ಏನು?, ಏಕೆ?, ಹೇಗೆ?

ಏನು?, ಏಕೆ?, ಹೇಗೆ?

ಏನು ಮಾಡ್ತಿವಿ ಅನ್ನೋದು ಹೆಚ್ಚಿಂದಾ? ಇಲ್ಲ ಹೇಗೆ ಮಾಡ್ತಿವಿ ಅನ್ನೋದಾ? ಹೆಚ್ಚಿನವರು ಏನು ಮಾಡ್ತಿವಿ ಅನ್ನುವದೇ ಮೇಲು ಅಂತೀವಿ. ಆದರೆ ಹೇಗೆ ಮಾಡ್ತಿವಿ ಅನ್ನೋದೇ ಹೆಚ್ಚು ಮೇಲು ಅಂತನ್ಸುತ್ತೆ. ಒಬ್ಬ ಒಳ್ಳೇ ನಟ ಎಂತ ಡಬ್ಬಾ ಸಿನಿಮಾವನ್ನೂ ಒಳ್ಳೇ ನಟನೆಯಿಂದ ಗೆಲ್ಲಿಸಬಲ್ಲ. ಒಂದು ಮಾಮೂಲಿ ಕೆಲ್ಸಾನೂ ಆಸ್ತೆ ಇಟ್ಟು, ಅಗದೀ ಮನಸ್ಸಿಂದ ಮಾಡಿದ್ರ ಅದು ಎಲ್ಲರಿಗೂ ಮೆಚ್ಚಿಗೆ ಆಕ್ಕೈತಿ. ದೊಡ್ಡ ದೊಡ್ಡ ಕೆಲ್ಸಾನೇ ಮಾಡಬೇಕು ಅಂತ ಸಣ್ಣ ಕೆಲಸಗಳನ್ನು ಕಡೆಗಣಿಸಿ ನೋಡೋರಿದಾರೆ. ಅಯ್ಯೋ ನಾನ್ ಏನೋ ಆಗಬೇಕು ಅನ್ಕೊಂಡೋನು ಏನೋ ಆದ್ನಲ್ಲಾ ಅಂತಾ, ಮಾಡ್ತಿರೋ ಕೆಲ್ಸಾನ ಸರಿಯಾಗ್ ಮಾಡ್ದೇ, ಹರುಕು ಮುರುಕು ಮಾಡಿ ಕುಳ್ಳಿಸ್ತಾರೆ. ಅಕ್ಕ-ಪಕ್ಕ ಎರಡು ಹೋಟೇಲ್ ಇರ್ತಾವೆ, ಒಂದರಲ್ಲಿ ಗಿಜಿ-ಗಿಜಿ ಮಂದಿ, ಇನ್ನೊಂದರಲ್ಲಿ ಕಾಲಿ ಕಾಲಿ. ಯಾಕಂದ್ರೆ ಒಬ್ಬ ಚೆನ್ನಾಗಿ ಮಾಡ್ತಾನೆ, ಇನ್ನೊಬ್ಬ ಮಾಡ್ತಿಲ್ಲ.

ಇಂದಿನ ದಿನಗಳಲ್ಲಿ ಹಣಾನೇ ಮೇಲು, ಯಾವುದರಲ್ಲಿ ಹೆಚ್ಚಿಗೆ ಹಣ ಬರುತ್ತೋ ಆ ಕೆಲಸಾನೇ ಮೇಲು. ಆದರೆ ಮಾಡೋ ಕೆಲಸವನ್ನು ಒಲುಮೆಯಿಂದ ಮಾಡದೇ ಹೋದಲ್ಲಿ ಅದರಲ್ಲಿ ನಮಗೆ ಅಂದುಕೊಂಡಂತೆ ಲಾಬ ಬರೋದಿಲ್ಲ ಅಲ್ಲದೇ ಬೇಸರ, (ಬ್ರಮ ನಿರಸನ) ಆಗಿ ಅದನ್ನು ಅಲ್ಲಿಗೇ ಬಿಟ್ಟು ಬಿಡುತ್ತೇವೆ. ಅದೇ ಮಾಮೂಲಿಯಲ್ಲಿ ಮಾಮೂಲಿ ಕೆಲಸವಾದರೂ ಒಲುಮೆಯಿಂದ ಮಾಡಿಕೊಂಡು ಹೋದಲ್ಲಿ ಅದೇ ಕೆಲಸವನ್ನು ಹಾಗೇ ಬೆಳೆಸಿಕೊಂಡು ಹೋಗಲಾದೀತಲ್ಲದೇ ಒಳ್ಳೇ ಗಳಿಕೆ ಹೊಂದಲಾದೀತು.

ಯಾವುದೇ ದೊಡ್ಡ ಕೆಲಸ ಒಂದು ಸಣ್ಣ ಕಿಡಿಯಿಂದಲೇ ಮೊದಲಾಗೋದು. ಕಾಳ್ಗಿಚ್ಚು ಹೊತ್ತಿಕೊಳ್ಳೋದು ಮೊದಲು ಒಂದು ಸಣ್ಣ ಕಿಡಿಯಿಂದಲೇ ಅಲ್ಲವೇ? ಇನ್ಫೋಸಿಸ್ ತಗೋಳಿ, ಎಚ್.ಪಿ.ಯಂತ ದೊಡ್ಡ ದೊಡ್ಡ ಕಂಪನಿಗಳು ಮೊದಲು ಹುಟ್ಟಿಕೊಂಡಿದ್ದು ಅಗದೀ ಸಣ್ಣ ಅಳತೆಯಲ್ಲಿಯೇ. ಎಚ್.ಪಿ. ಮೊದಲು ತೆರೆದದ್ದು ಒಂದು ಗ್ಯಾರೇಜಿನಲ್ಲಿ. ಅದಕ್ಕೇ ನಾವು ಏನ್ ಮಾಡ್ತಿವಿ ಅನ್ನುವದಕ್ಕಿಂತ ಹೇಗ್ ಮಾಡ್ತಿವಿ ಅನ್ನುವದು ಮೇಲು, ಇಂಪಾರ್ಟಂಟ್, ಮುಕ್ಯ.

Rating
No votes yet