ಪದಬೆಳಗು: ಕಳ್ಳಕುಬಸ
ಪದ ಬೆಳಗು: ಕಳ್ಳ ಕುಬಸ
ಬಳಕೆ ತಪ್ಪಿ ಹೋದರೆ ಪದಗಳು ಕೂಡ ಮಸುಕಾಗುತ್ತವೆ. ಹಾಗಾಗದಿರಬೇಕಾದರೆ ಪಾತ್ರೆಗಳನ್ನು ದಿನವೂ ಬೆಳಗಿಕೊಳ್ಳುವಂತೆಯೇ ಪದಗಳನ್ನು ಪದಾ-ರ್ಥಗಳನ್ನು ಬಳಸಿ ಬೆಳಗಿಕೊಳ್ಳಬೇಕಾಗುತ್ತದೆ. ಆಗಾಗ ನನ್ನ ಗಮನಕ್ಕೆ ಬಂದ ನನಗಾಗಿ ಬೆಳಗಿಕೊಂಡ ಪದಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಇತ್ತೀಚೆಗೆ ಹಾಗೆ ಬೆಳಗಿಕೊಂಡ ಪದ ಕಳ್ಳಕುಬಸ.
ಬಹುಶಃ ಉತ್ತರ ಕರ್ನಾಟಕದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಪದ. ಮನೆಯ ಹೆಣ್ಣು ಮಕ್ಕಳು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ನಮ್ಮ ಮನೆಯ ಹೆಂಗಸರನ್ನು ಕೇಳಿದಾಗಲೂ ಆ ಆಚರಣೆಯ ವಿವರ ಹೇಳಿದರೇ ಹೊರತು ಪದದ ಬಗ್ಗೆ ಅವರಿಗೆ ಅಂಥ ಕುತೂಹಲವೇನೂ ಇರಲಿಲ್ಲ.
ಆಚರಣೆ ಇದು. ಮದುವೆ ಮಾಡಿಕೊಟ್ಟ ಹೆಣ್ಣು ಮಗಳು ಚೊಚ್ಚಲ ಬಸುರಿಯಾದಾಗ ನಾಲ್ಕು ತಿಂಗಳು ತುಂಬುವ ಮೊದಲು ಕಳ್ಳಕುಬುಸ ಮಾಡುತ್ತಾರೆ. (ಕಟುಕಲು) ಜೋಳದ ರೊಟ್ಟಿ, (ಮೊಸರನ್ನದ) ಬುತ್ತಿ ಇತ್ಯಾದಿಗಳನ್ನು ಮನೆಯಿಂದ ಮಾಡಿಕೊಂಡು ಹೋಗಿ, ಗಂಡನ ಮನೆಯಲ್ಲಿರುವ ಮಗಳಿಗೆ ಉಣಿಸಿ, ಆರತಿ ಬೆಳಗಿ, ಕುಬುಸದ ಬಟ್ಟೆ ಕೊಟ್ಟು ಬರುತ್ತಾರೆ. ತವರು ಮನೆಯವರೇ ಮಾಡುವ ಆಚರಣೆ ಇದಂತೆ.
ನನ್ನ ಕೋತಿ ಮನಸ್ಸು ಕಳ್ಳು=ಹೆಂಡ ಅಲ್ಲವೇ, ಹುಡುಗಿಗೆ ಹೆಂಡ ಕುಡಿಸಿ, ರವಕೆ ಬಟ್ಟೆ ಕೊಡುತ್ತಾರಾ! ಅಥವಾ ಗಂಡನ ಮನೆಯವರಿಗೆ ಗೊತ್ತಾಗದಂತೆ ಕಳ್ಳತನದಿಂದ ಹೋಗಿ ಮಗಳಿಗೆ ಉಡುಗೊರೆ ಕೊಟ್ಟು ಬರುತ್ತಾರಾ! ಹುಡುಗಿಯ ಕುಬಲ ಕದ್ದುಕೊಂಡು ಬರುತ್ತಾರಾ! ಎಂದು ಏನೇನೋ ಯೋಚನೆ ಮಾಡಿತು.
ಕೊನೆಗೆ ಗೌಡರ ಹೆಣ್ಣುಮಗಳೊಬ್ಬಳು ಕಳ್ಳು ಬಳ್ಳಿ ಅಲ್ಲವಾ ಎಂದಾಗ ತಟ್ಟನೆ ಈ ಪದದ ಅರ್ಥ ಬೆಳಗಿತು. ಕರುಳು ಅನ್ನುವ ಪದ ನಮ್ಮ ಜನರ ಆದುಮಾತಿನಲ್ಲಿ ಕಳ್ಳು ಎಂದಾಗಿದೆ. ಅದು ಕುಬಸ ಅನ್ನುವ ಇನ್ನೊಂದು ಪದದೊಡನೆ ಸೇರಿ, ಅಷ್ಟಿಷ್ಟು ಸವೆದು ಕಳ್ಳಕುಬಸ, ಕಳ್‌ಕುಬ್ಸ ಆಗಿದೆ ಎಂದು ಹೊಳೆಯಿತು. ನಮ್ಮ ಕರುಳಿನ ಬಳ್ಳಿ ಇನ್ನೊಂದು ಮನೆಯಲ್ಲಿ ಹಬ್ಬಿ ಹೂ ಹಣ್ಣು ಬಿಡುತ್ತಿರುವಾಗ ನಾವು ಹೋಗಿ ನಮ್ಮ ಸಂತೋಷ ತೋರಿಸಬೇಡವೇ! ಅದಕ್ಕೇ ಕಳ್ಳಕುಬಸ ಅಥವಾ ಕಳ್ಳು ಕುಬಸದ ಆಚರಣೆ.
ಈ ಪದ ಒಳಗೊಂಡಿರುವ ಮನೋಧರ್ಮ ಎಷ್ಟು ಮಮತೆ ತುಂಬಿದ್ದು ಅಲ್ಲವೇ.
Comments
ಉ: ಪದಬೆಳಗು: ಕಳ್ಳಕುಬಸ
ಉ: ಪದಬೆಳಗು: ಕಳ್ಳಕುಬಸ
In reply to ಉ: ಪದಬೆಳಗು: ಕಳ್ಳಕುಬಸ by keshav
ಉ: ಪದಬೆಳಗು: ಕಳ್ಳಕುಬಸ
In reply to ಉ: ಪದಬೆಳಗು: ಕಳ್ಳಕುಬಸ by keshav
ಉ: ಪದಬೆಳಗು: ಕಳ್ಳಕುಬಸ
ಉ: ಪದಬೆಳಗು: ಕಳ್ಳಕುಬಸ