ಮುಂಗಾರು ಮಳೆ...

ಮುಂಗಾರು ಮಳೆ...

ಬರಹ

ಪ್ರೀತ್ಸೋ ಹೃದಯ, ಹದಿಹರೆಯದ ಕನಸುಗಳು, ಭಾವನೆಗಳು, ನಿಸ್ವಾರ್ಥ ಒಲವು,
ನೆನಪಿನ ಕಾಣಿಕೆಯಾದ ವಸ್ತುವನ್ನು ಜೋಪಾನವಾಗಿ ಕಾಪಾಡೋದು, ಪ್ರತಿಕ್ಷಣ ಪ್ರೀತಿಯಲ್ಲೇ
ಮುಳುಗಿರುವುದು, ಪ್ರೀತಿ ಪಡೆಯುವ ಪರಿಯನ್ನು ವಿಭಿನ್ನವಾಗಿ ಯೋಚಿಸುವುದು, ಪ್ರೀತಿ ಸಿಗದೆಹೋದರೆ ಮುಂದೆ ಬದುಕು ಇಲ್ಲವೇನೋ ಎಂಬ ಭಾವನೆ...

ಈ ಎಲ್ಲ ಹಂತ ಪ್ರತಿಯೊಬ್ಬರ ಜೀವನದಲ್ಲೂ ಬರುವಂತದ್ದು, ಇದೆಲ್ಲವು ನಮ್ಮ ಜೀವನದಲ್ಲಿ ನಡೆದರೆ ಅಥವಾ ಒಂದು ಬಾರಿ ಪ್ರೀತಿಸಿದರೆ ಏನೋ ಸಾಧಿಸಿದಂತಾಗುವುದಿಲ್ಲಾ, ಹೇಗೆ ಆ ಸಂದರ್ಭವನ್ನು ನಿಭಾಯಿಸುತ್ತೇವೆ ಅನ್ನೋದು ಮುಖ್ಯ...

ನಾಯಕ ಪ್ರೀತಮ್ ಹಾಗೂ ನಾಯಕಿ ನಂದಿನಿ ನವೀನತೆಯ ಭೇಟಿ ಹಾಗೂ ಅನುರಾಗ ಹುಟ್ಟುವ ಪರಿ ಅದ್ಭುತ.
ಮಡಿಕೇರಿ ಮಳೆ, ಅಂದವಾದ ಹುಡುಗಿ, ಎದೆಯಲ್ಲಿ ತುಂಬಿಕೊಂಡಿರುವ ಪ್ರೀತಿ ಇವೆಲ್ಲಕ್ಕೂ ನಮ್ಮ ನಾಯಕ ಸಿಲುಕುತ್ತಾನೆ. ನಾಯಕನ ತಂದೆಯಾಗಿ ’ಜಯಂತ್ ರಾವ್’ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಹಿರಿಯ ನಟರಾದ "ಜೈ ಜಗದೀಶ್" ರವರು. ತಮ್ಮ ಪಾತ್ರ ಕೆಲನಿಮಿಶದಾದ್ದರು ಅವರ ಗಂಭೀರವಾದ ಹಾಸ್ಯದ ಅಭಿನಯ ನೆನಪಿಸಿಕೊಳ್ಳುವಂತಿತ್ತು.

ನಾಯಕಿ "ನಂದಿನಿ" ತಂದೆಯ ಪಾತ್ರವನ್ನು "ಕರ್ನಲ್ ಸುಬ್ಬಯ್ಯ"ರಾಗಿ "ಅನಂತ್ ನಾಗ್" ರವರು ಹಾಸ್ಯ ಹಾಗೂ ಗಂಭೀರ ಸನ್ನಿವೇಶಗಳಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ, ತಾಯಿಯ ಪಾತ್ರವನ್ನು "ಪದ್ಮಜ ರಾವ್" ಅವರು "ಬಬ್ಲಿ ಬಬಿತ" ರಾಗಿ ನಿರ್ವಹಿಸಿದ್ದಾರೆ.

ಮುಂಗಾರು ಮಳೆಯ ಪ್ರತಿ ಹನಿಯಲ್ಲೂ ಪ್ರೇಮದ, ಪ್ರೀತಿಯ ಭಾವನೆಯನ್ನು ತುಂಬಿದ್ದಾರೆ ನಿರ್ದೇಶಕರಾದ ’ಯೋಗರಾಜ್ ಭಟ್’ರವರು. ಪ್ರೀತಮ್ ಎಂಬ ಪಾತ್ರದ ಸೃಷ್ಟಿಕರ್ತ ಇವರು, ಅದಕ್ಕೆ ಜೀವ ತುಂಬಿದ್ದಾರೆ ತಮ್ಮ ಅಮೋಘ ಅಭಿನಯದ ಮೂಲಕ ನಮ್ಮ ನಿಮ್ಮೆಲರ ’ಗಣೇಶ್’. ಒಟ್ಟಿನಲ್ಲಿ ನಿರ್ದೇಶಕರು ಹಾಗೂ ನಾಯಕ ನಟ ಬಿಸಿ ರಕ್ತದ ಹುಡುಗರು ಕೂಡ ಕಣ್ಣೀರು ಹಾಕುವಂತೆ ಮಾಡಿದ್ದಾರೆ. ಚಿತ್ರಮಂದಿರ ಪ್ರವೇಶಮಾಡುವ ಮುನ್ನ ಒಮ್ಮೆ ಸಿನಿಮಾ ನೋಡಿರುವ ಒಬ್ಬರು ಇನ್ನೊಬ್ಬರಿಗೆ ಹೇಳುತ್ತಾರೆ ’ ನಿನಗೆ ಈ ಸಿನೆಮಾ ಹೋಲುತ್ತೆ...’ ಅಂತ. ಗಣೇಶ್ ಅವರ ಅಭಿನಯ ಅದರಲ್ಲೂ ತಾವು ಪ್ರೀತಿಯನ್ನು ತ್ಯಾಗ ಮಾಡುವ ಸನ್ನಿವೇಶದಲ್ಲಿ ಬರಿ ಹುಡುಗಿಯರಲ್ಲದೆ ಹುಡುಗರ ಕಣ್ಣಲ್ಲೂ ’ಹನಿ ಹನಿ ಕಣ್ಣೀರಿನ ಹನಿ’...

ಪಟಪಟನೆ ರೋಮಾಂಚಕ ಸಂಭಾಷಣೆ "ಗಣೇಶ್" ಅವರಿಂದ ಹೊರಬೀಳುತ್ತಿದಂತೆ ನಕ್ಕುನಲಿವ ಪ್ರೇಕ್ಷಕರು.
ಚಿತ್ರದ ಮೊದಲ ಅರ್ಧ ಭಾಗದಲ್ಲಿ ಅರಳಿರುವ ಹೂವಿನಂತೆ ಹಸನ್ಮುಖರಾಗಿ ನೋಡುವ ಪ್ರೇಕ್ಷಕರು, ಎರಡನೆಯ ಭಾಗದಲ್ಲಿ ಕುತೂಹಲದಿಂದ ಮುಂದೆ ಏನಾಗಬಹುದು ಎಂಬ ಕಾತುರ ಕಾಡುತಿತ್ತು. ಹಿರಿಯ ನಟರಾದ ’ಅನಂತ ನಾಗ್’ ಅವರ ಅಮೋಘ ನಟನೆಯ ಮೂಲಕ ಪ್ರೇಕ್ಷಕರಿಗೆಲ್ಲಾ ಕಚಗುಳಿ ಇಡುತ್ತಾರೆ.

ಮದುವೆಯಾಗುತ್ತಿರುವ ನಾಯಕಿಯ ಮನಸ್ಸನ್ನು ಪರಿವರ್ತಿಸಿ ಒಲಿಸಿಕೊಳ್ಳವ ಸಂದರ್ಭ, ’ದೇವದಾಸ್’ ಎಂಬ ಮೊಲದ ಪಾತ್ರದ ಪ್ರವೇಶ ಚಿತ್ರದ ತಿರುವಿಗೆ ಕಾರಣ. ವಿಭಿನ್ನವಾಗಿ ಜೋಗಜಲಪಾತವನ್ನ ತೋರಿಸಿದಾಗ ಅಚ್ಚರಿಯಿಂದ ನೋಡುವ ಪ್ರೇಕ್ಷಕರಲ್ಲಿ ಜಲಪಾತದ ಎತ್ತರದಷ್ಟು ಸಂತೋಷ ತುಂಬಿಕೊಂಡಿತ್ತು. ನಾಯಕಿ ತನ್ನ ಪ್ರೀತಿಯನ್ನು ಬಿಚ್ಚಿಡಲು ಆ ಪ್ರತ್ಯೆಕ ಸ್ಥಳ ಆರಿಸಿಕೊಂಡಿರುವುದು ಅತಿ ರೋಮಾಂಚಕ...

ಈ ಚಿತ್ರದಲ್ಲಿ ಖಳನಾಯಕನ ಪಾತ್ರದ "ಜಾನಿ" ತನ್ನ ಪ್ರೀತೀನ ಹಿಂಸೆಯಿಂದ ಪಡೆಯುವ ಪರಿಯನ್ನು ನಿರ್ದೇಶಕರು ಚೆನ್ನಾಗಿ ಚಿತ್ರಿಸಿದ್ದಾರೆ. ನಾಯಕಿಗೆ ಬೇರೆ ಹುಡುಗನ ಜೊತೆ ಮದುವೆ. ಹಿರಿಯರ ನಂಬಿಕೆ ಉಳಿಸುವ ಸಲುವಾಗಿ ಪಡೆದ ಪ್ರೀತಿನ ಕಳೆದುಕೊಳ್ಳುವ ನಾಯಕ.

ಅಂದುಕೊಂಡಂತೆ ಜೀವನ ನಡೆದರೆ..........?...ಅದು ಎಲ್ಲೆಗೆ ಮೀರಿದ ಆಸೆ...

ತನ್ನ ಗೆಳೆಯನಾದ "ದೇವದಾಸ್" ಎಂಬ ಮೊಲದ ಬಳಿ ದುಃಖವನ್ನ ಹೇಳಿಕೊಳ್ಳುವ ರೀತಿ, ಒಂದೊಂದು ಪದದಲ್ಲೂ ಪ್ರೀತಿಕಳೆದುಕೊಂಡ ನೋವು, ಸಂಕಟ, ಬದುಕ್ಕಿದ್ದರೂ ಸತ್ತಂತೆ ವರ್ತಿಸುವ ಮನಸ್ಸು, ಮನಷ್ಯನನ್ನು ನಮ್ಮ ಈ ಚಿತ್ರದ ನಾಯಕ "ಗಣೇಶ್" ತಮ್ಮ ಅತ್ಯದ್ಭುತ ಅಭಿನಯದಿಂದ ಪ್ರೇಕ್ಷಕರ ಹೃದಯ ಮುಟ್ಟುವುದರಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೀತಿ ಕುರುಡೋ...? ಪ್ರೀತಿಸುವವರು ಕುರುಡರೋ...? ಪ್ರೀತಿ ಎಂಬ ಭಾವನೆ ಕುರುಡೋ...?
ಪ್ರೀತಿಯಲ್ಲಿ ಮಿಂದಿರೊ ಮನಸ್ಸು ಕುರುಡೋ...?
ಮೇಲಿನ ಯಾವ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ... ಆದರೆ...ತಿಳಿದುಬಂದದ್ದು.....

ಪ್ರೀತಿ ಮಧುರ, ತ್ಯಾಗ ಅಮರ...