆ ಇದ್ದ ಹಾಸಿಗೆಯ ಮೇಲೆ ಪುಟಿಯುತ್ತ ಡ್ರೆಸಿಂಗ್ ಟೇಬಲ್ ಮೇಲಿದ್ದ ಕನ್ನಡಿಯಲ್ಲಿ ತನ್ನನ್ನು ತಾನೇ ನೋಡುತ್ತಾ ನಿಂತುಬಿಟ್ಟಿದ್ದ!!

(ಮುಂದುವರೆಯುವುದು)