ವಾಪಸ್ ಕೊಡಬೇಕಿಲ್ಲದ ಸಾಲದ ಯೋಜನೆ-ರಿವರ್ಸ್ ಮಾರ್ಟ್‍ಗೇಜ್ ಲೋನ್

ವಾಪಸ್ ಕೊಡಬೇಕಿಲ್ಲದ ಸಾಲದ ಯೋಜನೆ-ರಿವರ್ಸ್ ಮಾರ್ಟ್‍ಗೇಜ್ ಲೋನ್

ರಿವರ್ಸ್ ಮಾರ್ಟ್‍ಗೇಜ್ ಲೋನ್ ಬಗ್ಗೆ ನಿಮಗೆ ಗೊತ್ತೇ ? ಈ ಯೋಜನೆ ವಿದೇಶಗಳಲ್ಲಿತ್ತು . ಈವರೆಗೆ ನಮ್ಮಲ್ಲಿ ಇರಲಿಲ್ಲ . ಈಗ ನಮ್ಮಲ್ಲೂ ಬಂದಿದೆ . ಮುಪ್ಪಿನಲ್ಲಿ ಜನಕ್ಕೆ ಆರ್ಥಿಕ ಭದ್ರತೆ ಒದಗಿಸಲು ಸರಕಾರ ಮತ್ತು ಬ್ಯಾಂಕುಗಳು ಇದನ್ನು ಭಾರತದಲ್ಲಿ ಜಾರಿಗೆ ತಂದಿವೆ. ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ .

ಹೀಗೊಂದು ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ . ಮುಪ್ಪಿನ ಮುದುಕ ಅಥವಾ ಮುದುಕಿಗೆ ಹಣದ ಅಗತ್ಯ ಇದೆ. ಅವರಿಗೆ ಆದಾಯ ಇಲ್ಲವೇ ಇಲ್ಲ ; ಅಥವಾ ಕಡಿಮೆ. ವೈದ್ಯಕೀಯ ಖರ್ಚಿಗೋ , ಅಥವಾ ದಿನನಿತ್ಯದ ಹೊಟ್ಟೆಬಟ್ಟೆಗೋ ಅಥವಾ ಇನ್ನೇತಕ್ಕೋ ದುಡ್ಡು ಬೇಕಾಗಿದೆ. ಅವರಿಗೆ ಮಕ್ಕಳು ಇಲ್ಲ , ಅಥವಾ ಇದ್ದ ಮಕ್ಕಳು ಹಣ ಕೊಡುವದಿಲ್ಲ. ಆದರೆ ಅವರಿಗೆ ಸ್ವಂತ ಮನೆ ಇದೆ , ಅದರಲ್ಲೇ ಈಗ ಇರೋದು. ಅದನ್ನು ಮಾರಬಹುದು ಅಥವಾ ಬಾಡಿಗೆಗೆ ಕೊಡಬಹುದು , ಆದರೆ ಅವರು ಎಲ್ಲಿ ಇರಬೇಕು?

ಇಂಥ ಒಂದು ಪರಿಸ್ಥಿತಿಯಲ್ಲಿ ಅವರಿಗೆ ಈ ಹೊಸ ಯೋಜನೆಯಿಂದ ಸಹಾಯ ಖಂಡಿತ ಆಗುತ್ತದೆ.
ಈ ಸಾಲವನ್ನು ಬ್ಯಾಂಕುಗಳು , ಎಚ್. ಡಿ. ಎಫ್. ಸಿ. ಯಂಥ ಸಂಸ್ಥೆಗಳು ಕೊಡುತ್ತವೆ. ಇದರ ಮುಖ್ಯಾಂಶಗಳು ಹೀಗೆ .
೧) ಈ ಸಾಲ ತೆಗೆದುಕೊಳ್ಳುವವರಿಗೆ ಅರವತ್ತೆರಡಕ್ಕಿಂತ ಹೆಚ್ಚು ವಯಸ್ಸಾಗಿರಬೇಕು .( ಹೆಚ್ಚು ವಯಸ್ಸಾದಂತೆ ಹೆಚ್ಚು ಸಾಲ ಸಿಗುತ್ತದೆ )
೨) ಈ ಸಾಲಕ್ಕೆ ಮನೆಯನ್ನೆ ಬ್ಯಾಂಕಿಗೆ ಒತ್ತೆ ಹಾಕಬೇಕಾಗುತ್ತದೆ . ( ಇಕ್ವಿಟೇಬಲ್ ಮಾರ್ಟ್‍ಗೇಜ್ ಮಾಡಬೇಕು)
೩) ಸಾಲಗಾರನಿಗೆ ಅವನ ಆಯ್ಕೆಯಂತೆ , ಬೇಕೆಂದರೆ ಒಂದೇ ಕಂತಿನಲ್ಲಿ , ಅಥವಾ ಪ್ರತೀ ತಿಂಗಳೂ ಮುಂದಿನ ೧೫ ವರ್ಷದ ವರೆಗೆ ಸಾಲವನ್ನು ಕಂತಿನಲ್ಲಿ ಬ್ಯಾಂಕ್ ಕೊಡುವದು , ಪೆನ್ಶನ್ನಿನ ಹಾಗೆ.( ಹತ್ತು ಲಕ್ಷದ ಮನೆ ಇದ್ದರೆ ಸುಮಾರು ಎರಡು ಸಾವಿರ ಪ್ರತಿ ತಿಂಗಳು , ಹದಿನೈದು ವರ್ಷಕಾಲ ಸಿಗುವದು, ಒಂದೇ ಗಂಟಿನಲ್ಲಿ ಬೇಕು ಎಂದಾದರೆ ಎರಡು ಲಕ್ಷ ಸಿಕ್ಕೀತು )
೩) ಬ್ಯಾಂಕಿಗೆ ಒತ್ತೆ ಹಾಕಿದ ಮನೆಯಲ್ಲಿ ಸಾಲಗಾರ ತಾನು ಬದುಕಿರುವವರೆಗೆ ಆ ನಂತರ ಆ ವ್ಯಕ್ತಿಯ ಗಂಡ/ಹೆಂಡತಿ (spouse) ಬದುಕಿರುವವರೆಗೆ ಆ ಮನೆಯಲ್ಲಿ ಇರಬಹುದು.
೪) ಸಾಲ ಅಥವಾ ಬಡ್ಡಿಯನ್ನು ಕೊಡಲು ಅವರ ಮೇಲೆ ಯಾವದೇ ಒತ್ತಾಯ ಇರುವದಿಲ್ಲ. ಸಾಲ ಮರುಪಾವತಿ ಮಾಡಬಹುದು ಅಥವಾ ಮಾಡದೆ ಇರಬಹುದು.
೫) ಮತ್ತೆ ಸಾಲದ ಮರುಪಾವತಿ ಹೇಗೆ ಅಂತ ಕೇಳಿದಿರಾ ? ಸಾಲಗಾರ ಮತ್ತು ಆ ವ್ಯಕ್ತಿಯ ಗಂಡ/ಹೆಂಡತಿ ತೀರಿದ ಬಳಿಕ ಬ್ಯಾಂಕ್ ಮನೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ . ವಾರಸುದಾರರು ಬ್ಯಾಂಕಿಗೆ ಸಾಲವನ್ನು ತುಂಬಿ ಮನೆಯನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಬಹುದು . ಒಂದುವೇಳೆ ಹಾಗೆ ತುಂಬದಿದ್ದಲ್ಲಿ ಬ್ಯಾಂಕ್ ಮನೆಯನ್ನು ಮಾರಿ , ತನ್ನ ಸಾಲವನ್ನು ತೀರಿಸಿಕೊಳ್ಳುವದು . ಹೆಚ್ಚಿನ ಹಣವನ್ನು ವಾರಸುದಾರರು ಪಡೆದುಕೊಳ್ಳಬಹುದು.

ಯೋಚಿಸಿನೋಡಿ. ಯೋಜನೆ ಚೆನ್ನಾಗಿದೆ , ಅಲ್ಲವೇ ? ಇಳಿಗಾಲದಲ್ಲಿ ಜನರ ಆರ್ಥಿಕ ಭದ್ರತೆಗೆಂದು ಸರಕಾರ ಬಜೆಟ್ಟಿನಲ್ಲಿ ಒಂದೆರಡು ವರ್ಷದ ಹಿಂದೆ ಈ ಸಾಲದ ಬಗ್ಗೆ ಪ್ರಸ್ತಾಪ ಮಾಡಿತ್ತು . ಈಗ ಜಾರಿಗೆ ಬಂದಿದೆ.

ಮಾಮೂಲಾಗಿ ಮನೆಸಾಲದಲ್ಲಿ ಸಾಲಗಾರನು ಮನೆಯನ್ನು ಒತ್ತೆ ಹಾಕಿ, ಬ್ಯಾಂಕಿನಿಂದ ಒಂದೇ ಕಂತಿನಲ್ಲಿ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆದು , ಸಣ್ಣ ಮೊತ್ತದ ನಿಯಮಿತ ಕಂತುಗಳಲ್ಲಿ ಹಣವನ್ನು ಮುಟ್ಟಿಸುವನು . ಆದರೆ ಈ ಯೋಜನೆಯಲ್ಲಿ , ಬ್ಯಾಂಕೇ ಕಂತುಗಳಲ್ಲಿ ಹಣ ಕೊಡುತ್ತ ಹೋಗುವದು . ಕೊನೆಯಲ್ಲಿ ಒಂದೇ ಕಂತಿನಲ್ಲಿ ತನ್ನ ಹಣ ಪಡೆಯುವದು , ಹೀಗಾಗಿ ಈ ಸಾಲಕ್ಕೆ - ರಿವರ್ಸ್ ಮಾರ್ಟ್‍ಗೇಜ್ - ಉಲ್ಟಾ ಒತ್ತೆ ಸಾಲ ಅಂತ ಹೆಸರು.

ಇಂಥ ಸಾಲದ ವಿಷಯ ನಿಮಗೆ ಗೊತ್ತಿರಲಿ.

Rating
No votes yet