ಮುಖಸ್ತುತಿ

ಮುಖಸ್ತುತಿ

ಹೊಗಳಿಕೆಯ ಮಾತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ:

ಮೂತಿಗೆ ಗಿಡಿದರೆ ಓಗರವ
ಹಿತದಲೆ ಅಳವಿಗೆ ಸಿಗುವರೆಲ್ಲ!
ಮೆತ್ತಿದರೆ ಬದಿಗೆ ತುಸುವೇ ಸಜ್ಜಿಗೆ
ಇನಿದನಿಯಲಿ ಮೃದಂಗ ನುಡಿವುದಲ್ಲ!

(ಅನುವಾದ ನನ್ನದು)

ಮೃದಂಗ ವನ್ನು ಶ್ರುತಿಮಾಡಿ ನುಡಿಸುವಾಗ, ರವೆಯನ್ನು ಕಲೆಸಿ ಮಾಡಿದ ಮಿಶ್ರಣವನ್ನು ಒಂದು ಬದಿಗೆ ಮೆತ್ತುತ್ತಾರೆ. ಇದು ವಾದ್ಯದ ನಾದವನ್ನು ಪಳಗಿಸಲು ಸಂಗೀತಗಾರರು ಉಪಯೋಗಿಸುವ ವಿಧಾನ. ಅದನ್ನೇ ನಾನು ಸ್ವಲ್ಪ ಹೆಚ್ಚು ಕಡಿಮೆ ಮಾಡಿ ಸಜ್ಜಿಗೆ ಎಂದಿದ್ದೇನೆ. ಈ ಮಾತಿನಲ್ಲಿ ಹೊಟ್ಟೆಗೆ ಕೊಡುವ ಆಹಾರವನ್ನು ಹೇಳಿದ್ದರೂ, ಮಾತಿನ ಮುಖಸ್ತುತಿಗೂ ಇದು ಖಂಡಿತ ಹೊಂದುತ್ತದೆಂಬ ನಂಬಿಕೆ ನನ್ನದು :).

ಇನ್ನು ಇದರ ಸಂಸ್ಕೃತಮೂಲ ಹೀಗಿದೆ:

ಕಃ ನ ಯಾತಿ ವಶಂ ಲೋಕೇ ಮುಖಂ ಪಿಂಡೇನ ಪೂರಿತಃ
ಮೃದಂಗೋ ಮುಖಲೇಪೇನ ಕರೋತಿ ಮಧುರಂ ಧ್ವನಿಂ

ಮೂಲದಲ್ಲಿರುವ ಒಂದು ಶ್ಲೇಷವನ್ನು ನಾನು ಕನ್ನಡಿಸಲಾರದೇ ಹೋದೆ. ಸಂಸ್ಕೃತದಲ್ಲಿ ಮುಖ ವೆಂದರೆ ಬಾಯಿ ಎಂದೂ, ಮುಖ(=ಮೊಗ) ಎಂದೂ ಎರಡೂ ಅರ್ಥವಿದೆ. ಬಾಯಿಗೆ ಆಹಾರ ತುಂಬುವುದಕ್ಕೂ , ಮೃದಂಗದ ಮುಖ - ಎಂದರೆ ಒಂದು ಬದಿಗೆ ರವೆಯ ಸಜ್ಜಿಗೆಯನ್ನು ಬಳಿಯುವುದಕ್ಕೂ ಮುಖವೆನ್ನುವ ಪದವನ್ನೇ ಬಳಸಲಾಗಿದೆ.

ಮೂತಿ ಎನ್ನುವ ಪದವನ್ನೂ ನಾವು ಕನ್ನಡದಲ್ಲಿ ಬಾಯಿ, ಮುಖ ಎರಡೂ ಅರ್ಥದಲ್ಲಿಯೂ ಬಳಸುವುದಾದರೂ, ಸ್ವಲ್ಪ ಸಂಗೀತದ ಅರಿವಿರುವ ನನಗೆ 'ಮೃದಂಗದ ಮೂತಿ' ಎನ್ನುವ ಬಳಕೆ ಮಾಡಲಾಗಲಿಲ್ಲ ! ಹಾಗಾಗಿ ಮೂಲದ ಶ್ಲೇಷೆಯನ್ನು ಬಿಟ್ಟುಬಿಡಬೇಕಾಯಿತು!

-ಹಂಸಾನಂದಿ

Rating
No votes yet

Comments