ನಾವು ಹಾಗೂ ನಮ್ಮ ಸಂಪದ
ಈ ಬರಹ ಬಹಳ ಪ್ರಸ್ತುತವೆನಿಸಿದ್ದರಿಂದ ನಿರ್ವಾಹಕರಿಂದ 'ಸೂಚನಾ ಫಲಕ' ಕ್ಕೆ ಸೇರಿಸಲ್ಪಟ್ಟಿದೆ.
ಸೂ: ದಯವಿಟ್ಟು ಮಾನ್ಯರ ಕೆಳಗಿನ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಇಲ್ಲಿ ಕಾಣುವ ಎರಡು ಪ್ರಸ್ತಾವನೆಗಳು:
೧) [:http://sampada.net/node/1596|ವೈಯಕ್ತಿಕ ದೂಷಣೆಗಳು ಬೇಡ].
೨) ಕೋಪ-ತಾಪಗಳನ್ನು ಬಿಟ್ಟು ಸದಭಿರುಚಿಯ ಚರ್ಚೆ ನಡೆಯಲಿ.
ಎಂಬುದು ಬಹಳ ಪ್ರಸ್ತುತ.
ಆತ್ಮೀಯರೇ,
ಹಲವು ದಿನಗಳಿಂದ ಸಂಪದದಲ್ಲಿ ಬರುವ ಬರೆಹಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ನೋಡುತ್ತಿದ್ದೇನೆ. ನನ್ನ ಈ ಮುಂದಿನ ಮಾತುಗಳು ನನ್ನ ಮುಖಕ್ಕೆ ಹಿಡಿದುಕೊಂಡ ಕನ್ನಡಿಯೇ ವಿನಾ ಇತರರಿಗೆ ತೋರಿಸಿದ ದಾರಿದೀಪವಲ್ಲ. ಕೆಲವು ಬಾರಿ ಇದರಲ್ಲಿ ನನ್ನ ಮುಖದಂತೆಯೇ ನಿಮ್ಮ ಮುಖವೂ ಕಾಣಬಹುದು.
ಇಂತಹ ಸಾಮೂಹಿಕ ಪ್ರಯತ್ನಗಳಿಗೆ, ವೇದಿಕೆಗಳಿಗೆ ಎರಡು ಆಯಾಮಗಳಿರುತ್ತವೆ. ನಮ್ಮ ಅಭಿಪ್ರಾಯಗಳನ್ನು ಮಂಡಿಸುವುದು ಮತ್ತು ಅವುಗಳ ಪರವಾಗಿ ವಾದಿಸುವುದು ಒಂದು ನೆಲೆಯಾದರೆ, ಇತರರಿಂದ ಕಲಿಯುವುದು ಮತ್ತು ಆ ಮೂಲಕ ನಾವೂ ಬೆಳೆಯುವುದು ಇನ್ನೊಂದು ನೆಲೆ. ಎರಡನೆಯ ನೆಲೆಗೆ ಸರಿಯಾದ ಮಹತ್ವ ಸಿಗದಿದ್ದರೆ, ನಾವು ಚರ್ಚಾಪಟುಗಳಾಗಿ ಬಿಡುತ್ತೇವೆ. ಇಲ್ಲಿ ನಡೆಯುವ ಕೆಲವು ಚರ್ಚೆಗಳಲ್ಲಿ ಅಂತಹ `ನಾನೆ ಸರಿತನ'ವು ಕಾಣಿಸಿಕೊಂಡಿದೆಯೆಂದು ನನಗೆ ತೋರುತ್ತದೆ. ಇಲ್ಲಿ ಅನೇಕ ಪೀಳಿಗೆಗಳಿಗೆ ಸೇರಿದ ಜನರು ಇರುವುದು ನಮಗೆಲ್ಲರಿಗೂ ಕಲಿಯುವ ಅವಕಾಶ. ಕಿರಿಯರಿಂದ ಅಂತೆಯೇ ಹಿರಿಯರಿಂದ. ನಮ್ಮ ಕ್ಷೇತ್ರಕ್ಕೆ ಸೇರಿದವರಿಂದ ಅಂತೆಯೇ ಅನ್ಯ ವಲಯಗಳಿಗೆ ಸೇರಿದ ಜಾಣರಿಂದ. ಕನ್ನಡ ಭಾಷೆ ಮತ್ತು ವ್ಯಾಕರಣಗಳ ಬಗ್ಗೆ ಚರ್ಚಿಸುವ ಸಾಫ್ಟ್ ವೇರ್ ಪರಿಣಿತರನ್ನು ಓದಿದಾಗ ನನಗೆ ನಿಜವಾಗಿಯೂ ಸಂತೋಷವಾಗುತ್ತದೆ. ಮಠಗಳ ಬಗ್ಗೆಯೋ ಸುಸ್ಮಿತಾ ಸೇನ್ ಬಗ್ಗೆಯೋ ಚರ್ಚೆ ನಡೆದಾಗ ಬೆಳಕಿಗಿಂತ ಹೆಚ್ಚಾಗಿ ಬೆಂಕಿ ಹುಟ್ಟಿದಂತೆ ಕಾಣುತ್ತದೆ. ನಿಜ. ಬೆಂಕಿಯಿಲ್ಲದೆ ಬೆಳಕಿಲ್ಲ. ಆದರೆ ಇದು ನಮ್ಮ ಕೋಪ-ತಾಪಗಳ ಪ್ರದರ್ಶನಕ್ಕೆ ಮೀಸಲಾದ ರಣರಂಗವಲ್ಲ. ಇಂಥ ಕಡೆ, ಕಟಕಿ, ಕಟುಮಾತು ಮತ್ತು ವೈಯಕ್ತಿಕ ಟೀಕೆಗಳು ಖಂಡಿತವಾಗಿಯೂ ಅನಗತ್ಯ. ಇಲ್ಲಿ ನಾವೆಲ್ಲರೂ ಬೆಳೆಯೋಣ, ಬದಲಾಗೋಣ. ಯಾರಿಗಾದರೂ ಇದು ಅನಗತ್ಯವಾದ ಉಪದೇಶವೆನಿಸಿದರೆ, ದಯವಿಟ್ಟು ಕ್ಷಮಿಸಿ.
- Read more about ನಾವು ಹಾಗೂ ನಮ್ಮ ಸಂಪದ
- 2 comments
- Log in or register to post comments