ಯಕ್ಷಗಾನದ ಚಿತ್ರ ಬಿಚ್ಚಿಟ್ಟ ಹಳೆಯ ನೆನಪುಗಳು !
ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಮೂರು ನಾಲ್ಕು ಗ್ಯಾಸ್ ಲೈಟುಗಳು ಕಾಣಿಸುತ್ತಿವೆ. ಮೇಲಿನಿಂದ ಕೆಳಗೆ ಮೈಕ್ ಇಳಿಬಿಟ್ಟಿದೆ. ಸ್ಟೇಜ್ ಇಲ್ಲ, ರಂಗಸ್ಥಳವು ನೆಲದ ಮೇಲೆಯೇ ಇದೆ. ರಂಗಸ್ಥಳಕ್ಕೆ ಮಾವಿನ ಎಲೆಗಳ ತೋರಣ ಇದೆ. ಹಿಮ್ಮೇಳದವರು ಹಡಿಮಂಚದ ಮೇಲೆ ಕುಳಿತಿದ್ದಾರೆ. ಭಾಗವತರ ಹಿಂದೆ ಅಭಿಮಾನಿಗಳು ಗುಂಪಾಗಿ ನಿಂತಿದ್ದಾರೆ. ಮಕ್ಕಳೆಲ್ಲ ರಂಗಸ್ಥಳದ ಸುತ್ತಲೂ ಕುಳಿತಿದ್ದಾರೆ. ಹಿರಿಯ ಪ್ರೇಕ್ಷಕರು ಸ್ವಲ್ಪ ಹಿಂದೆ ನಿಂತಿದ್ದಾರೆ ಅಥವಾ ಕುರ್ಚಿಯಲ್ಲಿ ಕುಳಿತಿದ್ದಾರೆ. ಹುಡುಗನೋರ್ವ ರಂಗಸ್ಥಳದ ಮೇಲೆಯೇ ಓಡುತ್ತಿದ್ದಾನೆ. ಕೇದಗೆ ಮುಂದಲೆ ವೇಷದವರಿಗೆ ಕತ್ತರಿ ಎದೆಕಟ್ಟು ಮತ್ತು ಬೆಳ್ಳಿಯ ಭುಜಕೀರ್ತಿಗಳಿವೆ. ಇವುಗಳನ್ನೆಲ್ಲಾ ಗಮನಿಸುವಾಗ ಇದು ಸುಮಾರು 70 ರ ದಶಕದ ಫೋಟೋ ಇರಬಹುದು ಅನ್ನಿಸುತ್ತದೆ.
ಏಕೆಂದರೆ ಹೆಚ್ಚುಕಡಿಮೆ ಅದೇ ಸಮಯದಲ್ಲಿ ಯಕ್ಷಗಾನ ರಂಗಸ್ಥಳಕ್ಕೆ ಮೈಕ್ ಪ್ರವೇಶ ಆಗಿದ್ದು. ಮೊದಲು ಮೈಕ್ ಮಾತ್ರ ಬಂತು , ವಿದ್ಯುದ್ದೀಪ ಬರಲು ಮತ್ತೆ ಸುಮಾರು ಐದಾರು ವರ್ಷಗಳೇ ತಗಲಿತ್ತು. ಇಲ್ಲಿ ಮೈಕ್ ಮಾತ್ರ ಇದೆ , ಆದರೆ ವಿದ್ಯುದ್ದೀಪ ಆಗಿನ್ನೂ ಬಂದಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕಾಳಿಂಗ ನಾವಡರು ಯಕ್ಷರಂಗಕ್ಕೆ ಮೇಳಕ್ಕೆ ಪ್ರವೇಶಿಸಿದ ಸಮಯದಲ್ಲಿ ಹೀಗೇ ಇದ್ದ ನೆನಪು.
ಆ ಕಾಲದಲ್ಲಿ ಸ್ಟೇಜ್ ಇದ್ದಿರಲಿಲ್ಲ , ಆಟದ ಮನೆಯವರು ನೆಲದ ಮೇಲೆಯೇ ರಂಗಸ್ಥಳ ನಿರ್ಮಿಸಿ ಕೊಡುತ್ತಿದ್ದರು. ಮ್ಯಾಟ್ ಇರಲಿಲ್ಲ , ಕುಣಿಯುವ ಜಾಗದಲ್ಲಿ ಭತ್ತದ ಉಮಿಯನ್ನು ಹರಡುತ್ತಿದ್ದರು. ರಂಗಸ್ಥಳದ ಪಕ್ಕದಲ್ಲೇ ಹುಲ್ಲು ಅಥವಾ ತೆಂಗಿನ ಮಡಿಲಿನ ಮೇಲೆ ಮಕ್ಕಳು ಕುಳಿತುಕೊಳ್ಳುತ್ತಿದ್ದರು. ಮಂದುಗಡೆ ಕುಳಿತ ಮಕ್ಕಳಿಗೆ ಓಡಾಡಲು ರಂಗಸ್ಥಳವೇ ಪ್ಯಾಸೇಜ್ ಆಗಿತ್ತು ಆಗ. ಆ ಕಾಲದಲ್ಲಿ ಇವೆಲ್ಲಾ ಸಾಮಾನ್ಯ ಆಗಿತ್ತು. ಮಕ್ಕಳ ಓಡಾಟ ತೀರಾ ಜಾಸ್ತಿಯಾದಾಗ ಅಪರೂಪಕ್ಕೆ ಒಮ್ಮೆ ಯಾರಾದರೂ ಹಿರಿಯರು ಅಥವಾ ವೇಷಧಾರಿಗಳು ರಂಗಸ್ಥಳದ ಮೇಲೆ ಓಡಾಡದಂತೆ ವಿನಂತಿಸುತ್ತಿದ್ದರು ಅಷ್ಟೇ. ಭಾಗವತರ ಹಿಂದೆ ಅಭಿಮಾನಿಗಳು ಗುಂಪಾಗಿ ನಿಲ್ಲುವುದು ಆಗ ಮಾಮೂಲಿಯಾಗಿತ್ತು. ನಾನೂ ಕೂಡಾ ಅಲ್ಲೇ ನಿಲ್ಲುತ್ತಾ ಇದ್ದೆ.
ಈ ಫೋಟೋವನ್ನು ಮಂದಾರ್ತಿಯ ಪ್ರಸಾದ್ ಎಂಬವರು ‘ನಾದಾವಧಾನ’ ಎಂಬ ವಾಟ್ಸಪ್ ಗ್ರೂಪಲ್ಲಿ ಹಾಕಿದ್ದರು. ಇಂತಹ ಅಮೂಲ್ಯವಾದ ಹಳೆಯ ಫೋಟೋ ನೀಡಿದ ಹೇಮಂತ್ ಶ್ರೀಯಾನ್ ಅವರಿಗೆ ಅನಂತಾನಂತ ಧನ್ಯವಾದಗಳು. ಇದು ಬೆಣ್ಣೆಕುದ್ರಿನಲ್ಲಿ ನಡೆದ ಆಟದ್ದಂತೆ. ಇದನ್ನು ನೋಡಿದ ಎಲ್ಲಾ ಹಿರಿಯರಿಗೂ ಹಳೆಯ ನೆನಪುಗಳು ಮರುಕಳಿಸಿ , ಸಂತೋಷ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಫೋಟೋದಲ್ಲಿ ಇರುವ ಬಲಬದಿಯ ಕೇದಗೆ ಮುಂದಲೆ ವೇಷಧಾರಿ ಬ್ಯಾಲ್ತೂರು ರಮೇಶ್ ಇರಬಹುದು ಮತ್ತು ಭಾಗವತರು ಮರಿಯಪ್ಪ ಆಚಾರ್ಯರು ಆಗಿದ್ದಿರಬಹುದು ಎಂಬುದು ನಮ್ಮ ಮಿತ್ರ ಹಾಗೂ ಭಾಗವತರಾದ ಶಂಕರನಾರಾಯಣದ ಸುಬ್ರಹ್ಮಣ್ಯ ಐತಾಳರ ಊಹೆಯಾಗಿದೆ.
ನೀವೂ ಕೂಡಾ ಈ ಫೋಟೋವನ್ನು ನೋಡಿ ಪ್ರತಿಕ್ರಿಯಿಸಿ , ಹಳೆಯ ನೆನಪುಗಳನ್ನು ಮೆಲುಕುಹಾಕೋಣ.
- ಹರಿಕೃಷ್ಣ ಹೊಳ್ಳ , ಬ್ರಹ್ಮಾವರ.