ಭಾರತದಲ್ಲಿ ಯೆಹೂದ್ಯರು
ನಮ್ಮ ಸಿಂಧೂ ಬಯಲಿನ ನಾಗರೀಕತೆ ಪ್ರಚ್ಛನ್ನವಾಗಿದ್ದ ಕಾಲದಲ್ಲಿ ಏಷ್ಯಾ ಖಂಡದ ಮತ್ತೊಂದು ಬದಿಯಲ್ಲಿ ಅಂದರೆ ಯೂಫ್ರ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲಿ ಇನ್ನೊಂದು ನಾಗರೀಕತೆ ರೂಪುಗೊಂಡಿತ್ತು. ಅದೇ ಪುರಾತನ ಯೆಹೂದೀ ನಾಗರೀಕತೆ. ಯೆಹೂದಿಗಳು ಸಹಸ್ರಾರು ವರ್ಷಗಳ ಹಿಂದೆಯೇ ಲಿಪಿಯನ್ನು ಅಳವಡಿಸಿಕೊಂಡು ತಮ್ಮ ದಿನನಿತ್ಯದ ಆಗುಹೋಗುಗಳನ್ನು ಬರೆದಿಡುತ್ತಾ ಬಂದರು. ಈ ಕಾರಣದಿಂದ ಯೆಹೂದ್ಯ ಸಂಸ್ಕೃತಿಯ ಇತಿಹಾಸ ಸ್ಪಟಿಕಸ್ಪಷ್ಟವಾಗಿದೆಯಲ್ಲದೆ ಅದು ಆಯಾ ಕಾಲಘಟ್ಟಗಳ ಜನಾಂಗೀಯ ಸಂಘರ್ಷ, ರಾಜವಂಶಗಳು, ದಿರಿಸುಗಳು, ಆಚಾರ ವಿಚಾರಗಳ ಕುರಿತು ಬೆಳಕು ಚೆಲ್ಲುತ್ತದೆ.
ಸಕಲಕ್ಕೂ ಸೃಷ್ಟಿಕರ್ತನಾದ ಸರ್ವಶಕ್ತ ದೇವರೆಂಬುವನು ಒಬ್ಬನೇ. ಆತ ಸಕಲ ಜನ ಪ್ರಾಣಿಪಕ್ಷಿ ಆಕಾಶ ಭೂಮಿಗಳೆಲ್ಲದಕ್ಕೂ ಒಡೆಯನಾಗಿದ್ದಾನೆ ಹಾಗೂ ಆತ ಆರಿಸಲ್ಪಟ್ಟ ಪ್ರವಾದಿಗಳ ಮೂಲಕ ಮಾತನಾಡುತ್ತಾನೆ. ಅವನನ್ನು ಓಲೈಸುವವರಿಗೆ ರಕ್ಷಣೆಯಿದೆ, ವಿರೋಧಿಸುವವರಿಗೆ ಆ ಕ್ಷಣವೇ ಶಿಕ್ಷೆ ಇದೆ ಎಂದು ನಂಬುವ ಯೆಹೂದ್ಯರು ಆಧುನಿಕ ವಿಚಾರವಾದದಿಂದ ಎಂದೂ ವಿಚಲಿತರಾದವರಲ್ಲ. ತೋರಾ ಎಂಬ ಧರ್ಮಸಂಹಿತೆಯಿಂದ ಬಂಧಿತರಾದ ಅವರು ಮೂರ್ತಿ ಪೂಜೆಯಿಂದ ದೂರ ಉಳಿದವರು. ಪ್ರವಾದಿ ಮೋಸೆಸನ ಮೂಲಕ ದೇವರು ದಶ ಕಟ್ಟಳೆಗಳನ್ನು ಕೊಡಮಾಡಿದರೆಂದೂ ಆ ಕಟ್ಟಳೆಗಳ ಪ್ರಕಾರ ಕೊಲೆ, ಕಳ್ಳತನ, ಸುಳ್ಳು, ವ್ಯಭಿಚಾರ ಮುಂತಾದವುಗಳು ವರ್ಜ್ಯವೆಂದೂ ಹೇಳಲಾಗಿದೆಯಲ್ಲದೆ ದೇವರನ್ನು ಮಾತ್ರ ಆರಾಧಿಸು, ದೇವರ ಹೆಸರನ್ನು ಕ್ಷುಲ್ಲಕ ಕಾರಣಗಳಿಗಾಗಿ ಬಳಸಬೇಡ, ತಂದೆ ತಾಯಿಯರನ್ನು ಗೌರವಿಸು, ಪರಸ್ತ್ರೀಯನ್ನೂ ಪರರ ವಸ್ತುಗಳನ್ನೂ ಬಯಸಬೇಡ ಎಂದೂ ತಾಕೀತು ಮಾಡಲಾಗಿದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡವನನ್ನು ಬಯಲಲ್ಲಿ ನಿಲ್ಲಿಸಿ ಸಮಾಜದ ಇತರೆಲ್ಲರೂ ಕಲ್ಲಿನಿಂದ ಹೊಡೆದು ಸಾಯಿಸಬಹುದೆಂಬ ಕಠೋರ ನೀತಿಗಳೂ ಇವರಲ್ಲಿವೆ. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂಬ ಹಮ್ಮರಾಬಿಯ ನೀತಿಯೂ ಯೆಹೂದ್ಯ ನೀತಿಯಿಂದಲೇ ಪ್ರೇರಿತವಾಗಿದೆಯೆಂದರೆ ಉತ್ಪ್ರೇಕ್ಷೆಯಲ್ಲ.
- Read more about ಭಾರತದಲ್ಲಿ ಯೆಹೂದ್ಯರು
- Log in or register to post comments