ನಡೆದು ವಿದ್ಯುದುತ್ಪಾದನೆ!

ನಡೆದು ವಿದ್ಯುದುತ್ಪಾದನೆ!

ಬರಹ

(ಇ-ಲೋಕ-61)(13/2/2008)

 ಟ್ರೆಡ್‍ಮಿಲ್ ಯಂತ್ರದಲ್ಲಿ ನಡೆದಾಗ ವಿದ್ಯುತ್ಪಾದನೆ ಮಾಡುವ ಮಿನಿ ಜನರೇಟರು ಈಗ ಲಭ್ಯ.ಐದು ವ್ಯಾಟುಗಳಷ್ಟೇ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತದಾದರೂ,ಅದು ಸೆಲ್‍ಪೋನ್ ಚಾರ್ಜ್ ಮಾಡಲು ಬೇಕಾದ್ದಕ್ಕಿಂತ ಹೆಚ್ಚೇ ಆಯಿತು.ಹಾಗೆಯೇ ದೇಹದಲ್ಲಿಟ್ಟ ಇನ್ಸುಲಿನ್ ಯಂತ್ರವೋ ಬೇರೇ ಯಾವ ಯಂತ್ರವೋ ಕೆಲಸ ಮಾಡಲೂ ಇದು ಇಷ್ಟು ಶಕ್ತಿ ಸಾಕು.ವಿದ್ಯುಜ್ಜನಕ ಯಂತ್ರವನ್ನು ನಡೆಯವಾಗ ಮೊಣಕಾಲಿಗೆ ಕಟ್ಟಿಕೊಳ್ಳಬೇಕು.ಅಲ್ಲಿ ಉಂಟಾಗುವ ಚಲನೆಯ ಮೂಲಕ ವಿದ್ಯುಜ್ಜನಕ ವಿದ್ಯುದುತ್ಪಾದನೆ ಮಾಡುತ್ತದೆ.ತೀವ್ರಗತಿಯ ನಡಿಗೆಯ ಅಗತ್ಯವೂ ಇಲ್ಲ.ಗಂಟೆಗೆ ಮೂರು ಕಿಲೋಮೀಟರ್ ವೇಗ ಸಾಕಷ್ಟಾಯಿತು.ನಡಿಗೆಯ ಗತಿ ಹೆಚ್ಚಿಸಿದರೆ,ಹದಿನೈದು ವ್ಯಾಟ್ ಶಕ್ತಿ ಉತ್ಪಾದನೆ ಮಾಡಬಹುದು.ಓಡಿದಾಗ ವಿದ್ಯುಜ್ಜನಕ ಯಂತ್ರ ಐವತ್ತನಾಲ್ಕು ವ್ಯಾಟ್ ಶಕ್ತಿ ಉತ್ಪಾದನೆ ಮಾಡಿದ್ದು ಕಂಡು ಬಂತು.ಕೆನಡಾದ ಸೈಮನ್ ಫ್ರೇಸರ್ ವಿಶ್ವವಿದ್ಯಾಲಯದ ಸಂಶೋಧಕರು ಜನರೇಟರನ್ನು ತಯಾರಿಸಿದವರು.
ಅಂತರ್ಜಾಲ ಅಂತರ್ಧಾನ! 
 ಹೋದ ವಾರ ಕೇಬಲ್ ಕಡಿತದ ಸುದ್ದಿ ಪತ್ರಿಕೆಗಳಲ್ಲಿ ಪ್ರಚಾರ ಪಡೆದಿತ್ತು.ಇದರಿಂದ ಲಕ್ಷಾಂತರ ಜನರು ಅಂತರ್ಜಾಲ ಸೇವೆಯನ್ನು ಪಡೆಯುವಲ್ಲಿ ತೊಂದರೆಯಾಯಿತು.ಕೊಲ್ಲಿ ರಾಷ್ಟ್ರಗಳ ಸಮೀಪ ಎರಡು ಸಮುದ್ರದಡಿಯ ಕೇಬಲ್‍ಗಳು ಕಡಿದುವು.ಇವನ್ನು ರಿಪೇರಿ ಮಾಡಲು ಹೋದ ತಂಡಕ್ಕೆ ಕೇಬಲ್ ಕಡಿಯುವುದಕ್ಕೆ ಹಡಗಿನ ಲಂಗರೇ ಕಾರಣವೇನೋ ಎನ್ನುವ ಅನುಮಾನ ಬಂದಿದೆ.ಟನ್‍ಗಟ್ಟಲೆ ತೂಗುವ ಲಂಗರು ಕಡಿದ ಕೇಬಲ್‍ಗೆ ಸಿಕ್ಕಿ ಹಾಕಿಕೊಂಡದ್ದು ಒಂದೆಡೆ ಪತ್ತೆಯಾಯಿತು.ಉಳಿದಂತೆ ಮೂರು ಕೇಬಲ್ ಕಡಿದದ್ದಕ್ಕೆ ಕಾರಣ ಏನು ಎನ್ನುವುದು ಇನ್ನಷ್ಟೇ ಗೊತ್ತಾಗ ಬೇಕಿದೆ.ಈ ಸಮುದ್ರದಡಿಯ ಕೇಬಲ್‍ಗಳು ಫೈಬರ್ ಕೇಬಲ್‍ಗಳು.ಇವುಗಳ ಮೂಲಕ ಅಂತರ್ಜಾಲ ಸೇವೆಯೂ ಹಲವು ದೇಶಗಳಿಗೆ ಸಿಗುತ್ತಿತ್ತು.ಕಡಿದ ಕೇಬಲ್ ಕಾರಣ ಭಾರತವೂ ಬಾಧಿತವಾಯಿತು.
 ಸಮುದ್ರದಡಿಯಲ್ಲಿ ಹಾಕಲಾದ ಕೇಬಲ್ ಕಡಿಯುವುದು ಅಪರೂಪವೇನಲ್ಲ.ಇಂತಹ ಕಡಿದ ಕೇಬಲ್‍ಗಳನ್ನು ಕೂಡಿಸಲೆಂದೇ ಇಪ್ಪತ್ತರಷ್ಟು ಹಡಗುಗಳಲ್ಲಿ ಉಸ್ತುವಾರಿ ನೋಡುವವರ ತಂಡ ನೌಕಾಯಾನ ಮಾಡುತ್ತಿರುತ್ತದೆ.ಒಂದು ಕೇಬಲ್ ಕಡಿದರೆ,ಲಭ್ಯವಿರುವ ಇತರ ಮಾರ್ಗಗಳ ಮೂಲಕ ಅಂತರ್ಜಾಲ ಸೇವೆ ಅಬಾಧಿತವಾಗುವಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಸೇವೆ ನೀಡುವ ಕಂಪೆನಿಗಳವರು ಮಾಡುತ್ತಾರೆ.ಅಂತರ್ಜಾಲ ಸೇವೆಯನ್ನು ವಿಫಲಗೊಳಿಸಿ,ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಉದ್ದೇಶದಿಂದ ಭಯೋತ್ಪಾದಕರು ಇಂತಹ ಕೃತ್ಯಕ್ಕೆ ಕೈಹಾಕಿರಬಹುದು ಎಂಬ ಗುಮಾನಿ ಕೆಲವರದ್ದು.ಅಲ್‍ಖೈದಾ ಗುಂಪಿನ ಕೈವಾಡವನ್ನು ಶಂಕಿಸುವವರೂ ಇದ್ದಾರೆ.
ಸೌರಶಕ್ತಿ ಮೂಲಕ ಫ್ರಿಜ್
 ಫ್ರಿಜ್‍ನ ಹಿಂಬದಿ ಲೋಹ ನಳಿಕೆಗಳು ಇದ್ದರೆ,ಅವು ಫ್ರಿಜ್ಜಿನೊಳಗಿನ ಬಿಸಿಯನ್ನು ಹೊರಚೆಲ್ಲುತ್ತಾ ಬಿಸಿಯಾಗಿರುವುದನ್ನು ನಾವು ನೋಡಿದ್ದೇವೆ.ಶಾಖದ ಉಷ್ಣಶಕ್ತಿ ಬಳಸಿ,ಫ್ರಿಜ್ ಒಳಗೆ ತಂಪುಗೊಳಿಸುವ ವ್ಯವಸ್ಥೆ ಮಾಡುವುದು ಸಾಧ್ಯವೇ?ಈಗ ಸಂಶೋಧಕರು ಅತ್ತ ಗಮನ ಹರಿಸಿದ್ದಾರೆ.ಸೌರಶಕ್ತಿಯಿಂದ ವಿದ್ಯುಚ್ಛಕ್ತಿ ಉತ್ಪಾದಿಸಿ ಅದರ ಮೂಲಕ ಪ್ರ್‍ಇಜ್‍ನ ಕಂಪ್ರೆಸರ್ ನಡೆಸುವುದು ಒಂದು ಸಾಧ್ಯತೆ.ಹತ್ತೊಂಭತ್ತರ ದಶಕದಿಂದಲೂ ಅಮೊನಿಯಾ-ನೀರು ಬಳಸಿ,ಶಾಖದಿಂದ ತಂಪುಗೊಳಿಸುವ ವ್ಯವಸ್ಥೆ ಮಾಡುವ ಕ್ರಮದ ಬಗ್ಗೆ ಗೊತ್ತಿತ್ತು.ಈಗ ಅದನ್ನೇ ಬಳಸಿ,ಹೊಸ ನಮೂನೆ ಫ್ರಿಜ್ ತಯಾರಿಕೆಗೆ ಪ್ರಯತ್ನ ನಡೆದಿದೆ.ಮೊರಕ್ಕೋದಲ್ಲಿ ಜರ್ಮನಿ ವಿಜ್ಞಾನಿಗಳು ಮಾದರಿ ಫ್ರಿಜ್ ಅಭಿವೃದ್ಧಿಪಡಿಸಿದ್ದು, ಇದು ಓವನ್‍ನ ಬಿಸಿಯನ್ನು ಬಳಸಿ ಕೆಲಸ ಮಾಡುತ್ತದೆ.ಗ್ಲಾಡ್‍ಬೆತ್ ಎಂಬಲ್ಲಿ ಗ್ಯಾಸ್ ಟರ್ಬೈನ್ ಶಾಖ ಬಳಸಿಕೊಂಡು ಸಭಾಭವನವನ್ನು ತಂಪು ಮಾಡುವ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗಿದೆ.ತಂಪುಗೊಳಿಸುವ ವ್ಯವಸ್ಥೆ ಬಗೆಗಿನ ಸಂಶೋಧನೆಯೀಗ ಬಿಸಿಯೇರಿದೆ!
ಜಾಣ ಹಾಸಿಗೆ ಹೀಗಿದೆ!
 ಬರೇ ಹಾಸಿಗೆಗೆ ಇಪ್ಪತ್ತರಿಂದ ಐವತ್ತು ಸಾವಿರ ಡಾಲರು ತೆರಲು ನೀವು ಸಿದ್ಧರಿದ್ದೀರಾ?ಇಂತಹ ಹಾಸಿಗೆಯಲ್ಲಿ ನಿದ್ರಿಸಿದರೆ ನಿದ್ರೆ ಬರಬಹುದೇ ಎಂದು ನೀವು ಕೇಳುವುದು ಸಹಜ. ಹಾಸಿಗೆ ಎಷ್ಟು ಜಾಣನೆಂದರೆ,ಅದು ನಿಮಗೆ ಆರಾಮದಾಯಕ ನಿದ್ದೆ ಬರುವಂತೆ ಮಾಡುವ ವ್ಯವಸ್ಥೆಯನ್ನು ಒಳಗೊಂಡಿದೆ.ಮಲಗುವವನ ನಿದ್ರಾಶೈಲಿಯನ್ನು ಗಮನಿಸಿ,ಅಗತ್ಯ ಮಾರ್ಪಾಡುಗಳನ್ನಿದು ಸೂಚಿಸಬಲ್ಲುದು.ಗೊರಕೆ ಹೊಡೆದರೆ,ಅದನ್ನು ಗ್ರಹಿಸಿ,ದಿಂಬಿನ ಎತ್ತರ ಬದಲಾಯಿಸಿ,ಗೊರಕೆ ನಿಯಂತ್ರಿಸಲೂ ಇದು ಶಕ್ತ.ದೇಹದ ಉಷ್ಣತೆಯನ್ನು ಗ್ರಹಿಸಿ,ಹಾಸಿಗೆಯಲ್ಲಿ ಅಳವಡಿಸಿದ ಕೊಳವೆಗಳ ಮೂಲಕ ಬಿಸಿ ಅಥವಾ ತಂಪು ದ್ರವ ಹಾಯಿಸಿ,ದೇಹಕ್ಕೆ ಅನುಕೂಲ ಕಲ್ಪಿಸುವ ವ್ಯವಸ್ಥೆಯಿದೆ.ಅಂತರ್ಜಾಲ ಸಂಪರ್ಕ ಇದ್ದರೆ,ಚಲನಚಿತ್ರಗಳನ್ನು ಡೌನ್‍ಲೋಡ್ ಮಾಡಿ,ಬಳಕೆದಾರನಿಗೆ ಲಭ್ಯವಾಗಿಸಲೂ ಇದು ಬಲ್ಲುದು.ಸಿನೆಮಾ ನೋಡುವುದರಲ್ಲೇ ತಲ್ಲೀನನಾಗಿ,ನಿದ್ರೆ ಕೆಟ್ಟರೆ ಹಾಸಿಗೆಯನ್ನು ದೂರಬೇಡಿ ಮತ್ತೆ!ಅಂದ ಹಾಗೆ ಈ ಹಾಸಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲು ಇನ್ನೂ ಒಂದು ವರ್ಷ ಬೇಕು ಎಂದು ಇದನ್ನು ತಯಾರಿಸಿರುವ ಅಮೆರಿಕನ್ ಕಂಪೆನಿ ಹೇಳಿದೆ.

ashokworld

udayavani
*ಅಶೋಕ್‍ಕುಮಾರ್ ಎ