ಲಿನಕ್ಸಾಯಣ -೨- ಕಂಡೂ ಕಾಣದಂತೆ ಮಾಡಿದ್ದು

ಲಿನಕ್ಸಾಯಣ -೨- ಕಂಡೂ ಕಾಣದಂತೆ ಮಾಡಿದ್ದು

ನಮಸ್ಕಾರ ಸರ್, ನಾನೊಂದು ಕಂಪ್ಯೂಟರ್ ತಗೊಬೇಕಂತಿದೀನಿ ಸ್ವಲ್ಪ ಸಹಾಯ ಮಾಡ್ತೀರಾ? ಅದೇನೋ ವಿಂಡೋಸ್ ಅಂತೆಲ್ಲಾ ನಮ್ಮುಡ್ಗ ಹೇಳ್ತಿದ್ದಾ ನಿಮ್ ಹತ್ರ ಇದ್ಯಾ? ಸ್ವಲ್ಪ ಅದನ್ನ ಕಾಪಿ ಮಾಡಿಕೊಡ್ತೀರಾ?

ನಮ್ಮ ಕಂಪ್ಯೂಟರ್ ಖರೀದಿ ಶುರು ಆಗೋದು ಇಲ್ಲಿಂದ. ನೀವೂ ಹೀಗೇ ಮಾಡಿದ್ದಿರ ಬಹುದು ಅಲ್ವೇ? ಏನೇ ಕೆಲಸಕ್ಕೆ ಕೈ ಹಾಕ್ಲಿಕ್ಕೆ ಮೊದ್ಲು, ಕೈ ಹಾಕಿ ಕೈ ಸುಟ್ಟು ಕೊಂಡವರನ್ನೋ, ಇಲ್ಲಾ ಅದರಲ್ಲಿ ಯಶಸ್ಸುಗಳಿಸಿದವರಿಂದಲೋ ಮಾಹಿತಿ ವಿನಿಮಯ ಮಾಡ್ಕೊಳ್ಳೊದರ ಜೊತೆಗೆ ಸ್ವಲ್ಪ ನೀವೊಂದು ತಪ್ಪನ್ನ ಸದ್ದಿಲ್ಲದೇ ಮಾಡ್ತಿದೀರಿ. ನಿಮಗೆ ನಂಬಿಕೆ ಬರ್ತಿಲ್ವೇ? ಮತ್ತೆ ನಿಮ್ಮಲ್ಲೇ ಕೆಲವರು ಆ ತಪ್ಪನ್ನ ತಿಳಿದೂ ಮಾಡಿ ಈಗ ತಮ್ಮ ಹೆಗಲು ಮುಟ್ಟಿ ನೋಡಿಕೊಳ್ತಿರ್ಲೂ ಬಹುದು.

ಹೌದ್ರೀ ನೀವೇ, ಪೈರಸಿ ಕೆಲ್ಸ ಇಲ್ಲಿಂದ್ಲೇ ಶುರು ಮಾಡಿದ್ರಲ್ಲ. ಅಂದ್ರೆ ಕೆಲ ತಂತ್ರಾಂಶಗಳನ್ನ ಖರೀದಿಸದೇ ಬೇರೆಯವರಿಂದ ಪಡೆದು ನಿಮ್ಮ ಕಂಪ್ಯೂಟರಿನಲ್ಲಿ ಉಪಯೋಗಿಸೋದು.ಮೈಕ್ರೋಸಾಫ್ಟ್ ವಿಂಡೋಸ್, ಆಫೀಸ್, ಡಿ.ಟಿ.ಪಿ ಗೆ ಬಳಸೋ ಫೋಟೋ ಶಾಫ್, ನಾರ್ಟನ್ ಮುಂತಾದ ತಂತ್ರಾಂಶಗಳನ್ನ ಜೇಬಿಗೆ ಕತ್ತರಿ ಹಾಕಿಸಿ ಕೊಂಡೇ ಉಪಯೋಗಿಸ ಬೇಕು ಇಲ್ಲಾಂದ್ರೆ ಅದು ಅಪರಾಧ!. ಅದಕ್ಕೇ ಬೇರೆಯವರಿಂದ ನಕಲು ಮಾಡೋದಕ್ಕಿಂತ ಮುಂಚೆ ಒಮ್ಮೆ ಯೋಚಿಸಿ. ತಂತ್ರಾಂಶ ತಯಾರಕರು ನಿಮ್ಮ ಮೇಲೆ ಯಾವಾಗ ಬೇಕಾದ್ರೂ ಕ್ರಮ ಕೈಗೊಳ್ಳ ಬಹುದು. ಅವರಿಗೆ ಆ ಹಕ್ಕಿದೆ (ತಂತ್ರಾಂಶ ಇನ್ಸ್ಟಾಲ್ ಮಾಡೊವಾಗ ಸಿಗೋ ಕರಾರು ಪತ್ರವನ್ನ ಓದಿ ನೋಡಿ).

ಬೇರೆ ಭಾಷೆಯ ಚಿತ್ರಗಳನ್ನ ನಕಲು ಮಾಡಿದ್ದನ್ನ ಸುಲಭವಾಗಿ ಕಂಡುಹಿಡಿಯಬಹುದು. ಆದ್ರೆ ತಂತ್ರಾಂಶ ನಕಲು ಮಾಡೋದನ್ನ ನಾವೇ ದಿನವಿಡೀ ಮಾಡ್ತೀವಿ, ಅಭ್ಯಾಸಾನೂ ಹಾಗಿ ಹೋಗಿದೆ ಅಲ್ವಾ? ನಮ್ಮ ಈ ಪೈರಸಿ ಚಟುವಟಿಕೆಗಳನ್ನ ಪ್ರತಿಭಟಿಸೋರು ಯಾರು? ನಮ್ಮಲ್ಲೇ ಯಾರಾದ್ರೂ ತಂತ್ರಾಂಶದ ಅಭಿವೃದ್ಧಿಗೆ ಕೆಲಸ ಮಾಡಿದ್ರೆ ಅದನ್ನ ನಕಲು ಮಾಡ್ಕೊಳ್ಳಿಕ್ಕೆ ಬಿಡ್ತಿದ್ವಾ? ನಿಮ್ಮವರೇ ಯಾರೋ ಆ ತಂತ್ರಾಂಶ ವನ್ನ ಕಂಡುಹಿಡಿದು ಅಭಿವೃದ್ದಿ ಪಡಿಸಿದ್ದೇ ಆದ್ರೆ ಅವರಿಗೆ ಸಲ್ಲಬೇಕಾದ ಕಾಣಿಕೆಯನ್ನೂ ನೀವೇ ಕಿತ್ಕೊಳ್ಳಬಹುದಾ? ಕನ್ನಡದ ಹಾಡುಗಳನ್ನ, ಚಲನಚಿತ್ರಗಳನ್ನ, ಅದಿರಲಿ ಕೆಲ ನೂರು ರೂಪಾಯಿಗಳನ್ನ ನೀಡಿ ಕನ್ನಡದ ತಂತ್ರಾಂಶಗಳನ್ನ ಕೊಂಡುಕೊಳ್ಳೊ ಕೆಲಸ ನಾವೆಷ್ಟು ಜನ ಮಾಡ್ತಿದ್ದೀವಿ?ಮುಂಗಾರುಮಳೆ ಸಂಗೀತಾನ ಬೆಳ್ಳಂಬೆಳಗ್ಗೆ ಕದ್ರಲ್ಲಾ ಅದಕ್ಕೂ ಇದಕ್ಕೂ ವ್ಯತ್ಯಾಸ ಇದೆಯಾ?

ಹೋಗೊ ಮಾರಾಯ, ಕಂಪ್ಯೂಟರ್ ತಗೋಳ್ಲಿಕ್ಕೆ ಅಷ್ಟು ಖರ್ಚು ಮಾಡಿ ಮತ್ತೆ ತಂತ್ರಾಂಶಕ್ಕೂ ಖರ್ಚು ಮಾಡು ಅಂತೀಯಾ? ಎಲ್ಲಿಂದ ತರೋದು ಅದಕ್ಕೆ ರೊಕ್ಕಾ? ಮೊದಲು ಕಲಿತುಕೊಂಡು ಯಾವ್ದಾದ್ರೂ ಕೆಲಸ ಸಿಕ್ಮೇಲೆ ನೋಡನ, ಏನೋ ಒಂದ್ ಚಿಕ್ಕ ಕೆಲ್ಸ ಮಾಡ್ಕೋತಿದೀನಿ ಹೊಟ್ಟೇ ಪಾಡು ಎಲ್ಲಿಂದ ನಾನು ದುಡ್ಡು ಕೊಟ್ಟು ಅವನ್ನೇಲ್ಲಾ ಕೊಳ್ಳೋದು ಜಾಗ ಖಾಲಿ ಮಾಡು ಅಂತೀರಾ? ನನ್ನ ಬಾಯಿ ಮುಚ್ಚಿಸ ಬಹುದು ಮುಂದೆ ಸಿಕ್ಕಾಕೊಂಡಾಗ ಏನ್ಮಾಡ್ತೀರಿ? ಅದಿರಲಿ ನಿಮ್ಮ ಕೆಲ್ಸ ನಿಮ್ಮ ಅಂತರಾಳಕ್ಕೆ ಚಿನ್ನಿದೆ ಅನ್ನಿಸ್ತಿದೆಯಾ? ನ್ಯಾಯಯುತವಾಗಿ ಬೆಲ ಕೊಟ್ಟು ಕೊಳ್ಳೋ ವಸ್ತುವನ್ನ ಕದ್ದು ಉಪಯೋಗಿಸ್ತಿರೋದು ನಿಮಗೆ ಸಂತೃಪ್ತಿ ನೀಡ್ತಿದೆಯೆ?

ಸರಿ, ಇಷ್ಟೂ ಹೊತ್ತು ತಪ್ಪುಗಳನ್ನೇ ಹೇಳಿ ನಿಮ್ಮ ಮೆದುಳಿಗೆ ಕೆಲ್ಸ ಕೊಟ್ಟಿದ್ದಾತು, ಮತ್ತೆ ನಮ್ಮ ಮುಂದಿರೋ ಸಮಸ್ಯೆಗೂ ಉತ್ತರ ಬೇಕಲ್ಲ. ನಿಮಗ್ಯಾರಿಗಾದ್ರೂ ನಾನ್ ಮಾಡ್ತಿರೂದು ತಪ್ಪು, ಅಷ್ಟೊಂದು ಖರ್ಚು ಮಾಡ್ದೇ ಪರಿಹಾರಾನೇ ಇಲ್ವೆ ಅನ್ಸಿದ್ದೇ ಆದ್ರೆ, ನಿಮಗೆ ನಾನು ಪರಿಹಾರೋಪಾಯ ಹೇಳ್ತೀನಿ. ಕೇಳ್ತೀರಾ? ನಮ್ಮಂತಹವರಿಗೇ ನಮ್ಮಂತವರೇ ಅಭಿವ್ರುದ್ದಿ ಪಡಿಸಿರೋ ಸಾವಿರಾರೂ ತಂತ್ರಾಂಶಗಳು ಅಂತರ್ಜಾಲದಲ್ಲಿ ಲಬ್ಯವಿದೆ. ಅದನ್ನ ನೀಡೋದರೊಂದಿಗೆ ನಮಗೆ ಆ ತಂತ್ರಾಂಶಗಳನ್ನ ಗೆಳೆಯರೊಂದಿಗೆ ಹಂಚಿಕೊಳ್ಳೂ, ಅದನ್ನ ಮತ್ತಷ್ಟು ಅಭಿವ್ರುದ್ದಿಪಡಿಸಿಕೊಳ್ಳೊ ಹಾಗು ಇನ್ನಿತರ ಸ್ವಾತಂತ್ರ್ಯವನ್ನೂ ನಮಗೆ ನೀಡಿದ್ದಾರೆ. ಇವನ್ನ ಬಳಸಿಕೊಳ್ಳಲಿಕ್ಕೆ ಶುರು ಮಾಡಿದ್ರೆ ನೀವು ಪೈರಸಿ ದಾಸರಾಗಬೇಕಿಲ್ಲ ಮತ್ತು ನಿಮ್ಮ ಕಂಪ್ಯೂಟರ್ ಗೆ ಬೇಕಿರೋ ಆಪರೇಟಿಂಗ್ ಸಿಸ್ಟಂ ನಿಂದ ಹಿಡಿದು, ದಿನಬಳಕೆಗೆ , ವಿದ್ಯಾಭ್ಯಾಸಕ್ಕೆ , ಸಂಶೊದನೆಗೆ , ಅಭಿವೃದ್ಧಿ ಕಾರ್ಯಗಳಿಗೆ, ದುಡಿಮೆಗೆ ಬೇಕಿರೋ ಅನೇಕ ತಂತ್ರಾಂಶಗಳನ್ನ ನೀವು ಉಪಯೋಗಿಸುವುದರ ಜೊತೆಗೆ ಅವನ್ನ ಸ್ವಚ್ಚಂದವಾಗಿ ಬಳಸಬಹುದು. ಹೌದು ಜೇಬಿಗೆ ಕತ್ರಿ ಹಾಕಿಸ್ಕೊಳ್ದೆ.

ಲಿನಕ್ಸಾಯಣ -೩- ರಲ್ಲಿ ನಿಮಗೆ ಈ ಸ್ವತಂತ್ರ ಪ್ರಪಂಚದ ಇಣುಕು ನೋಟ ಕಾದಿದೆ.

Rating
No votes yet

Comments