ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
‘ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ' ಎನ್ನುವುದು ಪ್ರಮೋದ ಕರಣಂ ಅವರ ಎರಡನೇ ಕೃತಿ. ೮೫ ಪುಟಗಳ ಪುಟ್ಟ ಕಾದಂಬರಿಯೇ ಆದರೂ ಇದು ಹೇಳುವ ಭಾವನೆಗಳು ಹಲವಾರು. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಎ.ಕೆ.ರಾಮೇಶ್ವರ. ಇವರು ತಮ್ಮ ಪುಟ್ಟ ಮುನ್ನುಡಿಯಲ್ಲೇ ಈ ಕಾದಂಬರಿಯ ಸಾರವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ…
“‘ಪರಿಣಯ್' ಬಿಸಿಲು ನಾಡಿನ ಕಲಬುರುಗಿಯ ಯುವಕ, ಬೆಂಗಳೂರು ನಗರದಲ್ಲಿ ಕೆಲಸ. ‘ಪ್ರೀತಿ' ಬೆಂಗಳೂರು ಮೂಲದವಳು. ಬಿಸಿಲುನಾಡು ಕಲಬುರುಗಿಯಲ್ಲಿ ಕೆಲಸ. ಬೆಂಗಳೂರು ತಂಪು, ಕಂಪ್ಯ್ ನೀಡುವ ಆಹ್ಲಾದಕರ ವಾತಾವರಣ ಪರಿಣಯ್ ಮೆಚ್ಚಿಕೊಳ್ಳುತ್ತಾನೆ. ‘ಪ್ರೀತಿ' ಅಂತಹ ಆಹ್ಲಾದಕರ ವಾತಾವರಣದಿಂದ ಬಿಸಿಲುನಾಡು ಕಲಬುರುಗಿಗೆ ಬಂದವಳು ಇಲ್ಲಿಯ ಬಿಸಿಲಿನ ತಾಪ, ಧಗಧಗಿಸುವ ಝಳ ಬೆವರು ಹನಿ ಬಿಸಿಲಿನಲ್ಲಿ ಬೆಂದು ‘ಉಸ್' ಎಂದು ಉಸಿರು ಬಿಡುತ್ತ ಇದು ‘ಎತ್ತಣಿಂದ ಎತ್ತಣ ಸಂಬಂಧ' ಎಂದು ತನ್ನೊಳಗೆ ತಾನೇ ಮಗ್ನಳಾಗುತ್ತಾಳೆ. ‘ಪ್ರೀತಿ' , ಪರಿಣಯ್ ಪರಿಚಯದೊಂದಿಗೆ ಸ್ನೇಹದ ಕೊಂಡಿ ಬೆಸೆದುಕೊಳ್ಳುತ್ತದೆ. ಅವರಿಬ್ಬರ ಪ್ರಯಾಣ ‘ಪ್ರಣಯ'ಕ್ಕೆ ನಾಂದಿ ಹಾಡುತ್ತದೆ. ಇದು ಈ ಕಾದಂಬರಿಯ ಕಥಾ ವಸ್ತು.
ಪರಿಣಯ್ ತುಂಬಾ ಸುಸಂಸ್ಕೃತ ವ್ಯಕ್ತಿ. ಗೆಳತಿ ಪ್ರೀತಿಯೂ ಅಷ್ಟೇ, ಅವರು ತಮ್ಮ ಮಾತುಕತೆಗಳಲ್ಲಿ ಕನ್ನಡ ಭಾಷೆಯ ಅಭಿಮಾನ, ತಮ್ಮ ಸುತ್ತಾಟದಲ್ಲಿ ಐತಿಹಾಸಿಕ ಸ್ಥಳ, ಸಾಂಸ್ಕೃತಿಕ ಕೇಂದ್ರಗಳ ನಿರೀಕ್ಷಣೆ, ತಮ್ಮ ವಿದ್ಯಾಭ್ಯಾಸ ಬಗ್ಗೆ ಒಲವು ಕಾದಂಬರಿಗೆ ಕಳೆ ತಂದುಕೊಟ್ಟಿದೆ. ಬಾಲ್ಯದ ಸ್ನೇಹಿತೆ ಪ್ರೇಮಳ ಭೇಟಿ ಆಶ್ಚರ್ಯ ಮೂಡಿಸುತ್ತದೆ. ಅಲ್ಲಿ ಪ್ರೀತಿಯ ಪ್ರಸ್ತಾವನೆಯಾಗುತ್ತದೆ. ಕಥಾ ನಾಯಕ ಪರಿಣಯ್ ತುಂಬ ಗಂಭೀರ ವ್ಯಕ್ತಿ. ತನ್ನ ವ್ಯಕ್ತಿತ್ವಕ್ಕೆ ಕುಂದುಬರದಂತೆ ನಡೆದುಕೊಂಡು ಬಂದ ಯುವಕ. ತಾನು ಪ್ರೀತಿಸಿದ ಪ್ರೀತಿಯೊಂದಿಗೆ ಮದುವೆ ನಡೆದರೆ ತನ್ನ ಬಾಲ್ಯದ ಸ್ನೇಹಿತೆಯ ಮದುವೆ ತನ್ನ ಗೆಳೆಯ ರವಿಯೊಂದಿಗೆ ನಡೆಯುತ್ತದೆ. ಹೀಗೆ ಕಾದಂಬರಿ ಸುಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ.”
ತಮ್ಮ ‘ಮನದಾಳದ ಮಾತು' ನಲ್ಲಿ ಕಾದಂಬರಿಕಾರರಾದ ಪ್ರಮೋದರು ಈ ಕಾದಂಬರಿಯ ಕಥಾ ವಸ್ತುವಿನ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. “ಕಾದಂಬರಿ ಕ್ಷೇತ್ರದಲ್ಲಿ ಸಾಧ್ಯ-ಅಸಾಧ್ಯಗಳ ನಡುವೆ ಎಂಬ ಮೊದಲ ಪ್ರಯತ್ನದೊಂದಿಗೆ ಅಂಬೆಗಾಲಿಟ್ಟಾಗ, ಹೃದಯ ಶ್ರೀಮಂತಿಕೆಯೊಂದಿಗೆ ಸ್ವಾಗತ ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಕಾದಂಬರಿ ಕೊಂಡು ಓದಿ, ವಿಶ್ಲೇಷಿಸುವ ಮೂಲಕ ನನ್ನ ಬರವಣಿಗೆಗೆ ಶಕ್ತಿ ತುಂಬಿದ ಓದುಗ ದೇವರುಗಳಿಗೆ ಎರಡನೇ ಪ್ರಯತ್ನವಾಗಿ ಏನು ಬರೆಯೋಣ? ಎಂಬ ಆಲೋಚನೆಯಲ್ಲಿರುವಾಗ ಹೊಳೆದದ್ದೇ, ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿರುವ ಪ್ರೀತಿ, ಪ್ರೇಮ ಹಾಗೂ ಮದುವೆಗಳ ನಡುವಿನ ಸನ್ನಿವೇಶಗಳು.”
ಈ ಪುಟ್ಟ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಮಧುರಾ ಕರ್ಣಮ್. ತಮ್ಮ ಬೆನ್ನುಡಿಗೆ ಅವರು ‘ದೃಶ್ಯಗಳ ಕೊಲಾಜ್ ಚಿತ್ರ' ಎಂದು ಕರೆದುಕೊಂಡಿದ್ದಾರೆ. ಅದರಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಮುಖ್ಯಾಂಶ “ತ್ರಿಕೋನ ಪ್ರೇಮಗಾಥೆಯನ್ನು ಸೊಗಸಾದ ದೃಶ್ಯಗಳ ಕೊಲಾಜ್ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ ಲೇಖಕ ಪ್ರಮೋದ ಕರಣಂ. ಮೂವರ ಮನಸ್ಸಿನ ಭಾವನೆಗಳು ಪ್ರೀತಿ, ಪ್ರೇಮಗಳ ನಡುವೆ ಮಿಡಿದು ಮಧ್ಯೆ ಅನೇಕ ಟಿಪ್ಪಣಿಗಳೂ ಸೇರಿಕೊಂಡು ಸುಂದರ ಹೂಗುಚ್ಛವಾಗಿದೆ. ಹುಲಿಗೆಮ್ಮ ರೇಣುಕಾದೇವಿಯ ಮಹಿಮೆ, ಆಹಾರ ಸೇವನೆ, ಮುತ್ತಿನ ಮತ್ತು, ವಿವಾಹ ಮುಂತಾದುವುಗಳನ್ನು ಕಾದಂಬರಿಗೆ ಪೂರಕವಾಗಿಸಿ ಮಾಹಿತಿ ನೀಡಿದ್ದಾರೆ. ಚಹಾ ಮತ್ತು ಕೊಡಗಿನ ಕೊಡವ ಸಂಪ್ರದಾಯಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ಎರಡೂ ಹೆಣ್ಣುಗಳ ಮಧ್ಯೆ ಸಿಲುಕಿದ್ದ ನಾಯಕನನ್ನು ನಾಯಕಿಯೊಂದಿಗೆ ಸೇರಿಸಿ ಭಗ್ನ ಹೃದಯಿ ಪ್ರೇಮಿಕೆಗೂ ವರನನ್ನು ಒದಗಿಸಿ ನಾಟಕೀಯ ತಿರುವುಗಳೊಂದಿಗೆ ಕತೆಯನ್ನು ಸುಖಾಂತ್ಯಗೊಳಿಸಿದ್ದಾರೆ.
‘ಸಾಧ್ಯ ಅಸಾಧ್ಯಗಳ ನಡುವೆ' ಎಂಬ ತಮ್ಮ ಮೊದಲ ಕಾದಂಬರಿಯಿಂದ ಓದುಗರಿಗೆ ಪರಿಚಿತರಾಗಿರುವ ಪ್ರಮೋದ ಕರಣಂ ತಮ್ಮ ಎರಡನೇ ಪ್ರಯತ್ನವನ್ನಿಲ್ಲಿ ದಾಖಲಿಸಿದ್ದಾರೆ. ಭಾಷೆಯ ಮೇಲಿನ ಹಿಡಿತ ಹಾಗೂ ಸೊಗಸಾದ ಉಪಮೆಗಳು ಕಾದಂಬರಿಯ ಅಂದ ಹೆಚ್ಚಿಸಿ ಲೇಖಕರ ಬಗ್ಗೆ ಭರವಸೆ ಮೂಡಿಸುತ್ತವೆ. ಆರಂಭದ ಅರೆಕೊರೆಗಳನ್ನು ನೀಗಿಸಿಕೊಂಡು ಮಾಗುತ್ತಾ ಸಾಗಿದಲ್ಲಿ ಕನ್ನಡಕ್ಕೊಬ್ಬ ಉತ್ತಮ ಕಾದಂಬರಿಕಾರ ದೊರೆಯುವುದರಲ್ಲಿ ಸಂದೇಹವಿಲ್ಲ"
ಕಾದಂಬರಿಯು ಪುಟ್ಟ ಪುಟ್ಟ ಅಧ್ಯಾಯಗಳೊಂದಿಗೆ ಮೂಡಿಬಂದಿರುವುದರಿಂದ ಓದುಗರನ್ನು ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಈ ಕಾದಂಬರಿಗೆ ರಾಜ್ಯ ಮಟ್ಟದ ಪ್ರಶಸ್ತಿಯೂ ದೊರೆತಿದೆ ಎನ್ನುವುದು ಕಾದಂಬರಿಕಾರ ಪ್ರಮೋದ ಕರಣಂ ಅವರ ಹೆಗ್ಗಳಿಕೆ.