"ಕಿವಿ" ಪುರಾಣ

"ಕಿವಿ" ಪುರಾಣ

ಬರಹ

ಲಲಿತ ಪ್ರಬಂಧ
"ಕಿವಿ" ಪುರಾಣ

        "ಕಿವಿ" ಪುರಾಣವೆಂದು ಓದಿದ ತಕ್ಷಣ, ನಮ್ಮ ನಿಮ್ಮೆಲ್ಲರ "ಕರ್ಣ" ದ ನೆನಪಾಯಿತೇ? ನಾನು ಆ "ಕಿವಿ"ಯ ಬಗ್ಗೆ ಬರೆಯುತ್ತಿಲ್ಲ. ನಮ್ಮ ಮನೆಯ ಸದಸ್ಯ "ಕಿವಿ"ಯ ಬಗ್ಗೆ ಈ ಹಾಸ್ಯಲೇಖನ ಬರೆಯುತ್ತಿದ್ದೇನೆ. ಅವನು ಅಂತಿಂಥಾ "ಕಿವಿ"ಯಲ್ಲ, "ಮಹಾಎಡಬಿಡಂಗಿ". ನಮ್ಮ ಹೀರೋನ ಅಪರಾವತಾರಗಳ ವರ್ಣನೆಗೆ "ನೂರು ಮಾತು ಸಾಲದು, ಕಿವಿಯ ಬಣ್ಣಿಸಲು" ಎಂದು ನಾನು ಹೊಸಹಾಡನ್ನೇ ಬರೆಯಬೇಕಾದೀತು. ನಮ್ಮಲ್ಲೊಂದು ಗಾದೆಯಿದೆ, "ಎಂಕ ಪಣಂಬೂರಿಗೆ ಹೋದಂತೆ" ಎಂದು. ಈ ಗಾದೆ, ನಮ್ಮ "ಕಿವಿ"ಯ ಬಗ್ಗೆ ನೂರಷ್ಟು(ಶತಪ್ರತಿ) ಫಿಟ್ ಆಗುತ್ತದೆ. ಮಧ್ಯದಲ್ಲಿ, ಅಕಸ್ಮಾತ್ತಾಗಿ ಇಂಗ್ಲೀಷ್ ಬಳಸಿದೆ, ಸಾರೀರಿ....... ನಮ್ಮೆಲ್ಲರ ಮಧ್ಯೆ ಎಷ್ಟೋ ಜನ ಎಡಬಿಡಂಗಿ ಮಿಸ್ಟರ್ ಬೀನ್(ಒಂದು ಆಂಗ್ಲ ಭಾಷೆಯ ಚಲನಚಿತ್ರದ ಭಾರೀ ಫೇಮಸ್ ಹೀರೋ)ಗಳು ಇರುತ್ತಾರೆ. ಅವರ ಪೆದ್ದುತನದಿಂದ, ನಮ್ಮೆಲ್ಲರನ್ನು ಕ್ಷಣಕ್ಷಣಕ್ಕೂ ನಗಿಸುತ್ತಾರೆ. ಆದರೆ ಅವರು ಮೂರ್ಖರಲ್ಲ, ಪ್ರೊಫೆಸರ್ ಕೂಚುಭಟ್ಟರ ತರಹ. ಸ್ವಲ್ಪ ಹೊತ್ತು ಮೆದುಳು ರಾಂಗ್‍ರೂಟ್‍ನಲ್ಲಿ ಕೆಲಸ ಮಾಡುತ್ತದೆ, ಅಷ್ಟೇ. ಹಾಸ್ಯಲೇಖನಗಳನ್ನು ಬರೆಯುವಾಗ, ಯಥಾವತ್ತಾದ ಪ್ರಸಂಗಗಳನ್ನು ವರ್ಣಿಸಲು, ಒಮ್ಮೊಮ್ಮೆ ಆಂಗ್ಲಭಾಷೆಯ ಶಬ್ದಗಳ ಬಳಕೆಯಾಗುತ್ತದೆ. ಮತ್ತೊಮ್ಮೆ, ಕ್ಷಮೆ ಕೇಳಿ, ಪೀಠಿಕೆ ಮುಂದುವರಿಸುತ್ತೇನೆ.
       ನಮ್ಮ ಹೀರೋ "ಕಿವಿ" ಒಮ್ಮೊಮ್ಮೆ ತನ್ನ ಅತೀ ಜಾಣ್ಮೆ ಪ್ರದರ್ಶಿಸಿ, ನಮ್ಮೆಲ್ಲರನ್ನೂ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಾನೆ. ಅವನಂಥ ಎಡಬಿಡಂಗಿಗಳು, ನಿಮ್ಮ ಮನೆಗಳಲ್ಲೋ, ಆಫೀಸಿನಲ್ಲೋ ಇರಬಹುದು. ಅಂಥವರು ನಿಮ್ಮ ನಡುವೆ ಇದ್ದರೆ, ಒಂದು ಉಚಿತ ಸಲಹೆ ಕೊಡಲು ಬಯಸುತ್ತೇನೆ. ಅದೇನೆಂದರೆ, ಅಂಥವರ ಭಾವಚಿತ್ರ ಮತ್ತು ಅವರ ಪಾದದ ಒಂದು ಫುಲ್ ಪುಟ ಝೆರಾಕ್ಸ್ ತೆಗೆಸಿ, ನಿಮ್ಮ ಮನೆಯ ವರಾಂಡದಲ್ಲಿ ಹಾಕಿ. ಬೇಜಾರಾದಾಗ ಅವರ ಭಾವಚಿತ್ರವನ್ನೂ, ಪಾದವನ್ನೂ ನೋಡಿ ಮನಸಾರೆ ನಕ್ಕು, ಮನ ಹಗುರಾಗಿಸಿ, ಹೊಟ್ಟೆ ನೋವಾಗುವಷ್ಟು ಜೋರಾಗಿ ಮತ್ತೊಮ್ಮೆ ನಗಿ. ನಿಮ್ಮ ಮನಸ್ಸಿನ ಕ್ಲೇಶಗಳೆಲ್ಲಾ ಮಾಯವಾಗುತ್ತದೆ. ಆರೋಗ್ಯವೂ ವೃದ್ಧಿಯಾಗುತ್ತದೆ. ಕೃತಕವಾಗಿ ನಗುವುದನ್ನು ಕಲಿಸುವ ಯಾವುದೇ ಕ್ಲಬ್‍ಗಳಿಗೆ ಹೋಗಿ ನೀವು ಜೋಕರ್ ಆಗಬೇಕಿಲ್ಲ. ಇನ್ನು ನಮ್ಮ "ಕಿವಿ"ಯ ಪುರ್‍ಆಣಕ್ಕೆ ಬರೋಣ.
       ಪ್ರಸಂಗ ೧ : (ಕೀ ಗೊಂಚಲು ಜೋಬಿಗಿಳಿಸಿದ್ದು) ನನ್ನ ಮಗಳ ಶಾಲೆಗೆ ಮೂರು - ನಾಲ್ಕು ದಿನಗಳ ಮಟ್ಟಿಗೆ ರಜೆ. ನಾವೆಲ್ಲರೂ ಕುಟುಂಬ ಸಮೇತ ಮ್ಯೆಸೂರಿಗೆ ಪಯಣಿಸಿದೆವು. ಮನೆಯನ್ನು ಕಳ್ಳರಿಂದ ಕಾಯಲು, ನನ್ನ ಮೈದುನ(ಇನ್ನು ಮೇಲೆ , ಅವನು ಎರಡನೆಯ ಹೀರೋ)ನೊಂದಿಗೆ "ಕಿವಿ"ಯ "ಸಾಥಿ" ಕೊಟ್ಟು ಹೊರಟೆವು. "ಕಿವಿ" ಕಾಲೇಜು ಓದುವ ಹುಡುಗ, ಬುದ್ಢಿವಂತ ಓದಿನಲ್ಲಿ. ಹಾಗಂತ ಅವನ ಮೇಲೆ ಮನೆಯ ಪೂರ್ಣ ಜವಾಬ್ದಾರಿ ವಹಿಸಿ, ಮೈಸೂರಿಗೆ ಹೋದರೂ ನನ್ನ ಮನಸ್ಸೆಲ್ಲಾ ನಮ್ಮ ಮನೆಯಲ್ಲೇ. ಫೋನ್ ಮಾಡಿ ವಿಚಾರಿಸಿ, ವಿಚಾರಿಸಿ ಎಲ್ಲರ ತಲೆ ಕೆಡಿಸಿದ್ದೂ ಆಯಿತು. ನನ್ನ "ಬಾಸ್"(ಪತಿ)ಹತ್ತಿರ "ಕಿವಿಯೇನು ಚಿಕ್ಕ ಮಗುವೇ? ಕಾಲೇಜು ಓದುವ ಹುಡುಗನಿಗೆ ಅಷ್ಟೂ ಜವಾಬ್ದಾರಿಯಿಲ್ಲವೇ?" ಎಂದು ನಾನು ಮಂಗಳಾರತಿ ಮಾಡಿಸಿಕೊಂಡದ್ದೂ ಆಯಿತು. ನಾವು ಹೊರಟಿದ್ದು ಗುರುವಾರ. ನಮ್ಮ ಮನೆಗೆ ಭಾನುವಾರ ರಾತ್ರಿ ವಾಪಾಸ್ ಆಗಲಿದ್ದೆವು. ಅಷ್ಟರಲ್ಲಿ  ಶುಕ್ರವಾರ ಬೆಳಿಗ್ಗೆಯೇ ನಮ್ಮ ಎರಡನೇ ಹೀರೋನ ಫೋನ್ ಬಂತು, "ಅರ್ಜೆಂಟ್ ಕೆಲಸವಿರುವುದರಿಂದ ಬೇರೆ ಊರಿಗೆ ಹೋಗಲಿದೆ" ಎಂದು. ನನ್ನ ಎದೆ ಆಗಲೇ ಧಸಕ್ ಎಂದು ಕುಸಿಯಲಾರಂಭಿಸಿತು. ನಮ್ಮ ಎಡಬಿಡಂಗಿ "ಕಿವಿ" ಒಬ್ಬನೇ, ಇನ್ನು ಭಾನುವಾರ ತನಕ ಹೇಗಿರುತ್ತಾನೆ? ಎಂದು ನನ್ನ ಬಿ.ಪಿ. ಹೆಚ್ಚಾಯಿತು. ಪುನ: ನನ್ನ "ಬಾಸ್" ನಿಂದ ಬೈಗುಳವೂ ತಿಂದಿದಾಯಿತು. (ಅದು....... ನಮ್ಮ ಬಾಸ್‍ಗೆ ಒಂದು ಚಟ, ನಮಗೆಲ್ಲಾ ಯಾವಾಗಲೂ ಉಗಿದು ಉಪದೇಶ ಕೊಟ್ಟು ನಮ್ಮನ್ನು ಜೀವನದ ಅಗೋಚರ ಮಹತ್ವಗಳ ಬಗ್ಗೆ ಜಾಗೃತರನ್ನಾಗಿ ಮಾಡುವ ಚಟ. ಅದರ ಬಗ್ಗೆ ಇನ್ನೊಮ್ಮೆ ನಿಮಗೆ ತಿಳಿಸುತ್ತೇನೆ. ನಮ್ಮ "ಬಾಸ್" ನಿಂದಾಗಿಯೇ ನನಗೂ ಈ ಉಚಿತ ಸಲಹೆ ಕೊಡುವ ಚಟ ಹತ್ತಿದ್ದು, ಮದುವೆ ಮುಂಚೆ ನಾನೂ ಸಾಮಾನ್ಯ ಮನುಷ್ಯರಂತೆಯೇ ಇದ್ದೆ. ಆದರೆ ಸಹವಾಸ ದೋಷ ನೋಡಿ, ನಾನೂ ಜೀವನದ ಅಗೋಚರ ಫಿಲಾಸಫಿಯ ಬಗ್ಗೆ ಆಗಾಗ್ಗೆ ಉಚಿತ ಸಲಹೆ ಕೊಡುವ ಚಟ ಬೆಳೆಸಿಕೊಂಡೆ......)ನಮ್ಮ ಗ್ರೇಟ್ ಫ್ಯಾಮಿಲಿ ಬಗ್ಗೆ ವಿಷಯ ಇಲ್ಲಿಗೆ ಬಿಟ್ಟು, "ಕಿವಿ" ಪುರಾಣ ಮುಂದುವರಿಸುತ್ತೇನೆ. ಏನೂ ಮಾತನಾಡದೆ "ಕಿವಿ"ಗೆ ಫೋನ್ ಮಾಡಿ, ಸಾವಧಾನಗಳನ್ನೂ, ಮನೆರಕ್ಷಣೆಯ ಸಲಹೆಗಳನ್ನೂ ಕೊಟ್ಟು ಫೋನ್‍ಬಿಲ್ ಹೆಚ್ಚಿಸಿಕೊಂಡೆ. ಭಾನುವಾರ ರಾತ್ರಿ ಮನೆಗೆ ವಾಪಾಸಾದಾಗ ನಮ್ಮ "ಕಿವಿ"ಯೂ, ಜೊತೆಗೆ ಎರಡನೇ ಹೀರೋ ಮನೆಯಲ್ಲಿ ಇದ್ದಾರೆ. "ಯಾಕೋ ಅರ್ಜೆಂಟ್ ಕೆಲಸ ಎಂದು ಹೇಳಿ, ಹೋಗಲಿಲ್ಲವೇನೋ?" ಎಂದು ಅವನನ್ನು ಛೇಡಿಸಿದೆ. ನಮ್ಮ ಎರಡನೇ ಹೀರೊ ಮುಖ ಗಂಟಿಕ್ಕಿಕೊಂಡು ನಡೆದ ಪ್ರಸಂಗ ಹೇಳಿದ.  
       ಅದೇನೆಂದರೆ , ಶುಕ್ರವಾರ ಬೆಳಿಗ್ಗೆ "ಕಿವಿ" ಕಾಲೇಜಿಗೆ ಹೋಗುವಾಗ, ನಮ್ಮ ಎರಡನೆಯ ಹೀರೊ ಮಹಡಿಯ ಮೇಲಿನ ರೂಮಿನಲ್ಲಿ ಮಲಗಿದ್ದ. ಆ ರೂಂಗೆ ಹೊರಗಿನಿಂದ ಬೇರೆಯೇ ಬಾಗಿಲಿದೆ, ಮನೆಯ ಒಳಗಿಂದ ಹೋಗಲು ಸಾಧ್ಯವಿಲ್ಲ. ನಮ್ಮ "ಕಿವಿ" ಕಾಲೇಜಿನ ಪುಸ್ತಕ ತರಲು ಮೇಲಿನ ರೂಮಿಗೆ ಹೋಗಿ , ಸಿಂಪಲ್ಲಾಗಿ, ಗೊತ್ತಿಲ್ಲದೆ ಗಡಿಬಿಡಿಯಲ್ಲಿ ಮೇಜಿನ ಮೇಲಿದ್ದ ಎರಡನೆಯ ಹೀರೊನ ಕೀ ಗೊಂಚಲು ಜೋಬಿಗಿಳಿಸಿ ಕಾಲೇಜಿಗೆ ಹೋಗಿದ್ದಾನೆ. ನಮ್ಮ ಎರಡನೆಯ ಹೀರೊ, ಬರೀ ಬರ್ಮುಡಾದಲ್ಲಿ ಸಾಯಂಕಾಲ ಆರು ಘಂಟೆ ತನಕ ಹೊಟ್ಟೆಗೆ ಒಂದಿಷ್ಟು ನೀರೂ ಇಲ್ಲದೆ(ಹಲ್ಲೂ ಉಜ್ಜದೆ), ಗಿನ್ನೆಸ್ ದಾಖಲೆ ಸಾಧಿಸಿದ್ದಾನೆ. ನಮ್ಮ "ಕಿವಿ" ಸಾಯಂಕಾಲ ಕಾಲೇಜಿನಿಂದ ಬಂದು, ಅವನ ಜೋಬಿನಲ್ಲಿದ್ದ ಕೀ ಗೊಂಚಲು ಸ್ಟೈಲಾಗಿ ಮೇಲಿನ ರೂಂನಲ್ಲಿ ಇಟ್ಟು ಎರಡನೇ ಹೀರೊಗೆ ಪಂಗನಾಮ ಹಾಕಿದೆ. ವಿಪರ್ಯಾಸವೆಂದರೆ ಇವತ್ತಿನ ತನಕವೂ "ಕಿವಿ"ಗೆ ತಾನು ಜೋಬಿನಲ್ಲಿ ಎರಡೆರಡು ಕೀ ಗೊಂಚಲುಗಳನ್ನು ತೆಗೆದುಕೊಂಡು ಆ ದಿನ ಕಾಲೇಜಿಗೆ ಹೋಗಿದ್ದೆ, ಎಂದು ತಲೆಗೆ ಫ್ಲಾಶ್ ಆಗೇ ಇಲ್ಲ. "ಇನ್ನೂ ಆ ದಿನ ನಮ್ಮ ಎರಡನೇ ಹೀರೊ, ಯಾಕೆ ಕೆಲಸ ಇದ್ದರೂ, ಬೇರೆ ಊರಿಗೆ ಹೋಗಲಿಲ್ಲ?" ಎಂದು "ಕಿವಿ" ಇವತ್ತಿಗೂ ತಲೆ ಕೆಡಿಸಿಕೊಂಡು, ನಮ್ಮೆಲ್ಲರ ಬಿ.ಪಿ. ಯನ್ನು ಜಾಸ್ತಿ ಮಾಡಿಸುತ್ತಿದ್ದಾನೆ ಅಷ್ಟೇ.
       ಹೇಗಿದೆ ನಮ್ಮ "ಕಿವಿ"ಯ ಎಡಬಿಡಂಗಿತನದ ಮೊದಲನೆಯ ಪ್ರಸಂಗ. ಸಖತ್ತಾಗಿದೆಯಾ? ಬೋರು ಹೊಡಿಸಿತಾ? ಅಯ್ಯೋ, ಅಷ್ಟೇನಾ ಎನ್ನುತ್ತಿದ್ದೀರಾ? ತಾಳ್ಮೆ ಇದ್ದರೆ ಮುಂದೆ ಇನ್ನೂ ಎರಡು ಪ್ರಸಂಗಗಳಿವೆ. ಓದಿ, ನಗು ತಡೆಯಬೇಡಿ.
       ಪ್ರಸಂಗ ೨: (ಚಟ್ನಿ ಚೆಲ್ಲಿದ್ದು) ಕಾಲೇಜಿಗೆ ಹೋಗುವಾಗ ಮನೆಯಿಂದ "ಕಿವಿ" ಒಂದು ದಿನ ಮಧ್ಯಾಹ್ನ ಊಟಕ್ಕೆ ಒಂದು ಡಬ್ಬಿಯಲ್ಲಿ "ದೋಸೆ", ಇನ್ನೊಂದು ಡಬ್ಬಿಯಲ್ಲಿ "ಚಟ್ನಿ" ತೆಗೆದುಕೊಂಡು ಹೋಗಿದ್ದಾನೆ. ಕವರ್ ಅಡ್ದ ಬಿದ್ದು, ಚಟ್ನಿ ಅವನ ಕಾಲೇಜು ಬ್ಯಾಗ್‍ನೊಳಗೆ ಚೆಲ್ಲಿ, ರ್‍ಆಡಿಯಾಗಿದೆ ಬ್ಯಾಗ್. ಊಟದ ಹೊತ್ತಿನಲ್ಲಿ ಊಟವನ್ನು ಮಾಡದೆ "ಕಿವಿ" ಏನು ಮಾಡಿದ್ದಾನೆ ? ಎಂದು ಒಂದು ಕ್ಷಣ ಯೋಚಿಸಿ. ನೀವಾಗಿದ್ದರೆ ಏನು ಮಾಡುತ್ತಿದ್ದರೆಂದು ಹೇಳಿ. ಆ ಪರಿಸ್ಥಿತಿಯಲ್ಲಿ ನಾನಾಗಿದ್ದರೂ , ನೀವಾಗಿದ್ದರೂ ನಮ್ಮ ಫ್ರೆಂಡ್ಸ್ ಹತ್ತಿರ ನಮ್ಮ ತೊಂದರೆಯನ್ನು ಹೇಳಿ, ಅವರ ಹತ್ತಿರವಿರುವ ಆಹಾರದಿಂದ ದೋಸೆಗೆ ನೆಂಜಿಕೊಳ್ಳಲು ಏನಾದರೂ ತೆಗೆದುಕೊಳ್ಳುತ್ತಿದ್ದೆವು. ಅಥವಾ ಸ್ವಾಭಿಮಾನಿಯಾಗಿದ್ದರೆ ಸೀದಾ ಕಾಲೇಜಿನ ಕ್ಯಾಂಟೀನ್‍ಗೋ, ಬೇರೆ ಯಾವುದಾದ್ರು ಹೋಟೆಲ್‍ಗೋ ಹೋಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು.
       ಆದರೆ ನಮ್ಮ ಪ್ರಚಂಡ "ಕಿವಿ" ಮಾತ್ರಾ ಇವು ಯಾವನ್ನು ಮಾಡದೆ ತನ್ನ ಅತೀ ಭಯಂಕರ ತಲೆ ಉಪಯೋಗಿಸಿ ಬೇರೇನು ಮಾಡಿರಬಹುದೆಂದು ಹೇಳಿ ನೋಡೋಣ ..  . ..  . .ಏನಿಲ್ಲ. ಸಿಂಪಲ್ಲಾಗಿ, ದೋಸೆಡಬ್ಬಿ ಪಕ್ಕಕ್ಕಿಟ್ಟು, ಲಂಚ್‍ಅವರ್‍‍ನ ಇಡೀ ಹೊತ್ತು ಬ್ಯಾಗ್, ಪುಸ್ತಕವೆಲ್ಲವನ್ನೂ ಸ್ವಚ್ಛ ಮಾಡುತ್ತಾ ಕುಳಿತಿದ್ದಾನೆ, ಮಧ್ಯಾಹ್ನ ಹೊಟ್ಟೆಗೆ ಒಂದು ಅಗುಳನ್ನೂ ತಿನ್ನದೆ. ಪರಿಣಾಮ, ಸಂಜೆ ಐದು ಘಂಟೆಗೆ ಮನೆಗೆ ಬಂದ ನಂತರ ಆ ದೋಸೆಯನ್ನು ತಿಂದು ಹೊಟ್ಟೆ ತುಂಬಿಸಿಕೊಂಡು , ನನ್ನ ಹತ್ತಿರ ಸ್ವಲ್ಪ ಬೈಗುಳವನ್ನೂ ತಿಂದ. ನಾನೇ ಅವನ ಮಹಾನ್ ಬುದ್ಧಿಗೆ ಇಂಗು ತಿಂದ ಮಂಗಳಾದೆ ಅಷ್ಟೆ, ಅವನ ಮೇಲೆ ಇದು ಯಾವ ಪರಿಣಾಮವನ್ನೂ ಬೀರಲಿಲ್ಲ.
       ಪ್ರಸಂಗ ೩: ( ಟವೆಲ್ ಗಾಳಿಗೆ ಓಡಿದ ಪ್ರಸಂಗ) ಜೋರು ಗಾಳಿ ಬೀಸುತ್ತಿರುವಾಗ, ಸಾಮಾನ್ಯವಾಗಿ ಎಲ್ಲರೂ, ಬಟ್ಟೆ ಒಣಗಿಸುವಾಗ ಕ್ಲಿಪ್ ಹಾಕಿ ಬಟ್ಟೆ ಒಣಗಲು ಹಾಕುತ್ತಾರೆ. ಆದರೆ ನಮ್ಮ "ಕಿವಿ" ಒಂದು ದಿನ ಏನು ಮಾಡಿದ್ದಾನೆಂದರೆ, ಅದೂ ಆಷಾಢದ ಮಹಾಗಾಳಿಯಿರುವ ದಿನ; "ಒಣಗಿಸಲು ಒದ್ದೆ ಟವೆಲ್ ತಾರಸಿಯಲ್ಲಿ ಹಗ್ಗದ ಮೇಲೆ ಹಾಕಿದ್ದಾನೆ. ಅದಾದ ಮೇಲೆ ಬಟ್ಟೆ ಕ್ಲಿಪ್ ಹಾಕಿದ್ದಾನೆ, ಆದರೆ ಅದನ್ನು ಒತ್ತಿ ಬಟ್ಟೆ ಹಿಡಿಯುವ ಹಾಗೆ ಹಾಕಿಲ್ಲ. ಕ್ಲಿಪ್ ಒತ್ತಿ ಹಾಕಿದರೆ ಎಲ್ಲಿ ಬಟ್ಟೆಗೆ ನೋವಾಗಿ ಅಳುತ್ತದೆಯೋ ಎಂಬಂತೆ, ನಾಜೂಕಾಗಿ ಮೆತ್ತಗೆ ಹಾಕಿ ಕಾಲೇಜಿಗೆ ಹೋಗಿದ್ದಾನೆ". ಆಹಾಹಾ: ಎಂಥ ತಲೆ, ಜೀನಿಯಸ್ ಅಲ್ಲವೇ? ಪರಿಣಾಮ ಬಟ್ಟೆ ಕ್ಲಿಪ್ ಗಾಳಿಗೆ ಕಿತ್ತುಕೊಂಡು, ಟವೆಲ್ ಹಿಂದಿನ ಮನೆ ತಾರಸಿ ಮೇಲೆ ಬಿದ್ದಿದೆ, ಅದೂ ಹೆಂಚಿನ ಸ್ಲೋಪಿನ ಮೇಲೆ.............  ನಾನು ಸಾಮಾನ್ಯವಾಗಿ ಸಾಯಂಕಾಲ ತಾರಸಿಗೆ ಹೋಗಿ ಒಣಗಲು ಹಾಕಿದ ಬಟ್ಟೆಗಳನ್ನು ತರುತ್ತೇನೆ. ಆ ದಿನ ಕೆಲಸದ ಒತ್ತಡ ಜಾಸ್ತಿ ಇದ್ದುದ್ದರಿಂದ , ನನ್ನ ತಂಗಿ ಹಾಗೆ ಹೋಗಿ, ಏನೂ ಪತ್ತೇದಾರಿ ಕೆಲಸ ಮಾಡದೆ, ಕಣ್ಣಿಗೆ ತಾರಸಿ ಮೇಲೆ ಕಂಡ ಬಟ್ಟೆಗಳನ್ನು ತಂದಿದ್ದಾಳೆ. ಅವಳು ಮಾಡಿದ್ದೂ ಸರಿನೇ, ಯಾಕೆಂದರೆ "ಕಿವಿ"ಯ ಟವೆಲಿಗೆ ಈ ಗತಿ ಬಂದಿದೆ ಎಂದು ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಸಂಜೆ "ಕಿವಿ" ಕಾಲೇಜಿನಿಂದ ಬಂದು ಒಣಗಿದ ಬಟ್ಟೆಗಳ ರಾಶಿಯಲ್ಲಿ ತನ್ನ ಟವೆಲ್ ಹುಡುಕಿ, ಸೋತು ನನ್ನನ್ನು ಕೇಳಿದ. ನನಗೆ ಆ ವಿಷಯ ಗೊತ್ತಿಲ್ಲವೆಂದು ತಲೆ ಆಡಿಸಿದರೆ, ಆ ಪ್ರಾಣಿ ನನ್ನನ್ನು ನಂಬಲೇ ಇಲ್ಲ. ಎಲ್ಲಾ ಕಡೆ ಹುಡುಕಿ, ಮನೆಯಲ್ಲಿದ್ದ ನಮ್ಮ ಮೇಲೆಲ್ಲಾ ಸಂಶಯ ದೃಷ್ಟಿ ಬೀರಿ ತನ್ನ ಮೇಲಿನ ರೂಂಗೆ ಹೋದ.  ಮರುದಿನ ಬೆಳಿಗ್ಗೆ ಬಂದವನೇ ಹೊಸ ಸಂಶೋಧನೆ ಮಾಡಿದ ಐನ್‍ಸ್ಟೆನ್‍ನ ತರಹ, ಹಿಂದಿನ ಮನೆ ಮೇಲಿನ ಸ್ಲೋಪ್ ತಾರಸಿ ಮೇಲೆ ಬಿದ್ದಿದ್ದ ತನ್ನ ಟವೆಲನ್ನು ಕಂಡು ಹಿಡಿದಿದ್ದುದನ್ನು ಕಣ್ಣು, ಬಾಯಿ, ಮೂಗು, ಮುಖವೆಲ್ಲವನ್ನೂ ಅರಳಿಸಿಕೊಂಡು ಹೇಳಿದ. ನಾನೋ ಉಚಿತ ಸಲಹೆ ಕೊಡುವುದರಲ್ಲಿ ಎತ್ತಿದ ಕೈ. ಏನೋ ಸಲಹೆ ಕೊಟ್ಟು ಯಥಾಪ್ರಕಾರ ನನ್ನ "ಬಾಸ್"(ಅದೇ "ಪತಿದೇವರು) ಕೈಯಲ್ಲಿ ಮಂಗಳಾರತಿ ಮಾಡಿಸಿಕೊಂಡೆ. "ಏನಾದರೂ ಮಾಡಿಕೊಳ್ಳಿ, ಇಲ್ಲದ್ದಿದ್ದರೆ, ಅವನ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸಿ ಚೆಂದ ನೋಡಿ", ಎಂದು ನನ್ನ ಬಾಸ್‍ಗೆ ಮರುನುಡಿದು, ಅಡುಗೆಮನೆಗೆ ತಿಂಡಿ ಮಾಡಲು ಕಾಲು ಕಿತ್ತೆ. ಸ್ವಲ್ಪ ಹೊತ್ತಲ್ಲೇ, ನನ್ನ ಎಂಟು ವರ್ಷದ ಮಗಳು ಬಂದು, ಮುಸಿಮುಸಿ ನಗುತ್ತಾ, "ಕಿವಿ" ಗಿಡಗಳಿಗೆ ನೀರು ಹಾಕುವ ಮಾರುಗಟ್ಟಲೇ ಉದ್ದದ ಪೈಪಿನಿಂದ "ಟವೆಲ್"ನ್ನು ಹಿಂದಿನ ಮನೆಯ ತಾರಸಿ ಸ್ಲೋಪಿನಿಂದ ಎಳೆಯುವ ಪ್ರಯೋಗ ಮಾಡುತ್ತಿದೆ ಎಂದು ರನ್ನಿಂಗ್ ಕಾಮೆಂಟರಿ ಕೊಡಲು ಪ್ರಾರಂಭಿಸಿದಳು. ನಾನು ತಿಂಡಿ ತಯಾರಿ ಮಾಡುತ್ತಿದ್ದವಳು, ಒಂದು ದಂಗಾಗಿ ನಿಂತು, ಹೀಗೆ ಯೋಚಿಸಿದೆ, "ಅಬ್ಬಾ, ಎಂಥ ಡಿಸ್ಕವರಿ................. ನೀರಿನ ಪೈಪಿನಿಂದ ಟವೆಲನ್ನು ಎಳೆದರೆ ಅದು ಬರುತ್ತದೆಯೇ? ಹಾಗಾದರೆ ನಾಳೆ ನೀರು ಹಾಕಲು ಏನು ಮಾಡುವುದು? ಅದೂ ...... ಗಿಡಗಳಿಗೆ ನೀರು ಹಾಕುವ ಪೈಪ್, ಗಟ್ಟಿ ಸ್ಟೀಲ್ ಪೈಪಲ್ಲ, ರಬ್ಬರಿನ ತೆಳುಪೈಪ್. "ಕಿವಿ"ಯ ಪ್ರಯೋಗ ಇವತ್ತು ಸಕ್ಸಸ್ ಆದರೆ, ನಾಳೆಯಿಂದ ಕೋಲಿನ ಬದಲು ಜನ ಪೈಪ್ ಉಪಯೋಗಿಸುತ್ತಾರೆ", ಎಂದು ಯೋಚಿಸಿ ನನ್ನ ಈ ಆಲೋಚನೆಯನ್ನು ಮನೆಯಲ್ಲಿದ್ದ ಎಲ್ಲರ ಮುಂದೆ ಹೇಳಿದಾಗ, ಅವರೆಲ್ಲರೂ ಬಿದ್ದು ಬಿದ್ದು ನಗಲು ಶುರು ಮಾಡಿದರು. ಅಂತೂ ನಮ್ಮೆಲ್ಲರ ನಗು ಮುಗಿಯುವಷ್ಟರಲ್ಲಿ ಟವೆಲ್ ಕೊನೆಗೂ ಸಿಗಲಿಲ್ಲವೆಂದು ಗೊಣಗುತ್ತಾ ಕೆಳಗೆ ಬಂದ ನಮ್ಮ "ಮಹಾನ್ ಎಡಬಿಡಂಗಿ ಕಿವಿ"ಯ ಮುಖ, ಬಾಣಲೆಯಂತಾಗಿತ್ತು. ಕೊನೆಗೆ ಅವನ ಅವಸ್ಥೆ ನೋಡಲಾರದೆ, ಇನ್ನೊಂದು ಉಚಿತ ಸಲಹೆ ಕೊಟ್ಟೆ. ನಮ್ಮ ಮನೆಯಲ್ಲಿ ಬಲೆಕಸ ಅಂದರೆ ಜೇಡ ಬಲೆ ಕಟ್ಟಿದ್ದನ್ನು ತೆಗೆಯಲು ಒಂದು ಸಾಧಾರಣ ಉದ್ದದ ಕೋಲಿತ್ತು. ಅದನ್ನು ಉಪಯೋಗಿಸಿ ಟವೆಲನ್ನು ಹಿಂದಿನ ತಾರಸಿಯಿಂದ ತೆಗೆಯಲು ಹೇಳಿದೆ. ಅಂತು ಇಂತು, ನಾನು ಕೊಟ್ಟ ಉಚಿತ ಸಲಹೆ ವರ್ಕ್‍ಔಟ್ ಆಯಿತು, ಹರಶತ ಸರ್ಕಸ್ ಮಾಡಿ, ಟವೆಲ್ "ಕಿವಿ"ಯ ಕೈ ಸೇರಿತು.
        ಹೇಳಿ, ಹೇಗಿದ್ದವು ನಮ್ಮ "ಕಿವಿ"ಯ ಎಡಬಿಡಂಗಿತನದ ಪ್ರಸಂಗಗಳು? ಇವು ಜಸ್ಟ್ ಸ್ಯಾಂಪಲ್ ಅಷ್ಟೆ. ನಮ್ಮ ಮನೆಯಲ್ಲಿ ದಿನನಿತ್ಯ, ಇನ್ನೂ ಇಂಥ ಹತ್ತು ಹಲವಾರು ಪ್ರಸಂಗಗಳು "ಕಿವಿ" ಮಹಾಶಯರ ಕೃಪೆಯಿಂದ ನಡೆಯುತ್ತವೆ. ಇಡೀ ವರುಷಗಟ್ಟಲೇ, ಪಾ.ಪ.ಪಾಂಡು ಮತ್ತು ಸಿಲ್ಲಿಲಲ್ಲಿಯರನ್ನು ಮೀರಿಸುವ ಕಾಮಿಡಿಗಳು ನಡೆಯುತ್ತವೆ ನಮ್ಮ ಮನೆಯಲ್ಲಿ, ಶ್ರೀ ಶ್ರೀ "ಕಿವಿ" ಯವರ ಮಂಡಲಿಯಿಂದ. ನನ್ನಿಂದ ಕೊನೆಯಲ್ಲಿ, ಉಪಸಂಹಾರವಾಗಿ ನಿಮಗೆಲ್ಲಾ ಒಂದೇ ಒಂದು ಉಚಿತ ಸಲಹೆ, ಅದೇನೆಂದರೆ, "ನಿಮ್ಮಲ್ಲಿ ಯಾರಿಗಾದರೂ ಜೀವನದಲ್ಲಿ ಏಕಾಂಗಿತನವಿದ್ದರೆ, ನಮ್ಮ ಮನೆಗೆ ನೀವು ಧಾರಾಳವಾಗಿ ಬನ್ನಿ. ಬಂದು "ಕಿವಿ"ಯ ಜೊತೆಗೆ ಉಚಿತವಾಗಿ ಬರೀ ಎರಡು ದಿನಗಳನ್ನು ಕಳೆದು, ಸರ್ಫ್ ವಾಶಿಂಗ್ ಪೌಡರ್‌ನಲ್ಲಿ ತೊಳೆದ ಬಟ್ಟೆ ತರಹ "ಲಕಲಕ" ಹೊಳೆದು, ಯಾವ ಕಾಯಿಲೆಯೂ ಇಲ್ಲದೆ, ಹೊಸ ಹುರುಪಿನಿಂದ ಶತಾಯುಷಿಯಾಗಿ ಬಾಳಿರಿ".