ಸಂತೋಷ ಆಹಾ.. ಆಹಾ..

ಸಂತೋಷ ಆಹಾ.. ಆಹಾ..

ಈ ದಿನನಿತ್ಯದ ಜಂಜಾಟದಲ್ಲಿ ಸಂತೋಷದ ಸಿಂಚನವೇ ಇಲ್ಲವಾಗಿದೆಯೆನಿಸಿ ಅದನ್ನು ಸಂಪಾದಿಸುವ ಬಗೆ ಹುಡುಕತೊಡಗಿದೆ. ಆದರೆ ಸಂತೋಷವೆಂಬುದು ಒಂದು ಮನಸ್ಸಿನ ಸ್ಥಿತಿಯಲ್ಲವೆ? ಅದನ್ನು ದುಡ್ಡಿಗೆ ಕೊಳ್ಳಲಾದೀತೇ? ಹೌದು, ಎಂದಿತು ನಾ ಓದಿದ ಒಂದು ಲೇಖನ. ಈ ಬ್ರಾಂಡ್ ನೇಮ್ ವಸ್ತುಗಳ ಹಿಂದೆ ಬಿದ್ದಿರುವ ಜನಾಂಗಕ್ಕೆ "Gucci" ಪರ್ಸ್ ಹಿಡಿದು ಹೊರಟರೆ ಸಿಗುವ ಸುಖ ಯಾವುದೋ ನೇಮ್ಲೆಸ್ ಬ್ರಾಂಡ್ನಿಂದ ಸಿಗೊಲ್ಲವಂತೆ. ಇದು ಕ್ಷಣಿಕ ಸಂತೋಷವೇ ಇರಬಹುದು, ಆದರೆ ದುಡ್ಡಿಗಂತೂ ಸಿಗುತ್ತೆ.

ಮತ್ತೆ ಇನ್ನೊಂದು ಬರಹದ ಪ್ರಕಾರ ನಮ್ಮ ಸಂತೋಷ ನಮ್ಮ ಸ್ನೇಹಿತರ ಮತ್ತು ಸಂಬಂಧಿಕರ ಸ್ಥಿತಿಗತಿಯನ್ನು ಸಹ ಅವಲಂಬಿಸಿರುತ್ತದಂತೆ. ಅಂದರೆ, ನಮ್ಮ ಮನೆಯಲ್ಲಿ ಟಿವಿ, ಫ್ರಿಡ್ಜ್ ಇಲ್ಲದಿದ್ದರೆ, ನಮ್ಮ ನೆರೆಹೊರೆ ಮತ್ತು ಹತ್ತಿರದ ನೆಂಟರ ಮನೆಯಲ್ಲೂ ಇದೇ ರೀತಿ ಇದ್ದರೆ ನಾವು ಖುಷಿಯಾಗಿರುತ್ತೇವೆ. ಅವರ ಮನೆಯಲ್ಲೇನಾದರೂ ಬಿಗ್ ಸ್ಕ್ರೀನ್ ಟೀವಿ ತಂದರೆ, ಮುಗಿಯಿತು ಕತೆ, ಬಿತ್ತು ನಮ್ಮ ಸಂತೋಷಕ್ಕೆ ಕುತ್ತು :-) ಹಾಗಾದರೆ, ಟಾಟ-ಬಿರ್ಲಾ ಮನೆಯವರು ಅಪ್ಪಿ ತಪ್ಪಿ ನನಗೆ "ಹಾಯ್" ಅಂದರೂ ನಾನು ಮಾತ್ರ ನನ್ನ ಸಂತೋಷ ಕಾಪಾಡಲು ಅವರಿಗೆ "ಟಾಟಾ-ಬೈಬೈ" ಅನ್ನಬೇಕಾಗುತ್ತೆ ನೋಡಿ! (ದುಂಡಿರಾಜ್ ಅವರ ಕ್ಷಮೆ ಬೇಡಿ ಅವರ ಜೋಕ್ ತಿರುಚುತ್ತಿದ್ದೇನೆ ;-) )

ನಿಮಗೇನಾದರೂ ಈ ಜಗತ್ತಿನಲ್ಲಿ ಸಂತೋಷದ ಸಾಗರದಲ್ಲಿ ತೇಲುತ್ತಿರುವ ಜನ ಯಾರು ಎಂಬ ಕುತೂಹಲವೇ? ಸರ್ವೆ ಮಾಡಿದವರು ಡೆನ್ಮಾರ್ಕಿನ ಜನ ಎಂದು ಖಚಿತಪಡಿಸಿದ್ದಾರೆ. ಡೇನಿಶ್ ಜನರು ಅಲ್ಪತೃಪ್ತರಂತೆ. ಎಲ್ಲರೂ ಹೆಚ್ಚು ಕಮ್ಮಿ ಒಂದೇ ರೀತಿಯ ಬದುಕು ಆರಿಸಿಕೊಂಡು, ಯಾವ ಅಪೇಕ್ಷೆಯೂ ಇಲ್ಲದೆ ಅದರಲ್ಲೇ ಜೀವಮಾನ ಕಳೆಯುತ್ತಾರಂತೆ. ಹುಂ...ಮತ್ತೆ ಹಾಗಾದರೆ ಎಲ್ಲರಿಗಿಂತಲೂ ಹೆಚ್ಚಿನದೇನಾದರೂ ಸಾಧಿಸಬೇಕು, ಈ ಸಮಾಜವನ್ನು ಉದ್ಧಾರ ಮಾಡಬೇಕು ಎನ್ನುವ ನನ್ನ ಮಹೋತ್ತರ ಆಸೆಗಳಿಗೆ ಇಂದೇ ತಿಲಾಂಜಲಿ ಕೊಡಬೇಕೇನೋ :-)

ಸಂತೋಷದ ಹುಡುಕಾಟದಲ್ಲಿ ನನಗೆ ಅರಿವಾಗಿದ್ದು, ನಾನು ಸಂತೋಷವಾಗಿರಬೇಕಾದರೆ ನನ್ನ ಬಂಧು, ಬಳಗ, ಸ್ನೇಹಿತರು ಯಾರೂ ನನಗಿಂತ ಹೆಚ್ಚಿನ ಅಭಿವೃದ್ಧಿಗೆ ಬರದಿರಲಿ ಎಂದು ಹಾರೈಸಬೇಕು. ಜೊತೆಗೆ, ನಾನು ಯಾವುದೇ ಉನ್ನತ ಗುರಿಗಳನ್ನೂ ಹೊಂದದೆ ಬರಿಯ ಉ.ಮ.ಹೆ. ಯ ಜೀವನವನ್ನು ಸ್ವಾಗತಿಸಬೇಕು! ಎಲ್ಲರೂ ಹೀಗೇ ಯೋಚಿಸಿದರೆ, ಸ್ವಸಂತೋಷಕ್ಕೋಸ್ಕರ ಸೋಮಾರಿಗಳ ಸಾಮ್ರಾಜ್ಯವನ್ನು ಸ್ಥಾಪಿಸಬೇಕಾಗುತ್ತೆ ಅಷ್ಟೆ :-)

ಮತ್ತೆ ಆಸೆಯೆ ದುಃಖಕ್ಕೆ ಮೂಲ ಅನ್ನುತ್ತಾರಲ್ಲ ವಿರಾಗಿಗಳು? ಆದರೆ, ಆಸೆಯನ್ನು ತ್ಯಜಿಸಿದರೆ ಸೃಷ್ಟಿಯೇ ನಿಂತುಹೋಗುವುದಿಲ್ಲವೆ? ಮಾನವಕುಲವೇ ನಾಶವಾಗುವುದಿಲ್ಲವೇ? ಇದೆಲ್ಲ ಯೋಚಿಸಿದರೆ ಕೊನೆಗನ್ನ್ನಿಸುವುದು, ಇದು ಒಂಥರ catch-22 ತರಹ. ಪೂರ್ಣ ಸಂತೃಪ್ತರಾದರೆ, ನಿಂತಲ್ಲೆ ನಿಲ್ಲುತ್ತೇವೆ, ಪ್ರಗತಿ ಸಾಧ್ಯವಿಲ್ಲ. ಆದರೆ ಬೇಕು ಎನ್ನುವ ತನಕ ದುಃಖ ತಪ್ಪಿದ್ದಲ್ಲ, ಸಂತಸ ಸಿಕ್ಕುವುದಿಲ್ಲ. ತಾವರೆಯ ಎಲೆಯ ಮೇಲಿನ ನೀರ ಹನಿಯಂತಿರಬೇಕು ಅಂತ ಮಾತ್ರ ಹೇಳಬೇಡಿ, ಪ್ಲೀಸ್! What a boring way to live! ಸುಖದಲ್ಲೂ, ದುಃಖದಲ್ಲೂ, ತಟಸ್ಥವಾಗಿ ಕಲ್ಲಿನಂತಿರಬೇಕೆ?

ಅಂತೂ ನನ್ನ ಸಂತೋಷ ಹೇಗೆ ಪಡೆಯಬೇಕೆಂಬ ಪ್ರಶ್ನೆಗೆ, ಉತ್ತರಗಳಿಗಿಂತ ಮರುಪ್ರಶ್ನೆಗಳೇ ಹೆಚ್ಚಾಗಿ ಕಾಣುತ್ತಿವೆ. ಈ ದೇವರು ವಿಚಾರ ಮಾಡಲು ತಲೆಗೊಂದಿಷ್ಟು ಬುದ್ಧಿ ಸುರಿದು ನಮ್ಮ ಜೀವನವೇ ಹಾಳು ಮಾಡ್ಬಿಟ್ಟ ಅನ್ಸುತ್ತೆ! :-) ಒಟ್ಟಿನಲ್ಲಿ ಪುಟ್ಟ ಮಕ್ಕಳಂತೆ, ನಗು ಬಂದಾಗ ನಕ್ಕು ಬಿಟ್ಟು, ಅಳು ಬಂದಾಗ ಅತ್ತುಬಿಡೋದೆ ಒಳಿತು. ಏನೇನೋ ಮಾಡಿ, ಕಷ್ಟಪಟ್ಟು ಸಂತೋಷದ ಭಾವನೆ ಮನಸ್ಸಿನಲ್ಲಿ ಬಲವಂತವಾಗಿ ಬರಿಸಿಕೊಳ್ಳುವುದು ಹುಚ್ಚುತನ ಅನ್ನಿಸುತ್ತೆ. ಅದು ಮನಸ್ಸಿಗೆ ಬರಬೇಕಾದರೆ ಬರುತ್ತೆ, ಒಂದು ಕ್ಷಣ ನಿಲ್ಲುತ್ತೆ, ಆಗ ಅತ್ಯುತ್ತಮವಾಗಿ ಅದನ್ನು ಅನುಭವಿಸಿದರೆ ಸಾಕು. ಅಯ್ಯೋ, ಇದಲ್ಲ ಆ ಪರಮಾನಂದ, ಇನ್ನೂ ಏನೋ ಸಾಧನೆ ಮಾಡಿದರೆ ಮಾತ್ರ ಸಿಗುತ್ತಂತೆ, ಅದು ಇನ್ನೂ ಖುಷಿ ಕೊಡುತ್ತಂತೆ ಅಂತ ಕಾದು ಕುಳಿತು, ಈ ಸಂತೋಷದ ಕ್ಷಣವನ್ನೂ ಅನುಭವಿಸದೆ ಬಿಡುತ್ತೇವಲ್ಲ, ಅದು ಬಹುಶಃ ತಪ್ಪು. ಆ ಒಂದು ಸಂತೋಷದ ಕ್ಷಣ ಈ ಬರಹ ಬರೆಯುತ್ತಿರುವಾಗಲೇ ನನಗೆ ಏಕಿರಬಾರದು, ಈ ಬರಹ ಓದುತ್ತಿರುವಾಗಲೇ ನಿಮಗೇಕಿರಬಾರದು?

Rating
No votes yet

Comments