ಸಾರಿ , ನಮ್ಮ ಮನೆ ಚಿಕ್ಕದು , ಆಶ್ ಟ್ರೇಗೆ ಜಾಗ ಇಲ್ಲ ?

ಸಾರಿ , ನಮ್ಮ ಮನೆ ಚಿಕ್ಕದು , ಆಶ್ ಟ್ರೇಗೆ ಜಾಗ ಇಲ್ಲ ?

ಕತೆಗಳಿಗೆ ತುಂಬಾ ಡಿಮಾಂಡ್ ಇರೋ ಹಾಗಿದೆ :) , ಸಣ್ಣದರಲ್ಲಿ ಒಂದು ತೆಲುಗು ಕತೆ ಕೇಳಿ . ಮೇಲಿನದು ಪಂಚ್ ಲೈನ್.

ಇವಳು ಮಧ್ಯವಯಸ್ಕಳು , ಉನ್ನತ ಹುದ್ದೆಯಲ್ಲಿದ್ದಾಳೆ , ಮದುವೆ ಆಗಿಲ್ಲ . ಇವಳ ಭೆಟ್ಟಿಗೆ ಅವನು ಈಗ ಬಂದಿದ್ದಾನೆ , ಮನೆಗೆ. ಅದೇಕೋ ?

ಹಿಂದಿನದೆಲ್ಲ ನೆನಪಾಯಿತು ಅವಳಿಗೆ. ಅವಳ ಹರೆಯದಲ್ಲಿ ಅವನು ಇವಳ ಸುತ್ತ ಸುತ್ತುತ್ತಿದ್ದ . ಮನೆಯವರು ಎಲ್ಲರೂ ಇವಳನ್ನ ಮದುವೆ ಆಗ್ತಾನೆ ಅಂತ ತಿಳಕೊಂಡಿರುವಾಗ , ಸುಂದರಿಯೂ ಜಾಣೆಯೂ ಆದ ಇವಳನ್ನ ಬಿಟ್ಟು , ಅಷ್ಟೇನೂ ಚೆನ್ನಾಗಿಲ್ಲದ , ಆದರೆ ಶ್ರೀಮಂತನ ಮಗಳೊಬ್ಬಳನ್ನು ಮದುವೆ ಆಗಿ ವಿದೇಶಕ್ಕೆ ಹಾರಿ ಹೋಗಿದ್ದ . ಇವಳು ಮದುವೆ ಆಗದೇ , ಕೆಲಸ ಸೇರಿ ಪ್ರತಿಷ್ಠೆ ಸ್ಥಾನ ಗಳಿಸಿದ್ದಳು.

ಈಗ ಮನೆಗೆ ಬಂದು , ವಿಶಾಲ ಮನೆ , ಮನೆಯ ಓರಣ ಮೆಚ್ಚಿಕೊಂಡ. ವಿದೇಶದಿಂದ ಅದೇ ತಾನೇ ಬಂದಿರುವದಾಗಿಯೂ , ಹೋಟೆಲಲ್ಲಿ ವಸತಿ ಹೂಡಿರುವದಾಗಿಯೂ ತಿಳಿಸಿದ . ಸಿಗರೇಟ್ ಹಚ್ಚ ಹೋದವನು , ಅಲ್ಲಿ ಆಶ್ ಟ್ರೇ ಇಲ್ಲದಿರುವದನ್ನ ಗಮನಿಸಿ , ಸುಮ್ಮನಾದ . ಹಿಂದೆ ಇದೇ ತರಹದ ಸಂದರ್ಭದಲ್ಲಿ ’ಆಶ್ ಟ್ರೇ ಇಲ್ಲವೇ ? ’ಎಂದು ಕೇಳಿದ್ದ. ಆಗ ’ನಮ್ಮ ಮನೇಲಿ ಸಿಗರೆಟ್ ಸೇದುವವರಾರು ? ಅಪ್ಪ , ಅಮ್ಮ , ನಾನು ಮೂವರೇ ಇರೋದು , ಅಪ್ಪ ಸಿಗರೇಟ್ ಸೇದುವದಿಲ್ಲವಲ್ಲ ? ’ ಎಂದಿದ್ದಳು ಇವಳು .

’ಫ್ಯಾಮಿಲಿಯನ್ನು ಹೊಟೆಲಲ್ಲಿ ಇಳಿಸಿದ್ದೀಯಾ ? ಭೆಟ್ಟಿ ಮಾಡಿಸುವದಿಲ್ಲವೆ ?’ ಎಂದಾಗ ’ಸಂಜೆ ಕರೆದುಕೊಂಡು ಹೋಗುವೆ ’ ಎಂದು ಅ ಪ್ರಕಾರ ಸಂಜೆ ಕರೆದುಕೊಂಡೂ ಹೋದ. ಅಲ್ಲಿ ಒಂದು ಮಗು ಮಲಗಿತ್ತು. ’ನನ್ನ ಮಗ ’ ಎಂದ . ’ಮಗುವಿನ ತಾಯಿ ಎಲ್ಲಿ ?’ ಎಂಬ ಪ್ರಶ್ನೆಗೆ ’ ಇಲ್ಲ , ಅವಳು ತೀರಿಕೊಂಡಿದ್ದಾಳೆ’ ಎಂದ . ಇವಳು ಮೌನಿಯಾದಳು .

ಅಲ್ಲಿಂದ ಹೊರಡುವ ವೇಳೆ ಅವನು ಕೇಳಿದ - ’ನಿನ್ನ ಮನೇಲಿ ಒಂದು ಆಶ್ ಟ್ರೇ ಇಡಬಹುದಲ್ಲ ? ’
ಇವಳು ಹೇಳಿದಳು - ’ಸಾರಿ , ನಮ್ಮ ಮನೆ ಚಿಕ್ಕದು , ಆಶ್ ಟ್ರೇಗೆ ಜಾಗ ಇಲ್ಲ’ .

Rating
No votes yet

Comments