ಬೀರಬಲ್ಲನ ಚತುರತೆ
ಮೊಘಲ್ ಚಕ್ರವರ್ತಿ ಅಕ್ಬರ್ ಒಂದು ದಿನ ರಾತ್ರಿ ವೇಷ ಬದಲಾವಣೆ ಮಾಡಿಕೊಂಡು ತಿರುಗಾಡುತ್ತಾ ಬಹಳ ನೀರಡಿಕೆಯಾದುದರಿಂದ ಒಂದು ಮನೆಯನ್ನು ನೋಡಿ ಬಾಗಿಲು ತಟ್ಟಿದನು.
ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಯುವತಿಯೊಬ್ಬಳು ಬಾಗಿಲು ತೆರೆದು " ಏನು ಬೇಕು?" ಎಂದು ಪ್ರಶ್ನಿಸಿದಳು.
"ನನ್ನದು ಬೇರೆ ಊರು. ತುಂಬಾ ದಾಹವಾಗಿದೆ. ಅದಕ್ಕೆ ಬಾಗಿಲು ತಟ್ಟಿದೆ. ಸ್ವಲ್ಪ ನೀರು ಕೊಡುವಿರಾ?" ಎಂದು ಅಕ್ಬರ್.
"ಬೇರೆ ಊರಿನವರೆಂದೆಯೇ ಹೊರತು ಯಾರೆಂದು ಸ್ಪಷ್ಟವಾಗಿ ಹೇಳಲಿಲ್ಲ. ನೀನು ಈಗಿನವನೋ, ಆಗಿನವನೋ? ಆಗಿಗೂ ಈಗಿಗೂ ಸೇರಿದವನೋ? ಅಥವಾ ಯಾವುದಕ್ಕೂ ಸೇರದಿರುವವನೋ? ಯಾವ ಬಗೆಯವನೆಂದು ಸರಿಯಾಗಿ ಹೇಳಿಬಿಡು. ನೀರು ಕೊಡುತ್ತೇನೆ." ಎಂದಳು ಆ ಯುವತಿ.
ಅಕ್ಬರನಿಗೆ ಅದೊಂದೂ ತಿಳಿಯದೆ, ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ತುಸು ಲಜ್ಜಿತನಾಗಿ ಅಲ್ಲಿಂದ ಹೊರಟುಹೋಗಲು ಹಿಂದಕ್ಕೆ ತಿರುಗಿದನು.
ಆಗ ಆ ಯುವತಿ "ತಲೆಯಲ್ಲಿ ಮರ ಬೆಳೆಯುವವನೇ, ನಿಲ್ಲು ಹೋಗಬೇಡ. ನೀರು ಕುಡಿದು ಹೋಗುವೆಯಂತೆ" ಎಂದು ಅವನನ್ನು ಹಿಂದಕ್ಕೆ ಕರೆದು ನೀರು ಕೊಟ್ಟಳು.
ನೀರು ಕುಡಿದು ಅಲ್ಲಿಂದ ಹೊರಟ ಅಕ್ಬರನಿಗೆ ರಾತ್ರಿ ಪೂರ ಯೋಚನೆ ಮಾಡಿದರೂ ಅವಳು ಹೇಳಿದ ಮಾತಿಗೆ ಏನು ಅರ್ಥ ಎಂದು ತಿಳಿಯಲಿಲ್ಲ. ಬೆಳಗಾದ ಕೂಡಲೇ ಅಕ್ಬರ್ ಬೀರಬಲ್ಲನನ್ನು ಕರೆಯಿಸಿ, ಯುವತಿ ಹೇಳಿದ ಮಾತುಗಳನ್ನು ಹೇಳಿ, ಅಂತಹ ಮನುಷ್ಯರು ಯಾರೆಂದು ಹುಡುಕಿ ಕರೆದುಕೊಂಡು ಬರಲು ಹೇಳಿದನು.
ಬೀರಬಲ್ಲನು ಆ ಮಾತುಗಳನ್ನು ಮನನ ಮಾಡುತ್ತಾ ನಗರದಲ್ಲಿ ತಿರುಗಾಡುತ್ತಾ ಹೋದನು. ಅವನ ಕಣ್ಣು ಎಲ್ಲವನ್ನು ಗಮನಿಸುತ್ತಿತ್ತು. ಒಂದು ಮನೆಯ ಮುಂದೆ ಯಾರೋ ಯಾವುದಕ್ಕೋ ಜಗಳವಾಡುವುದನ್ನು ನೋಡಿ ಸಮೀಪ ಹೋದನು.
ಆ ಮನೆಯಲ್ಲಿ ಒಬ್ಬ ಧನವಂತನಿದ್ದನು. ಧನವಂತನೂ ಅವನ ಮಗನೂ ವ್ಯಾಪಾರ ಮಾಡುತ್ತಾ ಧನಾರ್ಜನೆ ಮಾಡುವವರು. ‘ತಂದೆ ಬಡಬಗ್ಗರಿಗೆ ಸಂತರ್ಪಣೆ ಮಾಡಿಸುತ್ತಿರಲು, ಮಗ "ಹೀಗೆ ಮಾಡಿದರೆ ಸಂಪಾದಿಸಿದ್ದೆಲ್ಲಾ ನಾಶವಾಗಿ ಹೋಗುತ್ತದೆ" ಎಂದು ಆಕ್ಷೇಪಿಸಿ ಅಪ್ಪನೊಂದಿಗೆ ಜಗಳ ಆಡುತ್ತಿದ್ದನು. ಹತ್ತಾರು ಮಂದಿ ಆ ಜಗಳದಲ್ಲಿ ಕೂಡಿದ್ದರೂ, ಆ ಮನೆಯ ಮುಂದಿನ ಜಗಲಿಯಲ್ಲಿ ಕುಳಿತಿದ್ದ ಒಬ್ಬ ಸನ್ಯಾಸಿ ನಿಶ್ಚಲನಾಗಿ ಎತ್ತಲೋ ನೋಡಿಕೊಂಡಿದ್ದನು.
ಇದನ್ನು ನೋಡಿ ಬೀರಬಲ್ಲನು ಆ ತಂದೆ ಮಗಂದಿರ ಬಳಿ ಹೋಗಿ ಅವರಿಬ್ಬರೂ ಅಕ್ಬರನ ಬಳಿಗೆ ಬರಲು ಒಪ್ಪಿಸಿದನು. ಆ ಸನ್ಯಾಸಿಯನ್ನು ಕೂಡಾ ತನ್ನೊಂದಿಗೆ ಬರಲು ಕೇಳಿಕೊಂಡನು.
ಬೀರಬಲ್ ಆ ಮೂವರನ್ನೂ ಕರೆದುಕೊಂಡು ಹೊರಡುವಾಗ, ಮತ್ತೊಬ್ಬ ಮನುಷ್ಯ ಅವನ ಬಳಿಗೆ ಬಂದು, “ನೀವು ಮೂವರೂ ಎಲ್ಲಿಗೋ ಹೋಗುವಿರಲ್ಲಾ? ನನ್ನನ್ನೂ ಜತೆಯಲ್ಲಿ ಕರೆದೊಯ್ಯಿರಿ. ಬರಲೇ? ಎಂದನು. ಬೀರಬಲ್ಲನು ಒಂದೆರಡು ಕ್ಷಣ ಯೋಚಿಸಿ “ಸರಿ, ಬಾ” ಎಂದನು.
ಅಕ್ಬರನ ಬಳಿಗೆ ಹೋಗಿ ಬೀರಬಲ್ಲನು ತಾನು ಕರೆ ತಂದವರನ್ನು ಕುರಿತು ಹೀಗೆ ವಿವರಿಸಿದನು “ ಪ್ರಭುವೇ, ಈ ಧನಿಕನ ಮಗ ಸಂಪಾದಿಸಿದ್ದೆಲ್ಲಾ ತನ್ನ ಕುಟುಂಬದ ಖರ್ಚಿಗೇ ಬೇಕೆನ್ನುವವನು. ಅವನು ಈಗಿನ ಮನುಷ್ಯ. ಧನಿಕನು ಹಾಗಿಲ್ಲದೆ ಸ್ವಲ್ಪ ಸ್ವಲ್ಪ ದಾನಧರ್ಮ ಮಾಡಬೇಕು ಎನ್ನುತ್ತಾನೆ. ಅವನು ಈಗಿಗೂ ಆಗಿಗೂ ಸೇರಿದ ಮನುಷ್ಯ. ಈ ಸನ್ಯಾಸಿಗೆ ದೇವರ ಧ್ಯಾನದ ಹೊರತು ಬೇರೆ ವಿಚಾರವೇ ಇಲ್ಲ. ಆದುದರಿಂದ ಅವನು ಈಗಿನ ಮನುಷ್ಯ. ಈ ಕೊನೆಯವನು ಸುಮ್ಮನೆ ತಿರುಗಾಡುವವನು. ಆಗಿಗೂ ಈಗಿಗೂ ಯಾವುದಕ್ಕೂ ಸೇರದ ಮನುಷ್ಯನಿವನು"
ಬೀರಬಲ್ಲನು ವಿವರಿಸಿದನ್ನು ಕೇಳಿ ತೃಪ್ತನಾದ ಅಕ್ಬರ್, “ತಲೆಯಲ್ಲಿ ಮರ ಬೆಳೆಯುವವನೆಂದರೆ ಏನು ಅರ್ಥವೋ? ಅದನ್ನೂ ಹೇಳು" ಎಂದನು.
ಬೀರಬಲ್ ನಗುತ್ತಾ “ಪ್ರಭುಗಳು ಕ್ಷಮಿಸಬೇಕು. ಮಣ್ಣಿನಲ್ಲಿ ಮರ ಬೆಳೆಯುವುದರಿಂದ ತಲೆಯಲ್ಲಿ ಮಣ್ಣು ಇರುವನೆಂದು ಅರ್ಥ" ಎಂದನು. ಅಕ್ಬರನು ಅದನ್ನು ಕೇಳಿ, ಆ ಯುವತಿ ತನ್ನನ್ನೇಕೆ ಪರೋಕ್ಷವಾಗಿ ಮಂದಮತಿಯೆಂದಳು ಎಂದು ತಿಳಿದುಕೊಂಡನು. ಇಷ್ಟು ಸಣ್ಣ ಸೂಕ್ಸ್ಮ ಮಾತನ್ನು ಅರ್ಥ ಮಾಡಿಕೊಳ್ಳದ ತಾನು ನಿಜವಾಗಿಯೂ ಮಂದಮತಿಯೇ ಎಂದು ತಿಳಿದುಕೊಂಡನು.
ಯುವತಿಯ ಜಾಣತನವನ್ನು ಮೆಚ್ಚಿಕೊಂಡ ಅಕ್ಬರನು ಆಕೆಯನ್ನು ಕರೆಯಿಸಿ ಸೂಕ್ತವಾದ ಉಡುಗೊರೆಯನ್ನು ನೀಡಿ ಗೌರವಿಸಿದನು. ಅದೇ ರೀತಿ ಬೀರಬಲ್ಲನಿಗೂ ಬಹುಮಾನಗಳು ನೀಡಲ್ಬಟ್ಟವು. ಎಂದಿನಂತೆ ಸದನದ ಉಳಿದ ಸದಸ್ಯರು ಬೀರಬಲ್ಲನಿಗೆ ಸಿಕ್ಕ ಬಹುಮಾನಗಳನ್ನು ನೋಡಿ ಅಸೂಯೆಯಿಂದ ಹೊಟ್ಟೆ ಉರಿಸಿಕೊಂಡರು.
(೧೯೭೮ರ ‘ಬೊಂಬೆಮನೆ' ಪತ್ರಿಕೆಯಿಂದ ಸಂಗ್ರಹಿತ)