ಬಾಲ್ಯ ಸೊಗಸು...

ಬಾಲ್ಯ ಸೊಗಸು...

ಬರಹ

ಕನಸುಕಂಡ ಮನೆ, ಬಂಗಲೆ, ಕಾರು, ಆಸೆ ಪಟ್ಟಿದೆಲ್ಲ ಅಂಗೈಯಲ್ಲಿ, ಅಂದುಕೊಂಡಿದೆಲ್ಲ ಕಣ್ಮುಂದೆ, ಚಂದ್ರ-ನಕ್ಷತ್ರಗಳನ್ನೆ ಕೊಂಡು ಮನೆಯಲ್ಲಿ ತಂದಿಡುವಷ್ಟು ಸಂಪತ್ತು. ಆಹಾ... ಕಲ್ಪನೆಗೆ, ಆಸೆಗೆ ಮಿತಿಯೇ ಇಲ್ಲ, ಮನಸ್ಸು ಮಾಡಿದರೆ ಕೂತಕಡೆಯೇ ಅಂದುಕೊಂಡಿದ್ದನ್ನೆಲ್ಲ ತಿಂದು, ನೋಡಿ ಬರುವಂತಹ ಮನಸ್ಸು, ಇದು ಕ್ಷಣಿಕ ಸುಖ. ನಾವಿರೊತನಕ ಹಸಿಯಾಗಿ, ಸವಿಯಾಗಿ, ಸಿಹಿಯನ್ನು ಚಪ್ಪರಿಸೊಹಾಗೆ ಅನುಭವ ತರುವುದು ’ಬಾಲ್ಯ’. ಪ್ರತಿಯೊಬ್ಬರು ಈ ’ಬಾಲ್ಯ’ ಅನ್ನೊ ಹಂತ ದಾಟಿ ಬಂದಿರುತ್ತಾರೆ. ಈ ಬಾಲ್ಯದ ದಿನಗಳು, ನೆನಪುಗಳು, ಸ್ನೇಹಿತರು, ಪ್ರೀತಿ, ಪ್ರೇಮ, ವಾತ್ಸಲ್ಯ ಎಲ್ಲವು ಮಧುರ.

ಬಾಲ್ಯದಲ್ಲಿ ಮೊದಲ ಸ್ನೇಹ, ಬಾಂಧವ್ಯ "ಅಮ್ಮ", ಅವಳ ಮಮತೆ, ಕರುಣೆ, ಪ್ರೀತಿ, ಪ್ರೇಮ ತೀರಿಸಲಾಗದ, ತೀರಿಸಲು ಯೋಚಿಸಲಾಗದಷ್ಟು ದೊಡ್ಡದು. ಅತ್ತಾಗೆಲ್ಲ ಲಾಲಿ ಹಾಡು, ಹಸಿವು ಅಂದಾಗ ಮಮತೆಯ ಹಾಲು, ಎತ್ತಿಕೊಂಡು ಮುದ್ದಾಡುವ ಆ ನಿಚ್ಚಳ ಪ್ರೀತಿ ಮರೆಯಲು ಸಾಧ್ಯವೆ...? ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು, ಮೂರು ವರ್ಷಗಳ ಕಾಲ ಮನೆಯ ಆಟ-ಪಾಠವಾದನಂತರ ಎರಡನೆಯ ಶಾಲೆಯ ಪ್ರವೇಶ, ಹೊಸ ಅನುಭವ ಮುಗ್ಧ ಮನಸ್ಸುಗಳ ಮಿಲನ, ಜೊತೆಗಿನ ಆಟ-ಪಾಠ. ಅಸೂಯೆ ಎಂಬ ಪದವೂ ಕಿವಿಗೆ ಬೀಳದಂತ ವಯಸ್ಸು, ಮುಗ್ಧತೆ, ಪ್ರೀತಿ, ಕೈಯ ತೋರಿ ನಗಿಸಿ ಪ್ರೀತಿಯಿಂದ ಬಾ ಎಂದು ಕರೆದರೆ ಸಾಕು ಹೂವನಗುವಿನೊಂದಿಗೆ ಅವರ ಮಡಿಲು ಸೇರುವುದು. ಮೊದಮೊದಲ ತೊದಲ ಮಾತು ಅಮ್ಮ ಎಂದಾಕ್ಷಣ ಅಮ್ಮನ ಮೊಗದೀ ಸಂತೋಷ ಕಂಡು ಹೂವಿನಂತೆ ಅರಳುವ ಕಂದಮ್ಮನ ಮುಖ. ತೊದಲುತ ಪಾಠ ಕಲಿಕೆ, ಸ್ನೇಹಕ್ಕೆ, ಪ್ರೀತಿಗೆ ಅರ್ಥ ತಿಳಿಯದೆ, ಅದನ್ನು ಬರೆಯಲು ಕೂಡ ಬಾರದೆ, ಬರೀ ಪುಟ್ಟ ಕಣ್ಣುಗಳಿಂದ ಪರಸ್ಪರ ಹಂಚಿಕೊಳ್ಳುತ್ತ, ಪುಟ್ಟಪುಟ್ಟ ಹೆಜ್ಜೆಹಾಕುತ್ತ, ಪುಟ್ಟ ಕೈಯಿಗಳಿಂದ ಸ್ಪರ್ಶದೀ ಬೆಳೆಯುವುದು, ಹೂವಿನಷ್ಟು ಸೂಕ್ಷ್ಮದ ಮನಸ್ಸುಗಳ ವಯಸ್ಸು.

ಮನೆಯ ತುಂಬಾ ಅಂಬೆಗಾಲು ಹಾಕುತ್ತ, ಕೈಯಿಗೆ ಸಿಕ್ಕಿದನ್ನು ಬಾಯಿಗೆ ಹಾಕಿಕೊಂಡು , ಪ್ರಪಂಚವನ್ನು ಮರೆತು ಆಟವಾಡುತ್ತ, ನಮ್ಮನ್ನು ಆಟವಾಡಿಸಿ ನಗಿಸಿ ಖುಷಿಪಡಿಸುವ ಮನಸ್ಸುಗಳಿಗೆ ಮುಗ್ಧಮನಸ್ಸಿನ ಕಂದಮ್ಮನ ನಗು ಸಂತೊಷ ಪಡಿಸುವುದು. ಮೆಲ್ಲಗೆ ಗೊಡೆಯ ಆಧಾರದೀ ಪುಟ್ಟಪುಟ್ಟ ಹೆಜ್ಜೆಹಾಕುತ್ತ ಅಂಬೆಗಾಲಾಕುವುದನ್ನು ಮರೆಯುವುದು. ಹಾಗಂತ ಹುಟ್ಟಿದ ಮೇಲೆ ಬೆಳೆಯಬಾರದು ಅಂತ ಅಲ್ಲ, ದುಃಖ ತೋರುತ ಅದು ಸವಿನೆನಪಾಗಿರಲಿ ಎಂಬ ಭಾವನೆ. ಹೆಚ್ಚು ಆಟ, ಸ್ವಲ್ಪ ಪಾಠ, ಹೆಚ್ಚು ವಿಶ್ರಾಂತಿ, ಸ್ವಲ್ಪ ಶ್ರಮ, ಈ ರೀತಿಯ ಬಲು ಸೊಗಸಾದ ಜೀವನ ’ಬಾಲ್ಯ’. ಐದು-ಆರು ವರುಷ ಕಳೆದಂತೆ ’ಸೈಕಲ್’ ಕಲಿಕೆ, ಬಾಡಿಗಿಗೆ ಸೈಕಲ್ ಕೊಂಡು ಗಂಟೆಯ ಲೆಕ್ಕದಲ್ಲಿ ತಂದು ಕಲಿಯೋದು ಮೋಜು. ಸ್ವಂತ ಸೈಕಲ್ಲಿಗಿನ್ನ ಬಾಡಿಗೆಗೆ ಕೊಂಡು ಕಲಿಯೋದು ಚೆನ್ನ, ಏಕೆ...? ಅಂತ ಪ್ರಶ್ನೆ ತಲೆಯಲ್ಲಿ ಮೂಡುತ್ತಲ್ವ...? ಏಕೆಂದರೇ, ಸ್ವಂತ ಆದರೆ ಒಂದೆರಡು ದಿನ ಸೈಕಲ್ ನಡೆಸೊ ಹುಮ್ಮಸ್ಸು ಅಷ್ಟೆ ಆಮೇಲೆ ಸೋಮಾರಿತನ ಹುಟ್ಟುತ್ತೆ, ಇದು ನಮ್ಮ ಬಳಿಯೆ ಇರುವುದಲ್ಲ ಕಲಿತರಾಯ್ತು ಅಂತ.
ಬಾಡಿಗೆ ಸೈಕಲ್ಲಿನ ಮೊಜಿನ ಬಗ್ಗೆ ನನ್ನದೆ ಆದ ಒಂದು ಚಿಕ್ಕ ಸವಿನೆನಪನ್ನು ಹಂಚಿಕೊಳ್ತೀನಿ ನೀವು ಸ್ವಲ್ಪ ನಿಮ್ಮ ಹಳೆಯ ನೆನಪು ಮೆಲಕುಹಾಕುವರಂತೆ, " ಎಂದಿನಂತೆ ಶಾಲೆಯನ್ನು ಮುಗಿಸಿಕೊಂಡು ಬಂದ ಮೇಲೆ ಸೈಕಲ್ ನಡೆಸುವ ಆಸೆ, ಅಮ್ಮನ ಬಳಿ ಒಂದು ರೂಗಳಿಗೆ ಹಟಮಾಡಿ, ಒಂದು ಗಂಟೆಯ ಕಾಲಾವದಿಗೆ ಬಾಡಿಗೆಗೆ ಸೈಕಲ್ಲನ್ನು ಅಂಗಡಿಯಿಂದ ತುಂಬಾ ವೇಗವಾಗಿ ತಲ್ಲಿಕೊಂಡು ಬಂದು ಮನೆಯ ಮುಂದೆ ನಿಲ್ಲಿಸಿದೆ, ಅದನ್ನು ನಡೆಸಿಕೊಂಡು ಬಂದಿರಬೇಕು ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ ಆದಿತ್ತು.

ಸೈಕಲ್ ನಡೆಸಲು ಬಾರದ ನನ್ನ ಅವಸ್ಥೆ ನೋಡಿದ ಪಕ್ಕದ ಮನೆಯ ಶೈಲಜ ಎಂಬ ಅಕ್ಕ ನಾನು ಸೈಕಲ್ ನಡೆಸಲು ಸಹಾಯ ಮಾಡಿ, ಕೊನೆಗೂ ನಾನು ಸೈಕಲ್ ಕಲಿಯುವಂತೆ ಮಾಡಿದರು. ಇನ್ನೂ ಕಲಿತದ್ದು ಆಯ್ತು, ಸೈಕಲ್ ನಡೆಸೋದು ಬಿಡುವುದ್ದಕ್ಕಾಗುತ್ತ, ಬಾಡಿಗೆಗೆ ಕೊಳ್ಳೋದು, ಗಂಟೆಗಟ್ಟಲೆ ನಡೆಸೋದು ಇದೇ ದೈನಂದಿನ ಬದುಕು ಎಂಬಂತಾಗಿತ್ತು, ಅದರಲ್ಲೂ ಒಂದು ಸೈಕಲ್ ಬಹಳ ಇಷ್ಟವಾಗಿತ್ತು, ಹೋದಾಗೆಲ್ಲ ಆ ಸೈಕಲ್ಲನ್ನೆ ಕೊಳ್ಳುತ್ತಿದ್ದೆ. ಒಮ್ಮೆ ನಾ ಬಾಡಿಗೆ ಕೊಳ್ಳಲ್ಲು ಹೋದಾಗ ಆ ಪ್ರತ್ಯೇಕ ಸೈಕಲ್ ಸಿಗಲಿಲ್ಲ, ಬೇರೊಬ್ಬರು ಯಾರೋ ಕಲಿಕೆಗೆ ಕೊಂಡೋಗಿದ್ದರು. ಅವರ ಬಗ್ಗೆ ಅಂಗಡಿಯ ಮಾಲಿಕನ ಬಳಿ ವಿಚಾರಿಸಿ ಅವರು ಇನ್ನೊಂದು ಗಂಟೆಯೊಳಗೆ ಹಿಂದಿರುಗಿಸುವರು ಎಂಬುದನ್ನು ತಿಳಿದುಕೊಂಡು ಮನೆಗೆ ಹಿಂತಿರುಗುವಾಗ ಪಕ್ಕದ ರಸ್ತೆಯಲ್ಲೆ ಅದೇ ಸೈಕಲ್ಲಿನಲ್ಲಿ ಒಬ್ಬ ತಾತ ತನ್ನ ಮೊಮ್ಮಗನಿಗೆ ಕಲಿಸುತ್ತಿದ್ದನ್ನು ಕಂಡು
ಅವರನ್ನು ಮಾತನಾಡಿಸಿ ಅವರ ಅವಧಿ ಮುಗಿಯುವವರೆಗು ಅಲ್ಲೆ ಇದ್ದು, ಆಮೇಲೆ ಅದು ನನ್ನದೇ ಸೈಕಲ್ ಎಂಬ ಭಾವನೆಯೊಂದಿಗೆ ನಾನು ನಡೆಸಲು ಪ್ರಾರಂಭಿಸಿದೆ". ಇದು ಸಣ್ಣ ಸವಿಯಾದ ನೆನಪು.

ಇನ್ನೂ ಆಟಗಳಲ್ಲಿ ಗೋಲಿ, ಗಾಳಿಪಟ, ಕುಂಟೇಬಿಲ್ಲೆ, ಬುಗರಿ...ಹೀಗೆ ಯಾವ ಮುಜುಗರವು ಇಲ್ಲದೆ ಬೀದಿಯಲ್ಲಿ ಈ ಆಟಗಳನೆಲ್ಲ ಆಡಿದ್ದು ನೆನಪು. ಒಂದು ರೂಪಾಯಿಗೆ ಹತ್ತು ಗೋಲಿಗಳನ್ನು ತಂದು ಮೀಟರ್, ಗೇಣು...ಹೀಗೆ ವಿವಿಧ ರೀತಿಯ ಆಟಗಳಲ್ಲಿ ತಂದ ಗೋಲಿ ಜೊತೆ ಮತ್ತಷ್ಟು ಗೆಲ್ಲೋದು, ಹಾಗೆಯೆ ಸೋಲೋದು ಸಾಮಾನ್ಯವಾಗಿತ್ತು ಆ ಮುಗ್ಧವಯಸ್ಸಿನಲ್ಲಿ. ಗಾಳಿಪಟ ತಂದು ಅದಕ್ಕೆ ಮಾಂಜ ದಾರವೇ ಆಗಬೇಕು, ಬೇರೆಯವರ ಗಾಳಿಪಟಕ್ಕೆ ಜೋತು ಬೀಳಿಸಿ ಅವರ ಗಾಳಿಪಟದ ದಾರವನ್ನು ನಮ್ಮ ದಾರದ ಮೂಲಕ ಕತ್ತರಿಸಿ ಅವರ ಗಾಳಿಪಟವನ್ನು ಕೆಳಗೆ ಬೀಳಿಸಿ ಬೇರೆ ರಾಜ್ಯದ ರಾಜನ ಕಿರೀಟವನ್ನು ಬೀಳಿಸಿ ರಾಜ್ಯವನ್ನು ಗೆದ್ದಷ್ಟು ಖುಷಿ. ಬಣ್ಣಬಣ್ಣದ ಬುಗರಿ, ಅದಕ್ಕೊಪ್ಪುವ ಚಾವಟಿ, ಮೊಳೆಯನ್ನು ಬುಗರಿಗೆ ಒಡೆದು, ಸ್ನೇಹಿತರೊಡನೆ ಆಟದಲ್ಲಿ ನಮ್ಮ ಬುಗರಿಗೆ ಅವರ ಬುಗರಿಯಿಂದ ಅಥವಾ ಅವರ ಬುಗರಿಗೆ ನಮ್ಮ ಬುಗರಿಯಿಂದ ಗುನ್ನ ಇಟ್ಟು ಗೆಲ್ಲುವುದು, ಇನ್ನೂ ಕೆಲವು ಆಟಗಳಿವೆ ಅದರಲ್ಲಿ ಸೋತವರ ಬುಗರಿಯನ್ನು ಕಲ್ಲಿನಲ್ಲಿ ಒಡೆದುಹಾಕುವುದು, ಈ ಪರಿಯ ಮೋಜು ಈಗ ಬರೀ ನೆನಪು. ಏರೊಪ್ಲೇನ್ ಆಟವು ಖುಷಿ ತರುತಿತ್ತು, ’ಏನು ನಿಜವಾದ ಏರೊಪ್ಲೇನಲ್ಲಿ ಕುಳಿತು ಆಟವಾಡೊದು ಅಂದುಕೊಂಡ್ರ...ಛೆ...ಛೆ...! ಅಲ್ಲ , ಇದು ಏರೊಪ್ಲೇನಿನ ಕುಂಟೆಬಿಲ್ಲೆಯ ಮನೆ. ಇಟ್ಟಿಗೆ ಕಲ್ಲಿನಿಂದ ಬರೆದ ಈ ಎಂಟು ಮನೆಯಲ್ಲಿ, ಮೊದಲು ಬಚ್ಚವನ್ನು ಮೊದಲನೆಯ ಮನೆಗೆ
ಎಸೆದು ಮಿಕ್ಕ ಏಳು ಮನೆಯನ್ನು ಎರಡೆನೆಯ ಮನೆಯಿಂದ ಕುಂಟುತ್ತ ಹಾಗೆ ಹಿಂದಿರುಗಿ ಬಂದರೆ, ಒಂದು ಹಂತ ಮುಗಿಸುವಂತಾಗುವುದು.ಇದೇ ಪ್ರಕಾರ ಮುಂದಿನ ಹಂತವನ್ನು ಮುಗಿಸುವುದು. ಎಂಟು ಮನೆಗಳಲ್ಲಿ ಅಧಿಕ ಮನೆಗಳನ್ನು ಪಾಂಡಿ ಮಾಡಿದರೆ ಅಂದರೆ ನಮ್ಮದಾಗಿಸಿಕೊಂಡರೆ ನಾವು ಗೆದ್ದಹಾಗೆ. ಬಚ್ಚವನ್ನು ಮನೆಗಳನ್ನು ದಾಟುವಂತೆ ಎಸೆದು ತಲೆಯನ್ನು ಮೇಲೆತ್ತಿ ಆಕಾಶವನ್ನು ನೋಡುತ್ತ ’ರೈಟಾ ರೈಟಾ’ ಎಂದು ಸ್ನೇಹಿತನನ್ನು ಕೆಳುತ್ತ ಎಂಟುಮನೆಯನ್ನು ಕೂಡ ಸರಿಯಾದ ಹೆಜ್ಜೆ ಇಟ್ಟು ನಡೆಯಬೇಕು, ಅನಂತರ ಮನೆಯ ಮುಂದೆ ಉಲ್ಟಾ ಕುಳಿತುಕೊಂಡು ಬಚ್ಚವನ್ನು ಹಿಂದಕ್ಕೆ ಎಸೆದು ಅದು ಯಾವ ಮನೆಗೆ ಬೀಳುವುದೋ ಅದನ್ನು ’ಪಾಂಡಿ’ ಮಾಡುತ್ತೇವೆ, ಗೆರೆ ತುಳಿದರೆ ಔಟ್ ಆದಂತೆ.

ಹೀಗೆ, ನಮ್ಮದೆ ಆದ ಲೋಕದಲ್ಲಿ ಏನು ಅರಿಯದೆ, ಊಟ, ಆಟ, ಪಾಠ ಎಂದು ಬಾಲ್ಯವನ್ನು ತುಂಬ ಸೊಗಸಾಗಿ ಕಳೆಯುತ್ತೇವೆ. ಕೊನೆವರೆಗು ಬಾಲ್ಯವಿದ್ದರೆ ಎಷ್ಟು ಚೆನ್ನ ಅಲ್ವಾ, ಆಗ ಕೆಲಸ, ಯಾವ ಜವಬ್ದಾರಿ ಕೂಡ ಇರದೆ, ಯಾವುದೇ ಯೋಚನೆ ಇಲ್ಲದೆ, ನಿದ್ರೆ ಮಾಡಬೇಕೆಂದಾಗ ಮಲಗಿದ ಕ್ಷಣಗಳಲ್ಲಿ ನಿದ್ರಿಸುವುದು, ಬೆಲ್ಲದ ಸಿಹಿಯನ್ನು ಸವಿಯುವಹಾಗೆ ಬಾಲ್ಯವನ್ನು ಸವಿಯುತ್ತೇವೆ. ಕೊನೆವರೆಗೂ ಬಾಲ್ಯವಿದ್ದರೆ ತುಂಬಾ ಚೆನ್ನ, ಹೌದು, ಆದರೇ, ಸಸಿ ನೆಟ್ಟಮೇಲೆ ಅದು ಗಿಡವಾಗಿ, ಮರವಾಗಲೇ ಬೇಕು. ನಾವು ಬಾಲ್ಯವನ್ನು ದಾಟಿದರೆ ಮಾತ್ರ ಅದರ ಸವಿನೆನಪನ್ನು ಸವಿಯೋದಕ್ಕೆ ಸಾಧ್ಯ ಹಾಗೂ ಆ ಬಾಲ್ಯದಲ್ಲಿ ಕಲಿತ ವಿನಯ, ಭಯ-ಭಕ್ತಿ ಎಲ್ಲವು ನಮ್ಮಲ್ಲಿ ಉಳಿಯುತ್ತದೆ. ಬಾಲ್ಯದ ಸವಿನೆನಪನ್ನು ಸವಿಯುತ, ಕಲಿಕೆಯನ್ನು, ಅನುಭವವನ್ನು ದೊಡ್ಡವರಾಗ್ತ ನಮಗೆ ಗೊತಿಲ್ಲದ ಹಾಗೆ ಉಪಯೋಗಿಸುತ್ತ ನಡೆಯುತ್ತೇವೆ.

ಹೀಗೆ ಬಾಲ್ಯ ಸೊಗಸಾಗಿ ಸಾಗಿದೆ, ನಿಮ್ಮ ನೆನಪನ್ನು ಕೂಡ ಈಗ ತುಂಬಾ ಕೆದಕಿದೆ. ನೀವು ನಿಮ್ಮ ಬಾಲ್ಯದ ಪುಟಗಳನ್ನು ಮತ್ತೊಮ್ಮೆ ತಿರುಗಿಸುವಂತೆ ಮಾಡಿದ್ದರೆ ನನ್ನ ಈ ಪುಟ್ಟ ಪ್ರಯತ್ನ ಸಾರ್ಥಕ.
ಈ ಸುಂದರವಾದ ’ಬಾಲ್ಯ’ ಸದಾ ನೆನಪಿನಲ್ಲಿರಲಿ...

-ಸೋಮು...