ನಮ್ಮವರನ್ನ ಹ್ಯಾಗೆ ನಂಬೋದು?

ನಮ್ಮವರನ್ನ ಹ್ಯಾಗೆ ನಂಬೋದು?

ಬರಹ

ಈ ಕೆಳಗೆ ತಿಳಿಸಿರುವ ಪ್ರಸಂಗ ನಾನು ಬ್ಯಾಂಕಿನ ಕಾರ್ಯ ನಿಮಿತ್ತ ಉತ್ತರ ಗುಜರಾತಿನ ಪಾಲನಪುರ ಎಂಬಲ್ಲಿ ಇದ್ದಾಗ ನಡೆದದ್ದು.

ಪಾಲನಪುರ ಒಂದು ಚಿಕ್ಕ ಜಿಲ್ಲಾ ಕೇಂದ್ರ. ಅಹ್ಮದಾಬಾದಿನಿಂದ ಸುಮಾರು ೧೪೦ ಕಿ.ಮಿ. ದೂರದಲ್ಲಿದೆ. ಅಲ್ಲಿಗೆ ತಲಪಬೇಕಾದರೆ ಅಹ್ಮದಾಬಾದ್ > ಮೆಹಸಾಣ > ಸಿದ್ದಪುರ (ಮಾತ್ಟ್ರುಗಯಾ) > ಪಾಲನಪುರ ಹೀಗೆ ಅಹ್ಮದಾಬಾದ್ > ದೆಹಲಿ ಮಾರ್ಗವಾಗಿ ಹೋಗಬೇಕು.

ಪಾಲನಪುರದಲ್ಲಿ ನಾನಿದ್ದಾಗ ಕೇವಲ ನಾಲ್ಕಾರು ಕನ್ನಡದ ಕುಟುಂಬಗಳು ಇದ್ದವು. ಒಂದು ಕುಟುಂಬ ಅಲ್ಲಿನ ಬನಾಸ್ಕಾಂತ ಡೈರಿಯಲ್ಲಿ ಕೆಲಸದಲ್ಲಿದ್ದು, ಇನ್ನೊಂದು ಅಲ್ಲಿಂದ ೩೦ ಕಿ.ಮೀ. ದೂರದಲ್ಲಿದ್ದ ಕೃಷಿ ವಿಶ್ವವಿದ್ಯಾಲಯದಲ್ಲಿ ಮಾಸ್ತರಿಕೆ ಮಾಡುವವರದಾಗಿತ್ತು. ಇನ್ನು ನಾನು. ನಾಗರಾಜ್ ಎಂಬ ನನ್ನ ಹೆಸರು ಅಲ್ಲಿನವರಿಗೆ ವಿಚಿತ್ರವಾಗಿದ್ದು, ತುಂಬಾ ಸೋಶಿಯಲ್ಲಾಗಿ ನಾನು ಅಲ್ಲಿನವರೊಡನೆ ಬೆರೆತಿದ್ದರಿಂದ ಸಾಮಾನ್ಯವಾಗಿ ಆ ಚಿಕ್ಕ ಊರಿನ ಸುಮಾರು ಜನರು ನನ್ನನ್ನು ಬಲ್ಲವರಾಗಿದ್ದರು. ೧೯೮೪ರಲ್ಲಿ ನಾನು ಬೆಂಗಳೂರಿನಿಂದ ಅಲ್ಲಿಗೆ ಹೋದಾಗ ಅಲ್ಲಿ ಇನ್ನೂ ಟಿವಿ ಪ್ರಸರಣವೇ ಬಂದಿರಲಿಲ್ಲ. ನಾನು ತೆಗೆದುಕೊಂಡು ಹೋಗಿದ್ದ ಟಿವಿ ಡಬ್ಬದಲ್ಲಿಯೇ ನಿದ್ದೆ ಮಾಡುತ್ತಿತ್ತು. ಆದರೆ, ಆ ವರ್ಷದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯಾದಾಗ, ಅಲ್ಲಿನ ಜನರಿಗೆ ಟಿವಿಯಲ್ಲಿ ಅದರ ಚಿತ್ರ ಸಹಿತ ವಿವರಗಳನ್ನು ನೋಡಲು ಸಾಧ್ಯವಾದದ್ದು ನನ್ನ ಟಿವಿಯಲ್ಲಿ. ಅಲ್ಲಿನ ಟೆಲಿಫೋನ್ ವಿಭಾಗದವರು ಅವರ ಟವರ್ರಿಗೆ ನನ್ನ ಟಿವಿಯ ಆಂಟೆನಾ ಜೋಡಿಸಿ, ಚಿತ್ರ ರಿಲೆ ಅಹ್ಮದಾಬಾದಿನಿಂದ ಆಗುವಂತೆ ಮಾಡಿದ್ದರು. ಊರವರೆಲ್ಲರಿಗೆ ನನ್ನ ಬಗ್ಗೆ ತಿಳಿಯಲು ಇದೂ ಒಂದು ಕಾರಣ. ಅಲ್ಲದೆ, ನಾನು ನಮ್ಮ ಬ್ಯಾಂಕಿನ ಆಂತರಿಕ ಲೆಕ್ಕ ಪರಿಷೋಧಕನ ಹುದ್ದೆಯಲ್ಲಿದ್ದುದರಿಂದಲೂ, ನಮ್ಮ ಬ್ಯಾಂಕು ಪಾಲನಪುರ (ಬನಾಸ್ಕಾಂತ) ಮತ್ತು ಮೆಹಸಾಣ ಎರಡು ಜಿಲ್ಲೆಗಳಲ್ಲಿ ೭೯ ಶಾಖೆಗಳನ್ನು ಹೊಂದಿದ್ದುದರಿಂದ, ಆಗಿಂದಾಗ್ಗೆ ಈ ಎಲ್ಲಾ ಶಾಖೆಗಳ ನಿರೀಕ್ಷಣೆಗಾಗಿ ಹೋಗಬೇಕಾಗಿ ಬರುತ್ತಿತ್ತು. ಹಾಗಾಗಿ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಮತ್ತು ರೈಲ್ವೇ ನಿಲ್ದಾಣದ ಅಧಿಕಾರಿಗಳಿಗೆ ನನ್ನ ಹೆಸರು ಮತ್ತು ವ್ಯಕ್ತಿ ಪರಿಚಯ ಚೆನ್ನಾಗಿತ್ತು.

ಆ ಊರಿನವರಿಗೆ ಇದ್ದ ಈ ನನ್ನ ಪರಿಚಯ ನನ್ನನ್ನು ಪೇಚಿಗೂ ಸಿಕ್ಕಿಸುತ್ತಿತ್ತು. ಆ ಊರಿಗೆ ಯಾರೇ ದಕ್ಷಿಣ ಭಾರತೀಯರು ಬಂದರೂ, ಮೊದಲು " ಇಲ್ಲೊಬ್ಬ ಮದ್ರಾಸಿ ಇದ್ದಾರೆ, ನಾಗರಾಜ್ ಅಂತ, ಅವರನ್ನು ಭೇಟಿ ಮಾಡಿದರೆ ನಿಮಗೆ ಬೇಕಾದ ಅನುಕೂಲತೆಗಳನ್ನು ಮಾಡಿಕೊಡುತ್ತಾರೆ" ಎಂದು ಅವರನ್ನು ನನ್ನ ಬಳಿಗೆ ಕಳುಹಿಸುತ್ತಿದ್ದರು.

ಪರಿಸ್ಥಿತಿ ಹೀಗಿದ್ದಾಗ ಒಂದು ದಿನ ನಾನು ಸುಮಾರು ೧೨ ಗಂಟೆಯಲ್ಲಿ ಕಛೇರಿಯಲ್ಲಿ ಕುಳಿತು ಏನೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ಆಗ ಕಛೇರಿಯ ಜವಾನನೊಬ್ಬ ನನ್ನಲ್ಲಿಗೆ ಬಂದು "ಸಾರ್ ನಿಮ್ಮನ್ನು ಹುಡುಕಿಕೊಂಡು ಯಾರೋ ಮದ್ರಾಸಿಗಳು ಬಂದಿದ್ದಾರೆ. ಅವರನ್ನು ನಿಮ್ಮಲ್ಲಿಗೆ ಕಳುಹಿಸಲೇ?" ಎಂದ. ನಾನು ಕೆಲಸದ ವಿಷಯದಲ್ಲಿ ಕೊಂಚ ಖಡಕ್ ಆದ್ದರಿಂದ, ಅವರನ್ನು ೩ ಗಂಟೆಯ ಮೇಲೆ ನನ್ನನ್ನು ಭೇಟಿ ಮಾಡುವಂತೆ ತಿಳಿಸಿದೆ (ಅಲ್ಲಿ ಕಛೇರಿಗಳು ೧೧ ಗಂಟೆಗೆ ಪ್ರಾರಂಭವಾಗಿ ೬ಕ್ಕೆ ಮುಗಿಯುತ್ತವೆ. ಊಟದ ಸಮಯ ೩ ರಿಂದ ೩.೩೦ ವರೆಗೆ)

ನಾನು ಹೇಳಿದಂತೆ ೩ ಗಂಟೆಗೆ ಸರಿಯಾಗಿ ಒಬ್ಬ ಅಂದಾಜು ೨೫ ವರ್ಷ ವಯಸ್ಸಿನ ಹುಡುಗ ಮತ್ತು ೧೬-೧೭ ವರ್ಷ ವಯಸ್ಸಿನ ಹುಡುಗಿ ಒಳಗೆ ಬಂದು ನನ್ನ ಮುಂದೆ ನಿಂತರು. ನಾನು ಅವರನ್ನು ಕುರ್ಚಿಗಳಲ್ಲಿ ಕುಳಿತುಕೊಳ್ಳುವಂತೆ ಹೇಳಿ, ಬಂದ ಕಾರಣವನ್ನು ಕೇಳಿದೆ. ಅವರು ದುಃಖದಿಂದ ಕೂಡಿದ ಮುಖವನ್ನು ಹೊಂದಿ, "ಸಾರ್, ಇಲ್ಲಿನ ಜೈನ್ ಛತ್ರದಲ್ಲಿ ನಮ್ಮ ತಂದೆ, ತಾಯಿ ಇನ್ನಿತರರು ಇದ್ದಾರೆ. ನಮ್ಮ ತಂದೆ ತಮ್ಮನ್ನು ಕೂಡಲೆ ಬರುವಂತೆ ಕೋರಿದ್ದಾರೆ. ದಯವಿಟ್ಟು ನನ್ನ ಬರಲು ಸಾಧ್ಯವೇ" ಎಂದರು. ನಾನು ಅವರಿಗೆ ತಕ್ಷಣ ಬರಲು ಇರುವ ನನ್ನ ಕಾರ್ಯಗೌರವವನ್ನು ತಿಳಿಸಿ, ಸಂಜೆ ೬-೧೫ರ ಹೊತ್ತಿಗೆ ಬಂದು ಅವರನ್ನು ಛತ್ರದಲ್ಲಿಯೇ ಕಾಣುವುದಾಗಿ ಹೇಳಿದೆ.

ಹೇಳಿದಂತೆ ನಾನು ೬-೧೫ರ ಹೊತ್ತಿಗೆ ಅಲ್ಲಿಯೇ ಹತ್ತಿರದಲ್ಲಿದ್ದ ಜೈನ್ ಛತ್ರಕ್ಕೆ ಹೋಗಿ ಅವರನ್ನು ಕಂಡೆ. ಸುಮಾರು ೬೦-೬೫ ವರ್ಷ ವಯಸ್ಸಿನ ಹಿರಿಯರು, ಅವರ ಹೆಂಡತಿ, ಮೊದಲು ನನ್ನಲ್ಲಿಗೆ ಬಂದಿದ್ದ ಇಬ್ಬರು ಮಕ್ಕಳು, ಇನ್ನಿಬ್ಬರು ಹೆಂಗಸರು, ಹೀಗೆ ಅಲ್ಲಿ ಆರು ಜನ ಒಂದು ರೂಮಿನಲ್ಲಿ ತಂಗಿದ್ದು, ನಾನು ಹೋದೊಡನೆಯೇ ಆ ಹಿರಿಯರು ತಮ್ಮನ್ನು ಧರಣೇಂದ್ರಯ್ಯ ಎಂದು ಪರಿಚಯಿಸಿಕೊಂಡು ಇನ್ನಿತರ ಪರಿಚಯ ಮಾಡಿಸಿದರು. ಹಾಗೆಯೇ ನನ್ನ ಪರಿಚಯವಾಗಿದ್ದಕ್ಕೆ ಸಂತೋಷವನ್ನೂ ವ್ಯಕ್ತ ಪಡಿಸಿದರು. ಅಷ್ಟರಲ್ಲಿ ಅವರು ತಂದಿದ್ದ ಅಗ್ಗಿಸ್ಟಿಕೆಯನ್ನು ಉಪಯೋಗಿಸಿಕೊಂಡು ಕರ್ನಾಟಕದ ರುಚಿ ರುಚಿಯಾದ ಕಾಫಿ ಸಿದ್ದವಾಗಿ ನನ್ನ ಮುಂದೆ ಬಂದಿತು. ನಾನು ಸಂಕೋಚದಿಂದಲೇ ಅದನ್ನು ತೆಗೆದುಕೊಂಡು ಅವರು ನನ್ನನ್ನು ಕರೆಸಿದ ಉದ್ದೇಶವನ್ನು ಕೇಳಿದೆ. ಅವರ ಮುಖ ಬಾಡಿತು. ದುಃಖ ಉಮ್ಮಳಿಸುತ್ತಿತ್ತು. ಅವರ ಹೆಂಡತಿ ದಡೂತಿ ಹೆಂಗಸು ಮಲಗಿ ಕೊಂಡು ಏದುಸಿರು ಬಿಡುತ್ತಿದ್ದರು. ಇನ್ನಿಬ್ಬರು ಹೆಂಗಸರು ಅವರ ಉಪಚಾರ ಮಾಡುತ್ತಿದ್ದರು.

ಆ ಹಿರಿಯರು ನನ್ನನ್ನು ಉದ್ದೇಶ್ಸಿ "ನೋಡಿ ನಾಗರಾಜರೇ, ನಾವು ಜೈನ ಮತಸ್ಥರು. ತೀರ್ಥಯಾತ್ರೆಗೆಂದು ಹೊರಟವರು ಗುಜರಾತಿನಲ್ಲಿರುವ ನಮ್ಮ ಪ್ರಸ್ತಿದ್ದ ಯಾತ್ರಾಸ್ಥಳ ಪಾಲಿಥಾನಕ್ಕೆ ಹೋದೆವು. ಅಲ್ಲಿಂದ ಮತ್ತೆ ಕರ್ನಾಟಕಕ್ಕೆ ಹಿಂದಿರುಗುವ ಸನ್ನಾಹ ದಲ್ಲಿದ್ದಾಗ, ಅಲ್ಲಿದ್ದ ಗುಜರಾತಿಗಳು ನಮಗೆ ಹತ್ತಿರದಲ್ಲಿಯೇ ಇರುವ ಮೌಂಟ್ ಅಬುಗೆ ಹೋಗಿ ಸ್ವಾಮಿಯ ದರ್ಶನ ಪಡೆಯಲು ಹೇಳಿದರು. ಅದರಂತೆ ನಾವು ಅಲ್ಲಿಗೆ ಹೋದೆವು" ಎಂದರು.

ಮೌಂಟ್ ಅಬು ಪಾಲನಪುರದಿಂದ ಕೇವಲ ೬೦ ಕಿ.ಮೀ ದೂರದಲ್ಲಿ ಗುಜರಾತ್ - ರಾಜಾಸ್ಥಾನ್ ಬಾರ್ಡರಿನಲ್ಲಿದೆ. ಹೋಗಿ ಬರಲು ಬಸ್, ರೈಲು, ಜೀಪುಗಳು ಹೀಗೆ ಎಲ್ಲಾ ತರಹದ ಅನುಕೂಲವೂ ಇವೆ. ಅದು ಜೈನರ ಸುಪ್ರಸಿದ್ಧ ಯಾತ್ರಾ ಸ್ಥಳವೂ ಹೌದು, ಪ್ರಕೃತಿ ಸೌಂದರ್ಯವನ್ನು ಮಡಿಲಿನಲ್ಲಿಟ್ಟುಕೊಂಡಿರುವ ಹಿಲ್ ಸ್ಟೇಷನ್ ಕೂಡ ಹೌದು.

ಅನಂತರ ಅವರು "ನಮ್ಮ ಪ್ರಯಾಣದ ಸಮಯದಲ್ಲಿ ನಮ್ಮ ಎಲ್ಲಾ ಹಣವನ್ನೂ ನನ್ನ ಹೆಂಡತಿಯ ಕೈಯಲ್ಲಿ ಕೊಟ್ಟಿರುತ್ತಿದ್ದೆವು. ಅವಳು ತನ್ನ ರವಿಕೆಯಲ್ಲಿ ಅದಕ್ಕೆಂದೇ ಹೊಲಿಸಿದ್ದ ಜೇಬಿನಲ್ಲಿಟ್ಟುಕೊಂಡು, ನಾವುಗಳು ಕೇಳಿದಾಗ ಕೊಡುತ್ತಿದ್ದಳು. ಆದರೆ, ಮೌಂಟ್ ಅಬು ತಲಪಿ, ಸ್ವಾಮಿಯ ದರ್ಶನ ಪಡೆದು ಮರಳಲು ಬಸ್ ಸ್ಟಾಂಡಿಗೆ ಬಂದು ನೋಡಿದಾಗ, ಆಕೆಯಲ್ಲಿದ್ದ ಹಣ ಪೂರ್ತ ಕಳುವಾಗಿ ಹೋಗಿತ್ತು. ಅಥವಾ ಆಕೆಯೇ ಅದನ್ನು ಎಲ್ಲಾದರೂ ಬೀಳಿಸಿಕೊಂಡಳೋ ಕಾಣೆ. ಒಟ್ಟಾರೆ, ನಾವು ಬಿಡುಗಾಸಿಲ್ಲದ ಬಿಕ್ಷುಕರಾಗಿ ಬಿಟ್ಟೆವು. ಬಸ್ಸಿನಿಂದ ಇಳಿಯಲು ಕಂಡಕ್ಟರನು ನಮ್ಮನ್ನು ಒತ್ತಾಯಿಸಿದಾಗ, ಅವನಿಗೆ ಸಂದರ್ಭವನ್ನು ತಿಳಿಸಿ, ಏನಾದರೂ ಸಹಾಯ ಮಾಡುವಂತೆ ಕೇಳಿಕೊಂಡೆವು. ಅದು ಪಾಲನಪುರಕ್ಕೆ ಬರುವ ಬಸ್ಸಾಗಿತ್ತು. ಅವನು ಸರಿ, ಪಾಲನಪುರಕ್ಕೆ ನಿಮ್ಮನ್ನು ಬಿಡುತ್ತೇನೆ, ಅಲ್ಲೊಬ್ಬರು ಮದ್ರಾಸಿ ಬ್ಯಾಂಕ್ ಆಫೀಸರ್ ಇದ್ದಾರೆ, ಅವರ ಸಹಾಯ ಪಡೆದುಕೊಳ್ಳಿ ಎಂದು ಹೇಳಿ ನಮ್ಮನ್ನು ಈ ಊರಿನ ಬಸ್ ಸ್ಟಾಂಡಿನಲ್ಲಿ ಬಿಟ್ಟ. ಈಗ ನಾವು ಈ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೇವೆ. ನನ್ನವಳಿಗೆ ಇಲ್ಲಿನ ಹವಾಮಾನ ಒಗ್ಗದೆ, ಉಬ್ಬಸ ಹೆಚ್ಚಾಗಿ, ಈಗಲೋ ಆಗಲೋ ಅನ್ನುವಂತೆ ಆಡುತ್ತಿದ್ದಾಳೆ, ದಿಕ್ಕೇ ತೋಚದಂತಾಗಿದೆ. ಏನಾದರೂ ಸಹಾಯ ಮಾಡಿ" ಎಂದರು.

ನಾನು ಅವರನ್ನು "ಚಿಂತಿಸ ಬೇಡಿ, ನಮ್ಮ ಮನೆಗೆ ಬನ್ನಿ, ನಿಮಗೆ ಬೇಕಾದ ಅನುಕೂಲತೆಗಳನ್ನು ಒದಗಿಸೋಣ. ಆಕೆಯನ್ನು ಡಾಕ್ತರಿಗೆ ತೋರಿಸಿ ಔಷಧಿ ಕೊಡಿಸೋಣವಂತೆ, ನಡಿಯಿರಿ, ನಮ್ಮ ಮನೆಗೆ" ಎಂದೆ. ಅದಕ್ಕೆ ಅವರು "ಬೇಡಾ ಸಾರ್, ಇದು ಧರ್ಮ ಛತ್ರ, ಪುಗಸಟ್ಟೆ ಕೊಠಡಿ ದೊರಕಿದೆ. ಎರಡು ದಿವಸ ಇಲ್ಲಿರಬಹುದು. ನಾನು ನಿಮ್ಮ ಜೊತೆ ನಿಮ್ಮ ಮನೆಗ ಬರುತ್ತೇನೆ. ನಡಿಯಿರಿ" ಎಂದರು. ಸರಿ ಎಂದ ನಾನು ಅವರನ್ನು ಕರೆದುಕೊಂಡು ಮನೆಗೆ ಬಂದೆ. ತಿಂಡಿ, ಕಾಫಿ ಉಪಚಾರವನ್ನು ಅವರು ಒಪ್ಪದೆ, "ನಾವು ಜೈನ ಮತಸ್ಥರು. ಸಂಜೆ ಆರುಗಂಟೆಗೆ ಕೊಂಚ ತಿಂದರೆ, ಇನ್ನು ಮಾರನೆ ದಿನವೇ ನಮ್ಮ ಊಟ, ತಿಂಡಿ ಎಲ್ಲಾ. ಆದುದರಿಂದ ತೊಂದರೆ ತೆಗೆದುಕೊಳ್ಳಬೇಡಿ. ನನ್ನ ಮಗಳಿಗೆ ಬೇಕಾದರೆ ಏನಾದರೂ ಕೊಂಚ ಕೊಡಿ, ಅವಳಿಗೇನೂ ಅಭ್ಯಂತರವಿಲ್ಲ" ಎಂದರು. ಮಾಡಿದ್ದ ತಿಂಡಿಯನ್ನು ಅವಳಿಗೆ ಕೊಟ್ಟೆ. ಉಪ್ಪಿನಕಾಯಿನ ರುಚಿ ನೋಡಿದ ಅವಳು ಅವರಿಗೆ ಅದು ಚೆನ್ನಾಗಿದೆ ಎಂದು ತಿಳಿಸಿದಳು. ಅವರು "ಅದನ್ನು ಕೊಂಚ ಪ್ಯಾಕ್ ಮಾಡಿ ಕೊಡಿ" ಎಂದರು. ಸರಿ, ಈಗ ನಾನೇನು ಸಹಾಯ ಮಾಡಬೇಕು ಎಂದು ಕೇಳಿದೆ. ಅದಕ್ಕೆ ಅವರು "ನನ್ನ ಸಂಬಂಧಿಗಳು ಮೀರಜ್ಜಿನಲ್ಲಿರುತ್ತಾರೆ. ನನ್ನ ಮಗನಿಗೆ ಅಲ್ಲಿಗೆ ಹೋಗಲು ಅನುಕೂಲ ಮಾಡಿಕೊಟ್ಟರೆ, ಎರಡು ದಿನಗಳಲ್ಲಿ ಅವನು ಅಲ್ಲಿಂದ ದುಡ್ಡು ತೆಗೆದುಕೊಂಡು ಬಂದು, ನಮ್ಮನ್ನು ಕರೆದುಕೊಂಡು ಹೋಗುತ್ತಾನೆ. ಇದೊಂದು ಉಪಕಾರವನ್ನು ನೀವು ಮಾಡಿದರೆ, ಆಜೀವಪರ್ಯಂತ ನಿಮ್ಮ ಉಪಕಾರವನ್ನು ನಾವು ಮರೆಯುವುದಿಲ್ಲ. ನಿಮ್ಮ ಹಣವನ್ನು ನಾವು ಊರಿಗೆ ಹೋದ ತಕ್ಷಣ ಟಿಎಂಓ ಮಾಡುತ್ತೇನೆ. " ಎಂದರು. ಅವರ ಹೆಂಡತಿ ಪಡುತ್ತಿದ್ದ ಪಾಡು ನನ್ನ ಕಣ್ಣಮುಂದೇ ಕಟ್ಟಿಕೊಂಡಿತ್ತು. ನಾನೂ, ನನ್ನ ಹೆಂಡತಿಯೂ ನಮ್ಮಲ್ಲಿ ಚರ್ಚಿಸಿಕೊಂಡು, ಅವರಿಗೆ "ಸ್ವಾಮಿ, ನಿಮ್ಮ ಮಗ ಮೀರಜ್ಜಿಗೆ ಹೋಗಿ, ಬಂದು, ನಿಮ್ಮನ್ನು ಕರೆದುಕೊಂಡು ಹೋಗಲು ಒಂದು ವಾರವಾದರೂ ಆಗುತ್ತದೆ. ಅಲ್ಲಿಯವರೆಗೆ ನಿಮ್ಮ ಪತ್ನಿಯವರ ಸ್ಥಿತಿ ಇನ್ನೂ ಬಿಗಡಾಯಿಸಬಹುದು, ಆದ್ದರಿಂದ ನಾನು ನಿಮ್ಮೆಲ್ಲರಿಗೂ ಒಟ್ಟಾಗಿ ಊರು ತಲಪುವಂತೆ ರೈಲ್ವೇ ಟಿಕೆಟ್ಟನ್ನು ಕೊಡಿಸುತ್ತೇನೆ. ನೀವು ಹೋಗಿ, ಊರು ತಲುಪಿ ಸುಧಾರಿಸಿಕೊಂಡು ನನ್ನ ಹಣವನ್ನು ಹಿಂದಿರುಗಿಸಿ" ಎಂದು ಅವರಿಗೆ ನಮ್ಮ ವಿಳಾಸವನ್ನು ಬರೆದುಕೊಟ್ಟೆ. ಅವರೂ ತಮ್ಮ ಶಿವಮೊಗ್ಗದ ವಿಳಾಸವನ್ನು ಕೊಟ್ಟು, ಮುಂದೆ ರಜಾ ದಿನಗಳಲ್ಲಿ ನಾವುಗಳು ಅವರ ಊರಿಗೆ ಬರಲು ಆಮಂತ್ರಿಸಿದರು.

ನಂತರ ಅವರನ್ನು ಜೈನ್ ಛತ್ರಕ್ಕೆ ಬಿಟ್ಟು, ಅವರ ಮಗನೊಂದಿಗೆ ರೈಲ್ವೇಸ್ಟೇಷನ್ನಿಗೆ ಹೋಗಿ ಮಾರನೆ ದಿನಕ್ಕೆ ಅನುಕೂಲವಾಗುವಂತೆ ಅವರೆಲ್ಲರ ಹೆಸರಿನಲ್ಲಿ ಮೀರಜ್ ವರೆಗೆ ಟಿಕೆಟ್ಟನ್ನು ಖರೀದಿಸಿಕೊಟ್ಟೆ. ಮೇಲೆ ಕೊಂಚ ಹಣವನ್ನೂ ಕೊಟ್ಟು (ಒಟ್ಟು ಸುಮಾರು ೮೦೦ ಕೊಟ್ಟೆ. ೧೯೮೫ರಲ್ಲಿ ಅದರ ಬೆಲೆ ಹೆಚ್ಚೇ, ಅದೂ ಮಧ್ಯಮ ವರ್ಗದ ನಮ್ಮಂತಹವರಿಗೆ. ನನ್ನ ಮಾಸಿಕ ಸಂಬಳವೇ ಸುಮಾರು ೨೦೦೦ ಇತ್ತು) ಮನೆಗೆ ಬಂದೆ.

ಒಂದು ವಾರವಾಯಿತು, ಹದಿನೈದು ದಿನವಾಯಿತು, ತಿಂಗಳು ಕಳೆಯಿತು, ೨ ತಿಂಗಳಾದರೂ ಅವರಿಂದ ಯಾವ ಉತ್ತರವೂ ಬರಲಿಲ್ಲ. ಅವರು ಕೊಟ್ಟಿದ್ದ ವಿಳಾಸಕ್ಕೆ ಕಾಗದ ಬರೆದೆ, ಉತ್ತರವಿಲ್ಲ. ರಿಜಿಸ್ಟರ್ಡ್ ಪತ್ರ ಬರೆದೆ, ಅದು ಅಂತಹ ಯಾವ ವಿಳಾಸದಾರರೂ ಇಲ್ಲವೆಂದು ಹಿಂತಿರುಗಿ ಬಂತು. ನಂತರ ಶಿವಮೊಗ್ಗಾದ ಪೊಲೀಸ್ ಠಾಣೆಗೆ ಸವಿವರವಾಗಿ ಪತ್ರ ಬರೆದು, ನನ್ನ ಹಣ ಹಿಂದಿರುಗಿಸಿಕೊಡಲು ಕೇಳಿಕೊಂಡೆ. ಅವರಿಂದಲೂ ಯಾವ ಉತ್ತರವೂ ಬರಲಿಲ್ಲ. ಮತ್ತೆ ಮತ್ತೆ ಬರೆದ ಪತ್ರಗಳಿಗೂ ಯಾವ ಪ್ರತಿಕ್ರಿಯೆಯೂ ದೊರೆಯದಿದ್ದಾಗ, ಸುಮ್ಮನಾದೆ.

ಇದಾದ ೩-೪ ತಿಂಗಳ ನಂತರ ಪಾಲನಪುರದ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಅಗ್ರಿಕಲ್ಚರ್ ಆಫೀಸರಾಗಿ ಒಬ್ಬ ಕನ್ನಡಿಗರು ಬಂದರು. ಯಥಾಪ್ರಕಾರ ಅವರ ನನ್ನ ಪರಿಚಯ ನಡೆಯಿತು. ಆಗಿಂದಾಗ್ಗೆ ಅವರು ನಮ್ಮ ಮನೆಗೆ ಬರುತ್ತಿದ್ದರು. ಒಬ್ಬಂಟಿಯಾಗಿದ್ದ ಅವರಿಗೆ ಭಾನುವಾರ ನಮ್ಮ ಮನೆಯಲ್ಲಿ ಊಟ ತಿಂಡಿ ವ್ಯವಸ್ಥೆಯೂ ಆಗುತ್ತಿತ್ತು. ಲೋಕಾಭಿರಾಮವಾಗಿ ಮಾತನಾಡುತ್ತಾ, ನಾನು ಮೇಲಿನ ಘಟನೆಯನ್ನು ಅವರಿಗೆ ತಿಳಿಸಿದಾಗ ಅವರು ಜೋರಾಗಿ ನಕ್ಕರು. ನಂತರ " ಆ ಬ . . .ಮಗ ನಿಮ್ಮಲ್ಲಿಗೂ ಬಂದಿದ್ದನೇನ್ರೀ, ಈಗಾಗಲೇ ಅವನು ನಮಗೂ ಗಸ್ತು ಕೊಟ್ಟಿದ್ದಾನೆ. ನಾವು ಜೈಪುರದಲ್ಲಿದ್ದಾಗ, ಇದೇ ಬ್ಯಾಚು ಅಲ್ಲಿಗೂ ಬಂದಿತ್ತು, ಅದೇ ಕಥೆ ಹೇಳಿ ನಮ್ಮಿಂದ ಹಣ ಪೀಕಿಸಿಕೊಂಡು, ನಾಮ ತಿದ್ದಿ ಹೋದ, ದೊಡ್ಡ ಬದ್ಮಾಷ್ ಅವರು. ನನ್ನದೂ ಶಿವಮೊಗ್ಗವೇ. ನಾನು ರಜೆಯಲ್ಲಿ ಶಿವಮೊಗ್ಗಾಕ್ಕೆ ಹೋದಾಗ ಅವನು ಕೊಟ್ಟ ಅಡ್ರೆಸ್ ಹುಡುಕಿಕೊಂಡು ಹೋದರೆ ಏನಾಯ್ತೂಂತೀರ, ಆ ವಿಳಾಸದವರಿಗೆ ಇಂತಹದೆ ಇನ್ನೊಂದು ಕಥೆ ಹೇಳಿ ಅವರಿಂದಲೂ ಹಣ ಹೊಡೆದುಕೊಂಡು ಹೋಗಿದ್ದಾನೆ. ಅವರ ವಿಳಾಸವನ್ನು ನಿಮಗೆ ಕೊಟ್ಟಿದ್ದಾನೆ ಅಷ್ಟೆ" ಎಂದರು.

ಅಂದಿನಿಂದ ನಮ್ಮವರು, ನಮ್ಮ ರಾಜ್ಯದವರು ಎಂದು ಯಾರಾದರೂ ಹೇಳಿಕೊಂಡು ಬಂದರೆ, ಬಹಳ ಜಾಗ್ರತೆ ಇರುವಂತಾಯಿತು ನನ್ನ ಪರಿಸ್ಥಿತಿ. ಇನ್ನೊಮ್ಮೆ ಒಬ್ಬ ತಮಿಳು ಹುಡುಗ ಹೀಗೆಯೇ ದುಡ್ಡು ಕಳೆದು ಹೋಯಿತು, ಸಹಾಯ ಮಾಡಿ ಎಂದು ಬಂದಾಗ, ಅವನಿಗೆ ಮೆಯಸಾಣದವರೆಗಿನ ಬಸ್ ಛಾರ್ಚನ್ನು ಕೊಟ್ಟು, ಅಲ್ಲಿರುವ ತಮಿಳು ಸಂಘವನ್ನು ಸಂಪರ್ಕಿಸಿ, ಮುಂದಿನ ಸಹಾಯ ಪಡೆಯುವಂತೆ ಹೇಳಿ ಕಳುಹಿಸಿದೆ. ಅವನು ನನ್ನ ಹಣ ಹಿಂದಿರುಗಿಸುತ್ತೇನೆಂದಾಗ, "ದಯವಿಟ್ತು ಆ ಹಣವನ್ನು ನೀನು ತಿರುಪತಿಗೆ ಹೊದಾಗ ನನ್ನ ಹೆಸರಿನಲ್ಲಿ ದೇವರ ಹುಂಡಿಯಲ್ಲಿ ಹಾಕು" ಅಷ್ಟೇ ಸಾಕು" ಎಂದು ಹೇಳಿ ಕಳುಹಿಸಿದೆ.

ಈಗ ಹೇಳಿ ನಾವು ನಮ್ಮವರನ್ನು ನಂಬಬಹುದೇ ಎಂದು.

ಎ.ವಿ. ನಾಗರಾಜು,
ಅಗಿಲೆನಾಗ್[ಎಟ್]ರೀಡಿಫ್ ಮೈಲ್.ಕಾಂ