ಅವಳ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ........

ಅವಳ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ........

ಬರಹ

” !!!!!!!!................... "

ನಾನು ನಿಜಕ್ಕೂ ದಿಗ್ಬ್ರಾಂತನಾಗಿದ್ದೆ. ಗೆಳತಿ ನಿರ್ಮಲ ನನ್ನ ಬಳಿ ಬಂದು, "ಕಾವ್ಯ ನಿನ್ನನ್ನು ಇಷ್ಟಪಡುತ್ತಿದ್ದಾಳೆ, ಪ್ರೀತಿಸುತ್ತಿದ್ದಾಳೆ.." ಎಂದು

ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ, ನಂಬಲೂ ಆಗಲಿಲ್ಲ, ಯಾವ ರೀತಿ ಪ್ರತಿಕ್ರಿಯಿಸ ಬೇಕೊ ಗೊತ್ತಾಗಲಿಲ್ಲ. ಎದೆ ಬಡಿತ ಹೆಚ್ಚಾಗಿತ್ತೋ

ಅಥವಾ ಕೆಲಕ್ಷಣ ನಿಂತೇ ಹೋಗಿತ್ತೊ ಅದೂ ತಿಳಿದಿಲ್ಲ. ನನ್ನ ಮತ್ತು ಕಾವ್ಯಳ ಪರಿಚಯ, ಸ್ನೇಹ ಎರಡು ವರ್ಷಗಳ ಹಳೆಯದು.

ಮನ್ಮಥನಲ್ಲದಿದ್ದರು, ನೋಡಲು ಲಕ್ಷಣವಾಗಿರುವ, ಬುದ್ದಿವಂತನಾದ ನನ್ನಂಥ ಹುಡುಗನಿಗೆ, ನೋಡಲು ಸುಂದರವಾಗಿರುವ, ಸೌಮ್ಯಳು,

ಸಭ್ಯಳು ಆಗಿರುವ ಕಾವ್ಯಳಂಥ ಹುಡುಗಿ ತಾನಾಗಿಯೇ ನನಗೆ ಒಲಿದಿದ್ದಾಳೆ, ನನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದಾಗ ನಾನು ನಿಜಕ್ಕೂ

ದಿಗ್ಬ್ರಾಂತನಾಗಿದ್ದೆ, ಮಾತು ಬಾರದ ಮೂಕನಾಗಿದ್ದೆ.

ಆದರೆ, ಈ ವಿಷಯವನ್ನು ನಾನು ನಂಬುವುದಾದರೂ ಹೇಗೆ....? ಕಾವ್ಯ ತಾನಾಗಿಯೇ ನನ್ನ ಬಳಿ ಬಂದು ಈ ವಿಷಯವನ್ನು ಹೇಳಿಲ್ಲ.

ನಿರ್ಮಳಲ ಮಾತನ್ನೇ ನಂಬಿ ಈ ವಿಚಾರದಲ್ಲಿ, ನಾನು ಮುಂದುವರಿಯುವ ಹಾಗಿಲ್ಲ.

ನಾನಾಗಿಯೇ ಅವಳ ಬಳಿ ಹೋಗಿ ಕೇಳೊಣವೆಂದರೆ, ಅವಳು ಹಾಗೇನು ಇಲ್ಲ ಎಂದು ನಿರಾಕರಿಸಿ, ಕೊನೆಗೆ ಅವಳ ಸ್ನೇಹವನ್ನೂ

ಕಳೆದುಕೊಳ್ಳುವೆನೋ ಎಂಬ ಇಲ್ಲ, ಸಲ್ಲದ ಭಯ ನನ್ನಲ್ಲಿ.

ಹೋಗಲಿ, ಇವೆಲ್ಲವನ್ನು ನಿರ್ಲ್ಯಕ್ಷಿಸಿ ನಾನಾಯಿತು, ನನ್ನ ಪಾಡಾಯಿತು ಎಂದು ಇರೋಣವೆಂದರೆ ಮನಸ್ಸು ಒಪ್ಪುತ್ತಿಲ್ಲ.

ಮುಂದೆ.........????!!!

ಮುಂದೊಂದು ದಿನ, ನಾವಿಬ್ಬರೇ ಇದ್ದಾಗ ನನ್ನ ಎಲ್ಲ ಧೈರ್ಯವನ್ನು ಒಟ್ಟುಗೂಡಿಸಿ ಅವಳನ್ನು ಕೇಳಿಯೇಬಿಟ್ಟೆ,

" ನೀನು ನನ್ನನ್ನು ಪ್ರೀತಿಸುತ್ತಿದ್ದೀಯ...? " ಎಂದು.

ಅಬ್ಬಾ.....!!!! ಎಲ್ಲಿಯ ಧೈರ್ಯವದು, ನನ್ನಂಥವನಿಗೆ. ಇಷ್ಟು ದಿನ ಬಲವಂತವಾಗಿ, ಧೈರ್ಯವಿಲ್ಲದೆ, ಹಿಂಜರಿಕೆಯಿಂದ ಮುಚ್ಚಿಟ್ಟದ್ದ

ಪ್ರಶ್ನೆಯೊಂದು ಮಾತಾಗಿ ಆಚೆ

ಬಂದಾಗ ನಿಜಕ್ಕೂ ನನ್ನ ಮನದಲ್ಲಿ ಸಮಾಧಾನದ ನಿಟ್ಟುಸಿರು.

ಆದರೆ, ಈ ಸಮಾಧಾನ ಕ್ಷಣಕಾಲವೂ ನನ್ನಲ್ಲಿ ಉಳಿಯಲಿಲ್ಲವೇನೋ.....ಕಾರಣ, ಮನ ಅವಳ ಪ್ರತಿಕ್ರಿಯೆಗೆ, ಉತ್ತರಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿತ್ತು.

ಮನದಲ್ಲಿ ಈಗ ಆತಂಕ ಮನೆ ಮಾಡಿತ್ತು.

ಅವಳು ನನ್ನನ್ನೇ ನೋಡುತ್ತಿದ್ದಳು. ಅವಳ ಕಣ್ಣನೋಟದಲ್ಲಿ ಯಾವುದೇ ತಿರಸ್ಕಾರದ ಭಾವವಾಗಲಿ, ಅನಿರೀಕ್ಷಿತ ಪ್ರಶ್ನೆಯೊಂದನ್ನು ಎದುರಿಸಿದ

ಆಶ್ಚರ್ಯದ ಭಾವವಾಗಲಿ ಇರಲಿಲ್ಲ. ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದಳು.

ಆಗಲೇ, ಆ ಕ್ಷಣದಲ್ಲೇ ಯಾವುದೋ ಒಂದು ಬಗೆಯ, ನನಗೆ ಗುರುತಿಸಲಾಗದ ಭಾವವೊಂದು ಅವಳ ಕಣ್ಣಂಚಿನಲಿ ಮಿಂಚಂತೆ ಮಿಂಚಿ

ಮರೆಯಾದದ್ದು.....!!!!

ಕೊನೆಗೆ, " ನಿನ್ನ ಪ್ರಶ್ನೆಗೆ ಉತ್ತರ ಹೇಳಲೆಬೇಕೇನೋ......? " ಎಂಬ ಪ್ರಶ್ನೆಯನ್ನೇ ನನ್ನ ಪ್ರಶ್ನೆಗೆ ಉತ್ತರವಾಗಿಸಿ, " ನಾಳೆ ಸಿಗುತ್ತೇನೆ "

ಎಂದಷ್ಟೇ ಹೇಳಿ ಹೊರಟು ಹೋದಳು.

ಅಂದೇ ಕೊನೆ, ಮತ್ತೆಂದೂ ನಾವಿಬ್ಬರೂ ಈ ವಿಷಯವನ್ನು ನಮ್ಮಲ್ಲಿ ಪ್ರಸ್ತಾಪಿಸಲೇ ಇಲ್ಲ. ನಾನೂ ಸಹ ಈ ಬಗ್ಗೆ ಅವಳನ್ನು ಪೀಡಿಸಲಿಲ್ಲ.

ಅವಳೂ ಸಹ ಉತ್ತರ ತಿಳಿಸುತ್ತೇನೆ ಎಂದು ನನ್ನನ್ನು ಸತಾಯಿಸಲಿಲ್ಲ. ಇಬ್ಬರೂ ಮೊದಲಿನಂತೆ ಸಲುಗೆಯಿಂದ, ಒಟ್ಟಾಗೇ ಇದ್ದೆವು.

ಆದರೂ ನಮ್ಮಿಬ್ಬರ ನಡುವೆ ಏನೋ ಒಂದು ರೀತಿಯ ಶೂನ್ಯತಾ ಭಾವ ಇದ್ದೇ ಇತ್ತು.

ಕಾಲೇಜಿನ ಕೊನೆ ವರ್ಷ, ಕೊನೆ ದಿನ, ಕೊನೆ ಕ್ಷಣ ಬಂದಾಗಲೂ ಕೂಡ ನನಗೆ ಅವಳಿಂದ ಯಾವುದೇ ಉತ್ತರ ಸಿಗಲೇ ಇಲ್ಲ............

ಕೊನೆಗೂ ಆಕೆ ನನ್ನ ಈಡೇರದ ಆಸೆಯಾಗಿ, ಕೈ ಗೆಟುಕದ ಪ್ರೀತಿಯಾಗಿ ಉಳಿದು ಹೋದಳು.....

ನನ್ನೊಳಗಿನ ನೋವನ್ನು ಕಂಡು ಎಲ್ಲರೂ ಮರುಕಪಟ್ಟರೂ, ನೋವು ಕೊಟ್ಟವಳು ಮಾತ್ರ ಮರುಕಪಟ್ಟಳೋ ಇಲ್ಲವೋ, ಇಂದಿಗೂ ತಿಳಿದಿಲ್ಲ.

ಇರಲಿ, ಈ ನೋವಿನಲ್ಲೂ ಒಂದು ರೀತಿ ಸುಖವಾಗಿರುವುದನ್ನು ಅಭ್ಯಾಸಮಾಡಿಕೊಂಡಿದ್ದೇನೆ. ಆ ಮೂರು, ನಾಲ್ಕು ವರ್ಷಗಳು ಅವಳ

ದಾರಿಯನ್ನೇ ಎದುರು ನೋಡುತ್ತಾ ನನ್ನ ಈ ಕಣ್ಣುಗಳು ಸೋತಿರಬಹುದು. ಆದರೆ, ನನ್ನೀ ಮನ ಸೋಲಲಿಲ್ಲ; ಈಗಲೂ ಸೋತಿಲ್ಲ...

ಈ ಜೀವನದ ಪಯಣದುದ್ದಕ್ಕೂ ಅವಳ ಸವಿ ಸವಿ ನೆನಪಿನ ದೋಣಿಯಿದೆ. ಅದನ್ನು ಮುನ್ನಡೆಸಲು ನನ್ನೊಲವಿನ ಹರಿಗೋಲಿದೆ......

ಸಿಹಿ ಮಾತುಗಳಾಡದೆ, ಕಹಿ ನೆನಪುಗಳನುಳಿಸಿದೆ....

ಆದರೇನು, ಕಹಿಯೇ ಬೇಕಲ್ಲ ಆರೋಗ್ಯಕ್ಕೆ....!!!!

ಜೊತೆಯಲ್ಲಿದ್ದೆ ನೀ ಅಂದು, ಒಂಟಿಯಾಗಿಹೆ ನಾನಿಂದು....

ಆದರೇನು, ಒಬ್ಬಂಟಿಯೇ ಎಲ್ಲರೂ ಕೊನೆಗೆ....!!!!

ಎಂದೋ ಎದುರಾದೆ, ಮತ್ತೆಂದೋ ದೂರಾದೆ...

ಆದರೇನು, ಜೀವನವ ನೀ ಕಲಿಸಿದೆ.....!!!!

ಈಡೇರದ ಆಸೆಯಾಗಿ, ಕೈಗೆಟುಕದ ಪ್ರೀತಿಯಾಗಿ.....