೮೨. ಶ್ರೀ ಲಲಿತಾ ಸಹಸ್ರನಾಮ ೨೯೯ರಿಂದ ೩೦೦ನೇ ನಾಮಗಳ ವಿವರಣೆ

೮೨. ಶ್ರೀ ಲಲಿತಾ ಸಹಸ್ರನಾಮ ೨೯೯ರಿಂದ ೩೦೦ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೯೯ - ೩೦೦

Nāda-rūpā नाद-रूपा (299)

೨೯೯. ನಾದ-ರೂಪಾ

           ದೇವಿಯು ಶಬ್ದದ ರೂಪದಲ್ಲಿದ್ದಾಳೆ. ಪಂಚದಶೀ ಮಂತ್ರವನ್ನು ವಿವರಿಸುವ ವರಿವಶ್ಯ ರಹಸ್ಯ ಗ್ರಂಥವು (ಶ್ಲೋಕ ೧.೧೨ ಮತ್ತು ೧೩) ಹೀಗೆ ಹೇಳುತ್ತದೆ, “ಹ್ರೀಂ (ह्रीं) ಬೀಜಾಕ್ಷರವು ೧೨ ಅಕ್ಷರಗಳಿಂದ ಸಂಯೋಜಿಸಲ್ಪಟ್ಟಿದೆ: ವ್ಯೋಮಃ (ಹ), ಅಗ್ನಿ (ರ), ವಾಮಲೋಚನ (ಈ), ಬಿಂದು (ಮ), ಅರ್ಧಚಂದ್ರ, ರೋಧಿನೀ, ನಾದ, ನಾದಾಂತಾ, ಶಕ್ತೀ, ವ್ಯಾಪಿಕಾ, ಸಮನಾ ಮತ್ತು ಉನ್ಮನೀ." ಕಡೆಯ ಎಂಟು ಅಕ್ಷರಗಳ ಸಂಕೀರ್ಣವು ನಾದವೆಂದು ಕರೆಯಲ್ಪಡುತ್ತದೆ. ಕಡೆಯ ಎಂಟರಲ್ಲಿ ಅತ್ಯಂತ ಸೂಕ್ಷ್ಮವಾದದ್ದು ’ಉನ್ಮನೀ’ ಆಗಿದ್ದು ಅವೆಲ್ಲವುಗಳನ್ನೂ ಬಿಂದುವಿನ ಮೇಲಿರಸಲಾಗಿದೆ.

ಶಬ್ದದ ಕುರಿತಾಗಿ ಇನ್ನಷ್ಟು ವಿವರಗಳು:

            ಅತ್ಯುನ್ನತವಾದ ದೈವ ಶಕ್ತಿಯನ್ನು ಪರಾ-ಶಕ್ತಿ ಎಂದು ಕರೆಯಲಾಗುತ್ತದೆ. ಪರಾ-ಶಕ್ತಿಯು ದೈವೀ ಮಾತೆಯಾಗಿದ್ದು ಸಹಜವಾಗಿಯೇ ಆಕೆಯು ಈ ಪ್ರಪಂಚದ ಬಗ್ಗೆ ಕಾಳಜಿಯುಳ್ಳವಳಾಗಿರುತ್ತಾಳೆ. ಪರಾ (೩೬೬ನೇ ನಾಮ) ಸ್ಥಿತಿಯಲ್ಲಿ, ಶಕ್ತಿಯು ಸೃಷ್ಟಿಯ ಆವಿರ್ಭಾವದ ಪ್ರಾರಂಭಿಕ ಹಂತಗಳಲ್ಲಿರುತ್ತಾಳೆ. ಪರಾಕ್ಕಿಂತ ಮುಂದಿನ ಸ್ಥಾನವು ಪಶ್ಯಂತೀ (ನಾಮ ೩೬೮) ಆಗಿದ್ದು ಅದರಲ್ಲಿ ಪ್ರಶ್ನೆಗಳು ಮತ್ತು ಉತ್ತರಗಳಿರುತ್ತವೆ. ಪ್ರಶ್ನೋತ್ತರಗಳು ಜ್ಙಾನದೆಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ. ಈ ಪಶ್ಯಂತೀ ಹಂತದಲ್ಲಿ ಶಬ್ದಕ್ಕೂ ಅದು ಸೂಚಿಸುವ ವಸ್ತುವಿಗೂ ಯಾವುದೇ ವಿಧವಾದ ವ್ಯತ್ಯಾಸವಿರುವುದಿಲ್ಲ. ಇದರ ಮುಂದಿನ ಹಂತವೇ ಮಧ್ಯಮಾ (ನಾಮ ೩೭೦) ಆಗಿದ್ದು ಇದರಲ್ಲಿ ಶಬ್ದಕ್ಕೆ ಮತ್ತು ಅದು ಸೂಚಿಸುವ ವಸ್ತುವಿನ ಮಧ್ಯೆ ವ್ಯತ್ಯಾಸವು ಉಂಟಾಗಲು ಪ್ರಾರಂಭವಾಗುತ್ತದೆ, ಆದರೆ ಅದು ಅಂತಃಕರಣದ ಮಟ್ಟದಲ್ಲಿ ಮಾತ್ರ ಇರುತ್ತದೆ. ಇದನ್ನೇ ಇನ್ನೊಂದು ವಿಧದಲ್ಲಿ ಹೇಳಬೇಕೆಂದರೆ ಪಶ್ಯಂತೀ ಮತ್ತು ಮಧ್ಯಮಾ ಇವುಗಳ ನಡುವೆ ವ್ಯತ್ಯಾಸವು ಬಹಳ ಸೂಕ್ಷ್ಮವಾಗಿದ್ದು ಅದು ಸ್ಥೂಲದಲ್ಲಿ ವ್ಯಕವಾಗುವುದಿಲ್ಲ (ಅಂದರೆ ಮಾತಿನಲ್ಲಿ ವ್ಯಕ್ತವಾಗುವುದಿಲ್ಲ). ಕಡೆಯ ಮತ್ತು ಅಂತಿಮ ಹಂತವೇ ವೈಖರೀ (ನಾಮ ೩೭೧) ಆಗಿದೆ, ಈ ವ್ಯತ್ಯಾಸವು ಸ್ಥೂಲವಾಗುತ್ತಾ ಹೋಗಿ ಧ್ವನಿಯು ಉತ್ಪತ್ತಿಯಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಸ್ವಯಂ ಪರಾ-ಶಕ್ತಿಯು ಈ ಬದಲಾವಣೆಗಳಿಗೆ ಒಳಗಾಗುವುದಿಲ್ಲ ಆದರೆ ವ್ಯಕ್ತಿಯೊಬ್ಬನ ಮಾನಸಿಕ ಸ್ಥಿತಿಯ ಮೇಲೆ ಈ ವಿಧವಾದ ಬದಲಾವಣೆಗಳು ದೇವಿಯ ಆಜ್ಞೆಗನುಗುಣವಾಗಿ ಆಗುತ್ತವೆ. ಮಾತಿನಲ್ಲಿ ಉಂಟಾಗುವ ಈ ವಿವಿಧ ರೀತಿಯ ಬದಲಾವಣೆಗಳ ಹಂತಗಳಿಗನುಗುಣವಾಗಿ ದೇವಿಯು ನಾನಾ ವಿಧವಾದ ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಈ ವಿವಿಧ ಹಂತಗಳನ್ನು ಮುಂಬರುವ ನಾಮಗಳಲ್ಲಿ ಚರ್ಚಿಸೋಣ. ಮಧ್ಯಮಾ ಮತ್ತು ವೈಖರೀ ಇವುಗಳ ನಡುವೆ ಎಂಟು ಹಂತಗಳಿದ್ದು ಅವುಗಳಲ್ಲಿ ಮೂರನೆಯದನ್ನು ನಾದ ಎಂದು ಕರೆಯುತ್ತಾರೆ ಮತ್ತು ಅವುಗಳನ್ನು ಸಮಷ್ಟಿಯಾಗಿ (ಒಟ್ಟಾಗಿ) ಸಹ ನಾದ ಎಂದು ಕರೆಯುತ್ತಾರೆ. ಒಟ್ಟಾರೆಯಾಗಿ ಈ ನಾಮವು ದೇವಿಯು ಶಬ್ದ ರೂಪದಲ್ಲಿರುವಳೆನ್ನುವುದನ್ನು ಹೇಳುತ್ತದೆ. ದೇವಿಯು ಶಬ್ದ ಬ್ರಹ್ಮವೂ ಆಗಿದ್ದಾಳೆ. ಹೆಚ್ಚಿನ ವಿವರಗಳನ್ನು ಆಯಾ ನಾಮಗಳ ಚರ್ಚೆಗಳಲ್ಲಿ ನೋಡೋಣ.

Nāma-rūpa-vivarjitā नाम-रूप-विवर्जिता (300)

೩೦೦. ನಾಮ-ರೂಪ-ವಿವರ್ಜಿತಾ

            ದೇವಿಯು ನಾಮ ರೂಪ (ಹೆಸರು ಮತ್ತು ಆಕಾರ) ಗಳಿಲ್ಲದವಳಾಗಿದ್ದಾಳೆ. ವಿವರ್ಜಿತಾ ಎಂದರೆ ಹೊರತಾಗಿದ್ದಾಳೆ ಎಂದರ್ಥ. ದೇವಿಯು ನಾಮ ರೂಪಗಳಿಗೆ ಅತೀತಳಾಗಿದ್ದಾಳೆ; ಇದು ಪರಬ್ರಹ್ಮದ ವಿಶೇಷ ಲಕ್ಷಣವಾಗಿದೆ. ಪ್ರತಿಯೊಂದು ಸೃಷ್ಟಿಗೂ ಎರಡು ಮುಖಗಳಿವೆ, ಅವುಗಳಲ್ಲಿ ಮೊದಲನೆಯದು ಚಿತ್ ಆದರೆ ಎರಡನೆಯದು ಅ-ಚಿತ್ ಆಗಿದೆ. ಚಿತ್ ಎಂದರೆ ಬ್ರಹ್ಮಾಂಡ ಪ್ರಜ್ಞೆ ಮತ್ತು ಅ-ಚಿತ್ ಎಂದರೆ ವೈಯ್ಯಕ್ತಿಕ ಪ್ರಜ್ಞೆಯಾಗಿದೆ. ಚಿತ್ ಮತ್ತ ಅಚಿತ್ ಎರಡೂ ಪರಮ ಚೈತನ್ಯ ಅಥವಾ ದೈವೀ ಚೈತನ್ಯದಿಂದ ವ್ಯುತ್ಪನ್ನವಾಗಿವೆ. ಚಿತ್ ಎನ್ನವುದನ್ನು ಸ್ಥಿತ (ಇರುವಿಕೆ), ಜ್ಞಾನ ಮತ್ತು ಆನಂದ ಎಂದು ಉಪವಿಭಾಗಿಸಲಾಗಿದೆ. ಪರಬ್ರಹ್ಮವು ಈ ಮೂರಕ್ಕೂ ಕಾರಣವಾಗಿದೆ. ಅಚಿತ್ ಎನ್ನುವುದು ನಾಮ-ರೂಪಗಳನ್ನು ಒಳಗೊಂಡಿದ್ದು ಅದು ಚಿತ್ ಎನ್ನುವುದಕ್ಕೆ ವಿರುದ್ಧವಾಗಿದೆ ಎನ್ನಲಾಗಿದೆ; ಏಕೆಂದರೆ ಅದು ಪರಬ್ರಹ್ಮವನ್ನು ಸೂಚಿಸುವುದಿಲ್ಲ. ಯಾವಾಗ ತೋರಿಕೆಯ ನಾನು ಮತ್ತು ಶಿವನ ನಾನು ಪ್ರಜ್ಞೆಯು ಒಂದುಗೂಡುತ್ತವೆಯೋ ಆಗ ಸೃಷ್ಟಿ ಉಂಟಾಗುತ್ತದೆ. ಶಿವನ ನಾನು ಎನ್ನುವ ಪ್ರಜ್ಞೆಯಿಂದ ಸ್ಥಿತ (ಇರುವಿಕೆ), ಜ್ಞಾನ ಮತ್ತು ಆನಂದ ಎನ್ನುವುವು ಉದ್ಭವವಾಗಿವೆ. ನಾಮ ಮತ್ತು ರೂಪಗಳು ತೋರಿಕೆಯ ಪ್ರಜ್ಞೆಯಿಂದುಂಟಾದದ್ದು. ಈ ನಾಮವು ದೇವಿಯು ನಾಮ ರೂಪಗಳಿಗೆ ಅತೀತಳಾಗಿದ್ದಾಳೆಂದು ಹೇಳುವುದರಿಂದ ಇ‌ದು ದೇವಿಯು ಚಿತ್ ಅಥವಾ ಪರಮೋನ್ನತ ಚೈತನ್ಯಕ್ಕೆ ಸಂಭಂದಪಟ್ಟವಳೆನ್ನುವುದನ್ನು ಒತ್ತಿ ಹೇಳುತ್ತದೆ; ಇದನ್ನೇ ಪರಬ್ರಹ್ಮವೆಂದು ಹೇಳಲಾಗಿದೆ. ಛಾಂದೋಗ್ಯ ಉಪನಿಷತ್ತು (೮.೧೪.೧) ಹೀಗೆ ಹೇಳುತ್ತದೆ, "ಯಾವುದನ್ನು ಆಕಾಶವೆಂದು ವಿವರಿಸಲಾಗಿದೆಯೋ ಅದು ನಾಮ ರೂಪಗಳಾಗಿ ಮಾರ್ಪಾಡು ಹೊಂದುತ್ತದೆ. ನಾಮ ರೂಪಗಳು ಯಾವುದರಲ್ಲಿ ಇವೆಯೋ ಅದು ಬ್ರಹ್ಮವು, ಅದು ಅಮೃತವು (ಚಿರಂಜೀವಿ), ಅದು ಆತ್ಮವು". ದೇವಿಯನ್ನು ಪರಬ್ರಹ್ಮವೆಂದು ಕರೆಯಲು ಪ್ರತಿಯೊಂದು ಅವಕಾಶವನ್ನು ವಾಕ್ ದೇವಿಗಳು ಬಳಸಿಕೊಂಡಿದ್ದಾರೆ. ಬ್ರಹ್ಮವನ್ನು ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ವಿವರಿಸಬಹುದು; ಇಲ್ಲಿ ಬ್ರಹ್ಮವನ್ನು ನಕಾರಾತ್ಮಕವಾಗಿ ವಿವರಿಸಲಾಗಿದೆ.

******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 299-300 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by ಗಣೇಶ Tue, 08/06/2013 - 23:52

ಶ್ರೀಧರ್ ಜಿ, ಗಾಯತ್ರಿ ಮಂತ್ರ ಮತ್ತು ಅದರ ಅಕ್ಷರಗಳ ಬಗ್ಗೆ ನಮ್ಮ"ಅಂಡಾಂಡ ಭಂಡ ಸ್ವಾಮಿ"ಗಳ ಬಳಿ ವಿಚಾರಿಸೋಣ ಎಂದು ಹೋಗಿದ್ದೆ. "ಇದು ನಿನ್ನ ತಲೆಗೆ ಹೊಕ್ಕುವುದಿಲ್ಲ. ಪುರಾಣ ಶಾಸ್ತ್ರಗಳನ್ನು ಹಾಸ್ಯ ಮಾಡುವುದೇ ನಿನಗೆ ತಕ್ಕುದಾದುದು ಹೋಗಪ್ಪಾ" ಅಂದರು.
ಒತ್ತಾಯಿಸಿದಾಗ ಹೇಳಿದರು‍, "ಮಂತ್ರ ಶಾಸ್ತ್ರಗಳನ್ನು ಸರಿಯಾದ ಗುರು ಮುಖೇನ ಕಲಿಯಿರಿ ಎಂದರೆ ಕೇಳುವುದಿಲ್ಲ. ಅಕ್ಷರಗಳನ್ನು ಬರೆದಿಟ್ಟು ಕಂಠಪಾಠ ಮಾಡುವಿರಿ, ೨೧ರಿಂದ೧೦೮ ಸಲ ಹೇಳುವ ಕಡೆ ಗಮನ. ನಂತರ ಏನೂ ಫಲಿಸಲಿಲ್ಲ ಎಂದು ತೆಗಳುವಿರಿ. ಸಿನಿಮಾದಲ್ಲಿ ಸ್ವಾಮಿ ವೇಷಧಾರಿಯಿಂದ ಹ್ರಾಂ ಹ್ರೀಂ .. ಎಂದು ಹೇಳಿಸಿ ನಗುವಿರಿ. ಒಂದು ’ಹ್ರೀಂ’ ಶಬ್ದದಲ್ಲಿ ಎಷ್ಟು ಅಕ್ಷರಗಳಿವೆ ಗೊತ್ತಾ? ’ಹ್+ರ್+ಈ’=ಹ್ರೀ ಆಯಿತು. ಹ್ರೀ ಶಬ್ದ ’ಹ್ರೀಂ’ ಆಗಬೇಕಾದರೆ ಹ್+ರ್+ಈ ಜತೆ ಬಿಂದು, ಅರ್ಧಚಂದ್ರ, ರೋಧಿನೀ, ನಾದ, ನಾದಾಂತಾ, ಶಕ್ತೀ, ವ್ಯಾಪಿಕಾ, ಸಮನಾ ಮತ್ತು ಉನ್ಮನೀಗಳು ಸೇರಬೇಕು. ಇದನ್ನು ಕಂಚಿನ ಗಂಟೆಯ ನಾದದಂತೆ ಅಕ್ಷರಗಳಲ್ಲಿ ಹೇಳಲು ಸಾಧ್ಯವಿಲ್ಲ..."
"ಅರ್ಥವಾಗಲಿಲ್ಲ ಗುರುಗಳೇ" ಅಂದೆ.
"ಹ್ರೀಂ"ಕಾರನೇ ಅರ್ಥವಾಗಲಿಲ್ಲ. ಇನ್ನು ವೇದ,ಮಂತ್ರಗಳು ನಿನಗೆ ನಿಲುಕದ್ದು. ಶ್ರೀಧರ್ ದ್ವಯರ ಲೇಖನಗಳನ್ನು ಓದಿ ಅರ್ಥಮಾಡಿಕೊ ಹೋಗು.." ಎಂದು ಶಿಷ್ಯರ ಮೂಲಕ ಅರ್ಧಚಂದ್ರ ಪ್ರಯೋಗ ಮಾಡಿದರು. :(

ಗಣೇಶ್‌ಜಿ,
ಈ ಒಂದು ಕಂತಿನಲ್ಲೇ ಹ್ರೀಂಕಾರವು ಅರ್ಥವಾಗುವುದಿಲ್ಲವೆಂದು ಮತ್ತೊಂದು ಕಂತಿನಲ್ಲಿಯೂ ಸಹ ಹ್ರೀಂಕಾರದ ಕುರಿತ ವಿವರಣೆಯನ್ನು ಕೊಡಲಾಗಿದೆ ನೋಡಿ. http://sampada.net/b... ಆದ್ದರಿಂದ ಇವನ್ನೆಲ್ಲಾ ಸರಿಯಾಗಿ ತಿಳಿದುಕೊಂಡು ಹೋಗಿ ಅಂಡಾಂಡಭಂಡರಿಗೊಂದೇ ಏಕೆ ತಿಂಬಟ್ ಸ್ವಾಮಿಗಳಿಗೂ ಅರ್ಧಚಂದ್ರ ಪ್ರಯೋಗ ಮಾಡಬಹುದು ಬಿಡಿ. :))
ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು ಗಣೇಶರೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

:) ಶ್ರೀಧರ್ ಜಿ, ಹ್ರೀಂಕಾರ ಪೂರ್ತಿ ಅರ್ಥವಾಗುವಂತೆ ವಿವರಿಸಿದ ತಮಗೆ ತುಂಬಾ ಧನ್ಯವಾದಗಳು. ಹಾಗೇ "೩೦೦"ದಾಟಿದ್ದಕ್ಕೆ ಶುಭಾಶಯಗಳು. ತಮ್ಮ ಲೇಖನಕ್ಕೆ ಕವನದ ಜುಗಲ್ ಬಂದಿ ಹಾಡುತ್ತಿರುವ ನಾಗೇಶರಿಗೂ ಶುಭಾಶಯಗಳು.
"ತಮಿಳು ಮಲಯಾಳಿಗಳಿಗಿದ್ದಷ್ಟು ಭಾಷೆಯ ಅಭಿಮಾನ ನಮಗೆ ಇಲ್ಲ. ಅವರು ಎಲ್ಲೇ ಹೋದರು ಅವರ ಭಾಷೆಯ ಪತ್ರಿಕೆ ಓದುವರು. ಕನ್ನಡಿಗರು ಹೊರನಾಡಿಗೆ ಹೋಗಿ ಹಣಮಾಡುವುದರಲ್ಲೇ ಮಗ್ನ. ಕನ್ನಡ ಭಾಷೆ,ನಾಡಿಗಾಗಿ ಏನೂ ಮಾಡುವುದಿಲ್ಲ" ಎಂದೊಬ್ಬ ನನ್ನ ಬಳಿ ವಾದಿಸಿದಾಗ, "ಇಲ್ಲಿದ್ದ ನಾವೇನು ಮಾಡುತ್ತಿದ್ದೇವೆ?ಓದುವುದು ಟೈಮ್ಸ್ ಆಫ್ ಇಂಡಿಯಾ. ಹಿಂದಿಯವನ ಬಳಿ ಹಿಂದಿಯಲ್ಲಿ, ತಮಿಳನ ಹತ್ತಿರ ಅವನಿಗೆ ಕನ್ನಡ ಬರುತ್ತಿದ್ದರೂ ತಮಿಳಲ್ಲಿ ಮಾತನಾಡುತ್ತಿಲ್ಲವಾ? ಮನೆಯಲ್ಲಿ ಕಂಪ್ಯೂಟರ್ ಇದ್ದರೆ, ಸಂಪದ ಡಾಟ್ ನೆಟ್ ಓಪನ್ ಮಾಡಿ ನೋಡು. ದೂರದ ಹೈದರಾಬಾದ್‌ನಲ್ಲಿ ಕುಳಿತು ಲಲಿತಾ ಸಹಸ್ರನಾಮ ಕನ್ನಡಕ್ಕೆ ಭಾಷಾಂತರ ಒಬ್ಬರು ಮಾಡಿದರೆ, ಇನ್ನೊಬ್ಬರು ಸಿಂಗಾಪುರದಿಂದ ಅದನ್ನೇ ಕವನವಾಗಿಸುತ್ತಿದ್ದಾರೆ. ಇನ್ನೊಬ್ಬರು ಅಮೆರಿಕಾದಲ್ಲಿದ್ದೂ ಛಂದಸ್ಸು ಮಾತ್ರೆ ಲೆಕ್ಕಾಚಾರದಲ್ಲಿ ಕನ್ನಡ ಕವನ, ಸಂಸ್ಕೃತದಿಂದ ಕನ್ನಡಕ್ಕೆ ಕವನ ಬರೆಯುತ್ತಿದ್ದಾರೆ..." ಎಂದೆಲ್ಲಾ ವಿವರಿಸಿ ಹೇಳಿದೆ. ಏನು ಅರ್ಥಮಾಡಿಕೊಂಡನೊ ಗೊತ್ತಿಲ್ಲ.
ಹೊರನಾಡಲ್ಲಿದ್ದೂ ಉತ್ಸಾಹದಿಂದ ಕನ್ನಡಮ್ಮನ ಸೇವೆ ಮಾಡುತ್ತಿರುವ ನಿಮಗೆಲ್ಲಾ ತುಂಬಾ ತುಂಬಾ ಧನ್ಯವಾದಗಳು.

Submitted by nageshamysore Wed, 08/07/2013 - 06:45

ಶ್ರೀಧರರೆ, ಲಲಿತಾ ಸಹಸ್ರನಾಮ ೨೯೯ - ೩೦೦ ರ ಸಂಗ್ರಹ ಸಾರ ತಮ್ಮ ಪರಿಷ್ಕರಣೆಗೆ. ಅಂದಹಾಗೆ ಮೊದಲಿಗೆ ಸೇವಾಗನ ಹಾಗೆ 'ನಾಮ-ರೂಪ-ವಿವರ್ಜಿತಾ' ದೊಂದಿಗೆ ಮೂರು ಶತಕಗಳನ್ನು ಮುಗಿಸಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು - ಮೂರು ಪ್ರಮುಖ ಮೈಲಿಗಲ್ಲನ್ನು ದಾಟಿದಿರಿ, ದಾಟಿಸಿದಿರಿ. ಹೀಗೆ ಸುಖಕರವಾಗಿ ಸಾಗಿರಲಿ ಪಯಣ ಸಹಸ್ರ ಮುಖಿಯೆಡೆಗೆ :-)

ನೋಡಲ್ಲಿ ಸಹಸ್ರಮುಖಿ ಏಳ್ಹೆಜ್ಜೆಯಷ್ಟೆ ಬಾಕಿ
ಸರಸರನೆ ಜತೆ ನಡೆದು ಬಿಡಿ ದಾಪುಗಾಲಿಕ್ಕಿ
ಶತಕದ ದಶಕ ಮೇಲೆರುತಲೆ ಪುಳಕ ಜಳಕ
ಆಯಾಸ ಪರಿಹರಿಸಲಿದೆ ಒಳಮನಸಬೆಳಕ!

ಲಲಿತಾ ಸಹಸ್ರನಾಮ ೨೯೯ - ೩೦೦

೨೯೯. ನಾದ-ರೂಪಾ
ಹ್ರೀಂ ಬೀಜಾಕ್ಷರ ದ್ವಾದಶಾಕ್ಷರ ಸಂಗಮ, ಅಷ್ಟಾಂತಿಮ ಸಂಕುಲ ನಾದ
ಶಬ್ದ ರೂಪಿಣಿ ದೇವಿ ಶಬ್ದ ಬ್ರಹ್ಮ, ಪರಾಸ್ಥಿತಿ ಸೃಷ್ಟಿಯವಿರ್ಭಾವ ರೂಪದ
ಪ್ರಶ್ನೋತ್ತರಜ್ಞಾನ ಪಶ್ಯಂತೀ ಹಂತ, ಶಬ್ದ-ಸೂಚಿತವಸ್ತು ಏಕತಾನಾದ್ಬುತ
ಮಧ್ಯಮಾ ಅವ್ಯಕ್ತ, ಸ್ಥೂಲ ವೈಖರೀ ವ್ಯಕ್ತ ನಡುವಷ್ಟದಲಿ ನಾದ ಮಿಳಿತ!

೩೦೦. ನಾಮ-ರೂಪ-ವಿವರ್ಜಿತಾ
ವೈಯಕ್ತಿಕ ಪ್ರಜ್ಞೆ ಜತೆ ಶಿವನ ಬ್ರಹ್ಮಾಂಡ ಪ್ರಜ್ಞೆ ಒಂದುಗೂಡಲು ಸೃಷ್ಟಿ
ಚಿತ್ ಪ್ರಜ್ಞೆಯಿಂದುದ್ಭವ ಸ್ಥಿತ ಜ್ಞಾನ ಆನಂದ ಕಾರಣ ಪರಬ್ರಹ್ಮದೃಷ್ಟಿ
ಅಚಿತ್ ನಾಮ ರೂಪ ತೋರಿಕೆ ಪ್ರಜ್ಞೆ, ತಾನಾಗದ ಪರಬ್ರಹ್ಮ ಸೂಚಿತ
ಚಿತ್ ಪರಮಚೈತನ್ಯ ಲಲಿತ, ಅಚಿತ್ ಸ್ವತಃ ನಾಮರೂಪವಿವರ್ಜಿತಾ!
               
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ನಾಗೇಶರೆ,
ನಿಮ್ಮ ಹೃತ್ಪೂರ್ವಕ ಶುಭ ಹಾರೈಕೆಗಳಿಗೆ ಧನ್ಯವಾದಗಳು. ನಾನು ಟೆಸ್ಟ್ ಮ್ಯಾಚಿನಲ್ಲಿ ಮೂರು ಸೆಂಚುರಿ ಬಾರಿಸುವುದೇನೂ ದೊಡ್ಡ ಸಂಗತಿಯಲ್ಲ; ಆದರೆ ಆ ಸಾಧನೆಯನ್ನು ನೀವು ೨೦:೨೦ ಕ್ರಿಕೆಟ್ಟಿನಲ್ಲೇ ಸಾಧಿಸಿಬಿಟ್ಟಿದ್ದೀರ. ಅದಕ್ಕಾಗಿ ನಿಮಗೆ ವಿಶೇಷ ಅಭಿನಂದನೆಗಳು.
ಕೇವಲ ಏಳು ಹೆಜ್ಜೆಯಷ್ಟೇ ಬಾಕಿ ಎಂದಿದ್ದೀರ; ನಾನು ಶತಪಾದಿಯಾಗಿದ್ದರೆ ಅದು ನಿಜವಾಗುತ್ತಿತ್ತೇನೋ? ಆದರೂ ದೇವಿಯ ಕೃಪೆಯಿದ್ದರೆ ಅವು ಕೇವಲ ಏಳು ಹೆಜ್ಜೆಗಳೇ ಬಿಡಿ :)
ಕವನಗಳ ಮೂಲಕ ನಿಮ್ಮ ನಿರಂತರ ಪ್ರೋತ್ಸಾಹದಿಂದಾಗಿಯೇ ಒಟ್ಟಾಗಿ ೩೦೦ನ್ನು ದಾಟಲು ಸಾಧ್ಯವಾಗಿದೆ. ಜಗನ್ಮಾತೆಯ ಕೃಪೆಯಿಂದ ಅದು ಹೀಗೆಯೇ ಮುಂದುವರೆಯಲಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ವಿ.ಸೂ: ಈ ಕಂತಿನ ಎರಡೂ ಪಂಕ್ತಿಗಳು ಸುಂದರವಾಗಿ ಮೂಡಿ ಬಂದಿವೆಯಷ್ಟೇ ಅಲ್ಲ ಅದರಲ್ಲಿ ಯಾವ ತಪ್ಪುಗಳೂ ಸಿಗಲಿಲ್ಲ. ಹಾಗಾಗಿ ನನ್ನ ಕಾರ್ಯ ಮತ್ತು ನಿಮ್ಮ ಕಾರ್ಯವೂ ಸಹ ಇನ್ನಷ್ಟು ಸರಳವಾಯಿತು. ಇದೇ ಅಂತಿಮ ಪರಿಷ್ಕರಣೆಯಾಗಿರುವುದರಿಂದ ಇದಕ್ಕೆ ಕೊಂಡಿಯನ್ನು ಕೊಟ್ಟುಬಿಡಿ.

ಶ್ರೀಧರರೆ, ಸಾವಿರ ಯೋಜನದ ಹಾದಿಯೂ ಮೊದಲ ಹೆಜ್ಜೆಯಿಂದಲೆ ಆರಂಭವಾಗುವಂತೆ - ಮುನ್ನೂರೇನು ಕಡಿಮೆ ಸಾಧನೆಯಲ್ಲ. ಗಮ್ಯ ದೂರವಿದ್ದರೂ ತೀರ ಕಾಣುತ್ತಿದೆ :-)

ಈ ಬೆಳಿಗ್ಗೆ ಕೊಂಚ ಸಮಯವಿತ್ತು, ಹೀಗಾಗಿ ನಾನೆ ಒಮ್ಮೆ ಪರಿಷ್ಕರಿಸಿ ತಿದ್ದುಪಡಿ ಮಾಡಿದೆ - ಅದರಿಂದಾಗಿ ನಿಮಗೆ ತಪ್ಪು ಕಾಣಿಸಲಿಲ್ಲವೇನೊ? ಪ್ರತಿ ಸಾರಿಯೂ ಹೀಗೆ ಮಾಡಲು ಆದರೆ ಚೆನ್ನ - ಆದರೆ ಸಮಯ ಪ್ರತಿ ಬಾರಿ ಸಿಗುವುದಿಲ್ಲ, ಆಗ ನಿಮಗೆ ಹೆಚ್ಚು ತ್ರಾಸ :-)

ಕೊಂಡಿಯನ್ನೂ ಅಂತಿಮಗೊಳಿಸಿ ಹಾಕಿದ್ದೇನೆ.

ಧನ್ಯವಾದಗಳು,
ನಾಗೇಶ ಮೈಸೂರು