ಪ್ರಸ್ತುತ

ಪ್ರಸ್ತುತ

ಬೆಳಕು ಹಾಯದ ದಾರಿಯಲಿ
ಹುಟ್ಟುತ್ತವೆ ನೂರಾರು ಕನಸುಗಳು
ಕವಲೊಡೆದ ದಾರಿಯಲಿ ನಡೆವಾಗ
ಮೈ ತುಂಬಿ ನಿಂತ ಹಸಿರು ಪ್ರಕೃತಿಯ
ಉಬ್ಬು ತಗ್ಗುಗಳ ಮೇಲೆ ಸೂರ್ಯರಶ್ಮಿ
ಹಾಸು ಹುಲ್ಲುಗಳ ಮೇಲಿನ
ಇಬ್ಬನಿಯು ಪನ್ನೀರ ಚಿಮುಕುವುದು

ಸುಪ್ರಭಾತದ ರಂಗಿನೋಕುಳಿಯಲ್ಲಿ
ಭುವಿಯ ಮೇಲಿನ ಅರುಣ ರಂಗೋಲಿ
ಮಾಮರದ ಕೋಗಿಲೆಯ ಉಲಿಯುವಿಕೆಗೆ
ಹಾಲು ಹಸುವಿನ ಕೊರಳಗಂಟೆಯ ಧ್ರುವ ತಾಳ

ಮೈ ಮರೆದಳಾಕೆ ರವಿಯ ಬಾಹುಬಂಧನದಲ್ಲಿ
ಬಿಸಿಲ ಬೇಗೆಯ ಚುಂಬನ ಬಿಸಿ ಅಧರಗಳ
ಸ್ಪರ್ಶಿಸಲು, ನಾಚಿ ನೀರಾದಳಾಕೆ
ಹೊತ್ತು ಕಳೆದಾಗ ಮುಂಗುರುಳ ನೇವರಿಸಿ
ಸಂಜೆ ಕಿರಣಕೆ ಅರಳಿದವು ಕೆಂಪು ಕೆನ್ನೆ

ತುಂಬಿದೆದೆಯಲಿ ಉಸಿರ ಬಿಗಿಹಿಡಿದು
ಮುಗಿಲು ಮೂಡಿದ ನಭವು
ತುಂಬು ಬಸಿರನು ಹೊತ್ತು ಹರುಷ ತುಂಬಿದಾಗ
ತುಂಟ ನಗೆ ಬೀರಿ ರವಿ ತಾ ಜಾರಿ
ಮುಳುಗಿದ ಸಾಗರದ ತೆಕ್ಕೆಯಲಿ

ವಿರಹ ವೇದನೆಯೊಳು ಬಾನಿಗಿಣುಕಿದಳು
ಚುಕ್ಕಿಗಳು ಕೆಣಕಿದವು
ಕಳೆದ ಗಳಿಗೆಯ ನೆನೆದು
ಬಿಕ್ಕಿ, ಅಶ್ರು ಹನಿಗೂಡಿದಾಗ
ಚಂದಿರನು ಬಂದಿದ್ದ ನೀಲಿ ಸೆರಗಿನ ಹಿಂದೆ
ಬೆಳದಿಂಗಳ ಹೊನಲು ಹರಿಸಿ
ಅಳುವ ಕನ್ಯೆಯ ಬಾಚಿ ತಬ್ಬಿದಾಗ
ಭೂ ಮಗಳು ನಾಚಿದಳು,
ಬೆಳ್ಳಿ ಹಾದರದ ಮುಗ್ಗುಲಳೆದು ನಕ್ಕಳು
ಇದುವೆ ಹಗಲಿರುಳೆಂದು..

Rating
No votes yet