ವಿಚಿತ್ರವಾದರೂ ನಿಜ
ಇದೊಂದು ವಿಚಿತ್ರವಾದರೂ ಸತ್ಯವಾದ ಸಂಗತಿ. ನನ್ನ ಅನುಭವ.
ನಿತ್ಯವೂ ಲೋಕಲ್ ಟ್ರೈನ್‍ನಲ್ಲಿ ಚರ್ಚ್‍ಗೇಟ್ ತಲುಪಿದ ಬಳಿಕ ನನ್ನ ಕಛೇರಿ ಇರುವ ವರ್ಲ್ಡ್ ಟ್ರ್‍ಏಡ್ ಸೆಂಟರ್ ಗೆ ಹೋಗಲು ಬಸ್ ಹಿಡಿಯಬೇಕು. ಮೊದಲ ಬಸ್ ಇರೋದು ಬೆಳಗ್ಗೆಯ ೮.೧೫ಕ್ಕೆ. ಸಾಮಾನ್ಯವಾಗಿ ನಾನು ೮.೧೦ಕ್ಕೆ ಅಲ್ಲಿಯ ಕ್ಯೂನಲ್ಲಿ ನಿಲ್ಲುವೆ. ನಾನು ಹೋಗಿ ನಿಲ್ಲುವ ವೇಳೆಗೆ ಸರಿಯಾಗಿ ಒಂದು ನಾಯಿ ಎಲ್ಲಿಂದಲೋ ಬಂದು ನನ್ನ ಮುಂದೆ ಮಲಗಿಕೊಳ್ಳುವುದು. ನಾನು ಇಲ್ಲಿಯವರೆವಿಗೂ ಇದನ್ನು ಗಮನಿಸಿರಲಿಲ್ಲ.
ಮೊನ್ನೆ ಒಂದು ದಿನ ಆ ನಾಯಿ ನನ್ನ ಮುಂದೆ ಬಂದು ಮಲಗಲು, ನನ್ನ ಜೊತೆ ಇದ್ದ ಎಸ್.ಬಿ.ಐ.ನ ಸ್ನೇಹಿತರು (ಇದನ್ನೆಲ್ಲಾ ಬಹಳ ದಿನಗಳಿಂದ ಗಮನಿಸಿದ್ದರು) ಆ ನಾಯಿಗೆ ನಾನು ಯಾವತ್ತಾದರೂ ಬಿಸ್ಕತ್ ಅಥವಾ ಇನ್ನೇನಾದರೂ ತಿಂಡಿ ಹಾಕಿದ್ದೆನಾ ಎಂದು ಕೇಳಿದರು.
ಇಲ್ಲವಲ್ಲಾ, ಎಂದು ನಾನು ಮರುತ್ತರಿಸಿದೆ.
ಮುಂದೆ ಹೆಚ್ಚಿನ ಮಾತನಾಡದೇ ಅವರು ಹೀಗೆ ಹೇಳಿದರು, 'ಆ ನಾಯಿಯನ್ನು ನೀವು ಹಾಗೇ ಗಮನಿಸಿ ನೋಡಿ'.
ನೋಡಿದೆ, ಅದು ಮಾಮೂಲಿಯಂತಹ ಬೀದಿ ನಾಯಿ. ನಡೆಯುವಾಗ ಒಂದು ಕಾಲು ಕುಂಟುತ್ತಿತ್ತು. ಕುತ್ತಿಯ ಭಾಗದಲ್ಲಿ ಗಾಯವಾಗಿ ರಕ್ತ ಒಸರುತ್ತಿತ್ತು. ಸ್ವಲ್ಪ ಅಸಹ್ಯ ತರಿಸುವಂತಹ ಪ್ರಾಣಿ.
ನನ್ನ ಬಸ್ ಬಂದ ಕೂಡಲೇ ನನ್ನ ಪಾಡಿಗೆ ನಾನು ಹೊರಟು ಹೋಗುತ್ತಿದ್ದೆ. ಮತ್ತೆ ಸಂಜೆ ಮನೆಗೆ ಬರುವಾಗ ಅದೇ ಹಾದಿಯಲ್ಲಿ ಬಂದರೂ ಆ ನಾಯಿಯನ್ನು ಮತ್ತೆ ನೋಡುತ್ತಿರಲಿಲ್ಲ ಹಾಗೂ ಅದರ ನೆನಪೂ ಬರುತ್ತಿರಲಿಲ್ಲ. ಮೊನ್ನೆ ಬೆಳಗ್ಗೆ ನಡೆದ ನನ್ನ ಸ್ನೇಹಿತರು ಹೇಳಿದ ಮೇಲೆ ಅದೇಕೋ ಆ ನಾಯಿಯ ಮೇಲೆ ವಿಪರೀತ ಕುತೂಹಲವಾಗಿ, ಸಂಜೆ ಆ ನಾಯಿಗಾಗಿ ಸ್ಟೇಷನ್ನಿನ ಅತ್ತಿತ್ತ ಹುಡುಕಿದೆ. ಉಂಹೂಂ, ಎಲ್ಲಿಯೂ ಅದರ ಸುಳಿವೇ ಇಲ್ಲ.
ನಿನ್ನೆಯ ದಿನ ಬೆಳಗ್ಗೆ ಬೆಂಗಳೂರಿಗೆ ಹೋಗುವ ಸಲುವಾಗಿ ರೈಲ್ವೇ ಟಿಕೆಟ್ ಬುಕ್ ಮಾಡಿಸಲು ಹೋಗಿ, ಬಸ್ ನಿಲ್ದಾಣದ ಬಳಿಗೆ ೧೫ ನಿಮಿಷಗಳು ತಡವಾಗಿ ಬಂದೆ. ನನ್ನ ಸ್ನೇಹಿತರು ಮುಂಚಿನ ಬಸ್ನಲ್ಲಿ ಹೋಗಿದ್ದರಾಗಿ, ಎಲ್ಲ ಅಪರಿಚಿತರೇ ಇದ್ದರು. ಬಹುಶ: ಆ ನಾಯಿ ಎಲ್ಲೋ ಹೋಗಿದೆ ಎಂದೆಣಿಸಿದ್ದೆ. ಆದರೆ ನನ್ನೆಣಿಕೆ ಸುಳ್ಳಾಗಿತ್ತು. ನಾನು ಸರತಿ ಸಾಲಿಗೆ ಬಂದು ನಿಲ್ಲುವ ಸಮಯಕ್ಕೆ ಸರಿಯಾಗಿ, ಆ ನಾಯಿ ನನ್ನ ಮುಂದೆ ಬಂದು ಮಲಗಿತು. ಅರ್ರೇ! ಇದೇನಿದೆ ಕಾಕತಾಳೀಯ ಎಂದು ಅನ್ನಿಸಿತು. ಮತ್ತೆ ಹೆಚ್ಚಿನದೇನನ್ನೂ ಯೋಚಿಸದೇ ಕಛೇರಿಗೆ ಹೋದೆ. ಸಂಜೆ ವಾಪಸ್ಸಾಗುವಾಗ ಆ ನಾಯಿಗಾಗಿ ಮತ್ತೆ ಹುಡುಕಾಟ ಪ್ರಾರಂಭಿಸಿದೆ. ಮತ್ತೆ ಅದರ ಪತ್ತೆಯೇ ಇಲ್ಲ.
ಇಂದು ಬೆಳಗ್ಗೆ ಬೇಕೆಂತಲೇ ಅರ್ಧ ಘಂಟೆ ತಡವಾಗಿ ಬಸ್ ನಿಲ್ದಾಣಕ್ಕೆ ಬಂದೆ. ಸರತಿ ಸಾಲಿಗೆ ಬಂದಾಕ್ಷಣ ನಾಯಿ ಮತ್ತೆ ನನ್ನ ಮುಂದೆ ಬಂದು ಮಲಗಿತು. ಇದ್ಯಾವ ಜನ್ಮದ ಸಂಬಂಧವಪ್ಪ, ಎಂದು ಚಿಂತಿಸ ಹತ್ತಿದೆ. ತಲೆಗೆ ಮೊದಲು ಹೊಳೆದದ್ದು, ಇದೇನು ಸತ್ತ ನನ್ನಪ್ಪನಾ ಅಥವಾ ನನ್ನಮ್ಮನಾ. ಅಥವಾ ಈ ಹಿಂದಿನ ಜನ್ಮದಲ್ಲಿ ನಾವಿಬ್ಬರೂ ಒಟ್ಟಿಗೇ ಇದ್ದೆವಾ? ಸರಿ ಬಸ್ ಬಂದ ತಕ್ಷಣ ಎಲ್ಲವನ್ನೂ ಮರೆತು ಕಛೇರಿಗೆ ಹೋದೆ. ಅಲ್ಲಿ ನನ್ನ ಸ್ನೇಹಿತನ ಹತ್ತಿರ ಈ ವಿಷಯದ ಬಗ್ಗೆ ಚರ್ಚಿಸಿದೆ. ಅವನು ಹೇಳಿದ,
'ಯಾವುದೋ ಬಾದರಾಯಣ ಸಂಬಂಧವಿರಬೇಕು. ಹಿಂದಿನ ಜನ್ಮದಲ್ಲಿ ನೀನು ಅದನ್ನು ಕಾಪಾಡಿರಬೇಕು, ಅಥವಾ ಅದು ನಿನ್ನನ್ನು ಮುಂದಿನ ಜನ್ಮದಲ್ಲೂ ರಕ್ಷಿಸುವೆನೆಂದು ಪಣ ತೊಟ್ಟಿರಬೇಕು. ಅದಕ್ಕೇ ಅದು ಹೀಗೆ ನಿನ್ನ ಮುಂದೆ ಬಂದು ಮಲಗುತ್ತಿದೆ. ಅದಕ್ಕೆ ಪ್ರತಿ ದಿನ ಬಿಸ್ಕತ್ ಅಥವಾ ತಿಂಡಿಯನ್ನಾದರೂ ಹಾಕು'.
ನಾನು ಅದಕ್ಕೆ ತಿಂಡಿ ಹಾಕಿದರೆ ಜನ ಸುಮ್ಮನಿದ್ದಾರೆಯೇ? ಮೊದಲೇ ಎಲ್ಲೆಡೆ ಸಾಂಕ್ರಾಮಿಕ ರೋಗದ ಭೀತಿ. ಪ್ರಾಣಿಗಳನ್ನು ಅದರಲ್ಲೂ ಬೀದಿ ಪ್ರಾಣಿಗಳನ್ನು ದೂರವಿಡಿ ಎಂದು ಹೇಳುತ್ತಿದ್ದಾರೆ. ಏನು ಮಾಡುವುದು ಎಂದೇ ತೋಚುತ್ತಿಲ್ಲ. ಇನ್ನೂ ಒಂದೆರಡು ದಿನ ಹೀಗೆಯೇ ಆಗುವುದಾ ಎಂದು ಕಾದು ನೋಡುವೆ.
ಮತ್ತೆ ಇಂದು ಸಂಜೆ ಹದಿನೈದು ನಿಮಿಷಗಳ ಕಾಲ ಆ ನಾಯಿಗಾಗಿ ಅಲ್ಲಿ ಇಲ್ಲಿ ಹುಡುಕಿದೆ. ಅದರ ಪತ್ತೆಯಿಲ್ಲ. ನನ್ನ ಸ್ನೇಹಿತನ ಅಣಕು ಮಾತಿಗೆ ಗುರಿಯಾದೆ, 'ಎಲ್ಲ ಕಡೆಯಲ್ಲೂ ನಾಯಿ ತನ್ನ ಯಜಮಾನನಿಗಾಗಿ ಹುಡುಕಿದರೆ, ನೀನು ಆ ನಾಯಿಗಾಗಿ ಹುಡುಕಾಟ ನಡೆಸಿದ್ದೇಯಲ್ಲ, ಬಹುಶ: ಹಿಂದಿನ ಜನ್ಮದಲ್ಲಿ ನೀನು ನಾಯಿಯಾಗಿ ಅದು ನಿನ್ನ ಯಜಮಾನನಾಗಿದ್ದರಬೇಕು'.
ನಿಮಗೇನಾದರೂ ಇಂತಹ ಅನುಭವವಾಗಿದೆಯೇ?
೨೨/೦೯/೨೦೦೫
ಇವತ್ತಿನ ನನ್ನ ಅನುಭವ.
ಇವತ್ತು ಇನ್ನೂ ೫ ನಿಮಿಷಗಳು ಮುಂಚಿತವಾಗಿ ಚುರ್ಚ್ಗತೆಗೆ ಬಂದೆ. ಆಚೆ ಬರುವ ಬಾಗಿಲಿನಿಂದ ಒಮ್ಮೆ ಇಣುಕಿ ನೋಡಿದೆ. ಅದೇ ನಾಯಿ ಅಲ್ಲಿ ಹತ್ತಿರದ ಒಂದು ಡಬ್ಬ ಅಂಗಡಿಯ ಮುಂದೆ ಕುಳಿತಿತ್ತು. ನಾನು ಆ ಅಂಗಡಿಯ ಕಡೆ ಹೊರಟೆ. ಆಗ ಆ ನಾಯಿ ಬಸ್ ನಿಲ್ದಾಣದ ಕಡೆಗೇ ಹೊರಟಿತು. ನನ್ನ ಮುಖ ಒಮ್ಮೆ ನೋದಿ, ನನ್ನನ್ನೇ ಹಿಂಬಾಲಿಸಿತು. ಆ ಅಂಗಡಿಯವನನ್ನು ಕೇಳಿದೆ, 'ಈ ನಾಯಿ ಎಷ್ಟು ದಿನಗಳಿಂದ ಇಲ್ಲಿದೆ, ಎಲ್ಲಿಂದ ಬರತ್ತೆ, ಎಲ್ಲಿ ಹೋಗತ್ತೆ, ಇದಕ್ಕೆ ಆಹಾರ ಯಾರು ಕೊಡ್ತಿದ್ದಾರೆ' ಅಂತ.
ಅವನು ಹೇಳಿದ್ದು, 'ಯೇಹ್ ಮಾಲೂಮ್ ನಹಿನ್ ಸಾಬ್, ದೋ ಮಹೀನೇ ಸೆ ದೇಖ್ ರಹಾ ಹೂನ್ ರೋಜ್ ಸುಬಹ್ ಆಟ್ ಬಜೆ ಇದರ್ ಆಕೆ ಬೈಠಾ ರಹ್ತ ಹೈ. ಬಾದ್ ಮೆಇನ್ ಓ ಬಸ್ ಸ್ಟಾಪ್ ಪರ್ ಜಾತ ಹೈ, ಫಿರ್ ಕಲ್ ಸುಬಹ್ ತಕ್ ನಹಿನ್ ದಿಖ್ತಾ ಹೈ, ಬಸ್ ಇತ್ನಾಹಿ ಮಾಲೂಮ್ ಹೈ'. (ಇದು ನನಗೆ ಗೊತ್ತಿಲ್ಲ ಸ್ವಮಿ, ಎರಡು ತಿಂಗಳಿಂದ ನಾನು ನೋಡ್ತಾ ಇದ್ದೀನಿ, ಪ್ರತಿ ದಿನ ೮ ಘಂಟೆಗೆ ಇದು ಇಲ್ಲಿ ಬಂದು ಕುಳಿತುಕೊಳ್ಳತ್ತೆ. ನಂತರ ಆ ಬಸ್ ನಿಲ್ದಾಣದ ಹತ್ತಿರ ಹೋಗತ್ತೆ. ಮತ್ತೆ ಮರುದಿನದ ಬೆಳಗ್ಗೆಯ ತನಕ ಕಾಣಿಸುವುದಿಲ್ಲ ).
ನಂತರ ನಾನು ಬಸ್ ನಿಲ್ದಾಣಕ್ಕೆ ಹೋದೆ. ಅದೂ ನನ್ನ ಹಿಂದೆಯೇ ಬಂದು ಬಸ್ ನಿಲ್ದಾಣದ ತನ್ನ ಮಾಮೂಲೀ ಜಾಗದಲ್ಲಿ ಕುಳಿತಿತು. ಬಸ್ ಬಂದ ಮೇಲೆ, ಹಿಂದಿನಿಂದ ಹತ್ತಿದವನು, ಮುಂದಿನಿಂದ ಇಳಿದು, ಸ್ವಲ್ಪ ದೂರ ಮರೆಯಲ್ಲಿ ನಿಂತು ನೋಡ್ತಿದ್ದೆ. ಬಸ್ ಹೊರಟು ಹೋದಮೇಲೆ, ಆ ನಾಯಿ ಸ್ವಲ್ಪ ದೂರದವರೆವಿಗೆ, ಬಸ್ಸನ್ನು ಹಿಂಬಾಲಿಸಿ ಮತ್ತೊಂದು ಅಂಗಡಿಯ ಮುಂದೆ ಹೋಗಿ ಕುಳಿತಿತು. ಆ ಅಂಗಡಿಯಾತನ ಬಳಿ ಹೋಗಿ ವಿಚಾರಿಸಲಾಗಿ, ಅವನು ಹೇಳಿದ್ದು ಇದು ಪ್ರತಿ ದಿನ ಬರತ್ತೆ, ತಾನು ಬಿಸ್ಕತ್ ಹಾಕ್ತೀನಿ. ೫-೧೦ ನಿಮಿಷಗಳವರೆವಿಗೆ ಇಲ್ಲೇ ಇದ್ದು ನಂತರ ಸಮುದ್ರದ ಕಡೇ ಹೋಗತ್ತೆ. ಮತ್ತೆ ಅದನ್ನು ನೋಡಿಲ್ಲ ಎಂದ. ನಂತರ ಆಫೀಸಿಗೆ ತಡಆಗುವುದೆಂದು ಹೊರಟು ಬಂದೆ. ಹೊರಡುವ ಮೊದಲು ಆ ಅಂಗಡಿಯವನಿಗೆ ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಜೆ ನನಗೆ ತಿಳಿಸಲು ಕೇಳಿಕೊಂಡಿರುವೆ.
೨೩/೦೯/೨೦೦೫
ನಾಯಿ ಹಿಂದೆ ಅಲೆಯುವ ನನ್ನ ನಾಯಿ ಪಾಡು ಇಂದಿಗೆ ಮುಕ್ತಾಯ ಆಯ್ತು. ಆದ್ರೆ ಅದು ನನ್ನನ್ನು ಹಿಂಬಾಲಿಸೋದು ತಪ್ಪಲ್ಲ. ಬೇಡ ಬಿಡಿ - ಅದರ ಪಾಡಿಗೆ ಅದು ಬರತ್ತೆ. ಅದಿರೋವರೆಗೂ ಅದಕ್ಕೆ ಆಹಾರ ಹಾಕಲು ಆ ಅಂಗಡಿಯವನನ್ನು ಕೇಳಿಕೊಂಡಿರುವೆ.
ಇಂದಿನ ನನ್ನ ಪತ್ತೇದಾರಿ ಕೆಲಸ ಹೀಗಿತ್ತು.
ಎಂದಿಗಿಂತ ಮುಂಚಿತವಾಗಿ ೭.೩೦ಕ್ಕೇ ಸ್ಟೇಷನ್ನಿಗೆ ಬಂದೆ. ಆ ಕಡೆ ಈ ಕಡೆ ನೋಡಿದೆ. ಎಲ್ಲೂ ನಾಯಿ ಕಾಣಿಸಲಿಲ್ಲ. ಸ್ಟೇಷನ್ನಿನ ಮುಂಭಾಗದಲ್ಲಿರುವ ಸಬ್-ವೇ ಕಡೆಗೆ ಹೋಗುತ್ತಿದ್ದಾಗ ಅಲ್ಲಿಯೇ ಮೂಲೆಯಲ್ಲಿ ಆ ನಾಯಿ ಮಲಗಿದ್ದು ಕಂಡೆ. ಅದು ನನ್ನನ್ನು ಕಂಡ ತಕ್ಷಣ ನನ್ನ ಹಿಂದೆಯೇ ಬಂದಿತು. ಅನತಿ ದೂರದಲ್ಲಿ ಹಾಕರ್ ಒಬ್ಬನಿದ್ದ. ಅವನ ಹತ್ತಿರ ಹೋಗಿ - ಈ ನಾಯಿಯ ಬಗ್ಗೆ ನಿನಗೇನಾದರೂ ತಿಳಿದಿದೆಯೇ ಎಂದು ಕೇಳಿದೆ. ಅವನಿಂದ ದೊರೆತ ಮಾಹಿತಿ
ಇದೇ ಜಾಗದಲ್ಲಿ ಒಬ್ಬ ಅಬ್ಬೇಪಾರಿ ಮುದುಕನಿದ್ದ. ಅವನು ಈ ನಾಯಿಯ ಯಜಮಾನ. ಎರಡು ತಿಂಗಳುಗಳ ಹಿಂದೆ ಆತ ಸತ್ತು ಹೋದ. ಅವನ ಮೃತ ಶರೀರವನ್ನು ಕಾರ್ಪೋರೇಷನ್ನಿನವರು ಎತ್ತೊಯ್ದಿದ್ದರು. ಈ ನಾಯಿ ಮಾತ್ರ ಆ ಜಾಗವನ್ನು ಬಿಟ್ಟು ಹೋಗಿಲ್ಲ. ಪ್ರತಿ ದಿನ ೮ ಘಂಟೆಗೆ ಶ್ಟೇಷನ್ನಿನ ಹತ್ತಿರದ ಬಸ್ ಸ್ಟಾಪಿಗೆ ಬರುವುದು. ಎರಡು ಘಂಟೆಗಳ ಕಾಲ ಅಲ್ಲಿದ್ದು ನಂತರ ವಾಪಸ್ಸು ತನ್ನ ಜಾಗ ಸೇರುವುದು. ಯಾರಾದ್ರೂ ಏನಾದ್ರೂ ಕೊಟ್ರೆ ತಿನ್ನುವುದು ಅಷ್ಟೇ. ಯಾವತ್ತೂ ಅದು ಬೊಗಳಿದ್ದಿಲ್ಲ, ಇತರರಿಗೆ ತೊಂದರೆ ಮಾಡಿದ್ದಿಲ್ಲ.
ಮತ್ತೆ ನಾನು ಬಸ್ ನಿಲ್ದಾಣದ ಬಳಿಯ ಅಂಗಡಿಯವನ ಹತ್ತಿರ ಹೋಗಿ, ಈ ನಾಯಿಗೆ ಅದು ಇರುವವರೆವಿಗೂ ಬಿಸ್ಕತ್ತು ಬನ್ನು ಬ್ರೆಡ್ಡು ಹಾಕಲು ಕೇಳಿಕೊಂಡಿರುವೆ.
ಇಂದಿಗೆ ನನ್ನ ಮನಸ್ಸಿಗೆ ಸಮಾಧಾನವಾಯ್ತು. ಬಹುಶ: ಈ ನಾಯಿಯು ಆ ಮುದುಕನ ವಾಸನೆಯನ್ನು ನನ್ನಲ್ಲಿ ಕಂಡಿರಬೇಕು.
ಆ ಮುದುಕನ ಆತ್ಮ ನನ್ನೊಳಗೆ ಸೇರಿದೆ ಅಂತೀರಾ? ಅಯ್ಯೋ ಹಾಗಾಗಿರೋಕ್ಕೆ ಸಾಧ್ಯವೇ ಇಲ್ಲ. ಯಾಕೇಂದ್ರೆ ಅವನು ಸತ್ತ ದಿನದಿಂದ ನನ್ನಲ್ಲಿ ಏನೊಂದೂ ಬದಲಾವಣೆ ಆಗಿಲ್ಲ.
ಹೋಗ್ಲಿ ಯಾವ ಜನ್ಮದ ಋಣಾನುಬಂಧವೋ ಏನೋ ಆ ನಾಯಿ ನನ್ನ ಹಿಂದೆ ಬಿದ್ದಿದೆ.
ಎಲ್ಲ ಆತ್ಮಗಳೂ ಒಂದೇ ಅಲ್ಲವೇ? ಕೆಲವು ಸಲ ಅದು ಪ್ರಾಣಿಗಳ ದೇಹ ಸೇರಬಹುದು, ಕೆಲವು ಸಲ ಮಾನವನ ಶರೀರ (ಮಾನವನೂ ಪ್ರಾಣಿಯಲ್ವೇ ).
Comments
ವಿಶ್ವಾಸಕ್ಕೆ ಹೆಸರಾದ ಪ್ರಾಣಿ 'ಶ್ವಾನ'
ಉ: ವಿಚಿತ್ರವಾದರೂ ನಿಜ