ಅಪಕಾರೀ ನಾಯಕರು

ಅಪಕಾರೀ ನಾಯಕರು

ನಮ್ಮ ನಾಯಕರು ಭದ್ರವಾಗಿದ್ದಾರೆ , ದುಡ್ಡು ಮಾಡಿಕೊಂಡಿದ್ದಾರೆ , ಹೋದಲ್ಲಿ ಬಂದಲ್ಲಿ ಭದ್ರತೆ , ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇವರ ಸುಖಕ್ಕೆ ಚ್ಯುತಿಬಾರದು , ಏನು ಅಪರಾಧ ಮಾಡಿದರೂ ಶಿಕ್ಷೆ ಆಗದು . ಸರಿ , ದುಡ್ಡೂ ತಿನ್ನಲಿ , ಸ್ವಲ್ಪ ತಪ್ಪುಗಳನ್ನೂ ಮಾಡಲಿ , ಸುಖವಾಗಿಯೂ ಇರಲಿ . ಎಂದು ಅವರ ಪಾಡಿಗೆ ಅವರನ್ನು ಬಿಡಬಹುದು . ಆದರೆ ಜನರನ್ನು ಎತ್ತಿಕಟ್ಟಿ ದುಡಿದುಕೊಂಡು ತಿನ್ನುವ ಬಡಜನಕ್ಕೆ ತೊಂದರೆ ಕೊಡುವದು ಯಾವ ನ್ಯಾಯ ?

ನಾನು ಯಾರು ? ನನ್ನ ಜಾತಿ , ಧರ್ಮ , ಬಾಷೆ , ದೇಶ ಯಾವದು ? ಇದರಲ್ಲಿ ನನ್ನ ಆಯ್ಕೆ ಎಷ್ಟು ? ನಮ್ಮ ಊರು ಅಂತೀವಿ , ಇದು ಯಾರದ್ದು ? ಯಾರು ಇಲ್ಲಿಯವರು ? ಯಾರು ಹೊರಗಿನವರು ? ಯಾರು ಇಲ್ಲಿಯವರು ? ಎಲ್ಲರೂ ಇಲ್ಲಿ ಹೊರಗಿನಿಂದ ಬಂದವರೇ . ಒಬ್ಬರು ಮೊದಲು ಬಂದವರು , ಇನ್ನೊಬ್ಬರು ನಂತರ ಬಂದವರು. ಅಷ್ಟೇ ?

ಯಾವಾಗಿನಿಂದ ನಾನು ಈ ಜಾತಿ , ಧರ್ಮ , ಬಾಷೆ , ದೇಶದವನು ಆದೆ ? ಹೊರಗಿನವರು ನನಗೆ ಅಥವಾ ನಮಗೆ ಏಕೆ ಮಣೆ ಹಾಕಬೇಕು ? ಈ ಜಗತ್ತು ನನ್ನದು ಎಷ್ಟೋ ಅಷ್ಟೇ ಅವರದ್ದೂ ಅಲ್ಲವೆ ? ನಮ್ಮ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳಬೇಕಷ್ಟೇ .

ಹೊಟ್ಟೆಪಾಡನ್ನು ಅರಸಿ ಎಲ್ಲಿಂದಲೋ ಬಂದು ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಕೊಳ್ಳಲು ಬಂದ ಜನಕ್ಕೆ ತೊಂದರೆ ಉಂಟುಮಾಡುವ ಈ ನಾಯಕಮಣಿ , ಎಲ್ಲ ರೀತಿಯಲ್ಲಿ ಬೇರೆಯಾದ ನಾಡೊಂದರಲ್ಲಿ , ಸ್ವಂತ ಯೋಗ್ಯತೆಯಿಂದ , ಇತರರಂತೆ ದುಡಿದು ಕೆಲವು ಕಾಲ ಬದುಕು ಸಾಗಿಸಿಕೊಂಡು ಅಲ್ಲಿನ ’ಸ್ಥಳೀಯ ಭಾಷೆ/ಧರ್ಮ/ಸಂಸ್ಕೃತಿ ಇತ್ಯಾದಿ’ಯನ್ನು ತಮ್ಮದಾಗಿಸಿಕೊಂಡು ಅಲ್ಲಿನ ’ಸ್ಥಳೀಯ ಜನಕ್ಕೆ ಮನ್ನಣೆ ಕೊಟ್ಟು ಬರಲಿ . ನಂತರ ತಮ್ಮ ಊರಲ್ಲಿ ’ ಹೊರಗಿನವರು , ಸ್ಥಳೀಯ ಭಾಷೆ/ಧರ್ಮ/ಸಂಸ್ಕೃತಿ ಇತ್ಯಾದಿಯನ್ನು ತಮ್ಮದಾಗಿಸಿಕೊಳ್ಳಲಿ , ಸ್ಥಳೀಯ ಜನಕ್ಕೆ ಮನ್ನಣೆ ಕೊಡಲಿ’ ಎಂದೆಲ್ಲ ಹೇಳಲಿ .

ಆದರೆ ಇಂಥ ನಡತೆಯನ್ನು ನಮ್ಮ ನಾಯಕರಿಂದ ಕನಸಿನಲ್ಲಾದರೂ ನಿರೀಕ್ಷಿಸುವದು ಸಾಧ್ಯವೇ?

ಒಂದೊಮ್ಮೆ ಹಾಗಾದಲ್ಲಿ ಇವ ನಮ್ಮವ , ಅವನು ಪರಕೀಯ ಎಂಬ ಭಾವನೆ ಮರೆಯಾಗಿ , ಇವ ನಮ್ಮವ , ಇವ ನಮ್ಮವ ಎಂಬ ತಿಳಿವು ಮೂಡಿ ತನ್ನಂತೆ ಪರರ ಬಗೆದು ಕೈಲಾಸ ಭೂಮಿಗೇ ಬಂದೀತು . ಆದರೆ ಕೈಲಾಸ ಭೂಮಿಯ ಮೇಲೆ ಬೇಕಿದೆಯೇ , ಸಮಸ್ಯೆಗಳೇ ಇರದಲ್ಲಿ ನಾಯಕರಿಗೇನು ಕೆಲಸ?

Rating
No votes yet