ಹಿಮವದ್ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 4)

ಹಿಮವದ್ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 4)

ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತುಸು ತಡವಾಯಿತು. ಸ್ವಾತಂತ್ರ್ಯ ಬಂದು 60 ವರ್ಷಗಳಾಯಿತು ಎಂದು ದೊಡ್ಡ ಸಾಧನೆಯನ್ನೇನೋ ಮಾಡಿದವರ ಹಾಗೆ ಮೆರೆದಾಡುವ ನಾವು ಅಂದರೆ, ನಮ್ಮ ಸರಕಾರಗಳು ಮಾಡಿರುವ ಸಾಧನೆ ಏನು ಎಂಬುದಕ್ಕೆ ಸಾಕ್ಷ್ಯದಂತಿವೆ ಮಣ್ಣು, ಧೂಳಿನಿಂದ ಆವೃತವಾದ ಈ ರಸ್ತೆಗಳು. ಐದು ವರ್ಷಕ್ಕೊಮ್ಮೆ ಮತ ಕೇಳಲು ಬರುವ ರಾಜಕಾರಣಿಗಳು ಏನನ್ನು ಸಾಧಿಸಿದ್ದಾರೆ, ಇಂತಹವರಿಗೆ ಜನರು ಮತವನ್ನಾದರೂ ಯಾಕೆ ಚಲಾಯಿಸುತ್ತಾರೆ. ಅವರು ಮತಯಾಚಿಸಲು ಬಂದಾಗ ಎದೆಪಟ್ಟಿ ಹಿಡಿದು ಕೇಳುವ ಧೈರ್ಯವಿಲ್ಲವೇ? ಅಷ್ಟಕ್ಕೂ ನಮ್ಮ ಪ್ರತಿನಿಧಿಗಳಾದವರು ಊರಿನ ನೀರು, ವಿದ್ಯುತ್ ಮುಂತಾದ ಮೂಲಸೌಕರ್ಯಗಳನ್ನು ಒದಗಿಸುವುದು ಅವರ ಕರ್ತವ್ಯವಲ್ಲವೇ? ಯಾರಿಗೆ ತಾನೆ ಧೈರ್ಯ ಬಂದೀತು! ಹಿಂದೊಮ್ಮೆ ಮೈಸೂರಿನ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನನ್ನ ಪಕ್ಕ ಕುಳಿತಿದ್ದ ಹಳ್ಳಿ ಮುದುಕನೊಬ್ಬನು ದಾರಿಯೆಲ್ಲೆಡೆ ಅಂಟಿಸಿದ್ದ ರಾಜಕಾರಣಿಯೊಬ್ಬರ ಭಿತ್ತಿಚಿತ್ರಗಳನ್ನು ನೋಡಿ ಹೇಳಿದ ಹಾಗೆ, ಎಲ್ಲರೂ 'ಮಾರಿಕೊಂಡವರು'. ಮತಕ್ಕಾಗಿ ತಮ್ಮದು ಎಂದು ಉಳಿದಿರುವ ಮೂಲಭೂತ ಹಕ್ಕನ್ನೇ ಹಣಕ್ಕಾಗಿ ಮಾರಿಕೊಂಡವರಾಗಿದ್ದಾರೆ ನಮ್ಮ ಜನ. ಇನ್ನು ಕೇಳುವ ದೈರ್ಯವೆಲ್ಲಿಂದ ಬರಬೇಕು? ಕರ್ನಾಟಕದಂತಹ ಅಭಿವೃದ್ಧಿ ಹೊಂದಿದ ರಾಜ್ಯದ ಪರಿಸ್ಥಿತಿಯೇ ಹೀಗಿರುವಾಗ ಇನ್ನು ಬಿಹಾರ, ಜಾರ್ಖಂಡದಂತಹ ಹಿಂದುಳಿದ ರಾಜ್ಯಗಳ ಗತಿ, ಶಿವನೇ ಶಂಭುಲಿಂಗ! ಶಿಂಷಾ ಬಿಟ್ಟು 30-40 ನಿಮಿಷಗಳಲ್ಲಿಯೇ ನಾವು ತಲಕಾಡನ್ನು ತಲುಪಿದೆವು. ಆಗ ನೆನಪಾದದ್ದು,
ತಲಕಾಡು ಮರಳಾಗಿ,
ಮಾಲಂಗಿ ಮಡುವಾಗಿ
ಮೈಸೂರು ರಾಜರಿಗೆ
ಮಕ್ಕಳಾಗದೆ ಹೋಗಲಿ
ಎಂದು ಮೈಸೂರು ಮಹಾರಾಜರಿಗೆ ಅಲಮೇಲಮ್ಮ ಇತ್ತ ಶಾಪ.

ತಲಕಾಡಿನ ಬಗ್ಗೆ ಹೇಳುವಾಗ ಅಲಮೇಲಮ್ಮನ ಶಾಪದ ಬಗ್ಗೆ ಹೇಳದಿದ್ದರೆ ಸರಿಯೆನಿಸುವುದಿಲ್ಲವಾದ್ದರಿಂದ ಆ ಕುರಿತು ಸಂಕ್ಷಿಪ್ತವಾಗಿ ವಿವರಿಸಿ ಮುನ್ನಡೆಯುತ್ತೇನೆ.

ಶಾಪದ ಹಿನ್ನೆಲೆ:
ಈ ಅಲಮೇಲಮ್ಮ ಯಾರೆಂದರೆ, ಸುಮಾರು 400 ವರ್ಷಗಳ ಹಿಂದೆ ಮೈಸೂರು ಸೀಮೆಯ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣ ವಿಜಯನಗರದ ಅರಸರ ಅಧೀನದಲ್ಲಿತ್ತು. ಅವರ ಪ್ರತಿನಿಧಿಯಾಗಿದ್ದ ಶ್ರೀರಂಗರಾಯನ ಪತ್ನಿ.ಕಾಲಾನಂತರದಲ್ಲಿ ಶ್ರೀರಂಗರಾಯ ಯಾವುದೋ ರೋಗದಿಂದ ನರಳಿ ಪ್ರಾಣಬಿಟ್ಟಾಗ, ಅಲುಮೇಲಮ್ಮ ತಲಕಾಳಡಿಗೆ ಸಮೀಪದಲ್ಲಿಯೇ ನದಿಯ ಆಚೆಗಿರುವ ಮಾಲಂಗಿ ಎನ್ನುವ ಗ್ರಾಮಕ್ಕೆ ಹೋಗಿ ನೆಲೆಸಿದಳಂತೆ. ಶ್ರೀರಂಗಪಟ್ಟಣ ಮೈಸೂರು ಅರಸು ಮನೆತನದ ರಾಜಒಡೆಯರ್ರ ಅಧೀನವಾಯಿತು.

ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಶ್ರೀರಂಗನಾಯಕಮ್ಮನವರಿಗೆ ಪ್ರತಿ ಮಂಗಳವಾರ, ಶುಕ್ರವಾರ ಪೂಜೆ ನಡೆಯುತ್ತಿತ್ತಾದ್ದರಿಂದ, ಅಲುಮೇಲಮ್ಮ ತನ್ನ ಆಭರಣಗಳನ್ನು ದೇವಿಗೆ ಅಲಂಕರಿಸಿ ಪೂಜೆಯ ನಂತರ ತನ್ನೊಂದಿಗೆ ತೆಗೆದುಕೊಂಡುಹೋಗುವ ಪರಿಪಾಠವಿಟ್ಟುಕೊಂಡಿದ್ದಳು. ತನ್ನ ಪತಿ ಶ್ರೀರಂಗರಾಯನ ನಿಧನದ ನಂತರ ಅಲುಮೇಲಮ್ಮ ಮಾಲಂಗಿಗೆ ಹೋಗಿ ನೆಲೆಸಿದ್ದರಿಂದ, ದೇವಾಲಯದ ಒಡವೆಗಳ ವಿಚಾರವನ್ನು ಅಲ್ಲಿನ ಅಧಿಕಾರಿ ರಾಜಒಡೆಯರ್ಗೆ ತಿಳಿಸಲಾಗಿ ಅವರು ಒಡವೆಗಳನ್ನು ದೇವಾಲಕ್ಕೆ ಒಪ್ಪಿಸಬೇಕೆಂದು, ತಪ್ಪಿದಲ್ಲಿ ಬಲವಂತವಾಗಿ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿ ಮಹಾನ್ ದೈವಭಕ್ತೆ ಹಾಗೂ ಸ್ವಾಭಿಮಾನಿಯಾದ ಅಲುಮೇಲಮ್ಮ ಅವಮಾನ, ಸಂಕಟಗಳಿಂದ ತನ್ನ ಮೂಗುತಿಯನ್ನು ಮಾತ್ರ ಕಳುಹಿಸಿ, ಎಲ್ಲಾ ಒಡವೆಗಳನ್ನು ತನ್ನ ಮಡಿಲಲ್ಲಿ ಕಟ್ಟುಕೊಂಡು, ಮೇಲಿ ಹೇಳಿದ ಶಾಪವನ್ನು ಕೊಟ್ಟು ಮಾಲಂಗಿ ಮಡುವಿಗೆ ಆಹುತಿಯಾದಳು.

ತನ್ನ ಆದೇಶ ಅಲುಮೇಲಮ್ಮನ ಸಾವಿಗೆ ಕಾರಣವಾಗಬಹುದೆಂಬ ಊಹೆಯನ್ನೂ ಹೊಂದಿರದ ರಾಜಒಡೆಯರ್, ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಅಲುಮೇಲಮ್ಮನ ಪ್ರತಿಮೆಯೊಂದನ್ನು ಮಾಡಿಸಿ ಅದಕ್ಕೆ ಆಕೆಯ ಆಭರಣಗಳನ್ನು ತೊಡಿಸಿ ಅರಮನೆಯಲ್ಲಿ ಪ್ರತಿದಿನ ಪೂಜೆ ಮಾಡುವಂತಹ ವ್ಯವಸ್ಥೆ ಮಾಡಿದರಂತೆ. ಅರಸರು ಅಂದು ಹುಟ್ಟಿಹಾಕಿದ ಈ ಪರಿಪಾಠ ಇನ್ನೂ ಮುಂದುವರೆದುಕೊಂಡು ಬಂದಿದ್ದು, ಈಗಲೂ ದಸರಾ ಉತ್ಸವದ ಸಂದರ್ಭದಲ್ಲಿ ಅಲುಮೇಲಮ್ಮನ ಪೂಜೆ ತಪ್ಪದೆ ನಡೆಯುತ್ತದೆ.

ಅಲಮೇಲಮ್ಮನ ಆ ಶಾಪ ಸತ್ಯವೋ, ಮಿಥ್ಯೆಯೋ ಮರಳೇಶ್ವರನೇ ಎದ್ದು ಬಂದು ಹೇಳಬೇಕಷ್ಟೆ! ಆದರೆ, ತಲಕಾಡು ಮರಳುಗಾಡಾಗುವುದಕ್ಕೆ ನಾನು ಇತ್ತೀಚೆಗೆ ಓದಿದ ಹಾಗೆ ವೈಜ್ಞಾನಿಕ ಕಾರಣವಿದೆ. ಅದರ ಬಗ್ಗೆ ಇಲ್ಲಿ ವಿವರವಾಗಿ ಹೇಳಹೋಗುವುದಿಲ್ಲ.

ನಾವೆಲ್ಲರೂ ನಮ್ಮ ಗಾಡಿಗಳನ್ನು ನಿಲ್ಲಿಸುತ್ತಿದ್ದ ಹಾಗೆ, ಅಲ್ಲಿನ ಹೋಟೆಲಿನವನೊಬ್ಬನು ಬಂದು ಊಟಕ್ಕೆ ಆರ್ಡರ್ ಕೊಟ್ಟು ಹೋಗಿ ಸಾರ್, ನೀವು ಬರೋದ್ರೊಳಗೆ ಎಲ್ಲಾ ರೆಡಿಯಿರುತ್ತೆ. ನಮ್ಮ ಹೋಟೆಲ್ ಇಲ್ಲೇ ಇರೋದು. ಬೇಕಾದ್ರೆ ಬಂದು ನೋಡಿ ಸರ್ ಎಂದು ನಮ್ಮನ್ನು ಅವನ ಹೋಟೆಲ್ ಬಳಿ ಕರೆದುಕೊಂಡು ಹೋದ. ನಮ್ಮ ಹೆಲ್ಮೆಟ್ಗಳನ್ನು ಇಸಿದುಕೊಂಡು ಚೀಲವೊಂದರಲ್ಲಿ ಹಾಕಿ ಕಟ್ಟಿಟ್ಟ. ನೀವು ಹೋಗಿದ್ ಬನ್ನಿ ಸಾರ್, ನಾವು ಜೋಪಾನ ಮಾಡ್ತೀವಿ ಎಂದ. ಸರಿ ಎಂದು ನಾವು ಕಾವೇರಿ ನದೀತೀರದೆಡೆಗೆ ಹೊರಟೆವು. ತಲಕಾಡನ್ನು ಮೂರೂ ದಿಕ್ಕುಗಳಿಂದ ಆವರಿಸಿಕೊಂಡು ಹರಿಯುತ್ತಿರುವ ಕಾವೇರಿ, ಮರುಭೂಮಿಯಂತೆ ಇಡೀ ಊರನ್ನೇ ಆವರಿಸಿಕೊಂಡಿರುವ ಮರಳು ಸೃಷ್ಟಿಯ ವಿಸ್ಮಯವೇ ಸರಿ!

ಕಾವೇರಿ ನದೀತೀರದಲ್ಲಿ ಒಂದು ಮರದ ಕೆಳಗೆ ನಾವೆಲ್ಲರೂ ನಮ್ಮ ಲಗ್ಗೇಜುಗಳನ್ನು ಇರಿಸಿದೆವು. ರಾಜು, ತೇಜಸ್ವಿ, ಹರ್ಷ ಮೂವರು ಈಜು ಹೊಡೆಯುವುದಕ್ಕೆ ಸಿದ್ಧರಾದರು. ಯಾವ ಸಂಕೋಚವೂ ಇಲ್ಲದೆ ಬಟ್ಟೆಬರೆ ಕಳಚಿ ಒಂದೆಡೆ ಇಟ್ಟು, ತಾವು ಹಾಕಿಕೊಂಡಿದ್ದ 'ವಿ' ಆಕಾರದ ಒಳಚಡ್ಡಿಗಳಲ್ಲೇ ಈಜು ಹೊಡೆಯುವುದಕ್ಕೆ ಹೊರಟರು. ಸಂಕೋಚ ಸ್ವಭಾವದವನಾದ ನಾನು, ಮತ್ತು ಈಗಾಗಲೇ ತನ್ನ ಆರಾಧ್ಯದೈವ ಶ್ರೀಕೃಷ್ಣನ ಕುರಿತ ಟೀಕೆಗಳಿಂದ ಬೇಸರಗೊಂಡಿದ್ದ ಶ್ರೀ ಅಲ್ಲಿಯೇ ಉಳಿಯಲು ನಿರ್ಧರಿಸಿದೆವು. ಕಡೆಗೆ ನಾನು ಕೂಡ ನದಿಗಿಳಿಯಬೇಕೆಂದು ತೀರ್ಮಾನಿಸಿ, ಮೊದಲು ಸೋಪು, ಶಾಂಪೂ ತಂದು ಟೀ ಶರ್ಟು, ಪ್ಯಾಂಟು ಕಳಚಿಟ್ಟು, ಬನಿಯನ್ ಮಾತ್ರ ತೆಗೆದು ನನ್ನ ನೈಟ್ ಪೈಜಾಮ ಹಾಕಿಕೊಂಡು ನದಿಗಿಳಿಯ ಹೊರಟೆ. ಎಷ್ಟೇ ಹೊತ್ತು ಅಲ್ಲೆಲ್ಲ ಹುಡುಕಿದರೂ ಆ ಮೂವರು ಕಾಣಸಿಗಲಿಲ್ಲ.

ಕಾವೇರಿ, ಕಪಿಲ, ಸ್ಫಟಿಕ ಸರೋವರಗಳ ಸಂಗಮವಾಗಿರುವ ಕಾರಣ 4 ವರ್ಷಗಳಿಗೊಮ್ಮೆ ಕುಂಭಮೇಳ ಆಚರಿಸುವ ನನ್ನ ಹುಟ್ಟೂರಾದ ತಿರುಮಕೂಡಲು ನರಸೀಪುರದಲ್ಲಿ ಈಜು ಕಲಿಯಲೆಂದು ನಾನು 8-9 ಓದುತ್ತಿದ್ದಾಗ ನನ್ನ ಬಾಲ್ಯದ ಗೆಳೆಯರಾಗಿದ್ದ ಪ್ರದೀಪ, ಲೋಕಿಯೊಂದಿಗೆ ಕದ್ದು ಕದ್ದು ನದಿಗಿಳಿಯಲು ಹೋಗುತ್ತಿದ್ದ ನೆನಪಾಯಿತು. ಎಷ್ಟೇ ಸಲ ನದಿಗೆ ಹೋದರೂ, ಕಡೆಗೂ ಈಜು ಕಲಿಯಲಾಗಲಿಲ್ಲ ನನಗೆ. ಒಮ್ಮೆ ನಾವು ಮೂವರು ಈಜುವುದಕ್ಕೆ ನದಿಗೆ ಹಾರಿ, ಆಳವಿರುವ ಜಾಗದಲ್ಲಿ ಇನ್ನೇನೂ ತಳಕ್ಕೆ ಸೇರಿಬಿಡುತ್ತೇವೇನೋ ಎನ್ನುವಷ್ಟರಲ್ಲಿ ನಮ್ಮೂರಿನ ಈಜುಪಟುಗಳು ಬಂದು ನಮ್ಮ ಕೂದಲು ಹಿಡಿದು ಹೊರಗೆಳೆದು ನಮ್ಮ ಜೀವ ಕಾಪಾಡಿದ್ದು, ಆನಂತರ ನಮ್ಮ ಮನೆಯವರಿಗೆ ಈ ವಿಷಯ ತಿಳಿಸಿ, ಬೈಗುಳದ ಸುರಿಮಳೆ ಹರಿಸಿ, ಈಜು ಕಲಿಯುವ ನಮ್ಮ ಆಸೆ ಅಲ್ಲಿಗೇ ಕೊನೆಯಾದದ್ದು ಎಲ್ಲವೂ ನೆನಪಾಯಿತು. ಸವಿ ಸವಿ ನೆನಪು, ಸವಿ ಸವಿ ನೆನಪು...

ನದಿಯಲ್ಲಿ ಅಷ್ಟೇನೂ ನೀರಿರದ ಕಾರಣ, 5 ಅಡಿ ಎತ್ತರದವರು ಕೂಡ ಮತ್ತೊಂದು ಬದಿಗೆ ನದಿಯಲ್ಲಿ ನಡೆದೇ ಹೋಗಬಹುದಿತ್ತು. ನಾನು ಕೂಡ ಆ ಬದಿಗೆ ಹೋಗಬೇಕೆಂದೆನಿಸಿ ಅತ್ತ ಹೋದಾಗ, ರಾಜು, ತೇಜಸ್ವಿ, ಹರ್ಷ ಮೂವರು ಅಲ್ಲಿಯೇ ಬೀಚ್ನಲ್ಲಿ ಬಿದ್ದುಕೊಳ್ಳುವ ವಿದೇಶಿಯರಂತೆ ಮರಳ ಮೇಲೆ ಮಲಗಿ ಸ್ಯಾಂಡ್ಬಾತ್ಗೆಂದು ಸಿದ್ಧರಾಗಿದ್ದರು. ಆಗ ಸ್ಯಾಂಡ್ ಬಾತ್, ಮಡ್ ಬಾತ್ ಎಂದು ಸ್ಪಾಗಳಿಗೆ ಹೋಗಿ ಸಾವಿರಾರು ರೂಪಾಯಿ ಹಣ ಪೋಲು ಮಾಡುವ ದುಂದುಗಾರರು ನೆನಪಾದರು. ಮೂವರಿಗೂ ತಮ್ಮ ಮೈಮೇಲೆ ಮರಳನ್ನು ಸಂಪೂರ್ಣವಾಗಿ ಹಾಕಿಸಿಕೊಳ್ಳುವ ಆಸೆಯಿದ್ದರಿಂದ ಅಂತಹ ಆಸೆಯಿರದಿದ್ದ ನಾನು ಅವರಿಗೆ ಮರಳು ಹಾಕುವ ಕಾಯಕ ಮಾಡಬೇಕಾಯಿತು. ರಾಜು ಮೇಲೆ ಮರಳು ಹಾಕುತ್ತ ನಾನು ಅವನ ಹೊಟ್ಟೆ ಭಾಗದ ಮೇಲೆ ದಪ್ಪದಾಗಿ ಮರಳುರಾಶಿ ಹಾಕಿ ಗರ್ಭಿಣಿಯಂತೆ ಮಾಡಿದ್ದೆ. ಅಷ್ಟಕ್ಕೇ ಸುಮ್ಮನಿರದಿದ್ದ ಹರ್ಷ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಜು ಮೇಲೆ ಮರಳು ಹಾಕುತ್ತ ಹೆಣ್ಣಿನ ಅಂಗಗಳನ್ನು ರೂಪಿಸುವ ಕೆಲಸಕ್ಕೆ ಮುಂದಾದನು. ಇದನ್ನು ನೋಡುತ್ತ ಅಲ್ಲಿ ಸುತ್ತಮುತ್ತ ಇದ್ದ ತುಂಟ ಹುಡುಗರು ಒಣ ಹುಲ್ಲನೆಲ್ಲ ತಂದು ಹಾಕಿ ಏನೇನೋ ಆಕಾರ ಕೊಟ್ಟರು. ಮತ್ತೊಬ್ಬ ಬಂದು ಅದಾಗಲೇ ಹೆಣ್ಣಿನ ಆಕಾರ ತಾಳಿದ್ದ ರಾಜೂವಿನ ಮೊಲೆಗಳನ್ನು ಅಮುಕಿ ಮಜಾ ತೆಗೆದುಕೊಳ್ಳಲು ನೋಡಿದ. ಹೀಗೇ ಅವರ ಚೇಷ್ಟೆ ಸಾಗಿತ್ತು. ಆಗ ನಮಗನಿಸಿದ್ದು, ಗಂಡಿಗೆ ಸುಮ್ಮನೆ ಮರಳಿನಲ್ಲಿ ಹೆಣ್ಣಿನ ಅಂಗಾಂಗ ಕೊಟ್ಟರೆ ಹೀಗೆ ಪ್ರತಿಕ್ರಿಯಿಸುವ ಗಂಡಸರು, ಇನ್ನು ನಿಜವಾಗಿಯೂ ಹೆಂಗಸರೇ ಆದರೆ ಹೇಗೆ ಎಂದುಕೊಂಡು ಒಂದು ಕ್ಷಣ ಭಯವೇ ಆಯಿತು! ಇಂತಹ ಕಾಮುಕ ಮನಸ್ಸುಗಳೇ ಮುಂಬಯಿಯಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿ ನಡುರಸ್ತೆಯಲ್ಲಿಯೇ ಹೆಣ್ಣುಮಗಳೊಂದಿಗೆ ಅಸಭ್ಯವಾಗಿ ವರ್ತಿಸು ಮುಂದಾಗುವುದು, ದೇಶದಲ್ಲಿ ಕ್ಷಣಮರುಕ್ಷಣ ಅಪ್ರಾಪ್ತರು ವಯಸ್ಕರು, ತಾಯಿ ತಂಗಿಯರು ಎನ್ನದೆ ನಡೆಯುವ ಅತ್ಯಾಚಾರಕ್ಕೆ ಕಾರಣರು ಎಂದೆನಿಸಿತು!

ಅತ್ತ ಕಡೆ ಸುಮಾರು 35-40ರ ಆಸುಪಾಸಿನ ವಯಸ್ಕರು ವಾರಾಂತ್ಯದ ಮೋಜಿಗೆಂದು ಅಲ್ಲಿ ಬಂದು ಚಿಕನ್ ಮಟನ್, ಬೀರು ಬ್ರಾಂದಿ ತಂದು, ಕುಡಿದು ಗುಂಡಿನ ಮತ್ತೇ ಗಮ್ಮತ್ತು ಎಂದು ಹಾಡಲು ಸಿದ್ದರಾದರು. ನಾವು ಇನ್ನೂ ಹೆಚ್ಚಿನ ಕಾಲ ಇಲ್ಲಿರುವುದು ಸರಿಯಲ್ಲ ಎಂದು ತಿಳಿದು ನದಿಯಲ್ಲಿ ಆಟವಾಡುವುದಕ್ಕಾಗಿ ಹೊರಟೆವು. ರಾಜು, ತೇಜಸ್ವಿಗೆ ಈಜು ಬರುತ್ತಿದ್ದರಿಂದಾಗಿ ಅವರಿಬ್ಬರೂ ಈಜುತ ಸಾಗಿದರು. ನಾನು, ಹರ್ಷ ಈಜು ಬರುವವರ ಹಾಗೆ ನಟಿಸುತ್ತಾ ಸಾಗಿದೆವು. ಅಲ್ಲಿ ಈಜುತ್ತಿದ್ದ ಎಲ್ಲ ಜನರಿಂದ ದೂರ ಸಾಗಿ ಸುಮಾರು 5 ಅಡಿ ಆಳದಷ್ಟು ನೀರಿದ್ದೆಡೆ ಹೋದೆವು. ಈಜಿದೆವು, ಸ್ನಾನ ಮಾಡಿದೆವು. ನಂತರ ಸುಸ್ತಾಗಿ ತೀರದೆಡೆಗೆ ಸಾಗಿದೆವು. ಪ್ಯಾಂಟ್ ಹಾಕಿಕೊಳ್ಳುವ ಭರದಲ್ಲಿದ್ದ ರಾಜೂಗೆ ಬೆಲ್ಟು ತಗುಲಿ ಹಣೆಗೆ ಗಾಯವಾಯಿತು. ಆನಂತರ ರಕ್ತ ಒರೆಸಿ, ಬ್ಯಾಂಡ್ಏಡ್ ಹಾಕಿದ್ದಾಯಿತು. ಎಲ್ಲರೂ ಬಟ್ಟೆಗಳನ್ನು ಹಾಕಿಕೊಂಡು ನಮಗಾಗಿ ಕಾದಿರಿಸಿದ್ದ ಊಟದ ಮನೆಯೆಡೆಗೆ ಹೊರಟೆವು. ರಸ್ತೆ ಬದಿಯ ಸಾಮಾನ್ಯ ಹೋಟೆಲಿನಂತಿದ್ದರೂ, ಪುಷ್ಕಳ ಭೋಜನ ಎನ್ನಲಾಗದಿದ್ದರೂ, ಹೊಟ್ಟೆ ತುಂಬುವ ಹಾಗೆ ತಿನ್ನುವಷ್ಟು ರುಚಿಕರವಾಗಿತ್ತು ಊಟ.

ಪಂಚಲಿಂಗಗಳಾದ - ವೈದ್ಯನಾಥೇಶ್ವರ, ಮರುಳೇಶ್ವರ ಹಾಗೂ ಪಾತಾಳೇಶ್ವರ ತಲಕಾಡಿನಲ್ಲಿಯೇ ಇದ್ದು, ಪೂರ್ವಕ್ಕೆ 2-3 ಕಿ.ಮೀ.ದೂರದಲ್ಲಿರುವ ವಿಜಯಪುರದ ಅರ್ಕೇಶ್ವರ ಹಾಗೂ ಉತ್ತರಕ್ಕೆ ಸ್ವಲ್ಪ ದೂರದಲ್ಲಿರುವ ಮುಡುಕುತೊರೆ ಬೆಟ್ಟದಲ್ಲಿ ಮಲ್ಲಿಕಾರ್ಜುನನ ದೇವಸ್ಥಾನಗಳಿವೆ. ನಾವು ಸದ್ಯ ತಲಕಾಡಿನಲ್ಲಿರುವ ಮೂರು ಲಿಂಗಗಳ ದರ್ಶನಕ್ಕೆಂದು ಹೊರಟೆವು.

ಇಲ್ಲಿ ಶುರುವಾಯಿತು ಮತ್ತೊಮ್ಮೆ ವಾದವಿವಾದಗಳು. ನಾನು ಪಾಪ ಒಂಟಿಯಾಗಿ ಮುಂದೆ ಮುಂದೆ ಸಾಗುತ್ತಿದ್ದ ಶ್ರೀಗೆ ಜತೆ ನೀಡಲೆಂದು ಅವನೊಡನೆ ಸಾಗಿದೆ. ನಮ್ಮಿಂದ ಸುಮಾರು 50 ಮೀಟರ್ ಅಂತರದಲ್ಲಿ ರಾಜು, ತೇಜಸ್ವಿ, ಹರ್ಷ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬರುತ್ತಿದ್ದರು. ಪಾತಾಳೇಶ್ವರ, ಮರುಳೇಶ್ವರನ ದರ್ಶನವಾಯಿತು. ಇಡೀ ತಲಕಾಡಿನ ದೇವಾಲಯಗಳಲ್ಲಿ ನನ್ನ ಮನಸೂರೆಗೊಂಡದ್ದು, ವಾಸ್ತುಶಿಲ್ಪ ನೋಡಿದಾಕ್ಷಣ ನಿಸ್ಸಂಶಯವಾಗಿ ಹೊಯ್ಸಳರ ನಿರ್ಮಾಣ ಎಂದು ಯಾರಾದರೂ ಹೇಳಬಹುದಾದ ಕೀರ್ತಿನಾರಾಯಣನ ದೇವಾಲಯ. ಹೊಯ್ಸಳ ವಾಸ್ತುಶಿಲ್ಪ ಶೈಲಿಯ ವೈಶಿಷ್ಟ್ಯವೆಂದರೆ ಮಂಟಪದ ಮೇಲೆ ದೇವಾಲಯದ ನಿರ್ಮಾಣ. ಇಡೀ ತಲಕಾಡಿನಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡಿರುವ ದೇವಾಲಯ ಇದೊಂದೆ. ಎಂಟು ಅಡಿ ಎತ್ತರದ ಕೀರ್ತಿನಾರಾಯಣನ ಮಂಗಳ ಮೂರುತಿ ಅತ್ಯಾಕರ್ಷಕ.

ಇಲ್ಲಿ ನನಗೆ ನೆನಪಾದದ್ದು ನಾನು ಈ ಹಿಂದೆ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಿಚಾರಸಂಕಿರಣಕ್ಕೆಂದು ಆಗಮಿಸಿದ್ದ ಕೆನಡಾದ ಸ್ಟೀಫನ್ ಮೊರಾನ್. ಅವನಿಗೆ ನಾನು ಕನ್ನಡ ಕಲಿಸಬೇಕಾದಂತಹ ಪ್ರಸಂಗ ಬಂದೊದಗಿತ್ತು. ಸ್ಟೀಫನ್ನೊಡಗೂಡಿಯೇ ನಾನು ಭಾರತೀಯ ವಾಸ್ತುಶಿಲ್ಪಕ್ಕೆ ಕನ್ನಡ ನಾಡಿನ, ಹೊಯ್ಸಳರ ಅತ್ಯಮೂಲ್ಯ ಕೊಡುಗೆಯಾದ ವಿಶ್ವವಿಖ್ಯಾತ ಬೇಲೂರು ಹಾಗೂ ಹಳೇಬೀಡಿಗೆ ಭೇಟಿ ನೀಡಿದ್ದು. ಬೇಲೂರು ಹಾಗೂ ಹಳೇಬೀಡುಗಳಲ್ಲಿ ವಾಸ್ತುಶಿಲ್ಪದ ಶ್ರೇಷ್ಟತೆಯಿಂದ ಹಾಗೂ ನಿಸರ್ಗ ರಮಣೀಯತೆಯಿಂದ ಗಮನ ಸೆಳೆಯವುದು ದೋರಸಮುದ್ರ ಎಂದು ಈ ಹಿಂದೆ ಕರೆಯಲ್ಪಡುತ್ತ ಹೊಯ್ಸಳರ ರಾಜಧಾನಿಯಾಗಿದ್ದ, ಅಪೂರ್ಣವೆನಿಸಿರುವ ದೋರಸಮುದ್ರದ ತೀರದಲ್ಲಿ ಸ್ಥಾಪಿತವಾಗಿರುವ ಮನೋಹರವಾದ ಹಳೇಬೀಡು ದೇವಾಲಯ.

ಇದೆಲ್ಲಾ ಆದ ಮೇಲೆ ಕಡೆಯದಾಗಿ ನಾವು ನೋಡಿದ್ದು ಚೌಡೇಶ್ವರಿ ದೇವಸ್ಥಾನ. ಚಿಕ್ಕದಾಗಿದ್ದರೂ, ಚೊಕ್ಕದಾಗಿರುವ ಈ ದೇವಾಲಯದ ಚೌಡೇಶ್ವರಿಯಮ್ಮ ಸುಂದರವಾಗಿ ಕಂಗೊಳಿಸುತ್ತಿದ್ದಳು. ಈ ದೇವಾಲಯದ ವಿಶೇಷವೆಂದರೆ, ಆಸ್ತಿಕರಿಗೆ ಪೂಜ್ಯನೀಯವಾದ ಭಯಭಕ್ತಿಗಳಿಗೆ ಕಾರಣವಾದ ಶ್ರೀ ಚಕ್ರ. ಈ ಶ್ರೀ ಚಕ್ರವನ್ನು ಭಕ್ತಿಯಿಂದ ಪ್ರಾರ್ಥಿಸಿದಲ್ಲಿ ವಾಮಾಚಾರ, ಶನಿಕಾಟದಂತಹವು ನಿವಾರಣೆಯಾಗುತ್ತದೆಯೆಂಬುದು ಭಕ್ತರ ನಂಬಿಕೆ. ಈಗಾಗಲೇ ಸಮಯ 5.30 ಆಗಿದ್ದರಿಂದ ನಾವೆಲ್ಲರೂ ಆದಷ್ಟು ಬೇಗ ಮುಡುಕುತೊರೆಯನ್ನು ನೋಡಬೇಕೆಂದು ತರಾತುರಿಯಿಂದ ಹೊರಟೆವು.

ಮುಡುಕುತೊರೆ:

ತಲಕಾಡಿನ ಉತ್ತರಕ್ಕೆ ಬಹುಸಮೀಪದಲ್ಲಿ 200 ಅಡಿ ಎತ್ತರವಿರುವ ಸೋಮಗಿರಿ ಅಥವಾ ಮುಡುಕುತೊರೆಯನ್ನು ನೋಡಲು ಯಾರೂ ಅಷ್ಟೇನೂ ಉತ್ಸುಕರಾಗಿರಲಿಲ್ಲ. ಆದರೆ, ಇಲ್ಲಿಂದ ನಮ್ಮ ಕಡೆಯ ಗಮ್ಯಸ್ಥಾನ ಸೋಮನಾಥಪುರಕ್ಕೆ ಹೊರಡಬೇಕೆಂದು ಎಲ್ಲರೂ ತೀರ್ಮಾನಿಸಿದ್ದರೂ, ಮುಡುಕುತೊರೆಯ ಮೂಲಕವೇ ಅಲ್ಲಿಗೆ ಹೋಗಬೇಕಾದ್ದರಿಂದ ನನ್ನ ಒತ್ತಾಯದ ಮೇರೆಗೆ ಎಲ್ಲರೂ ಒಂದು 20-30 ನಿಮಿಷ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹೋಗುವ ಮನಸ್ಸು ಮಾಡಿದರು.

ಈ ದೇವಾಲಯಕ್ಕೆ ಚಿಕ್ಕಂದಿನಲ್ಲಿ ನಾನು ಭೇಟಿ ಕೊಟ್ಟ ನೆನಪು. ಮೈಸೂರು ಪ್ರಾಂತ್ರ್ಯದಲ್ಲಿ ಅಪಾರ ಭಕ್ತವೃಂದವನ್ನು ಹೊಂದಿರುವ ಈ ಬೆಟ್ಟದಲ್ಲಿ ಪ್ರತಿ ಮಾಘಮಾಸದಲ್ಲಿ ಹದಿನೈದು ದಿನಗಳವರೆಗೆ ಭಾರೀ ಜಾತ್ರೆಯೇ ನಡೆಯುತ್ತದೆ. ಈ ದೇವಾಲಯಕ್ಕೆ ಮೆಟ್ಟಿಲು ಹತ್ತಿ ಹೋದರೆ ಶ್ರೀಮಲ್ಲಿಕಾರ್ಜುನನ ಅನುಗ್ರಹ ಡಬಲ್ ಆಗುತ್ತದೆ ಎಂಬುದು ನಂಬಿಕೆಯಾದರೂ, ಈಗ ಭಕ್ತಿಗಿಂತ ಹೆಚ್ಚಾಗಿ ಅನುಕೂಲ ಮುಖ್ಯವಾದ್ದರಿಂದ, ಅದರಲ್ಲೂ ನಾವು ಗಾಡಿಯಲ್ಲಿ ಬಂದದ್ದರಿಂದ ನೇರ ದೇವಸ್ಥಾನದ ಬಳಿ ಹೋದೆವು. ಮೆಟ್ಟಿಲುಗಳು ತುಂಬಾ ಕಡಿದಾಗಿರುವುದರಿಂದಾಗಿ ಹೆಂಗಸರು, ಮಕ್ಕಳು, ವೃದ್ಧರು ಹತ್ತುವುದಕ್ಕೆ ತುಂಬಾ ಶ್ರಮಪಡಬೇಕಾಗುತ್ತದೆ. ಆದರೆ, ನಾವೆಲ್ಲರೂ ಯುವಕರಾದ್ದರಿಂದ ಸರಸರನೆ ಹತ್ತುತ್ತಾ ನಡೆದವು. ಆಗ ಮೇಲೇರುತ್ತಿದ್ದಂತೆ ಸೂರ್ಯಾಸ್ತವಾಗುವುದರಲ್ಲಿತ್ತು. ತಲಕಾಡಿಗೆ ಹರಿದು ಬರುವ ನದಿಯ ವಿಹಂಗಮ ನೋಟ, ನದಿ ಎರಡು ಸೀಳಾಗಿ ಹರನ ಜಡೆಯಂತೆ ಕಾಣುತ್ತಿತ್ತು. ಆ ದೃಶ್ಯವೈಭವ ನೋಡುವ ಸೌಭಾಗ್ಯ ನಮ್ಮದಾಗಿತ್ತು. ಆಗ ಎಲ್ಲರೂ ಒಂದೇ ಸಮನೆ ಈ ದಿನ ನಾವು ನೋಡಿದ ಅತ್ಯಂತ ಮನೋಹರ ದೃಶ್ಯ ಇದೇ ಎಂದು. ಇಲ್ಲಿಗೆ ಬರದಿದ್ದರೆ ನಾವು ನಿಜಕ್ಕೂ ಏನನ್ನೊ ಮಿಸ್ ಮಾಡಿಕೊಳ್ಳುತ್ತಿದ್ದೆವು ಎಂದು ಹೇಳಿದರು. ನಾನು ಒತ್ತಾಯ ಮಾಡಿ ಎಲ್ಲರನ್ನೂ ಕರೆ ತಂದದ್ದಕ್ಕೂ ಸಾರ್ಥಕವಾಯಿತು ಎನಿಸಿತು ನನಗೆ. ಗರ್ಭಗೃಹದಲ್ಲಿ ಒಂದಡಿ ಚದುರದ ಪಾಣಿಪೀಠದ ಮೇಲೆ ಸುಮಾರು ಐದಂಗಲ ಎತ್ತರದ ಶ್ರೀಮಲ್ಲಿಕಾರ್ಜುನ ಲಿಂಗವಿದೆ. ಬೆಟ್ಟದ ತುದಿಯಲ್ಲಿ ಸುಮಾರು 40 ಅಡಿ ಎತ್ತರದ ದೀಪಸ್ತಂಭ ಅಚ್ಚರಿಯನ್ನುಂಟು ಮಾಡುತ್ತದೆ. ಶ್ರೀಮಲ್ಲಿಕಾರ್ಜುನ ದೇವಾಲಯದ ಬದಿಯಲ್ಲಿ ಶ್ರೀಭ್ರಮರಾಂಬಿಕಾ ದೇವಾಲಯವಿದೆ. ದೇವರ ದರ್ಶನ ದೇವಸ್ಥಾನದ ನಾಲ್ಕೂ ಕಡೆಗಳಿಂದ ನಿಸರ್ಗಸೌಂದರ್ಯವನ್ನು ಸವಿಯಲು ಹೊರಟೆವು. ನಿಜಕ್ಕೂ ಅದೊಂದು ರಮಣೀಯ ದೃಶ್ಯ, ಮರೆಯಲಾಗದ ಅನುಭವ.

ಅದಾಗಲೇ ಹೊತ್ತು ಮೀರಿತ್ತು. ಸೂರ್ಯ ತನ್ನ ಇಡೀ ದಿನದ ಕೆಲಸ ಮುಗಿಸಿ ವಿಶ್ರಾಂತಿಸಲು ಧರೆಯ ಮಡಿಲಿಗ ಹೋಗುತ್ತಿದ್ದಾನೇನೋ ಎನಿಸುತ್ತಿತ್ತು. ನಾವು ಬನ್ನೂರು ಮಾರ್ಗದಲ್ಲಿ ಬನ್ನೂರಿಗೂ ಮುಂಚೆ ಸಿಗುವ ಐತಿಹಾಸಿಕ ಜಗತ್ಪ್ರಸಿದ್ಧ ಹೊಯ್ಸಳ ವಾಸ್ತುಶಿಲ್ಪದ ಪ್ರಾತಿನಿಧಿಕ ಅಭಿವ್ಯಕ್ತಿಯಂತಿರುವ ನಕ್ಷತ್ರಾಕಾರಾದ ದೇವಾಲಯ ನೋಡುವ ಹಂಬಲ ಹೊತ್ತು ಹೊರಟೆವು ಸೋಮನಾಥಪುರದೆಡೆಗೆ. ಮತ್ತದೇ ಮಣ್ಣು, ಧೂಳಿನ ರಸ್ತೆ. ಸೋಮನಾಥಪುರ ತಲುಪಿದಾಗ ಅದಾಗಲೇ 7 ಗಂಟೆಯಾಗಿತ್ತು. 5.30ಕ್ಕೆ ದೇವಾಲಯಕ್ಕೆ ಪ್ರವೇಶ ನಿಶೇಧಿಸಲಾಗುತ್ತದಂತೆ. ನಮ್ಮಂತೆಯೇ ದೇವಾಲಯ ನೋಡುವ ಆಸೆ ಹೊತ್ತು ಬಂದು ಬಾಗಿಲು ಮುಚ್ಚಿದ್ದರಿಂದಾಗಿ ಅಲ್ಲಿಯೇ ಕುಳಿತಿದ್ದ ಯಾರೋ ಪ್ರವಾಸಿಗರು ನಮಗೆ ಈ ವಿಷಯ ತಿಳಿಸಿದರು. ಸೋಮನಾಥಪುರಕ್ಕೆ ಕೇವಲ 10-11 ಕಿ.ಮಿ.ದೂರವಿರುವ ತಿರುಮಕೂಡಲು ನರಸೀಪುರದವನಾದ ನನಗೆ 28 ವರ್ಷವಾದರೂ ಈ ಐತಿಹಾಸಿಕ ವಾಸ್ತುಶಿಲ್ಪ ನೋಡುವ ಭಾಗ್ಯ ಸಿಗಲಿಲ್ಲ. ನಿರಾಶೆಯಿಂದ ಬನ್ನೂರು ಮೂಲಕ ಮೈಸೂರಿನೆಡೆಗೆ ನಮ್ಮ ಪ್ರಯಾಣ ಬೆಳೆಸಿದೆವು.

ಕಡೆಗೂ ನನ್ನ ಜೀವಮಾನದಲ್ಲಿ ಮೊದಲ ಬಾರಿಗೆ ಗೆಳೆಯರೊಂದಿಗೆ ಬೈಕಿನಲ್ಲಿ ಪ್ರವಾಸ ಮಾಡಿದ ಅವಿಸ್ಮರಣೀಯ ಅನುಭವ, ಚಾರಣದ ಸಾಹಸಮಯ ಅನುಭವ, ನದಿಯಲ್ಲಿ ಮಿಂದ ಹಿತಕರ ಅನುಭವ ಹೀಗೆ ಪ್ರತಿಯೊಂದು ಹೊಚ್ಚಹೊಸ ಅನುಭವವನ್ನು ನನಗೆ ಮಾಡಿಸಿತು. ಇದಕ್ಕೆ ಕಾರಣನಾದ ರಾಜೂಗೆ ನನ್ನ ಅನಂತಾನಂತ ವಂದನೆಗಳು.

ಈ ಪ್ರವಾಸವನ್ನು ತನಗೆ ಬೆಂಗಳೂರಿನಲ್ಲಿ ಹೊಸದಾಗಿ ಸಿಕ್ಕ ಕೆಲಸಕ್ಕೆ ತಾನು ಕೊಡಿಸುವ ಟ್ರೀಟ್ ಎಂಬುದಾಗಿ ಹೇಳಿ ತನ್ನ ಉದಾರತೆ ಮೆರೆದ ರಾಜು. ನಾನು ಅದನ್ನು ಸ್ವೀಕರಿಸಲು ಒಪ್ಪದಕ್ಕೆ, ಚೆನ್ನೈನ ನನ್ನ ಕೆಲಸ ಬಿಟ್ಟು ಉದ್ಯೋಗಾನ್ವೇಷಣೆಯಲ್ಲಿ ತೊಡಗಿರುವ ನನಗೆ, 'ನಿನಗೆ ಒಳ್ಳೆಯ ಕೆಲಸ ಸಿಕ್ಕಿದ ಮೇಲೆ ನನಗೂ ಇದೇ ರೀತಿ ಟ್ರೀಟ್ ಕೊಡಿಸುವುದರ ಮೂಲಕ ಚುಕ್ತಾ ಮಾಡಿಕೋ ಮಾರಾಯ' ಎಂದ. ಆದಷ್ಟು ಬೇಗ ಆ ದಿನ ಬರಲಿ ಎಂದು ನಾನು ಆಯ್ತು ಮಾರಾಯ ಎಂದೆ.

Rating
No votes yet