ನೆನಪು ಚಿಗುರುವ ಸಮಯ
ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು.
ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊಂಡು ನಿಂತು, ಸಣ್ಣಗೆ ಬೀಳುತ್ತಿದ್ದ ಮಳೆ ನೋಡಿದೆವು. ಡಾಂಬರ್ ಬಳಿದುಕೊಂಡು ಚೆಂದವಾದ ರಸ್ತೆಯಲ್ಲಿ, ಹಳದಿ ದೀಪದ ಪ್ರತಿಫಲನ. ಅದು ರಂಗಸ್ಥಳವೇನೋ ಎಂಬಂತೆ ಮಳೆ ಹನಿಗಳು ಉಲ್ಲಾಸದಿಂದ ಸಿಡಿದು, ಚದುರಿ ಮಾಯವಾಗುತ್ತಿದ್ದ ಅಪೂರ್ವ ದೃಶ್ಯವನ್ನು ಗೌರಿ ತನ್ನ ಪುಟ್ಟ ಮನಸ್ಸಿನ ಕುತೂಹಲದಿಂದ ನೋಡಿದಳು.
ನನಗೆ ಊರು ನೆನಪಾಯಿತು.
ಮೇ ತಿಂಗಳಿನ ಈ ದಿನಗಳಲ್ಲಿ ಕೊಪ್ಪಳ ತಾಲ್ಲೂಕಿನ ನನ್ನೂರು ಅಳವಂಡಿಯಲ್ಲಿ ಕಡು ಬೇಸಿಗೆ. ಫೆಬ್ರುವರಿ ತಿಂಗಳಿಂದಲೇ ಚುಚ್ಚತೊಡಗುವ ಬಿಸಿಲಿಗೆ ಮಾರ್ಚ್ ತಿಂಗಳ ಹೊತ್ತಿಗೆ ತುಂಬು ಪ್ರಾಯ. ಏಪ್ರಿಲ್-ಮೇ ತಿಂಗಳಲ್ಲಂತೂ ಕಡು ಬೇಸಿಗೆ. ಎಂಥಾ ಮಳೆಯನ್ನೂ ಮೊಗೆದು ಕುಡಿದು ಮತ್ತೆ ಒಣಗಿ ನಿಲ್ಲುವ ಬಿಸಿಲ ಬಯಲುಗಳು. ಕಾಲಿನ ಮೀನಖಂಡದವರೆಗೂ ನುಂಗಬಲ್ಲ, ಕಪ್ಪು ಮಣ್ಣಿನ ಬಿರುಕುಗಳು. ಮಸಾರಿ (ಕೆಂಪು) ಹೊಲದ ಬೆಣಚುಕಲ್ಲುಗಳು ಕಾಯ್ದು ಹೆಂಚಿನಂತೆ ಧಗಿಸುತ್ತವೆ. ನಮ್ಮ ಬಡಬಾಲ್ಯದ ಬರಿಗಾಲನ್ನು ಅವು ಅದೆಷ್ಟು ಸಾರಿ ಸುಟ್ಟು ಬೊಬ್ಬೆ ಏಳಿಸಿದ್ದವೋ!
- Read more about ನೆನಪು ಚಿಗುರುವ ಸಮಯ
- 4 comments
- Log in or register to post comments