ಆತ

ಆತ

ಅ ದಿನ ನಾನು ನನ್ನ ಗೆಳತಿ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಮೆಜೆಸ್ಟಿಕ್ ಕಡೆಗೆ ಹೊರಟಿದ್ದೆವು.ಏನೊ ನಮ್ಮ ಪುಣ್ಯಕ್ಕೆ ಅವತ್ತು ಇಬ್ಬರಿಗೂ ಕೂರಲು ಸ್ಥಳ ಸಿಕ್ಕಿತ್ತು.ಮೆಜೆಸ್ಟಿಕಿಗೆ ತಲುಪಲು ಏನಿಲ್ಲ ಅಂದ್ರು ಮುಕ್ಕಾಲು ಘಂಟೆ ಬೆಕಿತ್ತು.ಇಬ್ಬರಲ್ಲೂ ಮುಗಿಯದ ಮಾತು ಕಥೆ.ಕಂಡಕ್ಟರ್ ಬಂದದ್ದು,ಟಿಕೆಟ್ ತೆಗೆದುಕೊಂಡದ್ದು, ಇವು ಯಾವುವು ನನ್ನ ಪರಿವೆಗೆ ಬರಲೇ ಇಲ್ಲ.ನಾನೆ ಪರ್ಸ್ ತೆಗೆದು ದುಡ್ಡು ಕೊಟ್ಟೆನಾದರೂ ಕೂಡಾ!!!!!ಮೆಜೆಸ್ಟಿಕ್ ಬಂದದ್ದು ಗೊತ್ತಾದದ್ದೇ ಬಸ್ ಪೂರಾ ಖಾಲಿಯಾದಾಗ!ಇಬ್ಬರು ಅವಸರವಸರವಾಗಿ ಇಳಿದು ತುಮಕೂರಿನ ಪ್ಲಾಟ್ ಫಾರ್ಮ್ ತಲುಪಿದೆವು.ನನ್ನ ಗೆಳತಿಗೆ ಕಾಫಿ ಅಭ್ಯಾಸ..ಅಲ್ಲ..ಹುಚ್ಚು..ದಿನಕ್ಕೆ ಐದು ಕಾಫಿಯಾದ್ರು ಕುಡೀತಾಳೆ.ಅಂತಹವಳು ಕಾಫಿ ಕುಡಿಯದೆ ತುಮಕೂರಿನ ಬಸ್ ಹೇಗೆ ತಾನೆ ಹತ್ತುತ್ತಾಳೆ?ಸರಿ ಅವಳು ಅಲ್ಲೆ ಇದ್ದ ಅಂಗಡಿಯಲ್ಲಿ ಕಾಫಿ ಕುಡಿದಳು.ನಾನು ದುಡ್ಡು ಕೊಡೋಣವೆಂದು ಪರ್ಸ್ಗಾಗಿ ಕೈ ಹಾಕಿದರೆ ಪರ್ಸೆ ಇಲ್ಲ!ನನಗೆ ಮೈಯೆಲ್ಲಾ ನಡುಕ,ಯಾಕೇಂದ್ರೆ ಅದರಲ್ಲಿ ನನ್ನ ದುಡ್ಡು ಹಾಗು ಕಾರ್ಡ್ಸುಗಳ ಜೊತೆಗೆ ನನ್ನ ಗೆಳತಿಯ ಅಕ್ಕನ ಡೆಬಿಟ್ ಕಾರ್ಡ್ ಸಹ ಇತ್ತು.ಇನ್ನು ಅವರ ಹತ್ರ ಬೈಗುಳ ಗ್ಯಾರಂಟಿ!ಅದನ್ನು ನೆನೆದೆ ಇಬ್ಬರು ಬೆವೆತ್ತಿದ್ದೆವು.ಆಗ ನಾನು ಸಂಕಟ ಬಂದಾಗ ವೆಂಕಟರಮಣ ಎಂದು ದೇವರಲ್ಲಿ ಮೊರೆಯಿಟ್ಟೆ.ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಹೋದ ಪರ್ಸು,ಸಮುದ್ರಕ್ಕೆ ಹಾಕಿದ ಉಪ್ಪು ಎರಡು ಒಂದೇ ಅಂತ ಗೊತ್ತಿದ್ದರೂ,ಒಂದು ಚಾನ್ಸ್ ನೋಡುವ ಅಂತ ನಾನು ಅವಳು, ಬಿ.ಎಂ.ಟಿ.ಸಿ ಸ್ಟಾಂಡಿನತ್ತ ಓಡಿದೆವು.ನಾವು ಬಂದಿದ್ದ ಬಸ್ ಅದಾಗಲೇ ಹೊರಟುಹೋಗಿತ್ತು.ಆ ಬಸ್ ಎಲ್ಲಿಗೆ ಹೋಗುತ್ತದೆ ಅಂತ ನಮಗೆ ಗೊತ್ತಿದ್ದ ಕಾರಣ,ನಾವು ಆಟೋ ಹಿಡಿದು ಬಸ್ಸನ್ನು ಹಿಂಬಾಲಿಸಲು ಹೋದೆವು.ನಮ್ಮ ಅದ್ರಿಷ್ಟಕ್ಕೆ ಬಸ್ಸೇನೊ ಸಿಕ್ಕಿತು ಅದರೆ, ಅದು ಮೆಜೆಸ್ಟಿಕಿಗೆ ವಾಪಸಾಗುತ್ತಿತ್ತು.ನಾವು ಅದರ ಹಿಂದೆಯೆ ಮೆಜೆಸ್ಟಿಕ್ ತಲುಪಿದೆವು.ಬಸ್ಸಿನಿಂದ ಇಳಿಯುತ್ತಿದ್ದ ಎಲ್ಲರನ್ನು ತಳ್ಳಿ, ಬಸ್ಸಿನ ಕಂಡಕ್ಟರ್ ಬಳಿ ತಲುಪಿದ ನಮ್ಮ ಸಾಹಸಕ್ಕೆ ನಮಗೆ ಖುಶಿ, ಹಾಗೆಯೆ ಹುಚ್ಚು ಪ್ರಯತ್ನಕ್ಕೆ ನಗು.ಹೀಗೆ ಮೇಲೆ ಹತ್ತಿದ ನಮ್ಮನ್ನು,ರೇಗದೆ ನಗುತ್ತ ಸ್ವಾಗತಿಸಿದ ಕಂಡಕ್ಟರನ್ನು ನಾವು,ಪರ್ಸ್ ಏನಾದರು ಸಿಕ್ತಾ? ಎಂದು ವಿಚಾರಿಸಿದೆವು.'ಇಲ್ಲ ಹೋಗ್ರಿ' ಅನ್ನುವ ಉತ್ತರಕ್ಕಾಗಿ ಎದುರು ನೋದುತ್ತಿದ್ದ ನಮಗೆ, ಆತ ಯಾವ ಬಣ್ಣದ್ದು ಎಂದಾಗ, ಪರ್ಸ್ ಸಿಕ್ಕಷ್ಟೆ ಖುಶಿ!ಅದರ ಬಣ್ಣ, ಇದ್ದ ದುಡ್ಡು, ಎಲ್ಲವನ್ನು ವಿಚಾರಿಸಿ,ನನ್ನ ಕೈಗೆ ಪರ್ಸ್ ಇಟ್ಟಾಗ, ಆತ ನಾವು ಪ್ರಾರ್ಥಿಸಿದ್ದ ದೇವರಿಗಿಂತಲೂ ಎತ್ತರದಲ್ಲಿ ನಗುತ್ತಲಿದ್ದ.

Rating
No votes yet

Comments