ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಉರಿಯ ನಾಲಗೆಯ ಕುರ್ತುಕೋಟಿ

ತೊಗಲ ನಾಲಗೆ ನಿಜವ ನುಡಿಯಲೆಳೆಸಿದರೆ ತಾ
ನಂಗೈಲಿ ಪ್ರಾಣಗಳ ಹಿಡಿಯಬೇಕು
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು
ಉರಿಯ ನಾಲಗೆಯಿಂದ ನುಡಿಯಬೇಕು.

ಬೇಂದ್ರೆ ಪದ್ಯವೊಂದರ ಮೊದಲ ಸಾಲುಗಳು ಇವು. ಇವನ್ನು ನಾನು ಓದಿದ್ದು ಕೀರ್ತಿನಾಥ ಕುರ್ತುಕೋಟಿಯರ ಪ್ರಬಂಧವೊ೦ದರಲ್ಲಿ. ತೊಗಲ ನಾಲಗೆ ಹಾಗು ಉರಿಯ ನಾಲಗೆ ಕುರಿತ ಅವರ ವ್ಯಾಖ್ಯಾನ ನನ್ನ ಮನಸ್ಸನ್ನು ಸೂರೆಗೊ೦ಡಿತ್ತು. ಈಗ ಹೋದ ವಾರವಷ್ಟೇ ಕುರ್ತುಕೋಟಿಯವರು ನಿಧನರಾಗಿದ್ದಾರೆ. ಆ ಸುದ್ದಿ ತಂದ ಎದೆಯ ಭಾರದಲ್ಲಿ ಅವರ ಉರಿಯನಾಲಗೆ ಟಿಪ್ಪಣಿಗಳ ಪುಸ್ತಕ ತೆಗೆದು ಮತ್ತೆ ಓದತೊಡಗಿದೆ. ಅವರ ಬೇರೆ ಬೇರೆ ಪ್ರಬಂಧ ಟಿಪ್ಪಣಿಗಳು ಮತ್ತೆ ನನ್ನ ಮನಸ್ಸನ್ನು ಆವರಿಸಿತು-ಓದುತ್ತಾ ಹೋದಂತೆ ಬೇಂದ್ರೆಯವರ ಪದ್ಯದ ಸಾಲುಗಳು ಹೇಗೆ ಕುರ್ತುಕೋಟಿಯವರಿಗೇ ಸಲ್ಲುತ್ತದೆ ಅನ್ನಿಸಿತು. ಧರ್ಮದ ಹೆಸರಿನಲ್ಲಿ ನಡೆದಿರುವ ಹಿಂಸೆಯನ್ನು ಅವರು ತಣ್ಣಗೆ ಖಂಡಿಸುವ ರೀತಿ ನೋಡಿದರೆ ಈ ಮಾತು ಅರ್ಥವಾಗುತ್ತದೆ.
ತಮ್ಮ ಪ್ರಬಂಧವೊಂದರಲ್ಲಿ "ಪುರಾಣಕತೆಗಳನ್ನು ಭಾವನಾವಿಫುಲತೆಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಮಾಡಿದರೆ ಅವು ಮರೆತು ಹೋಗುತ್ತವೆ ಅಥವಾ ಮರೆತುಹೋದಷ್ಟೂ ಒಳ್ಳೆಯದೇ. ನಮ್ಮ ನಂಬಿಕೆಗೆ ಕುತ್ತು ಬಂದರೆ ಅದರಿಂದುಂಟಾಗುವ ದಿಗ್ಭ್ರಮೆಯಲ್ಲಿ ನಾವು ಇನ್ನೊಬ್ಬರ ಪ್ರಾಣವನ್ನು ತೆಗೆಯಲು ಹಿಂದುಮುಂದು ನೋಡುವುದಿಲ್ಲ. ನಮ್ಮ ಪುರಾಣಗಳಿಗೆ ವೀರಾವೇಶದ ರಕ್ಷಣೆ ಬೇಕಾಗಿಲ್ಲ... ಅವುಗಳನ್ನು ಇತಿಹಾಸಗಳೆಂದು ಭ್ರಮಿಸಿದರೆ ಮತ್ತೊಂದು ರಕ್ತಪಾತಕ್ಕೆ ಎಡೆಮಾಡಿಕೊಡುತ್ತಿದ್ದೇವೆ" ಎಂದು ಹೇಳಿದ್ದಾರೆ. ಹೀಗೆನ್ನುವ ಕುರ್ತುಕೋಟಿಯವರು ನಿಜವಾಗಿಯೂ -ನೀರಿನೊಲು ತಣ್ಣಗಿದ್ದವರು-ನಿಜವನ್ನು ಉರಿಯ ನಾಲಗೆಯಿ೦ದ ನುಡಿದವರು. ನೀರು-ಉರಿಯನ್ನು ಒಟ್ಟಿಗೆ ದಕ್ಕಿಸಿಕೊಂಡವರು. ತಾನು ದಕ್ಕಿಸಿಕೊಂಡದ್ದನ್ನು ನಿರಾಳದಿಂದ ಹಂಚಿಕೊಂಡವರು.

ಅನಂತವೆಂದರೆ

[Sandor Weoress ಎಂಬ ಕವಿಯ ಒಂದು ಪದ್ಯ. ನಿನ್ನೆ ಓದಿದೆ. ಇಷ್ಟವಾಯಿತು. ಹೀಗೆ ಕನ್ನಡಕ್ಕೆ]

ಶಿಲೆಯಲಾದ ಮೂರ್ತಿಯಲ್ಲ
ಕೊಳೆಯುವ ಕಾಯವಲ್ಲ,
ಕಾಲದಿಂದಾಚೆಗೆ ಬಾಗಿ ನಿಂತ
ಇಲ್ಲೇ ಈಗಲೇ ಇರುವ ಕ್ಷಣ,

ಕಾಲವು ದುಂದುಮಾಡುವುದನ್ನು ಕಾಪಿಡುವ
ಐಸಿರಿಯ ಮುಷ್ಠಿಯಲಿ ಬಿಗಿದಿಟ್ಟುಕೊಳುವ
ಅಗಾಧ ಭೂತ ಅಗಾಧ ಭವಿಷ್ಯದ ನಡುವೆ ತೋರುವ ಈ ಕ್ಷಣ,

ಹೊಳೆಯೊಳಿಳಿದು ಮೀಯುವ ಹೊತ್ತು
ಒಳತೊಡೆಗೆ ಮೀನು ಮುತ್ತಿಟ್ಟಾಗ,
ದೇವರು ನಮ್ಮೊಳಗೇ ಇರುವುದು ನಮಗೇ ಗೊತ್ತಾದ ಹಾಗೆ,

ಈಗ ನೆನಪು ಆಮೇಲೆ ಅರೆ ನೆನಪು
ಕನಸಿನ ಹಾಗೆ
ಸ್ಮಶಾನದ ಸಮಾಧಿಯ ಈಚೆಯ ಬದಿಗೆ
ಈ ಕ್ಷಣ.

ಹಿತನುಡಿ

ವಾಕ್‌ ಸ್ವಾತಂತ್ರ್ಯ ನಾವು ಉಪೇಕ್ಷಿಸುವವರಿಗೆ ಇರಬೇಕು ಎಂದು ನಂಬದಿದ್ದರೆ, ನಮಗೆ ಅದರಲ್ಲಿ ನಂಬಿಕೆಯೇ ಇಲ್ಲ ಎಂದರ್ಥ.

ಸಕಾಲದಲ್ಲಿ ಮುಂಗಾರು ಮಳೆ

ಅಷ್ಟು ಚೆನ್ನಾಗಿದೆ ಇಷ್ಟು ಚೆನ್ನಾಗಿದೆ ಎಂದೆಲ್ಲಾ ಕೇಳಿ ಕೇಳಿ ಸಾಕಾಗಿ ಇನ್ನು ನೋಡದೇ ಕಳೀದು ಎಂದಂದುಕೊಂಡು ಇಂದು ನಾನು ಮುಂಗಾರು ಮಳೆ ನೋಡೇ ಬಿಟ್ಟೆ. ಮಂಗಳೂರಿನ ಜನ ಕನ್ನಡ ಸಿನೆಮಾ ನೋಡುವುದೇ ಇಲ್ಲ ಎಂದಂದುಕೊಂಡು ನಾನು ಥ್ಯೇಟರಿಗೆ ಹೋದೆ. ನೋಡಿದರೆ ಬಾಲ್ಕನಿ ಫುಲ್! ಈ ಸಿನೆಮಾ ಇದೇ ಥ್ಯೇಟರಿನಲ್ಲಿ ಆಗಲೇ ಕನಿಷ್ಟ ೫ ವಾರದಿಂದ ಓಡುತ್ತಿದೆ. ಕೆಳಗೆ ಕೂತರೆ ಅದೂ ಆಲ್‍ಮೋಸ್ಟ್ ಫುಲ್. ನಾನು ಕೂತ ಕೆಲವು ಸಮಯದಲ್ಲೇ ದೀಪ ಆರಿತು ಸಿನೆಮಾ ಆರಂಭವಾಯಿತು.

ಟೈಟಲ್ ಆದ ಮೇಲೆ ತೀರಾ ಸಾದಾರಣ ಎನ್ನುವ ಓಪನಿಂಗ್ ಆಗುತ್ತೆ ಸಿನೆಮಾಕ್ಕೆ. ಗಣೇಶ್ ಪಾತ್ರ ಯಾಕೆ ಹೀಗಿದ್ದಾನೆ? ಮಡಿಕೇರಿಯ ಹುಡುಗಿ ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದಾಳೆ? ರೇಡಿಯೋ ಮಿರ್ಚಿಗೆ ದೂರವಾಣಿಸಿದ ಕೂಡಲೇ ಲೈನ್ ಸಿಗುವುದು! ಶುದ್ಧ ನಾಲಾಯಕ್ಕಾದ ಮಗನಿದ್ದೂ ಅಮ್ಮ ಅವನಿಗೆ ಸಹಕಾರ ಕೊಡುವುದು, ಅಪ್ಪ ಮಗನಿಗೆ ಹೆದರುವುದು! ಈ ರೀತಿ ವಿಚಿತ್ರವಾಗಿ ಸಿನೆಮಾ ಆರಂಭವಾಗುತ್ತದೆ. ಮುಂದೆ ಸಿನೆಮಾದುದ್ದಕ್ಕೂ ಈ ವಿಚಿತ್ರಗಳ ಸರಮಾಲೆ ಮುಂದುವರೆಯುತ್ತದೆ. ಎಷ್ಟೋ ಕಡೆ ಸ್ಕ್ರಿಪ್ಟ್ ವೀಕ್ ಅನ್ನಿಸುತ್ತದೆ. ನಟನೆ ಇನ್ನೂ ಚೆನ್ನಾಗಿರಬಹುದಿತ್ತು ಅನ್ನಿಸುತ್ತದೆ. ಚಿತ್ರದ ನಡುವೆ ಪಂಜಾಬಿ ನೃತ್ಯ ಅನಗತ್ಯ ಅನ್ನಿಸುತ್ತದೆ. ಸಿನೆಮಾದ ಕಥೆ ಮೊದಲೇ ಅನೇಕ ಛಾಯೆಗಳಲ್ಲಿ ಹಿಂದಿಯಲ್ಲಿ ಬಂದಿದೆ ಅನ್ನಿಸುತ್ತೆ. ಪ್ರಸಿದ್ಧ ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ ಇದೇ ಕಥೆಯ ಎಳೆಯಲ್ಲವೇ? (ಇದು ಅದರ ನಕಲು ಎಂದಲ್ಲ ನಾನು ಹೇಳುತ್ತಿರುವುದು) ಹೀಗೆ ಅನೇಕ ವಿಷಯಗಳು ಮಾಮೂಲು ಎಂದನ್ನಿಸುತ್ತದೆ. ಆದರೆ ನಾನು ಇದನ್ನೇ ಪಟ್ಟಿಮಾಡಿದರೆ ತಪ್ಪು ಮಾಡಿದಂತಾಗುತ್ತದೆ.