ಮತ್ತೆ ’ಅಂತ’
ನೀವು ಅಂಬರೀಶ್ ಅಭಿನಯದ ’ಅಂತ’ ಸಿನೇಮಾ ನೋಡಿರಬಹುದು . ಇದು ಧಾರಾವಾಹಿ ಆಗಿ ಸುಧಾದಲ್ಲಿ ಹಿಂದೆ ಬಂದಿತ್ತು . (ಇದೆಲ್ಲ ೨೫ ವರ್ಷದ ಹಿಂದಿನ ವಿಷಯ ಎಂದರೆ ನನಗೆ ನಂಬಲಾಗುತ್ತಿಲ್ಲ, ಇರಲಿ ). ಧಾರಾವಾಹಿಯ ಕೊನೆ ಬಹಳ ಅದ್ಭುತವಾಗಿತ್ತು . ನಾಯಕನು ಬಹಳ ಕಷ್ಟ ನಷ್ಟ (ನಿಜಕ್ಕೂ ಬಹಳ ಕಷ್ಟ ಮತ್ತು ನಷ್ಟ- ಅದೆಲ್ಲ ಏನೆಂದು ನಾನು ಇಲ್ಲಿ ಬರೆಯಲಿಕ್ಕಾಗದು ) ಅನುಭವಿಸಿ ಸಮಾಜದ್ರೋಹಿಗಳ ವಿರುದ್ಧ ಒಟ್ಟು ಮಾಡಿದ ವಿಷಯವನ್ನು ಸರಕಾರ ಮುಚ್ಚಿ ಹಾಕಲು ಯತ್ನಿಸುತ್ತದೆ . ಇದರಿಂದ ನಾಯಕ ನೊಂದಿದ್ದಾನೆ . ಧಾರಾವಾಹಿ ಇಲ್ಲಿಗೆ ಮುಗಿದ ಹಾಗೆ ನನಗೆ ತೋರಿತು . ನಂತರ ಒಂದು ಚುಟುಕದ ಹಾಗೊಂದು ಐಟಮ್ ಇತ್ತು . ಅದರ ಮೇಲೆ ತಕ್ಷಣ ಗಮನ ಹೋಗಲಿಲ್ಲ . ಆಮೇಲೆ ಅದನ್ನು ಪ್ರತ್ಯೇಕವಾಗಿ ಓದಿದೆ . ಆಗ ಅದು ಈ ವಾರಗಟ್ಟಲೆ ಬಂದ ಕುತೂಹಲಕಾರಿ ಸಾಹಸ, ಪತ್ತೇದಾರಿ ಕತೆಯ ಪ್ರಮುಖ ಭಾಗವಾಗಿತ್ತು. ಆದರೆ ಅದನ್ನು ಒಂದೇ ಪ್ಯಾರಾದಲ್ಲಿ ಅಡಕಗೊಳಿಸಿದ್ದರು ಕಾದಂಬರಿಕಾರ ಎಚ್. ಕೆ. ಅನಂತರಾವ್ . ಅದು ಪತ್ರಿಕೆಯಲ್ಲಿ ಬಂದ ಒಂದು ಸುದ್ದಿಯ ತುಣುಕು. ಸರಣಿ ಕೊಲೆಗಳ ಆಪಾದಿತ ಕೋರ್ಟಿನಲ್ಲಿ ಕೊಟ್ಟ ಹೇಳಿಕೆಯ ಸುದ್ದಿ ಅದು . ಅದರ ಸ್ವರೂಪದಿಂದಾಗಿ ನನ್ನ ಕಣ್ತಪ್ಪಿಸಿಕೊಂಡಿತ್ತು ! ಆದರೆ ಈ ವಿಷಯವನ್ನು ಎಷ್ಟು ದೀರ್ಘವಾಗಿ ಸಿನೇಮಾದಲ್ಲಿ ತೋರಿಸಿದ್ದಾರೋ ಏನೋ ? ನಾನು ಸಿನೇಮಾ ನೋಡಿಲ್ಲ . ಈ ಸಿನೇಮಾ ಸೂಪರ್ ಹಿಟ್ ಆದದ್ದಲ್ಲದೆ ಬೇರೆ ಭಾಷೆಗಳಿಗೂ ಹೋಯಿತು . ಹಿಂದಿಯಲ್ಲೂ ಅಮಿತಾಭ್ ಅಭಿನಯದಲ್ಲಿ ಬಂದಿದೆ . ಹಿಂದಿ ಸಿನೇಮಾದ ಹೆಸರು ಮೇರಿ ಆವಾಜ್ ಸುನೋ .
ಈಗ ಸುಧಾದಲ್ಲಿ ಈ ವಾರ ( ೨೭ ಡಿಸೆಂಬರ್ ೨೦೦೭ ) ’ಮತ್ತೆ ಅಂತ’ ಧಾರಾವಾಹಿ ಶುರು ಆಗಿದೆ . ಅವೇ ಪಾತ್ರಗಳು ಇವೆ . ಆದರೆ ಈ ಬಾರಿ ಭಯೋತ್ಪಾದಕತೆಯ ಹಿನ್ನೆಲೆ ಇದೆ.
ಅಂದ ಹಾಗೆ ಯಾರೋ ಸಂಪದದಲ್ಲಿ ಜಗ್ಗಿ ವಾಸುದೇವ್ ಬಗ್ಗೆ ಬರೆದಿದ್ದರು , ಅವರ ವಿಚಾರಧಾರೆ ಬರುವ ವಾರಗಳಲ್ಲಿ ಸುಧಾದಲ್ಲಿ ಬರಲಿದೆಯಂತೆ.