ಜೋಕುಮಾರಸ್ವಾಮಿ : ಹೊಗೆ ಇಲ್ಲದ ಬೆಂಕಿಯ ಹುಡುಕಾಟದಲ್ಲಿ
-೧-
ಜೋಕುಮಾರಸ್ವಾಮಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ೧೯೭೨ರಲ್ಲಿ ಪ್ರದರ್ಶನಗೊಂಡಿತು. ಬಿ.ವಿ.ಕಾರಂತರ ನಿರ್ದೇಶನದಲ್ಲಿ, ಚಂದ್ರಶೇಖರ ಕಂಬಾರ ಸಂಗೀತದಲ್ಲಿ ಕನ್ನಡ ರಂಗಭೂಮಿಗೆ ಹೊಸ ತಿರುವು, ಹೊಸ ನುಡಿಗಟ್ಟು ಮತ್ತು ಹೊಸ ಚೇತನವನ್ನು ನೀಡಿದ ಪ್ರದರ್ಶನವದು. ನಂತರ ಎಂಬತ್ತರ ದಶಕದಲ್ಲೂ ಬೆಂಗಳೂರಿನ "ಬೆನಕ" ತಂಡದವರು ಅದನ್ನು ನೂರಾರು ಬಾರಿ ಆಡಿದರು, ಈಗಲೂ ಆಡುತ್ತಿದ್ದಾರೆ. ಎಂಬತ್ತರ ದಶಕದಲ್ಲಿ ಜೋಕುಮಾರಸ್ವಾಮಿಯ ಹೆಚ್ಚು ಕಡಿಮೆ ೫೦-೬೦ ಪ್ರದರ್ಶನಗಳಲ್ಲಿ ನಾನು ತೊಡಗಿಕೊಂಡಿದ್ದೆ. ಮೇಳದಲ್ಲಿ ಹಾಡುಗಾರನಾಗಿ, ಗೌಡನ ಆಳುಗಳಲ್ಲಿ ಒಬ್ಬನಾಗಿ, ರಂಗಸಜ್ಜಿಕೆಯಲ್ಲಿ ಹೀಗೆ ನಾನಾ ರೀತಿಯಲ್ಲಿ. ಆಗ ಅದು ನನಗೆ ತುಂಬಾ ಖುಷಿಕೊಟ್ಟ ಅನುಭವ. ಒಂದು ನಾಟಕವನ್ನು ಮತ್ತೆ ಮತ್ತೆ ಮಾಡುವಾಗ ಬರುವ ಅನುಭವ ಬೇರೆಯೇ ರೀತಿಯದು. ನಾಟಕದ ಕ್ರಿಯೆಗಿಂತ ಅದರ ವಿನ್ಯಾಸದತ್ತ ನಮ್ಮ ಗಮನ ಹರಿಯಲು ಮರು ಪ್ರದರ್ಶನಗಳು ತುಂಬಾ ಸಹಾಯ ಮಾಡುತ್ತವೆ.
ಈಗ ೨೦೦೭ರಲ್ಲಿ ಸಿಡ್ನಿ ಕನ್ನಡ ಸಂಘ ಅದೇ ನಾಟಕವನ್ನು ಸಿಡ್ನಿಯಲ್ಲಿ ಮಾಡಲಾಗುತ್ತದೆಯೇ ಎಂದು ನನ್ನನ್ನು ಕೇಳಿದಾಗ ಬಹಳ ಖುಷಿಯಿಂದ ಅದನ್ನು ಒಂದು ಸವಾಲಾಗಿ ತೆಗೆದುಕೊಂಡೆ. ಸವಾಲೇಕೆಂದರೆ, ನಾಟಕಕ್ಕೆ ಬೇಕಾದ ಹಾಡುಗಾರರು ಮತ್ತು ನಟರ ಪೂರ್ವತಯಾರಿಯ ಬಗ್ಗೆ ನನಗೆ ಸ್ಪಷ್ಟ ಅರಿವು ಇದ್ದಿತ್ತು. ಬೆಂಗಳೂರಿನ ಪ್ರದರ್ಶನಗಳಲ್ಲಿ ಯಾವುದು ದತ್ತವಾಗಿತ್ತೋ ಅದನ್ನು ಇಲ್ಲಿ ಮೊದಲ ಬಾರಿಗೆ ಎಂಬಂತೆ ರೂಪಿಸುವ ಅವಶ್ಯಕತೆ ಇತ್ತು.
-೨-
ಮೊತ್ತ ಮೊದಲು ನಾನು ಮಾಡಿದ ನಿರ್ಧಾರವೆಂದರೆ, ಈ ನಾಟಕವನ್ನು ಬಿ.ವಿ.ಕಾರಂತರ ವಿನ್ಯಾಸದಲ್ಲೇ ಮಾಡುವುದು ಮತ್ತು ಅದಕ್ಕೆ ಚಂದ್ರಶೇಖರ ಕಂಬಾರರ ಸಂಗೀತ ಶೈಲಿಯನ್ನೇ ಬಳಸುವುದು ಎಂದು. ಈ ನಿರ್ಧಾರವನ್ನು ನಾಟಕ ಮಾಡಲು ಸುಲಭವಾಗುತ್ತದೆ ಎಂದು ಮಾಡಿಕೊಂಡ ನಿರ್ಧಾರವಲ್ಲ. ಏಕೆಂದರೆ ಆ ವಿನ್ಯಾಸದ ಸವಾಲುಗಳು ನನಗೆ ಚೆನ್ನಾಗಿ ಗೊತ್ತಿದ್ದವು. ಬಹುಶಃ ಬೇರೆಯೇ ವಿನ್ಯಾಸವಾಗಿದ್ದರೆ ಸುಲಭವಾಗಬಹುದಿತ್ತೇನೋ, ಆದರೆ ಮೂಲಕ್ಕೆ ಹೇಳಿ ಮಾಡಿಸಿದಂತಿದ್ದ ಆ ವಿನ್ಯಾಸ ಬಿಟ್ಟು ಬೇರೆ ಬಗೆಯಾಗಿ ಯೋಚಿಸುವುದು ಅನಗತ್ಯ ಅನಿಸಿತ್ತು. ಒಂದು ರೀತಿಯಲ್ಲಿ, ಚಂದ್ರಶೇಖರ ಕಂಬಾರರು ಆ ನಾಟಕವನ್ನು ಬರೆದು, ಆಡಿ, ತಿದ್ದಿ, ಆಡಿ, ತಿದ್ದಿರಬೇಕೆಂದು ನನ್ನ ಗುಮಾನಿ. ಯಾಕೆಂದರೆ, ನಾಟಕ ಮತ್ತು ಅದರ ವಿನ್ಯಾಸ ಅಷ್ಟು ಸೊಗಸಾಗಿ ಒಂದಕ್ಕೊಂದು ಮೇಳೈಸಿಕೊಂಡಿದೆ.
ಸುಮರು ಎರಡು ಗಂಟೆಗೂ ಮೀರಿ ಇರುವ ನಾಟಕವನ್ನು ನಮಗೆ ಒಂದೂವರೆ ಗಂಟೆಯಲ್ಲಿ (ಮುಂದೆ ಅದು ಹಿಗ್ಗಿದರೂ ಕೂಡ) ಮಾಡಬೇಕಾದ ಅನಿವಾರ್ಯವಿತ್ತು. ಅದಕ್ಕೆ ಯಾವ ಭಾಗಗಳನ್ನು ಕೈಬಿಡುವುದೆಂದು ನಿರ್ಧರಿಸುವುದು ಕಷ್ಟವಾಯಿತು. ನಾಟಕ ತುಂಬಾ ಬಿಗಿಯಾಗಿರುವುದೇ ಆ ಕಷ್ಟಕ್ಕೆ ಕಾರಣ. ಒಂದು ದೊಡ್ಡ ಭಾಗವನ್ನು ಬಿಡಬೇಕಾದ ಅನಿವಾರ್ಯವಿತ್ತು. ನಾಟಕದಲ್ಲಿ ಬರುವ ಹೊಲೇರ ಸೂಳಿ ಶಾರಿ, ಗೌಡನ ಡೌಲಿನ ಹುಸಿತನವನ್ನು, ನಪುಂಸಕತೆಯನ್ನು ತೆರೆದಿಡುವ ಒಂದು ವಿಶಿಷ್ಟ ಪಾತ್ರ. ಗೌಡತಿಯ ಮಗುವಿನ ಹಂಬಲವನ್ನು ತೀಕ್ಷ್ಣ ಪರೀಕ್ಷೆಗೆ ಒಡ್ಡುವ ದೃಶ್ಯವಿದೆ. ಏನು ಬೇಕಾದರೂ ತನ್ನ ಮನೆಗೇ ಬಂದು ಬೀಳಿಸಿಕೊಳ್ಳಲು ಸಾಧ್ಯವಿರುವ ಗೌಡತಿ ಜೋಕುಮಾರನಿಗಾಗಿ, ಇನ್ನೊಬ್ಬಳ ಮನೆಗೆ ಬೇಡಿಕೊಂಡು ಹೋಗುತ್ತಾಳೆ. ಅದರಲ್ಲೂ ಆ ಇನ್ನೊಬ್ಬಳು ಸೂಳೆ. ಬೇರೆ ಹೆಂಗಸರು ತನ್ನ ಕಾಲಿಗೆ ಬೀಳುವುದೇ ಅಭ್ಯಾಸವಾಗಿರುವ ಗೌಡತಿ ಮತ್ತೊಬ್ಬಳ ಕಾಲಿಗೆ ಬಿದ್ದು ಬೇಡುತ್ತಾಳೆ. ಅದೂ ಕೂಡ ಒಬ್ಬ ಸೂಳೆಯ ಕಾಲಿಗೆ. ಆ ಎರಡು ಪಾತ್ರಗಳ ಮನೋವ್ಯಾಪಾರದ ದೂರವನ್ನು ಕಾರಂತರ ವಿನ್ಯಾಸದಲ್ಲಿ ಎಷ್ಟು ತೀವ್ರವಾಗಿ ರೂಪಿತವಾಗಿದೆಯೆಂದರೆ ಅದನ್ನು ನೋಡಿಯೇ ಅರಿಯಬೇಕು. ಗೌಡತಿ ಬೇಡುತ್ತಾ ಹಾಡುವ ಹಾಡು ಎಷ್ಟು ಕರುಣಾಜನಕವಾಗಿದೆಯೋ, ಶಾರಿ ಅವಳಿಗೆ ಬಯ್ಯುವುದು, ಹೀಯಾಳಿಸುವುದು ಎಲ್ಲ ಇರುವ ಹಾಡನ್ನು ಮಾತಲ್ಲಿ ಗಡುಸಾಗಿ ಹೇಳಿಸಿ ಅಷ್ಟೇ ಕ್ರೂರವಾಗುವಂತೆ ಮಾಡಿದ್ದಾರೆ. ಗೌಡತಿ ಹಾಡುತ್ತಾ ಬೇಡುತ್ತಾಳೆ, ಶಾರಿ ಹಾಡನ್ನು ಗದ್ಯದಂತೆ ಹೇಳುತ್ತಾ ಹೋಗುತ್ತಾಳೆ. ಈ ದೃಶ್ಯವನ್ನು ಏಕೆ ಇಷ್ಟು ವಿವರಿಸಿದೆನೆಂದರೆ, ಆ ದೃಶ್ಯವನ್ನು ಕೈಬಿಡುವ ನಿರ್ಧಾರ ತೆಳುವಾಗಿ ತೆಗೆದುಕೊಂಡದ್ದಲ್ಲ ಎಂಬುದಕ್ಕಾಗಿ. ನಾಟಕದ ಉದ್ದದ ಕಾರಣವಲ್ಲದೆ ಮತ್ತೊಂದು ಕಾರಣ, ಶಾರಿಯಂಥ ಗಡಸು ಹೆಣ್ಣಿನ ಪಾತ್ರ ಮಾಡಲು ಸಿಡ್ನಿಯಲ್ಲಿ ಯಾರೂ ಸಿಕ್ಕದೇ ಇದುದು. ಸೂಳೆ ಪಾತ್ರದ ಬಗ್ಗೆ ಹಿಂಜರಿಕೆಯಿದ್ದರೂ ಕೂಡ ಒಂದಿಬ್ಬರು ತಾವು ಮಾಡುವುದಾಗಿ ಒಪ್ಪಿಕೊಂಡರು. ಆದರೆ, ಶಾರಿಯ ನಿಜ ಸ್ವರೂಪವನ್ನು ಅವರಿಂದ ಚಿತ್ರಿಸುವುದು ಸಾಧ್ಯವೇ ಎಂದು ತಲೆ ಕೆಡಸಿಕೊಂಡು, ಪ್ರದರ್ಶನಕ್ಕೆ ಅದೇ ದುರ್ಬಲ ದೃಶ್ಯವಾಗುವ ಬದಲು ಅದನ್ನು ಕೈಬಿಡುವುದೇ ಒಳ್ಳೆಯದೆಂದು ನಿರ್ಧರಿಸಿದೆವು.
ಇನ್ನು ಉಳಿದಂತೆ ಗೌಡತಿಗೆ ಜೋಕುಮಾರನ ಮಹಿಮೆಯನ್ನು ವಿವರಿಸುವ ಬಸ್ಸಿಯ ಮಾತುಕತೆಯನ್ನು ಮೊಟಕುಗೊಳಿಸಿದೆವು. ಬಸಣ್ಣ-ಗೌಡತಿ ಒಂದಾಗುವ ದೃಶ್ಯವನ್ನು ಚುರುಕುಗೊಳಿಸಿದೆವು. ಇದಲ್ಲದೆ, ಇಡೀ ನಾಟಕದಲ್ಲಿ ಬರುವ ಗಿಣಿಯ ಸೂಚನೆಗಳನ್ನು ಕೈಬಿಟ್ಟೆವು. ಗಿಣಿಗಾಗಿ ಹಂಬಲಿಸುವ ಗೌಡತಿಯ ಮಾತುಗಳು ಹಲವು ಸ್ತರಗಳಲ್ಲಿ ಕೆಲಸ ಮಾಡುತ್ತದೆ ಎಂದು ಗೊತ್ತಿದ್ದೂ ಅದನ್ನು ಕೈಬಿಡಲು ಕಾರಣ, ಆ ಗಿಣಿಯನ್ನು ಗೌಡತಿ ನುಂಗಿದಳು ಎಂಬ ಮಾತು ಗುರಿಯ ಹೇಳುತ್ತಾನೆ. ಅಲ್ಲಿವರೆಗೆ ಕಟ್ಟಿಕೊಂಡು ಬಂದ ಗಿಣಿಯ ಪ್ರತಿಮೆ ಅಲ್ಲಿ ಯಾಕೋ ಒಡೆದು ಅದು ಯಾವುದಕ್ಕೆ ಪ್ರತೀಕವಾಗುತ್ತದೆ ಎಂದು ಗೊಂದಲವಾಗುತ್ತದೆ. ಹಕ್ಕಿಯ ಪ್ರತೀಕಗಳನ್ನು ಉಳಿಸಿಕೊಂಡು ಗಿಣಿಯ ಮಾತುಗಳನ್ನು ಕೈ ಬಿಟ್ಟೆವು. ಆದಷ್ಟು ಮಟ್ಟಿಗೆ ಹಾಡುಗಳ ಎಲ್ಲ ಸೊಲ್ಲುಗಳನ್ನು ಉಳಿಸಿಕೊಂಡೆವು, ಒಂದೆರಡು ಕಡೆ ಹೊರತುಪಡಿಸಿ.