ನೆಟ್ ಸ್ಕೇಪ್ ಗೆ ಇನ್ನು ವಿದಾಯ

ನೆಟ್ ಸ್ಕೇಪ್ ಗೆ ಇನ್ನು ವಿದಾಯ

ನೆಟ್‍ಸ್ಕೇಪ್೯೦ರ ದಶಕದಲ್ಲಿ ಎಷ್ಟೋ ಮಂದಿ ಕಂಪ್ಯೂಟರ್ ಬಳಸುವವರಿಗೆ ನಿತ್ಯದ ಬಳಕೆಯ ತಂತ್ರಾಂಶವಾಗಿದ್ದ ನೆಟ್‌ಸ್ಕೇಪ್ ಗೆ ಈಗ ವಿದಾಯ ಹೇಳುವ ಸಮಯ. ಆಗೊಮ್ಮೆ ಎಲ್ಲರೂ ಬಳಸುತ್ತಿದ್ದ ಬ್ರೌಸರ್ ಇದು. ಹಲವು ಬಳಕೆದಾರರಿಗಂತೂ ಇದು ಸಾಕ್ಷಾತ್ ಇಂಟರ್ನೆಟ್ಟೇ ಆಗಿತ್ತು!
ಮೊಸಾಯ್ಕ್ ಎಂಬ ಮೊದಲ ಬ್ರೌಸರನ್ನು ಬರೆದ ಮಾರ್ಕ್ ಆಂಡರ್ಸನ್ ನೇತೃತ್ವದಲ್ಲೇ ನೆಟ್‌ಸ್ಕೇಪ್ ಮೊದಲ ಆವೃತ್ತಿ ೧೯೯೪ರಲ್ಲಿ ಹೊರಬಂದಿತ್ತು. ಒಂದು ಕಾಲದಲ್ಲಿ ಶೇಕಡಾ ೯೦ರಷ್ಟು ಇಂಟರ್ನೆಟ್ ಬಳಕೆದಾರರಿಂದ ಬಳಸಲ್ಪಡುತ್ತಿದ್ದ ಈ ಬ್ರೌಸರಿನ ಬಳಕೆ ವರ್ಷಗಳು ಕಳೆದಂತೆ ಕ್ರಮೇಣ ೦.೬% ಗೆ ಇಳಿಮುಖವಾಯಿತು.

ವಿಡಂಬನೆಯೆಂದರೆ ಇದೇ ನೆಟ್‍ಸ್ಕೇಪ್ ನ ಮತ್ತೊಂದು ರೂಪ ಮುಕ್ತ ತಂತ್ರಾಂಶವಾದ ಫೈರ್ ಫಾಕ್ಸ್ ನ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತ ಬಂದಿದೆ ಹಾಗು ಹೆಚ್ಚುತ್ತಲೇ ಇದೆ. ಫೈರ್ ಫಾಕ್ಸ್ ಜಗತ್ತಿನಾದ್ಯಂತ ೫೦೦ ಮಿಲಿಯನ್ ಗೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲ್ಪಟ್ಟಿದೆ ಎಂದು ಇತ್ತೀಚೆಗಷ್ಟೆ ಈ ಯೋಜನೆಯನ್ನು ನಿರ್ವಹಿಸುತ್ತಿರುವ ಮಾಝಿಲ್ಲಾ ಫೌಂಡೇಶನ್ ಪ್ರಕಟಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತು.

ನೆಟ್‍ಸ್ಕೇಪ್ ಹೊಸ ಲೋಗೊ
ನೆಟ್ ಸ್ಕೇಪ್ ಮೊದಲ ದೊಡ್ಡ ಹೊಡೆತ ತಿಂದದ್ದು ಮೈಕ್ರೋಸಾಫ್ಟ್ ತನ್ನ ಆಪರೇಟಿಂಗ್ ಸಿಸ್ಟಮ್ (ವಿಂಡೋಸ್ ೯೮, ವಿಂಡೋಸ್ ೨೦೦೦) ಜೊತೆಗೇ ಇಂಟರ್ನೆಟ್ ಎಕ್ಸ್‍ಪ್ಲೋರರ್ ಎಂಬ ತಂತ್ರಾಂಶವನ್ನು ಹಾಕಿ ಕಳುಹಿಸುವುದನ್ನು ಪ್ರಾರಂಭಿಸಿದ್ದಷ್ಟೇ ಅಲ್ಲದೆ ಅದನ್ನೇ ಬಳಕೆದಾರರು ಬಳಸುವಂತೆ ನೋಡಿಕೊಂಡಾಗ. ಮೈಕ್ರೋಸಾಫ್ಟ್ ಎಲ್ಲದಕ್ಕೂ ತನ್ನದೇ ಬ್ರೌಸರನ್ನು ಡೀಫಾಲ್ಟ್ ಆಗುವಂತೆ ನೋಡಿಕೊಂಡು ನೆಟ್‍ಸ್ಕೇಪನ್ನು ಬಹುಬೇಗ ಹಿಂದಕ್ಕೆ ತಳ್ಳಿಬಿಡುವಲ್ಲಿ ಯಶಸ್ವಿಯಾಯಿತು. ತದನಂತರ ಮೈಕ್ರೊಸಾಫ್ಟಿನ ಬ್ರೌಸರಿಗೆ ಕಾಂಪಿಟೇಶನ್ ಇಲ್ಲದಂತಾಗಿ ಇಂಟರ್ನೆಟ್ ಎಕ್ಸ್‍ಪ್ಲೋರರ್ರು ಕುಲಗೆಟ್ಟು ಹೋದದ್ದು, ಸೆಕ್ಯೂರಿಟಿ ಮಟ್ಟಿಗೆ ಮಾರಕವಾದದ್ದು, ನಿರ್ದಿಷ್ಟಮಾನಗಳಿಗೆ ಹೊಂದದೇ ಇಂಜಿನೀಯರುಗಳಿಗೆ ಕಿರಿಕಿರಿ ಕೊಟ್ಟದ್ದು ಮತ್ತೊಂದು ಕಥೆ!

ನೆಟ್‍ಸ್ಕೇಪನ್ನು ಹಂಚಲಾಗುತ್ತಿದ್ದ ಫ್ಲಾಪಿ ಡಿಸ್ಕುಗಳು

ಬ್ರೌಸರನ್ನು ಸಿಕ್ಕಾಪಟ್ಟೆ ದೊಡ್ಡದು ಮಾಡಿ, ಅದರಲ್ಲಿ ಬೇಕಿದ್ದು ಬೇಡದ್ದು ಎಲ್ಲವನ್ನೂ ತುಂಬಿ ಅಳಿದುಳಿದ ಬಳಕೆದಾರರನ್ನು ನೆಟ್ ಸ್ಕೇಪಿನವರೇ ಸ್ವತಃ ಕಳೆದುಕೊಂಡರು. ಇದೇ ವೇಳೆ ನೆಟ್ ಸ್ಕೇಪ್ ಕಂಪೆನಿಯಿಂದ ಹೊರಬಂದ ಕೆಲವರು ಸ್ಥಾಪಿಸಿದ ಮಾಝಿಲ್ಲಾ ಯೋಜನೆ ಮುಕ್ತ ತಂತ್ರಾಂಶವಾಗಿ ಇಂಟರ್ನೆಟ್ ಎಕ್ಸ್‍ಪ್ಲೋರರ್ ಬಳಸಿ ಬೇಸತ್ತಿದ್ದ ಎಲ್ಲರನ್ನೂ ತನ್ನತ್ತ ಸೆಳೆಯಿತು. ಅಷ್ಟರಲ್ಲಿ ಎಚ್ಚೆತ್ತ ಮೈಕ್ರೋಸಾಫ್ಟಿನವರು ಇಂಟರ್ನೆಟ್ ಎಕ್ಸ್‍ಪ್ಲೋರರನ್ನು ಸ್ವಲ್ಪ ಉತ್ತಮಪಡಿಸಿ ಹೊಸರೂಪದಲ್ಲಿ (ಅವೃತ್ತಿ ೭.೦) ಬಿಡುಗಡೆ ಮಾಡಿ ಈಗ ಹಲವು ಬಳಕೆದಾರರನ್ನು ವಾಪಸ್ ಹಿಡಿದಿಟ್ಟುಕೊಂಡಿದೆ.
ಫೈರ್ ಫಾಕ್ಸ್
ಇಂಟರ್ನೆಟ್ ಎಕ್ಸ್ ಪ್ಲೋರರಂತೂ ಕೇಳುವುದೇ ಬೇಡ - ನನಗೆ ಕೇಳಿದರೆ ಅದನ್ನು ಬಳಸರಿದಿರುವುದೇ ಉತ್ತಮ ಎನ್ನುವೆ.
ಆದರೆ ಈಗೀಗ ಮಾಝಿಲ್ಲಾ ಕೂಡ ಸ್ವಲ್ಪ ನೆಟ್ ಸ್ಕೇಪಿನ ದಾರಿಯನ್ನೇ ತುಳಿಯುವಂತೆ ಕಾಣುತ್ತಿರುವುದು ಅಚ್ಚರಿಯ ಸಂಗತಿ. ಒಟ್ಟಾರೆ ಸದ್ಯಕ್ಕೆ ಇಂಟರ್ನೆಟ್ ಎಕ್ಸ್ ಪ್ಲೋರರ್ರು ಸಾಮಾನ್ಯ ವೆಬ್ ಬಳಕೆದಾರರ ಬ್ರೌಸರ್ ಆಗಿ ಮಾಝಿಲ್ಲಾ ಬುದ್ಧಿವಂತ ವೆಬ್ ಬಳಕೆದಾರರ ಬ್ರೌಸರ್ ಆದರೆ ನೆಟ್‍ಸ್ಕೇಪ್ ಯಾರೂ ಬಳಸದ ಬ್ರೌಸರ್ ಆಗಿ ತನ್ನ ನಡೆಸಿಕೊಂಡು ಬರುತ್ತಿದ್ದ ಕಂಪೆನಿಯಿಂದಲೂ ಟಾಟಾ ಅನ್ನಿಸಿಕೊಳ್ಳುತ್ತಿರುವ ಸಮಯ.

ಸಾಧ್ಯವಾದರೆ ಇದೇ ಘಳಿಗೆಯಲ್ಲಿ ಇಂಟರ್ನೆಟ್ ಎಕ್ಸ್‍ಪ್ಲೋರರ್ರಿಗೂ "ಟಾಟಾ" ಹೇಳಿ ಜಾಣ ವೆಬ್ ಬಳಕೆದಾರರಾಗಿ!

Rating
No votes yet