ಕಾಫಿ

ಕಾಫಿ

ನಮಸ್ಕಾರ  ಗೆಳೆಯರೇ  ....  ನನ್ನ  ದೋಸೆ  ಲೇಖನ   ಓದಿದ್ದೀರಿ,   ಮನದಲ್ಲೇ  ಮಂಡಿಗೆ  ಅನ್ನುವ ಹಾಗೆ   ದೋಸೆ  ತಿಂದ  ಕನಸು  ಕಂಡು  ನಂತರ  ನನಸಲ್ಲೂ ಮಾಡಿ ( ಯಾರಾರು ಮಾಡಿಕೊಟ್ಟಲ್ಲಿ )  ತಿoದಿರಲೂ ಬಹುದು !!!!  ಈಗ  ನಾನು  ಇನ್ನೊಂದು  ಗಾಡವಾಗಿ   ಅತ್ಯಂತವಾಗಿ  ಪ್ರೀತಿಸುವ   ಕಾಫಿ  ,ಬಗ್ಗೆ  ಬರೆಯದಿದ್ದರೆ   ನನ್ನ  ಅನನ್ಯ  ಜತೆಗಾರನಿಗೆ  ಮೋಸ  ಮಾಡಿದಂತಾಗುತ್ತೆ !!!!     ನನ್ನ   ಕಾಫಿ  ಉವಾಚ   ಓದಿ  ,  ಓದುವ  ಮುನ್ನ  ಬೇಗ  ಒಂದು  ಲೋಟ  ಕಾಫಿ  ಪಕ್ಕಕ್ಕೆ  ಬರಲಿ,  ಬಾಯಿ  ನೀರೂರಿದರೆ   ಕುಡಿಯಲು  ಬೇಕಾಗುತ್ತೆ !!! 

 
ಕಾಫಿ  ಹೆಸರು  ಹೇಗೆ  ಬಂದಿರಬಹುದು   ಎಂದು  ಯೋಚಿಸುತ್ತಾ  ಕೂತರೇ ...    ಕಾಡಿನಲ್ಲಿ  ರಾಮ  ಬಸವಳಿದು  ಕುಳಿತಾಗ  ಒಂದು  ಕಪಿಯು  ಎಲ್ಲಿಂದಲೋ  ರಸವನ್ನು  ತಂದು  ರಾಮನಿಗೆ  ಕುಡಿಸಿತಂತೆ ...  ರಾಮ   ತಕ್ಷಣವೇ  ಆಯಾಸ  ಸುಸ್ತು  ಕಳೆದು  ಚೇತೋಹಾರಿ  ಆಗಿಬಿಟ್ಟನಂತೆ ...  ಕಪಿಯು ತಂದ  ರಾಮ ರಸಕ್ಕೆ   ಕಾಫಿ  ಎಂಬ   ಶಬ್ದ  ಚಾಲನೆಯಲ್ಲಿ   ಬಂದಿರಬಹುದು ...   ಅಂತೆ ಕಂತೆಗಳು  ಬೇಕಾದಷ್ಟು  ಇರಬಹುದು  ..  ಆದರೆ   ಕಾಫಿ  ಮಾತ್ರ  ಸಾಮಾನ್ಯ  ಹುಲುಮಾನವನಿಗೂ  ರಾಮ ರಸವೇ  ಆಗಿದೆ . 
 
ಭಾರತೀಯರು  ಕಾಫಿಯ   ರಸಿಕರು ..   ಯಾವಾಗ  ಬೇಕಾರೂ   ಯಾವ  ಹೊತ್ತಿಗಾರು  ಸರಿ  ಕಾಫಿ   ಕುಡಿಯಲು  ಸಿದ್ದ .   ಕಾಫಿ  ಅಂದಾಕ್ಷಣ  ನೆನಪಿಗೆ  ಬರುವುದು   ಫಿಲ್ಟರ್  ಕಾಫಿ ..   ಬೆಳಗಾಗೆದ್ದು  ಹಲ್ಲುಜ್ಜಿ,  ಮುಖ ತೊಳೆದು  ನಿತ್ಯ  ಕರ್ಮಗಳನ್ನು  ಮುಗಿಸಿ  ಅಡಿಗೆ ಮನೆಯಲ್ಲಿ  ಒಲೆ ಹತ್ತಿಸಿದರೆ  ಅದು   ಕಾಫಿಗೇ.     ಮೊದಲು  ನೀರು  ಬಿಸಿಗಿಟ್ಟು,  ಹದವಾಗಿ ಘಮ್ಮನೆಂದು   ಹುರಿದ ಕಾಫಿ   ಬೀಜಗಳ ಪುಡಿಯನ್ನು  ಫಿಲ್ಟರ್ ಮೇಲಿನ  ಪಾತ್ರೆಗೆ  ಹಾಕಿ   ತೂತಿನ  ಗೂಟವನ್ನು ಅದರ  ಮೇಲಿಟ್ಟು   ಕುದಿಯುವ  ನೀರನ್ನು  ಸುರಿದರೆ ...  ಸಾಕು ,   ತೊಟ್ಟು ತೊಟ್ಟಾಗಿ ..  ಡಿಕಾಕ್ಷನ್  ಕೆಳಗಿನ  ಪಾತ್ರೆಗೆ  ಸದ್ದಿಲ್ಲದೇ    ಇಳಿಯಬೇಕಾರೆ..   ಗಂಗೆ,   ಶಿವ ಜಟೆಯನ್ನು  ದಾಟಿ  ಭೂಮಿಗೆ  ಬಂದ  ಹಾಗೆ !! ...   ಕಾಫಿಯ   ಸುವಾಸನೆ  ಮನೆಯಲ್ಲಾ    ಪಸರಿಸಿ   ...    ಮಲಗಿದವರನ್ನೆಲ್ಲಾ    ಬಡಿದೆಬ್ಬಿಸುತ್ತೆ !!!!   ಅಲಾರಂ  ಅಗತ್ಯವೇ   ಇಲ್ಲ.    ನಂತರ   ಹಸುವಿನ  ಹಾಲು  ಅಥವಾ   ಸಿಗದಿದ್ದರೆ  ಪಾಕೆಟ್ ಹಾಲನ್ನು   ಉಕ್ಕು  ಬರುವ  ಹಾಗೆ  ಕಾಯಿಸಿ.   ಡಿಕಾಕ್ಷನ್ಗೆ   ಸ್ವಲ್ಪ  ಸಕ್ಕರೆ  ಬೆರೆಸಿ  ಒಂದು  ಲೋಟದಿಂದ ಇನ್ನೊಂದು  ಲೋಟಕ್ಕೆ  ಮೇಲಿಂದ  ಕೆಳಗೆ   2 -3   ಸಾರಿ  ಸುರಿದು  ಆಟವಾಡಿದರೆ ..  ನೊರೆ  ನೊರೆಯಾದ   ಡಿಕಾಕ್ಷನ್,  ಹಾಲಿನೊಂದಿಗೆ   ಮದುವೆಯಾಗಲು  ಸಿದ್ದವಾಗುತ್ತೆ ..  ಇಬ್ಬರನ್ನೂ   ಕೂಡಿಸಿದರೆ   ಸಿಗುವುದೇ  ಅಮೃತ   ಅದೇ   ನಮ್ಮ  ಬೆಳಗಿನ  ಬಿಸಿ   ಪಾನಕ !!!    ಕಾಫಿಯ  ಪರಿಮಳ    ನಿಮ್ಮ  ಲೋಟದ  ಕಡೆಯ  ತೊಟ್ಟಿನವರೆಗೆ  ಹಾಗೇ   ಉಳಿಯಬೇಕೆ೦ದರೆ ...  ಒಂದು  ಗುಟ್ಟು, ನಿಮಗೆ   ಮಾತ್ರ ಹೇಳುತ್ತೇನೆ  ಯಾರಿಗೂ   ಹೇಳಬೇಡಿ ...    ಡಿಕಾಕ್ಷನ್ ಮಾತ್ರ  ಪಾತ್ರೆಗೆ  ಹಾಕಿ  ಕುದಿಸಬೇಡಿ ..     ಬಿಸಿಯಾದ   ಡಿಕಾಕ್ಷನ್   ಕೆಳಗಿಳಿದ  ತಕ್ಷಣವೇ    ಬಿಸಿ  ಹಾಲಿಗೆ  ಹಾಕಿ  ಬೆರೆಸಿಬಿಡಿ !!!  ಈ    ಅದ್ಬುತವಾದ  ಕಾಫಿ ಮತ್ತು  ಹಾಲಿನ   ಸಮ್ಮಿಲನ   ನಿಮ್ಮ   ನರ  ನಾಡಿಗಳನ್ನು   ಬಿಸಿ  ಮಾಡಿ   ದಿನದ   ಮುಂದಿನ  ಕೆಲಸಗಳಿಗೆ  ಶುಭಾರಂಭ   ಹಾಡುವುದಂತೂ  ನೂರಕ್ಕೆ ನೂರು  ಸತ್ಯ !!!!
 
 
ಇನ್ನು   ಕಾಫಿ  ಎಂದರೆ  ಒಂದೇ   ಪುಡಿಯಲ್ಲಿ , ಒಂದೇ  ಮನೆಯಲ್ಲಿ ,  ಗಂಡ  ಮಾಡಿದರೆ  ಒಂದು  ರುಚಿ,  ಅತ್ತೆ  ಮಾಡಿದರೆ  ಒಂದು  ರುಚಿ ,  ಸೊಸೆ  ಕಾಫಿ  ಬೆರೆಸಿದರೆ  ಇನ್ನೊಂದು  ರುಚಿ ,    ಹೇಗೆ  ಸಾಧ್ಯ ?  ಬೇರೆ  ಬೇರೆ  ರುಚಿ   ಬರುವ   ಪುಡಿಯ  ಮಹಿಮೆ  ಉಳ್ಳದ್ದು   ನಮ್ಮ  ಕಾಫಿ .    ಡಿಕಾಕ್ಷನ್ , ಹಾಲು, ಸಕ್ಕರೆ  ಈ  ಮೂವರ   ಸಂಗಮ ಮಾಡುವ  ಮನುಜನ  ಕೈಚಳಕ   ಅಥವಾ  ಕೈರುಚಿ  ಎಂದು  ಬೇಕಾರು  ಹೆಸರಿಸಬಹುದು   ...  ನಮ್ಮ  ಇಷ್ಟಾನುಸಾರವಾಗಿ   ಡಿಕಾಕ್ಷನ್  ಜಾಸ್ತಿ  ಹಾಕಿ  ಹಾಲು  ಕಮ್ಮಿ  ಹಾಕಿದಲ್ಲಿ   ಸ್ಟ್ರಾಂಗ್ ಕಾಫಿ  ...  ಹಾಲು  ಜಾಸ್ತಿ  ಹಾಕಿ   ಡಿಕಾಕ್ಷನ್  ಕಮ್ಮಿ  ಬಿದ್ದಲ್ಲಿ   ಲೈಟ್  ಕಾಫಿ .   ಇವೆರಡೇ  ಗೊತ್ತಿದ್ದ  ನನಗೆ   ಸಿಡ್ನಿಗೆ  ಬಂದು  ಕಾಫಿ  ಕುಡಿಯಲು  ಹೊರಗೆ  ಹೋದರೆ..   ದೇವನೊಬ್ಬ  ನಾಮ  ಹಲವು  ಅನ್ನುವ  ಹಾಗೆ   ನಮ್ಮ  ಮಿತ್ರ  ಕಾಫಿಗೆ ..   ನೂರೊಂದು  ಹೆಸರು  ನಾಮಕರಣ  ಮಾಡಿಬಿಟ್ಟಿದ್ದಾರೆ ..     ನಾನೋ   ತಬ್ಬಿಬ್ಬು !!!  ಯಾವುದನ್ನೂ  ಆರಿಸಲು   ತಿಳಿಯದೆ  ಮೋಚ  ಎಂದು  ಬಿಟ್ಟೆ  ...  ಕಾಫಿ  ಶಾಪಿನ   ಲಲನಾಮಣಿ ...  ಶಾರ್ಟ್ ಅಥವಾ  ಲಾಂಗ್  ಎಂದು  ಮರು ಪ್ರಶ್ನೆ  ಹಾಕಿದಳು ...  ಔಟ್ ಆಫ್ syllabus ನಲ್ಲಿ  ಬಂದ  ಪ್ರಶ್ನೆ ...    ಅಡ್ಡೇಟಿನ  ಮೇಲೆ    ಗುಡ್ದೇಟು   ಎಂದು    ಶಾರ್ಟ್   ಅಂದು ಬಿಟ್ಟೆ ...  ಸರಿ  ಬಂತಪ್ಪಾ  ಚಿಕ್ಕ  ಪಿಂಗಾಣಿ ಕಪ್ಪಿನಲ್ಲಿ  ಬರೀ  ಡಿಕಾಕ್ಷನ್ !!!   ಅದೂ  ತೀರಾ  ಸ್ಟ್ರಾಂಗ್ !!!  ಆಮೇಲೆ  ಹಾಲು ,  ಸಕ್ಕರೆ ಬೇರೆಯಾಗಿ  ಕೇಳಿ  ನನ್ನ  ಕಾಫಿ  ನಾನೇ  ಮಾಡಿಕೊಂಡೆ   ಏನೋ  ಅಷ್ಟು  ರುಚಿಸಲಿಲ್ಲ !!!   ದುಡ್ಡು  ಬೇರೆ  ಬಹಳ  ತೆತ್ತಿದ್ದರಿಂದ    ತೆಪ್ಪಗೆ  ಕುಡಿದು  ಹೊರಬ೦ದೆ !!    ಇನ್ನು  ಮೇಲೆ  ಶಾರ್ಟ್  ಮೊಚದ ಸಹವಾಸವೇ   ಬೇಡಪ್ಪ  ಅಂತ  ಶಪಥ  ಕೂಡ  ಮಾಡಿಯಾಯಿತು !!!   ಆಮೇಲೆ  trial  ಅಂಡ್ error   ಮಾಡಿ  ಮಾಡಿ   ಕ್ಯಾಪುಚಿನೋ   ಎಂಬ  ಚಿನ್ನುವನ್ನು  ಮಾತ್ರವೇ  ಸೇವಿಸುತ್ತೇನೆ 
 

ಕಾಫಿ  ಒಂತರಾ   ಎರಡು  ಜೀವಗಳನ್ನು  ಸೇರಿಸುವ   ಕೆಲಸ ಮಾಡುತ್ತೆ .  ಇದು  ಹೇಗಪ್ಪಾ   ಅಂತೀರಾ??    ಬೆಳಿಗ್ಗೆ  ಯಾರು  ಮೊದಲು  ಏಳುತ್ತಾರೂ ... ಗಂಡ  ಇರಬಹುದು     ...  ಅಥವಾ   ಹೆಂಡತಿಯೇ  ಇರಬಹುದು  ...     ಕಾಫಿ  ಮಾಡಿ ...   ರೀ ...   ಕಾಫಿ  ಮಾಡಿದ್ದೀನಿ  ಬರ್ತೀರಾ   ಒಟ್ಟಿಗೆ  ಕುಡಿಯೋಣ  ಅಂತ  ಉಲಿದರೆ  ...   ಅಲ್ಲಿ   ಪ್ರೇಮಾಂಕುರ   ಆಗದೆ  ಇರಲು  ಸಾಧ್ಯವೇ ?????     ಗಂಡ --  ಲೇ  ಏಳೇ   ಬೇಗಾ  ನಾ  ಬೆರೆಸಿದ   ಕಾಫಿ  ತಣ್ಣಗಾಗ್ತಿದೆ  ....  ಎಂದರೆ  ಯಾವ  ಕುಂಬಕರ್ಣನ  ಹೆಂಡತಿಯಾದರೂ   ಚಂಗನೆ  ಹಾಸಿಗೆ  ಬಿಟ್ಟು  ಏಳದಿರಲು   ಸಾಧ್ಯವೇ ?????  ಇನ್ನು   ಮಿತ್ರರ  ವಿಷಯಕ್ಕೆ  ಬರೋಣ  ..  ಬಾರೋ   ಒನ್  by two  ಕಾಫಿ  ಕೊಡಿಸ್ತೀನಿ   ಅಂದರೆ  ಜನುಮ  ಜನುಮದ  ದ್ವೇಶವೆಲ್ಲಾ   ಮರೆತು   ಸಂತೋಷದಿಂದ   ಗೆಳೆಯನ  ಜೊತೆ  ನಡೆದು  ಬಿಡುತ್ತಾನೆ ...  ..   ಇನ್ನು  ಅತ್ತೆ  ಸೊಸೆ  ಸಂಬಂಧ    ಚೆನ್ನಾಗಿರಬೇಕಾರೆ  ...  ಅತ್ತೆ  ಗೆಳೆಯತಿಯರೋ ,  ಬಂಧುಗಳು   ಬಂದರು  ಅಂದರೆ ...  ಸೊಸೆ  ಮುಖ  ಸಿಂಡರಿಸದೇ ...  ಬಿಸಿ  ಬಿಸಿಯಾದ  ಕಾಫಿ  ಮಾಡಿ  ಕೊಟ್ಟಲ್ಲಿ  ..   ಅವಳಂತಾ  ಸೊಸೆ  ಬೇರೆ  ಯಾರಿಗೂ  ಇಲ್ಲ  ಎಂದು  ಬೀಗೇ  ಬಿಡುತ್ತಾಳೆ   ಅತ್ತೆ !!!!   ಇನ್ನು  ಬಾಸ್  ಜೊತೆ  ಕೂಡ  ಒಳ್ಳೆ   ಸಂಬಂಧ  ಇರಬೇಕೆಂದರೆ  ಕಾಫಿಯದು  ಒಳ್ಳೆ  ಪಾತ್ರ ,  ಸಹೋದ್ಯೋಗಿಗಳ  ಜೊತೆ  ಕಾಫಿ ಕುಡಿಯಲು  ಹೋದರೆ   ಏನೋ  ಆತ್ಮೀಯತೆ  ಬೆಳೆದುಬಿಟ್ಟಿರುತ್ತೆ .  ಈಗಂತೂ   ಹರಯದ  ಹುಡುಗ  ಹುಡುಗಿಯರು  ಕಾಫಿ  ಕಪ್  ಮಧ್ಯೆ  ಇಟ್ಟುಕೊಂಡು  ಗಂಟಾನು  ಗಟ್ಟಲೆ   ಹರಟೆ   ಹೊಡೆಯುವುದನ್ನು   ನೋಡಬಹುದು ...   

 
ಇನ್ನು   ಫಿಲ್ಟರ್  ಕಾಫಿಯ   ತಮ್ಮ  ಅಥವಾ  ತಂಗಿಯ  ವಿಷಯಕ್ಕೆ  ಬರೋಣ ....     ಅವರೇ  Instant  ಕಾಫಿ ...    ಬಹಳ  ಫಾಸ್ಟ್  ಲೈಫ್  ಅವರದು..   ಸಮಯ  ಜಾಸ್ತಿ  ಬೇಕಿಲ್ಲ ..   ಹಾಲು  ಬಿಸಿ  ಮಾಡಿ   ಒಂದು  ಚಮಚ   ಪುಡಿ  ಹಾಕಿ  ಬೆರೆಸಿದರೆ  ಸಿದ್ದ...  ಸಮಯದ  ಅಭಾವವಿದ್ದರೆ   ಇವರು  ಸಕತ್   ಸಹಾಯ  ಮಾಡುತ್ತಾರೆ ..    ಬೇಕಾದಷ್ಟು  ಇನ್ಸ್ಟಂಟ್   ಬ್ರಾಂಡ್ ಗಳು  ಮಾರಾಟಕ್ಕೆ  ಇವೆ...    ಫಿಲ್ಟರ್  ಕಾಫಿ ತರಹವೇ ಇರುತ್ತೆ  ಎಂದು  advertise   ಬೇರೆ   ಮಾಡಿ ಕೊಳ್ಳುತ್ತಾರೆ ...    ಅಣ್ಣ  ಅಣ್ಣನೇ    ತಮ್ಮ  ತಮ್ಮನೇ    ರುಚಿಯಲ್ಲಿ    ಅಜ  ಗಜಾಂತರ !!!!
 
ನನಗಾದ   ಕಾಫಿ  ಅವಾ೦ತರಗಳನ್ನೂ   ಹೇಳಲೇ   ಬೇಕು ...    ನನಗೆ  ಮದುವೆಯಾದ  ಹೊಸತು..    ನಮ್ಮ  ಅತ್ತೆ   ತಂಗಿಯ   ಆಗಮನವಾಯಿತು ...   ನಾನು  ಒಳ್ಳೆ  ಸೊಸೆ  ಅಂತ   ಕರೆಸಿಕೊಳ್ಳುವ    ಹಂಬಲ ....    ಕಾಫಿ  ಕುಡಿಯುತ್ತೀರ  ಅಂತ  ವಿಚಾರಿಸಿ  ..  ಚಕ್ಕನೆ  ಅಡಿಗೆ ಮನೆಯಿಂದ   ಎರಡು  ಲೋಟ  ಕಾಫಿ ತಂದು  ಬಿಟ್ಟೆ  ..  ನಮ್ಮ ಅತ್ತೆ  ತಂಗಿ  ಲೋಟ  ಎತ್ತಿ  ಗುಟುಕರಿಸಿದರು ...  ಮುಖ ಭಾವ  ಸ್ವಲ್ಪ  ಬದಲಾವಣೆ  ಆಯಿತು  ..  ಆಮೇಲೆ  ಮತ್ತೆ  ನಿಧಾನವಾಗಿ  ಇನ್ನೊಂದು  ಗುಟುಕು ...  ನಮ್ಮ  ಅತ್ತೆ    ಕಾಫಿ  ಬಿಸಿ  ಸ್ವಲ್ಪ  ಆರಿದ  ಮೇಲೆ  ಒಂದು  ಗುಟುಕು  ಕುಡಿದವರೇ ...   ಇಲ್ಲಿ  ಬಾ...    ಎಂದರು   ...  ಏನಮ್ಮಾ ..  ಕಾಫಿ   ಚೆನ್ನಾಗಿತ್ತಾ   ಅಂತ  ಕೇಳಿದೆ ....    ಯಾವ  ಹಾಲಿನಲ್ಲಿ   ಬೆರೆಸಿದೆ  ಅಂದರು ...  ಅದೇ  ಒಲೆ  ಪಕ್ಕದ  ಪಾತ್ರೆಯಲ್ಲಿ  ಸ್ವಲ್ಪಾನೆ   ಹಾಲಿತ್ತಲ್ಲ   ಅದು  ಎಂದೆ ...   ಅಯ್ಯೋ ...  ಅದಾ    ಮೊಸರಿಗೆ  ಅಂತ  ಹೆಪ್ಪಾಕಿದ   ಹಾಲು  ಕಣೇ !!!      ಪಾಪ  ನಮ್ಮ  ಅತ್ತೆ  ತಂಗಿಗೆ    ಅರ್ಧ  ಒಡೆದ  ಹಾಲಲ್ಲಿ  ಮಾಡಿದ  ಕಾಫಿ    ಕುಡಿಸಿಬಿಟ್ಟಿದ್ದೆ   !!!!
 
ಇನ್ನೊಂದು  ಪ್ರಸಂಗ...    ಆಸ್ಟ್ರೇಲಿಯಾ  ದೇಶದಲ್ಲಿ  ನನ್ನ  ನೆರೆಯವರು   ಒಮ್ಮೆ  ನನ್ನ  ಕಾಫಿಗೆ  ಎಂದು  ಕರೆದರು ...    ನಾನು  ಬಿಟ್ಟ  ಕೆಲಸ  ಬಿಟ್ಟ  ಹಂಗೆ  ಕಾಫಿ  ಆಸೆಯಿಂದ  ಅವರ  ಮನೆಗೆ  ಹೋದೆ ..  ಅವರೂ  ಕೂಡ  ಭಾರತೀಯರೇ   ..  ಉತ್ತರ  ಭಾರತದವರು ....     ನನಗೆ,   ಈಗ  ತಾನೇ ಇಂಡಿಯಾಇಂದ  fresh    ಕಾಫಿ  ಪುಡಿ   ಹಾಕಿ  ಮಾಡಿದ ಕಾಫಿ    ಅಂತ  ಹೇಳಿ ಒಂದು ದೊಡ್ಡ  ಲೋಟ  ಕೊಟ್ಟರು ...  ಸಂತೋಷಗೊಂಡ   ನಾನು  ಒಂದು  ಗುಟುಕು  ಬಾಯಲ್ಲಿ  ಹಾಕುತ್ತೀನಿ ...  ಫಿಲ್ಟರ್  ಕಾಫೀಪುಡಿ  ಉಪಯೊಗಿಸಿ...  ಇನ್ಸ್ಟಂಟ್  ಕಾಫಿ  ತರ  ಮಾಡಿ ಬಿಟ್ಟಿದ್ದಾರೆ !!!!  ಅರ್ಧ  ಮುಳುಗಿದ  ಪುಡಿ   ಮೇಲೆ  ಮೇಲೆ  ತೇಲುತ್ತಿದೆ...    ಒಳ್ಳೆ  ರುಚಿಯಾದ   ಕಾಫಿ  ಕುಡಿದು  ಗೊತ್ತಿದ್ದ  ನನಗೆ ದೇವರೇ  ಯಾಕಪ್ಪಾ  ಇಂತಾ  ಶಿಕ್ಷೆ   ಎಂದು  ಮನದಲ್ಲೇ  ಕೇಳಿಕೊಂಡೆ ...    ಆಡುವ  ಹಾಗಿಲ್ಲ   ಅನುಭವಿಸುವ  ಹಾಗಿಲ್ಲ ...    ಚೆಲ್ಲುವ ಹಾಗೆ  ಮೊದಲೇ  ಇಲ್ಲ..    ಕಾಫಿ  ಕೊಟ್ಟ  ಓನರ್  ಎದುರಲ್ಲೇ   ಹಸನ್ಮುಖಿಯಾಗಿ   ಕುಳಿತಿದ್ದಾರೆ !!!    ನನ್ನ  ಮುಖಭಾವ   ಸ್ವಲ್ಪವೂ  ಬದಲಿಸದೆ  ಗಟ ಗಟ   ಎಂದು  ಔಷಧಿ  ಕುಡಿಯುವ  ಹಾಗೆ ಕುಡಿದು  ಮುಗಿಸಿ  ...  ಬರ್ತೀನಿ  ಸ್ವಲ್ಪ  ಕೆಲಸ  ಇದೆ  ಎಂದು   ಮನೆ  ಕಡೆ  ಓಟ  ಕಿತ್ತೆ!!!  ಅಲ್ಲೇ  ಇದ್ದಿದ್ದರೆ   ಕುಡಿದ  ಕಾಫಿ ಒಳಗಿರಲಾಗದೆ  ಆಚೆ  ಬಂದು  ಬಿಡುವ ಸಂಭವ  ಹೆಚ್ಚಾಗಿತ್ತು ..  
 
ಬೆಂಗಳೂರಿನ ಮೂಲೆ  ಮೂಲೆಯಲ್ಲಿ  ಸಿಗುವ  ದರ್ಶಿನಿ  ಕಾಫಿಗೆ  ಸರಿ ಸಾಟಿಯಿಲ್ಲ   ಚಿಕ್ಕ  ಸ್ಟೀಲ್ ಕಪ್ ನಲ್ಲಿ   ನಮ್ಮ ಮುಂದೆ  ತಂದಿಡುವ  ಸರ್ವರ್  ದೇವದೂತನಾಗಿ ಕಾಣಿಸಿದರೆ   ವಿಶೇಷವಿಲ್ಲ ...  ಒಂದೊದು  ಹೋಟೆಲ್  ವಿಧ ವಿಧವಾದ  ರುಚಿ ..    ಎಷ್ಟು  ಸಾರಿ  ಕುಡಿದರೂ  ಇನ್ನೂ  ಕುಡಿಯಬೇಕೆಂಬ  ಅಧಮ್ಯ  ಬಯಕೆ  ತಂದಿಡುವುದೇ   ನಮ್ಮ  ಕಾಫಿ!!!   ಕಾಫಿ  ಕುಡಿದ  ಮೇಲೆ  ಇನ್ನೇನೂ  ತಿನ್ನಬೇಕೆನಿಸುವುದಿಲ್ಲ ..   ಬಹಳ  ಕಾಲ ಅದರ  ರುಚಿಯ   ಸಂಗಡವೇ ಕಳೆಯೋಣ  ಎಂದು  ಹೇಳುವ  ನಾಲಿಗೆ!!
 
ನನ್ನ  ಪ್ರತೀ  ಭಾರತದ  ಪ್ರವಾಸದಲ್ಲೂ   ಕೊಂಡು   ತರುವ  ವಸ್ತು  ಕೊಥಾಸ್  ಕಾಫಿ  ಪುಡಿ  ...  ಹದವಾಗಿ  ಚಿಕೋರಿ (ಚಂದ್ರ ಚಕೋರಿ)  ಬೆರೆಸಿ  ನಮ್ಮ  ರುಚಿಗೆ  ತಕ್ಕದಾಗಿ  ಮಾಡಿರುವ  ಪುಡಿ ...  ಜೋಪಾನವಾಗಿ  ಡಬಲ್  ಪ್ಯಾಕ್  ಮಾಡಿ   ಸೂಟ್ ಕೇಸ್ ನಲ್ಲಿ ಪ್ರಮುಖ ಸ್ಥಾನ ಕೊಟ್ಟಿರುತ್ತೇನೆ ..    ನನ್ನ  ತವರೂರ  ನೆನಪಿಸುವ  ಕಾಫಿ ,  ನನ್ನ  ಬಾಲ್ಯವನ್ನು   ನೆನಪಿಸುವ  ಕಾಫಿ  ,  ನನ್ನ   ತಂದೆ  ಮಾಡುವ ಕಾಫಿ ,   ನೆನಪಿನ  ಸರಮಾಲೆಗಳನ್ನೇ  ಬಿಚ್ಚಿ  ಇಡುತ್ತೆ  ಈ   ನನ್ನ  ಕಾಫಿ !!!  
 
ಮದುವೆ  ಮನೆ,  ಗೃಹಪ್ರವೇಶ  ಹೋದಿರಿ  ...  ಅಲ್ಲಿ  ಪೊಗದಸ್ತಾದ  ಊಟ  ಮಾಡಿ  ತೂಕಡಿಸುತಿದ್ದಲ್ಲಿ..   ಅಡಿಗೆಯವರು   ಸುರಿದು  ಕೊಡುವ  ಬಿಸಿ  ಬಿಸಿ  ಕಾಫಿ   ನಿದ್ದೆಯನ್ನು  ಹೊಡೆದು ಓಡಿಸುತ್ತೆ !!!   ಅದೇ   ಕಾಫಿ    ಕೆಲವರಿಗೆ  ರಾತ್ರಿ  ಊಟ  ಆದ  ಮೇಲೆ  ಬೇಕು   ಸವಿ  ನಿದ್ದೆ  ಮಾಡಲು ...  ಇನ್ನು  ಕೆಲವರಿಗೆ...  ಸಂಜೆ  ಕುಡಿದ  ಕಾಫಿ ಇಂದ    ನಿದ್ದೆಯೇ  ಬರಲಿಲ್ಲ   ಎಂದು  ದೂಷಿಸುವವರೂ   ಇದ್ದಾರೆ..      ಇನ್ನು  ಕೆಲವರು  ಕಾಫಿ  ಬಿಟ್ಟು  ಟೀ  ಸೇವಿಸುತ್ತಾರೆ ..   ಅವೆರಾನಾರೂ   ನನ್ನ  ಲೇಖನ  ಓದಿ  ಕಾಫಿ ಗೆ  ಮತಾಂತರ  ಹೊಂದಬಹುದೇನೋ !!!!    ಸಾಕಾಯ್ತಾ  ಕಾಫಿ ಪುರಾಣ  ....     
 
ಲೇಖನ  ಓದಿದ  ಸರ್ವರಿಗೂ  ನಮ್ಮ  ಮನೆಗೆ  ಕಾಫಿಗೆ   ಯಾವ  ಹೊತ್ತಿಗಾರು  ಬರಲು  ಸ್ವಾಗತ   ಸುಸ್ವಾಗತ !!!
 
ಇಷ್ಟು  ದೊಡ್ಡ  ಕಾಫಿ   ಲೇಖನ  ಓದುತ್ತಾ  ನಿದ್ದೆ  ಏನಾರು  ಹತ್ತಿತಾ?    ಹಾಗಾದ್ರೆ   ಒಂದು  ಕಪ್  ಕಾಫಿ  ಕುಡಿದುಬಿಡಿ   ಪ್ಲೀಸ್ !!!! 
 
ಚಿತ್ರ ಕೃಪೆ: http://commons.wikimedia.org/wiki/File:Masala_Tea_and_South_Indian_Filter_Coffee.jpg‍

 

Comments

Submitted by nageshamysore Thu, 05/30/2013 - 08:33

ಸ್ಮಿತಾರವರೆ, ಕಾಫಿ ಕಾಫಿ ಅಂತೆಲ್ಲ ಹೇಳಿ / ಬರಿ ಓದ್ಸಿ ನಮಗೆ ದೊಡ್ಡ ತಲೆನೋವ್ ಬರುವ ಹಾಗೆ ಮಾಡ್ಬಿಟ್ಟಿದ್ದೀರಾ.... ನಮಗದೆಲ್ಲ ಗೊತ್ತಿಲ್ಲ ಈಗ ಆರ್ಜೇಂಟಾಗಿ ನಾವಿರೊ ಕಡೆಗೆ ಒಂದು ಸ್ಟ್ರಾಂಗ್ ಕಾಫಿ ಕಳಿಸಿದ್ರೆ ಸರಿ...ಇಲ್ಲದಿದ್ರೆ ನಿಮಗೆ ನಾವು ಹೆಪ್ಪು ಹಾಕಿಟ್ಟ ಹಾಲಿನ ಕಾಫಿ ಮಾಡಿಸಿ ಸಿಡ್ನಿಗೆ ಕಳಿಸಬೇಕಾಗುತ್ತೆ ನೋಡಿ! - ನಾಗೇಶ ಮೈಸೂರು, ಸಿಂಗಪುರದಿಂದ
Submitted by smitha melkote Thu, 05/30/2013 - 08:50

In reply to by nageshamysore

ಕಾಫಿ ಪುಡಿ ,ಸಕ್ಕರೆ , ಹಾಲಿನ ಪುಡಿ, ನೀರು ಬೇರೆ ಬೇರೆಯಾಗಿ ಕಳಿಸಬಹುದು.. ನಿಮಗೆ ಕಾಫಿ ಮಾಡಕ್ಕೆ ಗೊತ್ತಿದ್ದರೆ.. ಧನ್ಯವಾದಗಳು ನನ್ನ ಲೇಖನಕ್ಕೆ ನೀವು ಬರೆದ ಪ್ರತಿಕ್ರಿಯೆಗೆ !!!
Submitted by ಸುಧೀ೦ದ್ರ Thu, 05/30/2013 - 14:25

ರಾತ್ರಿ ಮಲಗಿದ್ದಾಗ ಎಬ್ಬಿಸಿ ಕಾಫಿ ಕೊಟ್ಟರೆ ಕುಡಿಯುವ ಆಸಾಮಿ ನಾನು ಆದರೆ ಅದು ಫಿಲ್ಟರ್ ಕಾಫಿ ಆಗಿರಬೇಕಷ್ಟೇ :) ಲೇಖನ ಚೆನ್ನಾಗಿದೆ.
Submitted by Harish S k Tue, 06/04/2013 - 12:56

Smitha Madam, chennagi ide. Kaapi antha heli , kaapi kudiyo haage maadidira
Submitted by Harish S k Tue, 06/04/2013 - 12:56

Smitha Madam, chennagi ide. Kaapi antha heli , kaapi kudiyo haage maadidira