ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು

ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು

'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು.

ಬೇಂದ್ರೆಯವರೇ ಹೇಳುವಂತೆ 'ಶಬ್ದ ಶ್ರುತಿಯಾದಾಗ, ಮಾತು ಕೃತಿಯಾದೀತು'. ಅವರು ಉಲಿದ ಒಂದೊಂದು ಶಬ್ದವೂ ಶ್ರುತಿಯಾದದ್ದರಿಂದಲೇ ಏನೋ ಅವರ ಮಾತೆಲ್ಲವೂ ಕೃತಿಯೇ ಆದವು. ಈಗಿನ ಪೀಳಿಗೆಯ ಪ್ರಮುಖ ಬರಹಗಾರರಲ್ಲೊಬ್ಬರಾದ ಭಾಷಾಶಾಸ್ತ್ರಜ್ಞ ಡಾ.ಕೆ.ವಿ.ತಿರುಮಲೇಶ್ ಬೇಂದ್ರೆಯವರ ಕಾವ್ಯಶೈಲಿ ಕುರಿತು ಬರೆದಿರುವ ಲೇಖನದಲ್ಲಿ ಗುರುತಿಸಿರುವಂತೆ, ಬೇಂದ್ರೆ ನಾದಬ್ರಹ್ಮನ ಉಪಾಸಕರು. ಕಾವ್ಯದಲ್ಲಿ ಅರ್ಥಕ್ಕಿಂತ ಭಾವವು, ತರ್ಕಕ್ಕಿಂತ ನಾದವು ಮುಖ್ಯವೆಂದು ನಂಬಿದವರು. ಆದ್ದರಿಂದಲೇ ಏನೋ ಅವರಿಗೆ ನಾದಬ್ರಹ್ಮನೆಂಬ ಹೆಸರೂ ಇದೆ.

ಒಂದೆಡೆ ಅವರೇ ಹೇಳುವಂತೆ, 'ಗೀತದೊಳಗಿನ ಬಲವು ಯಾತರೊಳಗೂ ಇಲ್ಲ' ಎಂಬುದು ಅವರ ಕಾವ್ಯಧರ್ಮದ ಒಂದು ಎಳೆಯನ್ನು ನಮಗೆ ತಿಳಿಸಿಕೊಡುತ್ತದೆ. ಏಕೆಂದರೆ, ಬೇಂದ್ರೆಯವರ ಪದ್ಯಗಳು ಕೇವಲ ಪದ್ಯಗಳಲ್ಲ. ಅವು ಗೀತೆಗಳು. ಆ ಗೀತೆಗಳಲ್ಲಿನ ಬಲವು ಇನ್ನಾತರಲ್ಲೂ ಬರಲಿಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ, ಅವರು 14 ರಂಗಭೂಮಿ ನಾಟಕ ಹಾಗೂ 11 ಬಾನುಲಿ ರೂಪಕ ಕೂಡಿ ಒಟ್ಟು 25 ನಾಟಕಗಳು, ಕಥಾ ಸಂಕಲನ, ವಿಚಾರ ವಿಮರ್ಶೆ, ಕಾಳಿದಾಸನ ಮೇಘದೂತದ ಕನ್ನಡೀಕರಣ, ಶ್ರೀಅರವಿಂದರು, ಕಬೀರರು, ಗುರುಗೋವಿಂದ್ ಸಿಂಗ್, ರವೀಂದ್ರನಾಥ ಟಾಗೋರರರ ನೂರೊಂದು ಕವನಗಳ ಅನುವಾದ, ಅವರ ತಾಯಿಭಾಷೆ ಮರಾಠಿಯಲ್ಲೂ ಸೃಷ್ಟಿಶೀಲ ಸಾಹಿತ್ಯಕೃಷಿ ಮಾಡಿದ್ದರೂ, ಬೇಂದ್ರೆ ಎಂದಾಕ್ಷಣ ಯಾರಿಗೇ ಆಗಲಿ ಥಟ್ಟನೆ ನೆನಪಾಗುವುದು ಅವರ ಗೀತೆಗಳು.

'ಬೆಂದರೆ ಬೇಂದ್ರೆಯಾದಾನು' ಎಂದು ತನ್ನ ಬಗ್ಗೆ ಹೇಳಿಕೊಳ್ಳುತ್ತಿದ್ದ ಬೇಂದ್ರೆ, ಬದುಕಿನಲ್ಲಿ ಅವರು ಅನುಭವಿಸಿದ ನೋವು ನಲಿವು, ದುಃಖ ದುಮ್ಮಾನಗಳೇ ಗೀತೆಗಳಾಗಿ ಹೊರಹೊಮ್ಮಿವೆಯೇನೋ ಎಂದೆನಿಸುತ್ತೆ.

'Mine is but a flower's wish to leave some seeds behind' ಎಂದು ತಮ್ಮ ಕಾವ್ಯಧೋರಣೆಯ ಕುರಿತು ಹೇಳಿರುವ ಬೇಂದ್ರೆಯವರ ಗೀತೆಗಳು ಕನ್ನಡ ನೆಲದಲ್ಲಿ ಅವರು ಬಿತ್ತಿರುವ ಕಾವ್ಯ ಬೀಜಗಳು. ಆ ಬೀಜಗಳು ಸಸಿಗಳಾಗಿ, ಹೂವಾಗಿ, ಕಾಯಾಗಿ ಇಂದು ಇಡೀ ಕನ್ನಡ ಕಾವ್ಯಭೂಮಿಗೆ ನೆರಳು ನೀಡುವ ಬೃಹತ್ ವೃಕ್ಷಗಳಾಗಿ ನಿಂತಿವೆ.

"ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಒಂದು ಸಜೀವ ವಿಕಾಸ ಪ್ರಕ್ರಿಯೆ, ಅದಕ್ಕೆ ಶತಮಾನಗಳೂ ಬೇಕಾಗಬಹುದು. ನನ್ನನ್ನು ಪೂರ್ತಿ ಅರ್ಥ ಮಾಡಿಕೊಳ್ಳುವುದು ಭವಿಷ್ಯತ್ತಿನಲ್ಲಿದೆ" ಎಂದು ನಂಬಿದ್ದ ಬೇಂದ್ರೆಯವರನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯು ಕನ್ನಡ ನವೋದಯದ ಮತ್ತೊಬ್ಬ ಅನರ್ಘ್ಯ ರತ್ನ, ಜ್ಞಾನಪೀಠ ಮಾಸ್ತಿ ವೆಂಕಟೇಶ ಅಯ್ಯಂಗಾರರಿಂದ ಆರಂಭವಾಗಿ, ವಿ.ಕೃ.ಗೋಕಾಕ, ರಂ.ಶ್ರೀ.ಮುಗಳಿ, ಎನ್.ಕೆ.ಕುಲಕರ್ಣಿ, ಸಿಂಪಿ ಲಿಂಗಣ್ಣ, ಗೌರೀಶ ಕಾಯ್ಕಿಣಿ, ರಂ.ಶ್ರೀ.ಮುಗಳಿ, ಗೋಪಾಲಕೃಷ್ಣ ಅಡಿಗ, ಕೀರ್ತಿನಾಥ ಕುರ್ತುಕೋಟಿ, ಶಂಕರ ಮೊಕಾಶಿ ಪುಣೇಕರ, ವಾಮನ ಬೇಂದ್ರೆ, ಕೆ.ರಾಘವೇಂದ್ರರಾವ್, ಸುಮತೀಂದ್ರ ನಾಡಿಗ, ಡಿ.ಆರ್.ನಾಗರಾಜ್ ಮೊದಲಾದವರು ಬೇಂದ್ರೆ ಸಾಹಿತ್ಯವನ್ನು ಗಂಭೀರ ವಿಮರ್ಶೆಗೆ ಒಳಪಡಿಸಿ ಮಹತ್ವದ ಒಳನೋಟಗಳನ್ನು ನೀಡಿದ್ದಾರೆಂದು ಅವರೆಲ್ಲರನ್ನೂ ಕೃತಜ್ಞತಾಪೂರ್ವಕವಾಗಿ ನೆನೆಯುವುದಾಗಿ ಹೇಳುತ್ತಾರೆ ಬೇಂದ್ರೆ ಸಾಹಿತ್ಯದ ಸಮಗ್ರ ಸಮೀಕ್ಷಾ ಕಾರ್ಯವನ್ನು 'ಭುವನದ ಭಾಗ್ಯ'ದ ಮೂಲತ ಮೌಲಿಕವಾಗಿ ಕನ್ನಡಕ್ಕೆ ಕಟ್ಟಿಕೊಟ್ಟಿದ್ದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಭಾಜನರಾದ ಕನ್ನಡದ ಅತ್ಯಂತ ಪ್ರಮುಖ ವಿಮರ್ಶಕರಾದ ಜಿ.ಎಸ್.ಅಮೂರ.

ಈ ಪೀಳಿಗೆಯ ಪ್ರಮುಖ ವಿಮರ್ಶಕರು ಹಾಗೂ ಸಾಹಿತಿಗಳೂ ಆದ ಕೆ.ವಿ.ನಾರಾಯಣ, ಬಸವರಾಜ ಕಲ್ಗುಡಿ, ಕೆ.ವಿ.ತಿರುಮಲೇಶ್, ರಾಜೇಂದ್ರ ಚೆನ್ನಿ, ಎಚ್.ಎಸ್.ವೆಂಕಟೇಶಮೂರ್ತಿಯಂತಹವರು ಬೇಂದ್ರೆ ಸಾಹಿತ್ಯದ ಅಧ್ಯಯನವನ್ನು ಮುಂದುವರಿಸುವುದರ ಮೂಲಕ ಹೊಸ ಹೊಸ ಒಳನೋಟಗಳನ್ನು ನೀಡುತ್ತಾ, ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಸುತ್ತ 'ಸಜೀವ ವಿಕಾಸ ಪ್ರಕ್ರಿಯೆ'ಯನ್ನು ಜೀವಂತವಾಗಿರಿಸಿದ್ದಾರೆ. ಈ ಕುರಿತು ಬೇಂದ್ರೆಯವರ ಕುರಿತ ಮುಂದಿನ ಲೇಖನದಲ್ಲಿ ಸವಿಸ್ತಾರವಾಗಿ ಬರೆಯುವೆನೆಂದು ಹೇಳುವುದರೊಂದಿಗೆ ಜನವರಿ 31ರಂದು 'ನಾದಬ್ರಹ್ಮೋಪಾಸಕ' ಬೇಂದ್ರೆಯವರು ಈ ಭೂಮಿಗೆ ಕಾಲಿಟ್ಟು 112 ವರ್ಷ ತುಂಬಿದ ಹಿನ್ನೆಲೆಯಲ್ಲಿ ತಡವಾಗಿ ಅವರಿಗರ್ಪಿಸುತ್ತಿದ್ದೇನೆ ಈ ನುಡಿನಮನ.

ಅಂದು -
'ಆ ಮಾವಿನೊಳಗ ಈ ಸುಗ್ಗಿಯೊಳಗ ಬಂದSದ ಕೋಗಿಲೊಂದು
ತನ್ನ ಜೋಡಿ ಕರೆದ್ಹಾಂಗ ಕರೀತದ ನನ್ನ ಬಾರSಯೆಂದು'
ಎಂದು ಹಾಡುತ್ತಾ ಹೊರಟೇ ಹೋದರು ಅಂಬಿಕಾತನಯದತ್ತರು.

ಇಂದು ನಾವು -
ನಿಮ್ಮ ಕಾವ್ಯದ ಬೆಳಕಿನಲ್ಲಿ ಜಗಕೆ ಬೇರೆ ಬಣ್ಣವು
ಬರಲು, ನಮ್ಮ ಕಿವಿಗಳು ಬೇರೆ ಉಣಿಸನುಣ್ಣವು...
ಎಂದು ಹಾಡಿಕೊಳ್ಳುವುದರ ಮೂಲಕ ಅವರ ಗೀತೆಗಳಿಂದ ಬಲವನ್ನು ಪಡೆದುಕೊಳ್ಳಬೇಕಿದೆ.

Rating
No votes yet