ಎರೆಡು ಪತ್ರಗಳು

ಎರೆಡು ಪತ್ರಗಳು

ಪತ್ರ ಒಂದು

ಪ್ರೀತಿಯ ಅಪ್ಪನಿಗೆ.

ನೆನ್ನೆ ನಿನ್ನ ಫೋನಿಂದ ಮನಸ್ಸು ಕದಡಿಹೋಗಿದೆ. ನೀವು ನೋಡಿದ ಹುಡುಗ ಅಲ್ಲ ಬೇರೆ ಯಾವ ಹುಡುಗನೊಡನೆಯೂ ಮದುವೆ ಎಂಬ ಬಂಧನಕ್ಕೆ ಬೀಳಲು ನಾನು ಸಿದ್ದ ಇಲ್ಲ.ದಯವಿಟ್ಟು ಕ್ಷಮಿಸು.

 ಯಾವದೋ ಗುರುತಿರದ ವ್ಯಕ್ಸ್ತಿಯ ಜೊತೆ ನನ್ನ ಬಾಳನ್ನೆಲ್ಲಾ ಕಳೆಯಲು ನನಗೆ ಇಷ್ಟ ಇಲ್ಲ . ನೀನು ಅಮ್ಮ ಬದುಕುತ್ತಿರಬಹುದು. ಅಮ್ಮನಿಗೆ ಯಾವದೇ ಸಿದ್ದಾಂತವಿರಲಿಲ್ಲ .ಆದರೆ ನನಗೆ ನನ್ನದೇ ಆದ ಗುರಿ ಇದೆ. ಹೊಸ ಹೊಸ ಪ್ರಯೋಗಕ್ಕೆ ಮನ ತುಡಿಯುತ್ತಿರುತ್ತದೆ.

ಇಲ್ಲಿ ನನ್ನ ಫ್ರೆಂಡ್ ಆಕಾಶ್ ಅದಕ್ಕೆ ಒತ್ತಾಸೆಯಾಗಿ ನಿಂತಿದ್ದಾನೆ. ನನ್ನ ರೀತಿ ಅವನಿಗೂ ಮದುವೆಯಲ್ಲಿ ನಂಬಿಕೆ ಇಲ್ಲ. ಸಾಂಸರಿಕ ‍ಕಮಿಟ್‍ಮೆಂಟ್ ಇಲ್ಲದ ಜೀವನ ನಮಗಿಬ್ಬರಿಗೂ ಬೇಕಿದೆ ಹಾಗಾಗಿ ನಾವಿಬ್ಬರೊ ಲೀವ್ - ಇನ್ ರೀತಿಯಲ್ಲಿ ಬಾಳಲು ಯೋಚಿಸಿದ್ದೇವೆ. ಬಾಳ ದಾರಿ ಸ್ವಷ್ಟ ವಾಗಿಯೀ ಇದೆ.

ದಯವಿಟ್ಟು ನಮ್ಮ ದಾರಿಗೆ ಅಡ್ಡವಾಗಿ ಬರಬೇಡಿ. ಅಪ್ಪ ಅಮ್ಮನಾಗಿ ನಿಮ್ಮ ಕರ್ತವ್ಯ ನೀವು ಮಾಡಿದ್ದೀರ. ಇನ್ನು ನಾನು ಸ್ವತಂತ್ರವಾಗಿ ಹಾರಲು ಅವಕಾಶ ಮಾಡಿಕೊಡಿ. ನಾನು ಜೀವನದಲ್ಲಿ ಸುಖವಾಗಿ ಇರುತ್ತೇನೆ ಎಂಬ ನಂಬಿಕೆ ನನಗಿದೆ. ನನಗಾಗಿ ಅಳಬೇಡಿ. ಹಾಗು ನನಗಾಗಿ ಹುಡುಕಬೇಡಿ.

 ಮುಂದೆ ನನ್ನನ್ನು ಇದೇ ರೀತಿಯಲ್ಲಿ ಒಪ್ಪಿಕೊಳ್ಳುವ ಮನಸ್ಥಿತಿ ನಿಮಗಿಬ್ಬರಿಗೂ ಬಂದ ಮೇಲೆ ನಾನಾಗೆ ಬರುತ್ತೇನೆ

ನಿಮ್ಮ ಮುದ್ದಿನ ಸಾಧನ

ಪತ್ರ ಎರೆಡು

ಪ್ರೀತಿಯ ಅಪ್ಪನಿಗೆ(ಹಾಗೆ ಕರೆಯಲು ಅವಕಾಶವಿದೆಯಾ?)

ಅಪ್ಪ ಎರೆಡು ವರ್ಷಗಳಾದ ಮೇಲೆ ಅಪ್ಪ  ನಿನ್ನನ್ನು ನೋಡಿ ಓಡಿ ಬಂದು ನಿನ್ನ ಕಾಲಿಗೆ ಬಿದ್ದು ಜೋರಾಗಿ ಅಳಬೇಕೆಂದು ಅನಿಸಿತು. ಆದರೆ ಯಾವ ಮುಖ ಹೊತ್ತಿ ಬರಲಿ.ಹಾಗಾಗಿ ನಿನ್ನನ್ನು ನೋಡಿದ ಕೂಡಲೆ  ಅವಿತುಕೊಂಡೆ. ಆದರೂ ನೀನು ನನ್ನನ್ನು ಹುಡುಕಿಕೊಂಡು ಬಂದೆ . ನನ್ನ ರೀತಿಯನ್ನು ಒಪ್ಪಿಕೊಂಡು ಇರುವಿರೆಂದು ಹೇಳಿದಿರಿ.

ಆದರೆ ಅಪ್ಪ ನಾನು ಈ ಎರೆಡು ವರ್ಷಗಳಲ್ಲಿ ಏನಾಗಿದ್ದೇನೆಂದು ನಿಮಗೆ ತಿಳಿದಿದೆಯಾ?

ನಿಮ್ಮನ್ನು ದಿಕ್ಕರಿಸಿ ಬಂದ ನನಗೆ ಆಕಾಶ್ ಜೀವವಾಗಿದ್ದ. ಸಂಸಾರ ಬೇಡವೆಂದವಳಿಗೆ ಆಕಾಶ್ ಇಷ್ಟವಾಗತೊಡಗಿದ. ನನ್ನ ಹೊಟ್ಟೆಯಲ್ಲಿ ಅವನ ನನ್ನ ಪ್ರೀತಿಯ ಫಲ ಚಿಗುರಿದಾಗ ಅದನ್ನು ಚಿವುಟಲು ಹೇಳಿದ. ನಾನು ಅದಕ್ಕೆ ಒಪ್ಪಲಿಲ್ಲವೆಂದಾಗ ನಮ್ಮ ಲೀವ್-ಇನ್ ಟುಗೆದರ್ ಮುರಿದು ಬಿತ್ತು. ನಮ್ಮಲ್ಲಿ ಯಾವದೇ ಕಮಿಟ್‍ಮೆಂಟ್ ಇರಲಿಲ್ಲವಲ್ಲ. ನನ್ಗೆ ಬಾಯ್ ಹೇಳಿ ಬೇರೆಡೆ ಹೋದ. ಆದರೆ ಅವನಿಗೂ ಮದುವೆ ಬೇಕಿತ್ತೇನೋ ಹಾಗೆ ಹೋಗಿ ಎರೆಡೇ ತಿಂಗಳಲ್ಲೇ ಬಹಳ  ವಿಜ್ರಂಭಣೆಯಿಂದಲಿ ಮದುವೆಯಾದ. ನನಗೂ ಅಹ್ವಾನ ಪತ್ರಿಕೆ ಬಂದಿತ್ತು. ಆದರೆ ನಾನು ಹೋಗಲಿಲ್ಲ 

ಹೊಟ್ಟೆಯಲ್ಲಿ ಮಗು, ಕತ್ತಿನಲ್ಲಿ ತಾಳಿ ಇಲ್ಲವೆಂದಾಗ ಸಹೋದ್ಯೋಗಿಗಳು ನಗಲು ಆರಂಭಿಸಿದರು.  ನಾವೆಷ್ಟೆ ಮುಂದುವರಿದರೂ ನಮ್ಮದು ಭಾರತೀಯ ಮನಸು,ಪ್ರಜ್ನೆ  ಅದು ಬದಲಾಗಲು ಸಾಧ್ಯವೇ ಇಲ್ಲ.

ಹಾಗು ಹೀಗೊ ನಿನ್ನ ಮೊಮ್ಮಗಳು ಭೂಮಿಗೆ ಬಂದಳು . ಆ ಸಮಯದಲ್ಲಿ ನಾ ಪಟ್ಟ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ. ಆದರೆ ಈ ವಿಷಯ ನಿಮ್ಗೆ ತಿಳಿಸಬಾರದು ಎಂದು ನಾನು ಪಣ ತೊಟ್ಟಿದ್ದೆ. ಈಗ ಅವಳೇ ನನ್ನ ಜೀವ

ಈಗ ನನಗೆ ಹಣದ ವಿಷಯವಾಗಿ ಯಾವದೇ ತೊಂದರೆ ಇಲ್ಲ . ಆದರೆ  ನನ್ನ ಕಾವ್ಯ ನಿಮ್ಮ ಮೂಮ್ಮಗಳು ಅಪ್ಪ. ನಿಮ್ಮ ಜೊತೆಯಲ್ಲಿಯೇ ಬೆಳೆಯಲಿ ಎಂಬುದು ನನ್ನ ಆಸೆ. ಸಾಧ್ಯವಾದರೆ ಈಡೇರಿಸು. ನಾನು ತಪ್ಪು ಮಾಡಿದಾಗಲೆಲ್ಲ  ಬೈತಿದ್ದೆ . ಆದರೆ ನನ್ನನೆಂದು ದೂರ ಮಾಡಲಿಲ್ಲ ನೀನು. ಈಗಲೂ ಹಾಗೇ ಇರುವೆ ಎಂದು ಭಾವಿಸಲಾ ನಾನು?

ಅಪ್ಪ ನನ್ಗೆ ಒಂದು ವಿಷ್ಯ ಅರ್ಥವಾಗಿದೆ. ನೀನು ಅಮ್ಮ ಆಗಲಿ  ಮದುವೆಯಾದ ಬೇರೆಯವರಾಗಲಿ ಸಂಸಾರವನ್ನು ಬಂಧನವೆಂದು ಪರಿಗಣಿಸದೆ ಅದನ್ನು ಸ್ವರ್ಗವೆಂದು ಭಾವಿಸಿ ಅದನ್ನೆ ಪ್ರೀತಿಸಿದಿರಿ. ಆದರೆ ನಾನು ಹಕ್ಕಿಯಾಗಿ ಹಾರಾಡುತ್ತೇನೆಂದುಕೊಂಡು ಬಾಳಿನ ಬಿಸಿಲಲ್ಲಿ ಸುಸ್ತಾಗಿ ರೆಕ್ಕೆ ಮುರಿದುಕೊಂಡು ಬಿದ್ದಿದ್ದೇನೆ.  ನನಗೆ  ಒಂದಷ್ಟು ಪ್ರೀತಿ ಅಕ್ಕರೆ. ಸಾಂತ್ವಾನ ಬೇಕಾಗಿದೆ . ಕೊಡುತೀರ ಎಂದು ಭಾವಿಸುತಾ ಈ ಭಾನುವಾರ ಮನೆಗೆ ಬರುತಿದ್ದೇನೆ.

ನನ್ನನ್ನು ಸ್ವೀಕರಿಸುತ್ತೀರಲ್ಲಾ?

ನಿಮ್ಮ  ಮಗಳಾಗೇ ಉಳಿಯಬಯಸುವ

ಸಾಧನ.

 

 

 

Rating
No votes yet

Comments