ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಉದರದೈವ

ಉದರದೈವಕೆ ಜಗದೊಳೆದುರು ದೈವದದೆಲ್ಲಿ|
ಮೊದಲದರ ಪೂಜೆ;ಮಿಕ್ಕೆಲ್ಲವದರಿಂದ||
ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ|
ಹದದೊಳಿರುಸುವುದೆಂತೊ?- ಮಂಕುತಿಮ್ಮ||

ಹೂವು

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ|
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಂಗೆ ಚೆಂದ|
ಬಿಡಿಗಾಸು ಹೂವಳಗೆ- ಮಂಕುತಿಮ್ಮ||

ತಿಳಿವು

ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ|
ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ||
ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು|
ಇಳೆಯೊಳಗದೊಂದು ಸೊಗ- ಮಂಕುತಿಮ್ಮ||

ಮನ

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ|
ತಳದ ಕಸ ತೇಲುತ್ತ ಬಗ್ಗಡವದಹು||
ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ|
ತಿಳಿಯಹುದು ಶಾಂತಿಯಲಿ-ಮಂಕುತಿಮ್ಮ||

(ಲೋಗರು= ಅದರ ಒಳಗಿಳಿಯೆ)

ದುಡುಕದಿರು

ಒಡೆಯದಿರು ತಳಹದಿಯ ಸರಿವಡಿಪೆನದನೆಂದು|
ಸಡಿಲಿಸುವ ನೀಂ ಮರಳಿ ಕಟ್ಟಲರಿತವನೇಂ?||
ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ?|
ದುಡುಕದಿರು ತಿದ್ದಿಕೆಗೆ- ಮಂಕುತಿಮ್ಮ||

ಓಲೆಕಾರ

ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ?|
ಓಲೆಗಳನವರವರಿಗೈದಿಸಿರೆ ಸಾಕು||
ಸಾಲಗಳೊ, ಶೂಲಗಳೊ, ನೋವುಗಳೊ,ನಗುವುಗಳೊ|
ಕಾಲೋಟವವನೂಟ- ಮಂಕುತಿಮ್ಮ||

ಸುಖಿ

ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು|
ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು||
ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು|
ಬಗೆಯಲರಿತವನೆ ಸುಖಿ- ಮಂಕುತಿಮ್ಮ||

ವಿಧಿ

ಹೊಟ್ಟೆಯೊಂದರ ರಗಳೆ ಸಾಲದಂದೇನೊ ವಿಧಿ|
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್||
ಹೊಟ್ಟೆತುಂಬಿದ ತೋಳ ಮಲಗೀತು; ನೀಂ ಪೆರರ|
ದಿಟ್ಟಿಸುತ ಕರುಬುವೆಯೊ- ಮಂಕುತಿಮ್ಮ||

ಆತುರ

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ|
ಚಿನ್ನದಾತುರಕಿಂತ ಹೆಣ್ಣುಗಂಡೊಲವು||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ|
ತಿನ್ನುವುದದಾತ್ಮವನೆ-ಮಂಕುತಿಮ್ಮ||

ಬದುಕು

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ|
ಕೊರತೆಯೊಂದನು ನೀನು ನೆನೆನೆನೆದು ಕೆರಳಿ||
ಧರೆಯೆಲ್ಲವನು ಶಪಿಸಿ,ಮನದಿ ನರಕವ ನಿಲಿಸಿ|
ನರಳುವುದು ಬದುಕೇನೊ?-ಮಂಕುತಿಮ್ಮ||