" ಮಲೆನಾಡ ಬಗಲಲ್ಲಿ ಸುಸ್ಥಿರ ಕೃಷಿದಂಪತಿಗಳು." (ವಿದ್ಯಾಲಕ್ಷ್ಮಿ ಭಟ್, ಮತ್ತು ಡಾ. ಗಣಪತಿ ಭಟ್)
ಹಸುರು ಹೊನ್ನು :
ವಿದ್ಯ- ಗಣಪತಿ
(ವಿದ್ಯಾಲಕ್ಷ್ಮಿ ಭಟ್ ಮತ್ತು ಡಾ. ಗಣಪತಿ ಭಟ್)
" ಮಲೆನಾಡ ಬಗಲಲ್ಲಿ ಸುಸ್ಥಿರ ಕೃಷಿದಂಪತಿಗಳು."
ಚಿತ್ರ ಲೇಖನ -ಶ್ರಿ. ನರೆಂದ್ರ ರೈ ದೇರ್ಲ.
(ತರಂಗ, ಜುಲೈ ೨೧, ೨೦೦೭) ಪು. ೩೭.
ದಕ್ಷಿಣ ಕನ್ನಡದ ಕೊಕ್ಕಡದಲ್ಲಿ ಕೃಷಿ ಆವಾರವನ್ನು ನಿರ್ಮಿಸಿಕೊಂಡು ಅದನ್ನೇ ಆಶ್ರಮವನ್ನಾಗಿಸಿಕೊಂಡು ಸ್ವಾವಲಂಬನೆಯ ಹಲವಾರು ಮಾದರಿಗಳನ್ನು ಆವಿಷ್ಕರಿಸಿಕೊಂಡು, ಸುಸ್ಥಿರ ಕೃಷಿಗೆ ಗಟ್ಟಿ ಅಡಿಪಾಯ ಹಾಕಿ, ಮುಂದೆ ದಿಟ್ಟ ಹೆಜ್ಜೆಹಾಕುತ್ತಿರುವ ಮಾದರಿ ಸಂಸಾರ- ವಿದ್ಯಾ-ಗಣಪತಿಯವರದು ! ಕೃಷಿಯನ್ನು ಪ್ರ್‍ಈತಿಸುವ ಹುಡುಗಿ ಬಾಳಸಂಗಾತಿಯಾಗಿ ಸಿಕ್ಕಿದ್ದು ಗಣಪತಿಭಟ್ಟರ ಕೆಲಸವನ್ನು ಸುಲಭವಾಗಿಸಿದೆ.
ಡೈರಿತಂತ್ರಜ್ಞಾನದಲ್ಲಿ ಡಾಕ್ಟರೇಟ್ ಪಡೆದು ಕೃಷಿ, ಪರಿಸರ, ಹೈನುಗಾರಿಕೆಯಲ್ಲಿ ಗಂಭೀರವಾಗಿ ಅಧ್ಯಯನ ಮಾಡಿ ಜರ್ಮನಿಯಲ್ಲಿ ಕೆಲಸಮಾಡುತ್ತಿದ್ದ, ಡಾ. ಗಣಪತಿಭಟ್ ಎಲ್ಲರ ತರಹ ಜರ್ಮನಿಯಲ್ಲೇ ಇರಬಹುದಾಗಿತ್ತು. "ನಾನು ಜರ್ಮನಿಯಲ್ಲಿದ್ದಾಗ ಅಲ್ಲಿನ ರೈನ್ ನದಿಯನೀರು ಕಲುಷಿತಗೊಂಡು , ವಾಹನಗಳಹೊಗೆಯಿಂದ ಅಲ್ಲಿನ ಕಾಡು ಸಾವಿನ ಅಂಚಿನಲ್ಲಿದ್ದನ್ನು ನಾವು ನೋಡಿದೆ. ರಸಗೊಬ್ಬರದ ಅತಿಯಾದ ಬಳಕೆಯಿಂದಾಗಿ ಅಂತರ್ಜಲ ಕಲುಷಿತಗೊಂಡಿತ್ತು. ಈ ಎಲ್ಲಾ ಸಂಗತಿಗಳು ನನ್ನ ಮನಸ್ಸಿನಮೇಲೆ ಗಾಢವಾದ ಪರಿಣಾಮವನ್ನು ಬೀರಿತ್ತು. ಮುಂದೆ ನಾನು ಹೇಗೆ ನನ್ನ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು ಎನ್ನುವುದರ ಪ್ರೇರಣೆ ಅಲ್ಲಿ ನನಗೆ ದೊರೆಯಿತು." ಎನ್ನುತ್ತಾರೆ ಡಾ. ಭಟ್ಟರು.
ತಾಯ್ನಾಡಿಗೆ ೧೯೮೬ ರಲ್ಲಿ ಬಂದವರು ಗಟ್ಟಿಯಾಗಿ ಭಾರತದಲ್ಲೇ ನಿಂತರು. ಬಂದವರೇ ತಮ್ಮದೇ ಆದ ಚೆಂದದ ತೋಟವನ್ನು ನಿರ್ಮಿಸಲು ಆಶಿಸಿದರು. ಅವರಿಗೆ ತಕ್ಕ ಬಾಳಸಂಗಾತಿಯ ಆವಶ್ಯಕತೆ ಇತ್ತು. ಅದಕ್ಕೆ ಸರಿಯಾಗಿ ವಿದ್ಯ ಸಿಕ್ಕರು. ಶ್ರೀಮಂತ ಬ್ರಾಹ್ಮಣ ಮನೆತನದಿಂದ ಬಂದಿದ್ದರೂ ವಿದ್ಯಾರವರಿಗೆ ಪ್ರಕೃತಿಯ ಮಡಿಲಿನಲ್ಲಿರುವಾಸೆ. ತೊಟ, ಹಸಿರು, ಕೃಷಿ, ಯನ್ನು ಗಾಢವಾಗಿ ಪ್ರೀತಿಸುತ್ತಿದ್ದ ವಿದ್ಯಾ ಲಕ್ಷ್ಮಿ, ಗಣಪತಿಯವರನ್ನು ಮೋಡಿಮಾಡಿ ಗೆದ್ದರು. ವಿದ್ಯಾ ಪದವೀಧರೆ ; ತಮ್ಮ ಸ್ನಾತಕೋತ್ತರೆ ಪದವಿಯನ್ನು ಪಡೆದ ಮೇಲೆ ಸ್ವಲ್ಪ ಕಾಲ ಶಿಕ್ಷಕಿಯಾಗಿಯೂ ಕೆಲಸಮಾಡಿದ್ದರು. ಭಟ್ಟರ ಕೃಷಿ ಕೆಲಸ ವಿದ್ಯಾಗೆ ಬಹಳ ಮೆಚ್ಚುಗೆಯಾಯಿತು.
ಕೃಷಿ, ಎಂದಕೂಡಲೆ ಕಷ್ಟ ಕೋಟಲೆಗಳು ಕಣ್ಣಿನ ಮುಂದೆ ಭಯಾನಕವಾಗಿ ಕಾಣಿಸಿಕೊಳ್ಳುತ್ತವೆ. ನಮ್ಮದೇಶದ ಹಲವಾರು ರೈತರ ಆತ್ಮಹತ್ಯೆಯ ದೃಷ್ಯ ಕಣ್ಣಿಗೆ ರಾಚುತ್ತದೆ. ಬೇಸಾಯದ ನೈಜ ಸವಲತ್ತುಗಳು ಮತ್ತು ವಿಫಲತೆಗಳನ್ನು ಅರಿತು ತಮ್ಮ ಮನೋಭಾವನೆಯನ್ನು ಬದಲಾಯಿಸಿಕೊಂಡು ವೃತ್ತಿಗೌರವ ಮತ್ತು ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಎನ್ನುವ ಈ ದಂಪತಿಗಳು, ತಮ್ಮ ಪರಿವಾರದ ಆದಾಯವನ್ನು ವೃದ್ಧಿಸುವ ಅನೇಕ ಮಾದರಿಗಳನ್ನು ತಮ್ಮ ಕೃಷಿ ಆವರಣದೊಳಗೆ ಕಲೆಹಾಕಿದ್ದಾರೆ. ಮುಖ್ಯವಾಗಿ ಪರಾವಲಂಬನೆಯಿಂದ ದೂರವಿರುವ ಅನೇಕಾನೇಕ ಸೌಲತ್ತುಗಳನ್ನು ತಾವೇ ಮಾಡಿಕೊಂಡಿದ್ದಾರೆ. ವಿಜಯಾ-ವಿನಯಾ ಈ ದಂಪತಿಗಳ ಅಚ್ಚು-ಮೆಚ್ಚಿನ ಮಕ್ಕಳು !
ಗೋ ಶಕ್ತಿಯ ಸರಿಯಾದ ಬಳಕೆ : ಅವರಿಗೆ ಬೇಕಾದ ಹಾಲು ಮೊಸರು, ತುಪ್ಪದ ಸರಬರಾಜು, ಒಂದಾದರೆ, ಗೊಬ್ಬರದ ಅಗತ್ಯದ ಪೂರೈಕೆ ಇನ್ನೊಂದು. ಹಸುಗಳಿಗೆ ಬೇಕಾಗುವ ಮೇವನ್ನು ಪೂರೈಸಲು ಸ್ವಯಂ ಉತ್ಪಾದಿಸುವ ಘಟಕಗಳ ಮೂಲಕ ಪೂರೈಸುತ್ತಾರೆ. ಗೋಬರ್ ಗ್ಯಾಸನ್ನು ಬಳಸಿ, ಹಿಟ್ಟಿನ ಗಿರಣಿಯನ್ನು ತಮ್ಮ ಕಾಂಪೌಂಡಿನಲ್ಲೇ ಸ್ಥಾಪಿಸಿದ್ದಾರೆ. ಸ್ನಾನ, ಅಡುಗೆಗೆ ನೀರೆತ್ತುವ ಪಂಪಿಗೆ, ಉಪಯೋಗವಾಗುವ ಗ್ಯಾಸನ್ನು ಡೀಸೆಲ್ ವಿದ್ಯುತ್ಜನನಕ್ಕೆ ಗೋ ಅನಿಲವನ್ನು ಬಳಸುವುದರಿಂದ ಶೇ. ೭೫ ಡೀಸೆಲ್ ಉಳಿತಾಯವಾಗುತ್ತದೆ. ಸ್ಲರಿಯನ್ನು ದನಗಳ ಮೇವು ಬೆಳೆಗೆ, ಉಪಯೋಗಿಸಬಹುದು. ಗೇರುಗಿಡಗಳಿಗೆ ಸ್ಲರಿಯ ಉಪಚಾರದ ಅಗತ್ಯವಿದೆ.
ಹಸುಗಳ ಹಟ್ಟಿಯ ವಿನ್ಯಾಸವನ್ನು, ಗಾಳಿ- ಬೆಳಕಿನ ಕೊರತೆಯಿಲ್ಲದಂತೆ ರಚಿಸಲಾಗಿದೆ. ಮಳೆಯನೀರನ್ನು ಶೇಖರಿಸಿಡುವ ವ್ಯವಸ್ಥೆಯನ್ನು ಮೊದಲೇ ಯೋಜಿಸಲಾಗಿದ್ದು, ಅದು ಚೆನ್ನಾಗಿ ನಡೆದುಕೊಂಡು ಬರುತ್ತಿದೆ. ಜಾನುವಾರುಗಳ ಕೃತಕ ಗರ್ಭಧಾರಣೆಯ ಬಗ್ಗೆಯೂ, ಸಾಕಷ್ಟು ಪರಿಣಿತಿಯನ್ನು ಭಟ್ಟರು ಗಳಿಸಿಕೊಂಡಿದ್ದಾರೆ. ತಮ್ಮ ತೋಟದ ಫಲಗಳನ್ನು ಸಂಸ್ಕರಿಸಿ, ಕಾಪಿಡಿವ, ಅವುಗಳನ್ನು ಹೊಸರೀತಿಯಲ್ಲಿ ಬಳಸುವ ಅಮಿತ ವಿದ್ಯೆಯನ್ನು ವಿದ್ಯಾ ಬಲ್ಲರು ! ಡ್ರೈಯರ್ ಮೂಲಕ ಸಂಸ್ಕರಿಸಿ, ಹಲಸು, ಬಾಳೆಹಣ್ಣು, ಮಾವು, ರಾಗಿ, ಪುನರ್ಕಳಿ ಮುಂತಾದುವುಗಳನ್ನು ಜೋಪಾನವಾಗಿಡುತ್ತಾರೆ. " ಟ್ಯೊಮ್ಯಾಟೊ ಒಂದನ್ನು ಬಿಟ್ಟು ಯಾವ ತರಕಾರಿಗಳನ್ನು ಸುಮಾರು ೧೦ ವರ್ಷಗಳಿಂದ ಕೊಂಡಿದ್ದು ಜ್ಞಾಪಕವಿಲ್ಲ" ಎನ್ನುತ್ತಾರೆ, ವಿದ್ಯ. ವರ್ಷವಿಡೀ ಮನೆಯಂಗಳದಲ್ಲೇ ಬೇರೆ ಬೇರೆ ತರಹದ ತಾಜಾ ತರಕಾರಿಗಳನ್ನು ಅವರು ಬೆಳೆಯುತ್ತಿದ್ದಾರೆ.
ಇಂದಿನ ದಿನಗಳಲ್ಲಿ ಕೂಲಿಕಾರ್ಮಿಕರ ಸಮಸ್ಯೆಯನ್ನು ಎಲ್ಲಾ ಕೃಷಿಕರೂ ಎದುರಿಸುತ್ತಿದ್ದಾರೆ. ಗೋ ಅನಿಲವನ್ನು ಬಳಸಿ ಸಣ್ಣ-ಪುಟ್ಟ ಯಂತ್ರಗಳನ್ನು ಚಾಲನೆ ಗೊಳಿಸಿ ಕೃಷಿಯನ್ನು ಪುನಃಚೇತನಗೊಳಿಸುವ ಪ್ರಯೋಗ ನಿಜಕ್ಕೂ ಅಭಿನಂದನೀಯ. ಭಟ್ ದಂಪತಿಗಳು ಒಂದು ವಿಷಯವನ್ನು ಇಲ್ಲಿ ಸ್ಪಷ್ಟಮಾಡುತ್ತಾರೆ . ಈ ಕ್ಷೇತ್ರದಲ್ಲಿ ದುಡಿಯುವವರು ಕೃಷಿಗಾಗಿ ಹೆಚ್ಚುಸಮಯ ವಿನಿಯೋಗಿಸುವುದು ಅನಿವಾರ್ಯ. ಏಕೆಂದರೆ ಇನ್ನೂ ಕರ್ನಾಟಕದಲ್ಲಿ ನಾವು ಮಳೆಯ ಆಗಮನದ ನಂತರವೇ ಬೀಜ ಬಿತ್ತಲು ಪ್ರಾರಂಭಿಸುತ್ತೇವೆ. ನಮ್ಮ ಬೇಸಾಯ ಮಳೆ, ಗಾಳಿ ಮತ್ತು ಬಿಸಿಲನ್ನು ಬಹಳವಾಗಿ ಇನ್ನೂ ಅವಲಂಬಿಸಿರುವುದು ಇದಕ್ಕೆ ಕಾರಣ. ಇವುಗಳಾವುವೂ ನಮ್ಮ ಅನುಕೂಲಕ್ಕೆ ತಕ್ಕಂತೆ ದೊರೆಯುವುದಿಲ್ಲ. ನಾವು ಸತತವಾಗಿ ವರುಣನ ಕೃಪಾ ಕಟಾಕ್ಷಕ್ಕೆ ಕಾಯುತ್ತಲೇ ಇರಬೇಕಾಗುತ್ತದೆ. ಅದಕ್ಕಾಗಿ ಅವರು ತಮ್ಮ ಕೃಷಿ ಕ್ಷೇತ್ರಕ್ಕೆ ಕಚ್ಚಿಕೊಂಡಿದ್ದಾರೆ. ಯಾವುದೇ ಕಾರ್ಯಕ್ರಮಗಳಿಗೆ, ಕೌಂಟುಂಬಿಕ ಸಂದರ್ಭಕ್ಕೂ ಅವರು ಹೋಗುವುದಿಲ್ಲ. ಹಸಿರು ಆವರಣವನ್ನು ಬಿಟ್ಟು ಪಟ್ಟಣಗಳಿಗೆ ಹೋಗುವುದು ಅವರಿಗೆ ಹಿಡಿಸುವುದಿಲ್ಲ. ಮೇಲಾಗಿ ತೋಟದ ಕೆಲಸ ಸ್ಥಗಿತಗೊಳ್ಳುತ್ತದೆ. ಸರ್ಕಾರವೋ, ಬೇರೆ ಯಾರೋ ಬಂದು ನಮ್ಮನ್ನು ಉದ್ಧಾರಮಾಡುತ್ತಾರೆ, ಎನ್ನುವ ಮಾತು ಬೇಡ. " ಕೃಷಿಯ ನೆಲೆಯನ್ನು ಸ್ವಲ್ಪ ಮುಂದಾಲೋಚನೆಯಿಂದ ಅನುಕೂಲಕ್ಕೆ ತಕ್ಕಂತೆ ಬಳಸಿದ್ದೇ ಆದರೆ, ನಮ್ಮ ಜೀವನ ಹಸನಾಗುವುದಲ್ಲಿ ಆಶ್ಚರ್ಯವಿಲ್ಲ." ಎನ್ನುತ್ತಾರೆ, ಈ ಮಾದರಿ ದಂಪತಿಗಳು !
ಈ ಲೇಖನ, ಬಹಳ ಮಂದಿ ’ಇಂಟರ್ನೆಟ್ ಓದುಗರನ್ನ” ತಲುಪುವಲ್ಲಿ ಯಶಸ್ವಿಯಾಗುತ್ತದೆ, ಎನ್ನುವ ವಿಶ್ವಾಸ ನನ್ನದು ! ಯಾರಿಗೆ ಗೊತ್ತು, ಅವರಲ್ಲಿ ಅನೇಕರು ಡಾ. ಭಟ್ಟರಂತೆ ಯೋಚಿಸುವವರೂ ಇರಬಹುದು. ಮೇಲಾಗಿ ತಮ್ಮ ಗಳಿಕೆ ಮತ್ತು ಜ್ಞಾನಗಳ ಸಂಪನ್ಮೂಲಗಳಿಂದ, ಕೆಲವರು ಮೊತ್ತೊಂದು ವಿಕ್ರಮವನ್ನೇ ಸಾಧಿಸಬಹುದು ! ಇಂತಹ ಪ್ರಯೋಗಶೀಲ ಕಾರ್ಯಗಳಿಗೆ ಒತ್ತುಕೊಡುವುದೇ ನಮ್ಮ ಕೆಲಸಗಳಲ್ಲಿ ಒಂದು.
ಮತ್ತೊಮ್ಮೆ ತರಂಗ ಪತ್ರಿಕೆಯನ್ನು ಶ್ಲಾಘಿಸುತ್ತೇನೆ. ಕೃಷಿಯ ಕ್ಷೇತ್ರದ ನಿಷ್ಣಾತರ ಪರಿಚಯಗಳನ್ನು ಇನ್ನೂ ಹೆಚ್ಚು ಹೆಚ್ಚು ಮಾಡಲಿ, ಎಂದು ಹಾರೈಸೋಣವೇ ?