ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 3)

ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 3)

ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೊರಟ ನಾವು, ಕೊಳ್ಳೇಗಾಲ ತಲುಪಿದಾಗ ರಾತ್ರಿ 8 ಗಂಟೆ. ಹರ್ಷ ತನ್ನ ಮಾವನ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದ. ಪುಟ್ಟದೊಂದು ಕೋಣೆ. ಅಲ್ಲಿಯೇ ಎಲ್ಲರೂ ಮಲಗಿಕೊಳ್ಳಬೇಕಾದ ಅನಿವಾರ್ಯತೆ ಒದಗಿತ್ತು. ಒಂದು ರಾತ್ರಿ ತಾನೆ ಅನುಸರಿಸಿಕೊಂಡು ಹೋದರಾಯಿತು ಎಂದು ಸುಮ್ಮನಾದೆವು. ಎಲ್ಲರೂ ಮುಖ, ಕೈಕಾಲು ತೊಳೆದುಕೊಂಡು ಸಿದ್ಧರಾದೆವು. ಅಷ್ಟರಲ್ಲಿ ಊಟದ ವ್ಯವಸ್ಥೆಯಾಗಿತ್ತು. ಹರ್ಷನ ಮನೆಯವರು ಒಳ್ಳೆಯ ರುಚಿಕಟ್ಟಾದ ಭೋಜನವನ್ನೇ ತಯಾರಿಸಿದ್ದರು. ಎಲ್ಲರೂ ಸಂತೃಪ್ತಿಯಾಗಿ ಊಟ ಮಾಡಿಕೊಂಡು ಹೊರಗೆ ಅಡ್ಡಾಡಿ ಬರೋಣವೆಂದು ಎಲ್ಲರೂ ಹೊರಟೆವು. ಊಟಕ್ಕೂ ಮುನ್ನ ಮತ್ತೆ ವಾಗ್ಯುದ್ಧ ಶುರುವಾಗಿತ್ತು. ಊಟಕ್ಕೆ ಹೋಗಬೇಕಾದ ಕಾರಣ ಎಲ್ಲರೂ ಅಲ್ಲಿಗೇ ನಮ್ಮ ವಾಗ್ಯುದ್ಧ ನಿಲ್ಲಿಸಿದ್ದೆವು. ಈಗ ಮತ್ತೆ ನಾನು ರಾಜು ಒಟ್ಟಿಗೆ ಪುರಾಣ ಹಾಗೂ ರಾಮಕೃಷ್ಣರ ಕುರಿತ ನಮ್ಮ ವಾದವನ್ನು ಮುಂದುವರೆಸಿದರೆ, ಹರ್ಷ ಮೌನ ಪ್ರೇಕ್ಷಕನಾಗಿ ಜೊತೆಗೆ ಬರುತ್ತಿದ್ದ. ತೇಜಸ್ವಿ ಹಾಗೂ ಶ್ರೀ ನಮ್ಮಿಂದ ಒಂದು ನೂರು ಅಡಿ ಅಂತರದಲ್ಲಿ ಬರುತ್ತಿದ್ದರು.

ಇಲ್ಲಿ ನಾನು ರಾಜೂಗೆ ಈ ಹಿಂದೆ ಸುಮಾರು 2-3 ವರ್ಷಗಳ ಹಿಂದೆ ರಾಮಕೃಷ್ಣರು ಮಾಂಸಾಹಾರಿಗಳಾಗಿರಬಹುದು ಎಂಬುದರ ಬಗ್ಗೆ ಹೇಳಿದ್ದರ ಕುರಿತು ನೆನಪಿಸಿದೆ. ಆದರೆ, ಇಷ್ಟರಲ್ಲಾಗಲೆ ಈ ವಾದವನ್ನು ತನ್ನದೇ ಎಂಬಂತೆ ಹೋದಲ್ಲೆಲ್ಲೆಡೆ ಮಂಡಿಸುತ್ತಿದ್ದ ರಾಜು ಅದನ್ನು ಸಂಪೂರ್ಣವಾಗಿ ಒಪ್ಪಲು ಸಿದ್ಧನಿರಲಿಲ್ಲ. ನಾನು ಕೂಡ ಅದನ್ನು ನನ್ನ ವಾದವೆಂದು ಒತ್ತಿ ಹೇಳಲು ಹೋಗಲಿಲ್ಲ. ಆದರೆ, ಈ ವಿಷಯದ ಕುರಿತು ನಾನು ಯಾಕೋ ತುಂಬಾ ಭಾವುಕನಾದಂತೆ ನನಗೆ ಭಾಸವಾಗುತ್ತಿತ್ತು. ರಾಜು ಕೂಡ ನನಗೆ ಈ ಕುರಿತು ಎಚ್ಚರಿಸುತ್ತಿದ್ದ. ಸಾಮಾನ್ಯವಾಗಿ ಮೆದುವಾಗಿ ಮಾತನಾಡುವ ನಾನು ತುಂಬಾ ಎತ್ತರದ ದನಿಯಲ್ಲಿ ಮಾತನಾಡುತ್ತಿದ್ದಂತೆ ನನಗೇ ಭಾಸವಾಗುತ್ತಿತ್ತು. ಶೂದ್ರನಾದ ನಾನು ಮಾಂಸಾಹಾರ ಸೇವಿಸುವ ಕುಟುಂಬದಲ್ಲಿಯೇ ಜನಿಸಿದ ನಾನು ಅದರ ಬಗ್ಗೆ ಸುಮಾರು 20-22 ವರ್ಷಗಳಿಂದಲೇ ತಿರಸ್ಕಾರ ತಾಳಿದ್ದನ್ನು ಅಪರೂಪದಲ್ಲಿಯೇ ಅಪರೂಪವೆಂದು ಕರೆದ ರಾಜು, ಮಾನವರಲ್ಲಿಯೇ ಶ್ರೇಷ್ಟರೆಂದು ಭಾವಿಸಿ, ದೈವತ್ವಕ್ಕೇರಿಸಿಲಾಗಿರುವ ರಾಮಕೃಷ್ಣರ ವಿಚಾರದಲ್ಲಿ ಒಪ್ಪಲು ಸಿದ್ಧರಿರಲಿಲ್ಲ. ರಾಮಕೃಷ್ಣರು ಮಾಂಸಾಹಾರಿಗಳಾಗಿರಬಹುದೆಂಬ ವಾದವನ್ನು ಈ ಹಿಂದೆಯೇ ಇಟ್ಟಿದ್ದ ನಾನು, ಈಗ ಹಾಗಿಲ್ಲದೆಯೂ ಇರಬಹುದೆಂಬ ವಾದವನ್ನು ಮುಂದಿಡುವುದಕ್ಕೆ ಕಾರಣ ವಿತಂಡವಾದವನ್ನು ಮಾಡಿ ವಾದದಲ್ಲಿ ರಾಜುವನ್ನು ಸೋಲಿಸಬೇಕೆಂದಲ್ಲ. ಪುರೋಹಿತಶಾಹಿ ಮನಸ್ಸುಗಳ 'ಶ್ರೇಷ್ಟತೆಯ ವ್ಯಸನ'ವನ್ನು ಹೊಡೆದುರುಳಿಸಲು ರಾಮಕೃಷ್ಣರು ಮಾಂಸಾಹಾರಿಗಳಾಗಿರಬಹುದೆಂಬ ಆಧಾರವೊಂದೆ ಸಾಕಾಗುವುದಿಲ್ಲ ಎನ್ನುವುದಷ್ಟೆ. ಆದರೆ, ಕಾನೂನು ಪದವೀಧರನಾಗಿ, ಕಾನೂನು ಅಭ್ಯಾಸ ಮಾಡುತ್ತಿರುವ ರಾಜು ಇತ್ತೀಚೆಗೆ ಎಲ್ಲರೂ ಗಮನಿಸಿದಂತೆ ವಾದ ಮಾಡುವುದಕ್ಕೋಸ್ಕರವೇ ವಾದ ಮಾಡುವ ಪ್ರವೃತ್ತಿಯನಾಗಿರುವುದು ದಿಟವೇನೋ ಎಂದು ನನಗೂ ಅನಿಸತೊಡಗಿತು. ಕಡೆಗೆ ನಮ್ಮ ವಾದವನ್ನು ಅಂತ್ಯಗೊಳಿಸಲು ನಾನು ನನ್ನ ನೆಚ್ಚಿನ ಚಿಂತಕ ಜಿಡ್ಡು ಕೃಷ್ಣಮೂರ್ತಿಯವರ ಚಿಂತನೆ 'ನಾವು ದೇವರು ಇದ್ದಾನೆ ಅಥವಾ ದೇವರು ಇಲ್ಲ ಎಂದು ಬಲವಾಗಿ ವಾದಿಸುತ್ತಾ ಹೋದಲ್ಲಿ ಎರಡೂ ಕೂಡ ಮೂಲಭೂತವಾದವೇ ಅಲ್ಲವೇ' ಎಂಬುದನ್ನು ಹೇಳಿದೆ. ಈ ಮಾತನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ರಾಜು. ಇನ್ನೂ ಸುಮಾರು ವಿಚಾರಗಳನ್ನು ನಾನು, ರಾಜು, ತೇಜಸ್ವಿ ಚರ್ಚಿಸಿದೆವಾದರೂ, ಅವೆಲ್ಲವನ್ನು ಇಲ್ಲಿ ಬರೆಯಲು ಹೋಗುತ್ತಿಲ್ಲ. ಮನೆ ತಲುಪಿದ ನಾವು ಮಲಗಲು ಸಿದ್ಧರಾದೆವು. ನಾನು ರಾಜು ಆ ಪುಟ್ಟ ಕೋಣೆಯಲ್ಲಿ ಮಲಗಿದರೆ, ತೇಜಸ್ವಿ, ಶ್ರೀ ಹಾಗೂ ಹರ್ಷ ಮೂವರು ಮಧ್ಯದ ಕೋಣೆಯಲ್ಲಿ ಮಲಗಿದರು.ಆಗ ಮತ್ತೆ ನನ್ನ ರಾಜು ನಡುವೆ ಸುಮಾರು ಹೊತ್ತು ಮಾತುಕತೆ ನಡೆಯಿತು. ಆಗ ನಾನು ಯಾವುದೋ ಮಾತಿಗೆ ಸಾಂದರ್ಭಿಕವಾಗಿ ನನ್ನ ನೆಚ್ಚಿನ ಕಾದಂಬರಿಕಾರನ ಶ್ರೇಷ್ಟ ಕೃತಿ 'ಕ್ರೈಮ್ ಅಂಡ್ ಪನಿಶ್‌ಮೆಂಟ್' ಕತೆ ಹೇಳಿದೆ. ಹಾಗೆಯೇ, ಮಾತನಾಡುತ್ತ ನಿದ್ದೆ ಹೋದೆವು.

ಮಾರನೆಯ ದಿನ ಬೆಳಗ್ಗೆ ನನ್ನನ್ನು ಎಬ್ಬಿಸಿದ ರಾಜು. ನಾವೆಲ್ಲರೂ ತಲಕಾಡಿಗೆ ಹೋಗಬೇಕಿದ್ದರಿಂದ ಬೇಗಬೇಗ ಸಿದ್ಧರಾಗಿ ನಮ್ಮ ಗಮ್ಯ ತಲಕಾಡಿನೆಡೆಗೆ ಹೊರಟೆವು. ಮಾರ್ಗಮಧ್ಯದಲ್ಲಿ ತಿಂಡಿಗೆಂದು ಒಳ್ಳೆಯ ಹೋಟೆಲಿಗೆ ಹೋದೆವು. ನಾವು ಹೋಗುವ ಸ್ಥಳದಲ್ಲಿ ಒಳ್ಳೆಯ ಊಟ ದೊರೆಯುವುದೋ ಎಂದು ಮುಂಜಾಗ್ರತೆಯಿಂದ ಚೆನ್ನಾಗಿ ಬಾರಿಸಿಕೊಂಡು ಹೊರಟೆವು.

ಮೊದಲಿಗೆ ನಾವು ಶಿವನಸಮುದ್ರ ಅಥವಾ ಶಿಂಷಾದೆಡೆಗೆ ಹೊರಟೆವು. ಇಲ್ಲಿಗೆ ತುಂಬಾ ಸಮೀದ ಊರಾದ ತಿರುಮಕೂಡಲು ನರಸೀಪುರದವನೇ ಆದರೂ, ಈ ಸ್ಥಳಗಳಿಗೆ ಇದುವರೆಗೂ ಭೇಟಿ ನೀಡಲು ಸಾಧ್ಯವಾಗದ್ದು ನನ್ನ ದೌರ್ಭಾಗ್ಯವೇ ಸರಿ. ಕೊಳ್ಳೇಗಾಲಕ್ಕೆ ತುಂಬಾ ಸಮೀಪದಲ್ಲಿರುವ ಶಿಂಷಾವನ್ನು ಬಹುಬೇಗ ತಲುಪಿದೆವು. ಬೆಳಗ್ಗೆ 10 ಗಂಟೆಗೆ ಶಿಂಷಾದಲ್ಲಿದ್ದೆವು. ಏಷ್ಯಾದಲ್ಲಿಯೇ ಮೊದಲ ಬಾರಿಗೆ, ನನಗೆ ನೆನಪಿರುವ ಹಾಗೆ 1905ರಲ್ಲಿ ಜಲವಿದ್ಯುತ್ ತಯಾರಿಸಿದ್ದು ಇಲ್ಲಿಯೇ ಎಂಬುದು ಶಿವನಸಮುದ್ರದ ಹೆಗ್ಗಳಿಕೆ. ಇಂತಹ ಸ್ಥಳಕ್ಕೆ ಭೇಟಿ ನೀಡಿದ್ದು ನಮ್ಮ ಪಾಲಿಗೆ ಅವಿಸ್ಮರಣೀಯವಾದ ಕ್ಷಣವಾದರೂ, ಇದು ಸಕಾಲವಲ್ಲದ್ದರಿಂದ ಶಿವನಸಮುದ್ರದ ರಮ್ಯತೆಯನ್ನು ಇಡಿಯಾಗಿ ಅನುಭವಿಸಲಾಗಲಿಲ್ಲ. ಮಳೆಗಾಲ ಅಥವಾ ಅಕ್ಟೋಬರ್‌ನಲ್ಲಿ ಇಲ್ಲಿಗೆ ಬಂದಿದ್ದಲ್ಲಿ ಇನ್ನೂ ಚೆನ್ನಾಗಿರುತ್ತಿತ್ತು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.

ಶಿಂಷಾದ ಮತ್ತೊಂದು ವಿಶೇಷವೆಂದರೆ, ಇಲ್ಲಿಯ ದರ್ಗಾ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕುರುಹಂತೆ ಕಾಣುವ ಈ ದರ್ಗಾಕ್ಕೆ ಎಲ್ಲರೂ ಹೋಗಬಯಸಿದೆವಾದರೂ, ಶ್ರೀ ಮಾತ್ರ ಬರಲು ನಿರಾಕರಿಸಿದ. ತಲೆಗೆ ಬಟ್ಟೆ ಕಟ್ಟಿಕೊಂಡು ದರ್ಗಾದ ಒಳನಡೆದ ನಾವು ಹಿಂದೂ ದೇವಾಲದಲ್ಲಿ ಮಾಡುವಂತೆ ಒಂದು ಸುತ್ತುಬಂದೆವು. ಆಗ ಅಲ್ಲಿ ಕುಳಿತಿದ್ದವರು ನಮ್ಮನ್ನು ಆಶೀರ್ವದಿಸಿದರು. ನಾನು ಗಮನಿಸಿದ ಹಾಗೆ ಹಿಂದೂಗಳು ಕೂಡ ಇಲ್ಲಿಗೆ ಶ್ರದ್ಧೆ ಭಕ್ತಿಗಳಿಂದ ನಡೆದುಕೊಳ್ಳುತ್ತಾರೆ. ಎಷ್ಟೇ ಆಗಲಿ ನಂಬಿಕೆಯೇ ಧರ್ಮದ ಮೂಲವಲ್ಲವೇ? ಎಲ್ಲಿಯವರೆಗೆ ಧರ್ಮ ರಾಜಕೀಕರಣಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅದು ಎಲ್ಲರನ್ನೂ ಒಟ್ಟುಗೂಡಿಸುತ್ತದೆ. ಮತ್ತೊಮ್ಮೆ ಜಿಡ್ಡು ಕೃಷ್ಣಮೂರ್ತಿಯವರನ್ನು ನೆನಸಿಕೊಳ್ಳುವುದಾದರೆ, ಎಲ್ಲಿ ಈ ವಿಭಜನೆಯಿರುತ್ತದೋ ಅಲ್ಲಿ ಸಮಾಜವಿರುವುದಿಲ್ಲ ಎಂಬುದರ ಸಾಕ್ಷಾತ್ ಮನವರಿಕೆಯಾದದ್ದು ಈ ಸ್ಥಳದಲ್ಲಿಯೇ. ಹಜ್‌ರತ್ ಸಯದನ್ನ ಮರದಾನೆ ಘೈಬ್‌ ದರ್ಗಾದಲ್ಲಿಯೇ.

ನನಗನಿಸಿದ್ದೇನೆಂದರೆ, ಇಂತಹ ಸ್ಥಳಗಳ ಕುರಿತು ಅವಶ್ಯಕ ಮಾಹಿತಿ ದೊರೆಯುವಂತೆ ಮಾಡುವ ಜವಾಬ್ದಾರಿಯನ್ನು ಸಂಬಂಧಪಟ್ಟವರು ಮಾಡಬೇಕೆಂದು. ಏಕೆಂದರೆ, ಸೆಕ್ಯುಲರ್ ಭಾರತದ ಆತ್ಮವಿರುವುದು ಇಂತಹ ಸ್ಥಳಗಳಲ್ಲಿಯೇ. ಇಂತಹವನ್ನು ಬಾಬಾಬುಡನ್ ಗಿರಿಯ ದತ್ತಪೀಠ ಹಾಗೂ ಅಯೋಧ್ಯೆಯ ಬಾಬ್ರಿಮಸೀದಿಯಂತೆ ವಿವಾದಗ್ರಸ್ತವಾಗಿಸಬಾರದಷ್ಟೆ. ಹಿಂದೂ-ಮುಸ್ಲಿಂ ಭಾವೈಕ್ಯತೆ ನಮ್ಮ ಸಂಸ್ಕೃತಿ, ಪರಂಪರೆಗಳ ಭಾಗವಾಗಿರುವುದು ನಮ್ಮ ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ.

ನಾನು ಗಮನಿಸಿರುವ ಹಾಗೆ, ತಮಿಳು ಹಾಗೂ ಮಲಯಾಳಿ ಮುಸ್ಲಿಮರಾರೂ ತಮ್ಮ ಮನೆಗಳಲ್ಲಾಗಲಿ, ಹೊರಗಾಗಲಿ ಉರ್ದುವನ್ನು ಬಳಸದೇ ತಾವು ವಾಸಿಸುವ ನೆಲದ ಭಾಷೆಯನ್ನೇ ಆಡುವುದು. ಅವರಂತೆ ನಮ್ಮ ನಾಡಿನ ಮುಸ್ಲಿಮರು ಯಾಕೆ ಈ ನಾಡಿನ ಭಾಷೆಯನ್ನು ತಮ್ಮದಾಗಿಸಿಕೊಂಡಿಲ್ಲ ಎಂಬುದು ಬಹುದಿನಗಳಿಂದ ನನ್ನ ಮನಸ್ಸನ್ನು ಕೊರೆಯುತ್ತಿತ್ತು. ಯಾವ ಮುಸ್ಲಿಮರೇ ಆಗಲಿ ಅವರು ಎಲ್ಲಿ ನೆಲಸಿರುತ್ತಾರೋ ಅಲ್ಲಿಯ ನೆಲದ ಭಾಷೆಯನ್ನು ತಮ್ಮದಾಗಿಸಿಕೊಳ್ಳದಿದ್ದಲ್ಲಿ, ಅವರು ಬಹುಸಂಖ್ಯಾತರಿಂದ ದೂರವೇ ಉಳಿದುಬಿಡುತ್ತಾರೇನೋ ಎನ್ನುವ ಸಂಶಯ ನನ್ನದು. 2000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಮುಸ್ಲಿಮರು ತಮ್ಮ ಮನೆಯ ಭಾಷೆಯಾಗಿಸಿಕೊಳ್ಳದಿದ್ದಲ್ಲಿ ಅದು ಅವರನ್ನು ಕರ್ನಾಟಕದವರನ್ನಾಗಿಸುತ್ತದೆಯೇ ಹೊರತು, ಕನ್ನಡಿಗರನ್ನಾಗಿಸುವುದಿಲ್ಲ ಎಂಬುದು ನನ್ನ ವೈಯುಕ್ತಿಕ ನಂಬಿಕೆ. ಇದಕ್ಕೆ ಬಹು ದೊಡ್ಡ ನಿದರ್ಶನವಾಗಿ ನಿಲ್ಲುವವರು ನಮ್ಮ ಸಂತ ಶಿಶುನಾಳ ಷರೀಫ ಸಾಹೇಬರು. ಹೆಸರಿನಲ್ಲಿಯೇ ಇಲ್ಲಿಯ ಸ್ಥಳವನ್ನು ಸೇರಿಸಿಕೊಂಡಿರುವ ಅವರು, ಶಿಶುನಾಳಾಧೀಶನ ಅಂಕಿತದಲ್ಲಿ ಕನ್ನಡದಲ್ಲಿಯೇ ಗೀತೆಗಳನ್ನು ರಚಿಸುವುದರೊಂದಿಗೆ ನಾಡಿನೆಲ್ಲೆಡೆ ಪ್ರಸಿದ್ಧರಾಗಿರುವುದು ನಮಗೆಲ್ಲರಿಗೂ ಗೊತ್ತಿರದ ಸಂಗತಿಯೇನಲ್ಲ. ಈಗಲೂ ನಮ್ಮ ನಡುವಿರುವ ಬಹುಮಂದಿ ಮುಸ್ಲಿಮ್ ಬರಹಗಾರರು ಈ ಸಂಪ್ರದಾಯವನ್ನು ಮುಂದುವರೆಸಿರುವುದು ಮಾತ್ರವಲ್ಲದೆ, ಇಲ್ಲಿಯ ನಾಡು, ನುಡಿ, ಸಂಸ್ಕೃತಿಗೆ ಬಹುದೊಡ್ಡ ಕಾಣಿಕೆಯನ್ನೇ ನೀಡುತ್ತಿರುವುದು ಸಂತಸದ ಸಂಗತಿ. ಎಲ್ಲಿಯವರೆಗೆ ಇದು ಮುಂದುವರೆಯುತ್ತದೆಯೋ ಅಲ್ಲಿಯವರೆಗೆ 'ಸೆಕ್ಯುಲರ್ ಭಾರತ' ಮೂಲಭೂತವಾದದಿಂದ ಸಾಧ್ಯವಾದ ಮಟ್ಟಿಗೆ ಸುರಕ್ಷಿತವಾಗಿರಬಹುದೆನಿಸುತ್ತದೆ. 'ಸೆಕ್ಯುಲರ್' ಪದ ಕೇವಲ ತತ್ವ ಸಿದ್ಧಾಂತ, ಪರಿಕಲ್ಪನೆಯಾಗಿ ಮಾತ್ರ ಉಳಿಯದೆ, ಆಚರಣೆಗೆ ಬರುವುದರೊಂದಿಗೆ 'ಜನಪದ' ವಾಗಬಹುದೇನೋ!

ಇತ್ತೀಚೆಗೆ ನಮ್ಮ ಮನೆಯಲ್ಲಿಯೇ ನಡೆದ ಒಂದು ಘಟನೆ: ಬಕ್ರೀದ್ ಹಬ್ಬದ ದಿನ ಹಿಂದೂಗಳಾದ ನನ್ನ ತಾಯಿ, ತಂಗಿ ನನ್ನ ಗೆಳೆಯನಾದ ಕ್ಯಾಥೊಲಿಕ್ ಕ್ರಿಶ್ಚಿಯನ್ ಆದ ಜೋಮನ್ ವರ್ಗೀಸ್‌ನನ್ನು ಊಟಕ್ಕೆ ಕರೆತರುವಂತೆ ನನಗೆ ಹೇಳಿದ್ದು. ಅದರಂತೆ, ಜೋಮನ್ ಆ ದಿನದ ವಿಶೇಷ ಅತಿಥಿಯಾಗಿ ನಮ್ಮ ಆತಿಥ್ಯ ಸ್ವೀಕರಿಸಿದ್ದು ಒಂದು ನಿದರ್ಶನ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿಯೇ ಆಗಬೇಕಾದಂತಹದ್ದು. ಆಗ ಮಾತ್ರ ಸೆಕ್ಯುಲರ್ ಭಾರತ, ಸೆಕ್ಯುಲರ್ ವಿಶ್ವನಿರ್ಮಾಣ ಸಾಧ್ಯವಾದೀತು.

ಇದಲ್ಲದೆ, ಎಲ್ಲಾ ಮತಧರ್ಮೀಯರು ತಾವು ಆಚರಿಸುವ ಹಬ್ಬ, ಜಾತ್ರೆಗಳನ್ನು ಇತರ ಮತಧರ್ಮೀಯರೊಂದಿಗೆ ಸಮಾನವಾಗಿ ಆಚರಿಸುವಂತಾದಲ್ಲಿ, ರಾಜಕೀಯವಾಗಿಯಲ್ಲ, ಸಾಮಾಜಿಕವಾಗಿ. ಕಡೇಪಕ್ಷ ಪಾಲ್ಗೊಳ್ಳುವಂತಾದಲ್ಲಿ, 'ವೈವಿಧ್ಯತೆಯಲ್ಲಿ ಏಕತೆ' ಎನ್ನುವ ಭಾರತದ ಮೂಲಮಂತ್ರ ನಿಜವಾಗಬಹುದೇನೋ! ಅಂತಹ ದಿನ ಎಂದು ಬರುವುದೋ! ಓ ಭಾರತ ಭಾಂದವ, ನನಸಾಗಿಸೋ ಆ ದಿನವಾ...

ಮುಂದಿನ ಪಯಣ ತಲಕಾಡಿನೆಡೆಗೆ...

Rating
No votes yet