ಅಮೃತೇಶ್ವರ ದೇವಾಲಯ - ಅಣ್ಣಿಗೇರಿ

ಅಮೃತೇಶ್ವರ ದೇವಾಲಯ - ಅಣ್ಣಿಗೇರಿ

ಬರಹ

ನಿರ್ಮಾಣಗೊಂಡದ್ದು: ಇಸವಿ ೧೦೫೦ - ಐದನೇ ಪಶ್ಚಿಮ ಚಾಲುಕ್ಯ ದೊರೆ ಒಂದನೇ ಸೋಮೇಶ್ವರನ ಕಾಲದಲ್ಲಿ.
ಸ್ಥಳ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ.

ಹುಬ್ಬಳ್ಳಿ - ಗದಗ ರಸ್ತೆಯಲ್ಲಿ ಹುಬ್ಬಳ್ಳಿಯಿಂದ ೩೫ ಕಿಮಿ ದೂರದಲ್ಲಿದೆ ಇಸವಿ ೯೦೨ ರಲ್ಲಿ ಆದಿ ಕವಿ ಪಂಪ ಹುಟ್ಟಿದ ಸ್ಥಳ ಅಣ್ಣಿಗೇರಿ. ಕಲಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಪ್ರಾಚೀನ ಶಾಸನಗಳಲ್ಲಿ ದಕ್ಷಿಣದ ವಾರಣಾಸಿ ಎಂದೇ ಈ ಊರನ್ನು ಉಲ್ಲೇಖಿಸಲಾಗಿದೆ. ಆದರೆ ಈಗಿನ ಸ್ಥಿತಿಯನ್ನು ನೋಡಿದರೆ ಈ ಮಾತನ್ನು ನಂಬುವುದು ಕಷ್ಟ. ಇಲ್ಲೊಂದು ಸುಂದರ ಅಮೃತೇಶ್ವರ ದೇವಾಲಯವಿರುವುದು ಹೆಚ್ಚಿನವರಿಗೆ ತಿಳಿಯದ ವಿಷಯ.

ಅಣ್ಣಿಗೇರಿಯೊಳಗೆ ತಿರುವು ಪಡೆದು ಕಿರಿದಾದ ಅಂಕುಡೊಂಕಾಗಿರುವ ರಸ್ತೆಯಲ್ಲಿ ಊರೊಳಗೆ ಒಂದು ಕಿಮಿ ತೆರಳಿದರೆ ಈ ದೇವಾಲಯ ಸಿಗುವುದು. ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲಾಗಿರುವುದರಿಂದ ಅಣ್ಣಿಗೇರಿ ಬೆಳೆದರೂ ದೇವಾಲಯದ ಪ್ರಾಂಗಣ ಒತ್ತುವರಿಯಿಂದ ಮುಕ್ತವಾಗಿದೆ. ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿರುವ ಈ ದೇವಾಲಯದ ಛಾವಣಿ ೭೬ ಕಂಬಗಳ ಅಧಾರದಲ್ಲಿ ನಿಂತಿದೆ. ದೇವಾಲಯದ ಪ್ರಾಂಗಣದೊಳಗೆ ಪ್ರವೇಶಿಸಲು ಅಕ್ಕ ಪಕ್ಕದಲ್ಲೇ ೨ ದ್ವಾರಗಳಿವೆ. ಒಂದು ದ್ವಾರದ ಪ್ರವೇಶದಲ್ಲಿರುವ ಜಗುಲಿಯಲ್ಲಿ ೨ ಕಲ್ಲಿನ ಕಂಬಗಳನ್ನಿರಿಸಲಾಗಿರುವುದರಿಂದ ಬಗ್ಗಿಕೊಂಡೇ ಒಳಗೆ ಪ್ರವೇಶಿಸಬೇಕು. ಪ್ರಾಂಗಣದೊಳಗೆ ಪ್ರವೇಶಿಸಿದೊಡನೆ ಬೆರಗಾದೆ. ಇಂತಹ ಊರಿನಲ್ಲೂ ಇಷ್ಟು ಸುಂದರ ದೇವಾಲಯ ಅಡಗಿರುವುದನ್ನು ಕಂಡು ಆಶ್ಚರ್ಯವಾಯಿತು.

ಕಲ್ಯಾಣ ಚಾಲುಕ್ಯರ ವಾಸ್ತುಶೈಲಿಯನ್ನು ಹೊಂದಿರುವ ಅಮೃತೇಶ್ವರ ದೇವಾಲಯದಲ್ಲಿ ೨ ಗೋಪುರಗಳಿವೆ. ಗರ್ಭಗುಡಿಯ ಗೋಪುರ, ಮುಖಮಂಟಪದ ಗೋಪುರಕ್ಕಿಂತ ಎತ್ತರವಿದ್ದು ಆಕರ್ಷಕ ಶಿಲ್ಪಕಲೆಯನ್ನು ಹೊಂದಿದೆ. ಇಲ್ಲಿರುವ ನಂದಿ, ಶಿವನ ಮುಂದೆನೋ ಇದೆ ಆದರೆ ಸ್ವಲ್ಪ ದೂರದಲ್ಲಿದೆ. ಹೆಚ್ಚಿನ ಶಿವ ದೇವಾಲಯಗಳಲ್ಲಿ ಗರ್ಭಗುಡಿಯ ಹೊರಗೆ ನಂದಿ ಆಸೀನನಾಗಿರುತ್ತಾನೆ. ಆದರೆ ಇಲ್ಲಿ, ಗರ್ಭಗುಡಿಯ ಮತ್ತು ನಂದಿ ಆಸೀನನಾಗಿರುವ ಕೋಣೆಯ ಮಧ್ಯೆ ಮತ್ತೊಂದು ಕೋಣೆಯಿದ್ದು (ಅಂತರಾಳ), ದೇವಾಲಯದ ಪ್ರವೇಶ ದ್ವಾರವಿರುವುದೂ ಇದೇ ಕೋಣೆಗೆ. ದೇವಾಲಯಕ್ಕೆ ಒಳಬಂದಾಗ ಎಡಕ್ಕೆ ಗರ್ಭಗುಡಿಯಿದ್ದರೆ, ಬಲಕ್ಕೆ ಮತ್ತೊಂದು ವಿಶಾಲವಾದ ಕೋಣೆಯಿದ್ದು, ಇದರಲ್ಲಿ ನಂದಿ ಆಸೀನನಾಗಿದ್ದಾನೆ. ನಂದಿ ಆಸೀನನಾಗಿರುವ ಈ ಭಾಗ ದೇವಾಲಯದ ಮತ್ತೊಂದು ತುದಿ ಎನ್ನಬಹುದು. ದೇವಾಲಯದ ಒಂದು ತುದಿಯಲ್ಲಿ ಗರ್ಭಗುಡಿಯಲ್ಲಿರುವ ಶಿವಲಿಂಗದಿಂದ ಸುಮಾರು ೮೦-೧೦೦ ಅಡಿ ದೂರದಲ್ಲಿ ದೇವಾಲಯದ ಮತ್ತೊಂದು ತುದಿಯಲ್ಲಿ ನಂದಿ ಇರುವುದು. ನಂದಿ ಇರುವ ಕೋಣೆಯಲ್ಲಿ ದಿಕ್ಕಿಗೊಂದರಂತೆ ೪ ಬಾಗಿಲುಗಳಿವೆ. ಇವುಗಳಲ್ಲಿ ೩ನ್ನು ಮುಚ್ಚಲಾಗಿದೆ. ಪ್ರಾಂಗಣದೊಳಗೊಂದು ಗಣೇಶನ ದೇವಾಲಯವಿದೆ. ಸಣ್ಣ ಪುಷ್ಕರಿಣಿಯಿದೆ.

ಉತ್ತರ ಕರ್ನಾಟಕದಲ್ಲಿ ಶಿವ ದೇವಾಲಯಗಳಿರುವುದೇ ಹೆಚ್ಚು. ಶಿವನನ್ನೇ ಹಲವಾರು ನಾಮಧೇಯಗಳಿಂದ ಕರೆಯುವುದರಿಂದ ಒಂದೊಂದು ದೇವಸ್ಥಾನಕ್ಕೆ ಒಂದೊಂದು ಹೆಸರು. ಆದರೆ ಒಳಗಿರುವುದು ಶಿವ ಲಿಂಗವೇ.