ಸೇರಿಗೆ ಸವಾಸೇರು

ಸೇರಿಗೆ ಸವಾಸೇರು

ಬರಹ

ಸಂಸ್ಕೃತ ಸಾಹಿತ್ಯದ ಅನೇಕ ಪ್ರಕಾರಗಳನ್ನು ಅಭ್ಯಾಸಮಾಡಿದವರಿಗೆ ಮಂಗಳ ಶ್ಲೋಕಗಳ ಪರಿಚಯ ಇದ್ದೇ ಇದೆ. ಅವುಗಳಲ್ಲಿ ಕೆಲವು ಏಕತಾನತೆಯಿಂದ ಬೇಸರ ಬರಿಸಿದರೆ ಮತ್ತೆ ಕೆಲವು ಕತ್ತಲಲ್ಲಿ ಮಿಂಚಿದಂತೆ ಹಾಯೆನಿಸುವಂತೆ ಮಾಡುತ್ತವೆ. ಕೇವಲ ಇಷ್ಟದೈವದ ಅನುಗ್ರಹ, ಆಶೀರ್ವಾದಗಳ ಬೇಡಿಕೆ, ನಮಸ್ಕಾರ ಹೆಚ್ಚಿನವುಗಳಲ್ಲಿದ್ದರೆ, ಅಲ್ಲಲ್ಲಿ ಮಾತಿನ ಚಮತ್ಕಾರಕ್ಕೂ ಸ್ಥಾನವಿದೆ. ಮಂಗಳ ಶ್ಲೋಕಗಳಲ್ಲಿ ಸಂವಾದಗಳು ಹೊಸದೇನಲ್ಲ. ಆದರೆ ಕೆಲವು ತಮ್ಮ ಕಲ್ಪನಾಚಾತುರ್ಯ, ಲವಲವಿಕೆಯ ಸಂಭಾಷಣೆ ಮೊದಲಾದ ಅಂಶಗಳಿಂದ ಆಪ್ತವಾಗಿಬಿಡುತ್ತವೆ. ಸಂಸ್ಕೃತಸಾಹಿತ್ಯದ ಸ್ವಲ್ಪ ಪರಿಚಯ ಇರುವವರಿಗೂ ಪಾರ್ವತಿ-ಬಾಲಗಣೇಶರ ಸಂವಾದರೂಪದ ಶ್ಲೋಕ " ಹೇ ಹೇರಂಬ, ಕಿಮಂಬ ರೋದಿಷಿ ಕುತ:............." ಪರಿಚಯವಿದೆ. ಅದೇ ಸಾಲಿನಲ್ಲಿ ನಿಲ್ಲುವ ಮತ್ತೊಂದು ಶ್ಲೋಕ ಇಲ್ಲಿದೆ.
कोऽयं द्वारि? हरि: प्रयाह्युपवनं शाखामृगस्यात्र किम्!
कृष्णोऽहं दयिते बिभेमि सुतरां कृष्णादहं वानरात्॥
मुग्धेऽहं मधुसूदन: पिब लतां तामेव तन्वीं अले
इत्थं निर्वचनीकृतो दयितया हीतो हरि: पातु व:॥

ಕೋsಯಂ ದ್ವಾರಿ, ಹರಿ:, ಪ್ರಯಾಹ್ಯುಪವನಂ ಶಾಖಾಮೃಗಸ್ಯಾತ್ರ ಕಿಮ್!

ಕೃಷ್ಣೋsಹಂ ದಯಿತೇ ಬಿಭೇಮಿ ಸುತರಾಂ ಕೃಷ್ಣಾದಹಂ ವಾನರಾತ್||

ಮುಗ್ಧೇSಹಂ ಮಧುಸೂದನ: ಪಿಬ ಲತಾಂ ತಾಮೇವ ತನ್ವೀಂ ಅಲೇ

ಇತ್ಥಂ ನಿರ್ವಚನೀಕೃತೋ ದಯಿತಯಾ ಹ್ರೀತೋ ಹರಿ: ಪಾತು ವ:||

ಶ್ಲೋಕದ ಹಿನ್ನೆಲೆ ಹೀಗಿದೆ: ರಾಧೆ ಕೃಷ್ಣನಿಗಾಗಿ ಕಾತರಿಸಿ ಹಂಬಲಿಸುತ್ತಿರುವ ದಿನವಿಡೀ ಆತ ಅವಳ ಸನಿಹಕ್ಕೂ ಸುಳಿದಿರುವುದಿಲ್ಲ. ಆಶಾಭಂಗ, ಸಿಟ್ಟುಗಳಿಂದ ತತ್ತರಿಸುತ್ತಿರುವ ರಾಧೆ ಮನದಲ್ಲಿಯೇ ಸೇಡಿಗೆ ಹಾತೊರೆಯುತ್ತಿರುವ ಹೊತ್ತಲ್ಲಿ ರಾತ್ರಿ ಅವಳ ಮನೆಬಾಗಿಲು ಬಡಿವ ಸದ್ದು!!
ರಾಧೆಯ ಸಂಭಾಷಣೆಯಿಂದ ಈ ಶ್ಲೋಕ ಶುರುವಾಗುತ್ತದೆ.

"ಯಾರಲ್ಲಿ ಬಾಗಿಲಲಿ?" "ನಾನು ಹರಿ, ಪ್ರಿಯತಮೆ" ತೊಲಗು ತೋಟಕೆ ಗಡವ ಕೋತಿಯಿಲ್ಲೇಕೆ?"
"ದಯವಂತೆ, ನಾ ಕೃಷ್ಣ" "ಕಪ್ಪು ಕತ್ತಲೆಯೇ? ಕೋತಿಗಿಂತಲು ನಾನು ಹೆದರುವೆನು ಅದಕೆ.
"ಮುಗುದೆಯೇ ನನ್ನನ್ನು ಮಧುಸೂದನನೆಂಬರು" ಹೋಗಾಚೆ ಎಲೆ ದುಂಬಿ, ಹೀರು ಹೂಬಳ್ಳಿಯನು"
ಈ ಪರಿಯಲಾ ಹರಿಯೆ ನಾಚಿ ಬಾಯ್ಮುಚ್ಚಿರಲು ಅವನ ಕರುಣೆಯೆ ಸಲಹಲೆಮ್ಮನನವರತ.

ತನ್ನ ಪರಿಚಯ ಹೇಳಿಕೊಳ್ಳಲು ಕೃಷ್ಣ ಬಳಸುವ ತನ್ನ ಬೇರೆ ಬೇರೆ ಹೆಸರುಗಳಿಗೆ ಬೇರೆ ಬೇರೆ ಅರ್ಥ ಕೊಟ್ಟು ಕೃಷ್ಣನನ್ನೇ ಕಿಚಾಯಿಸುತ್ತಾಳೆ ರಾಧೆ!!
ಇಲ್ಲಿರುವ ಮತ್ತೊಂದು ಸ್ವಾರಸ್ಯ ಎಂದರೆ ಸಂಸ್ಕೃತದ " ನಿರ್ವಚನ" ಪದದ ಬಳಕೆ. ನಿರ್ವಚನ ಶಬ್ದಕ್ಕೆ ಇರುವ ನಿತ್ಯದ ಅರ್ಥದೊಡನೆ "ಬಾಯ್ಮುಚ್ಚಿಸು" ಎಂಬ ಅರ್ಥವನ್ನೂ ಧ್ವನಿಸುತ್ತದೆ.

** ಕೃಷ್ಣನ ತರಹೇವಾರಿ ಹೆಸರುಗಳಿಗೆ ರಾಧೆ ಬೇಕೆಂತಲೇ ಕಲ್ಪಿಸುವ ಕೀಟಲೆಯ ಅರ್ಥಗಳು
1) ಹರಿ= ಕೋತಿ
2) ಕೃಷ್ಣ= ಕಾರ್ಗತ್ತಲೆ
3)ಮಧುಸೂದನ= ದುಂಬಿ