ಅಜ್ಜಿಯ ಮನೆ
I recall the memories in tranquility... ಯಾರು ಈ ಮಾತನ್ನು ಹೇಳಿದ್ದರೋ ನೆನೆಪಿಗೆ ಬರುತ್ತಿಲ್ಲ.. ಆದರೆ, ನನ್ನ ಮಟ್ಟಿಗಂತೂ ಇದು ಖಂಡಿತ ಸತ್ಯ. ಮನಸ್ಸು ಪ್ರಶಾಂತತೆಯ ಮಹಾಸಾಗರದಲ್ಲಿ ತೇಲುತ್ತಿದ್ದಾಗ, ನೆನೆಪಿನ ಮಹಾಗರ್ಭ ತಿಮಿರದಿಂದ ತೇಜಸ್ಸಿನೆಡೆಗೆ ಹಾರಿ ಬರುತ್ತದೆ. ಹಾಗೆ ಹಾರಿಬಂದ ನೆನಪಿನಿಂದ ಕೆಲ ತುಣುಕುಗಳನ್ನು ಹೆಕ್ಕಿ ಕೊಡುತ್ತಿದ್ದೇನೆ. ಅಜ್ಜಿಯ ಮನೆ ಎಂಬ ಮಾನವ ಸಂಭಂದಗಳ ಪುರಾತನ ಯುನಿವೆರ್ಸಿಟಿಯನ್ನ ಇಂತಹ ಒಂದು ಪುಟ್ಟ ಲೇಖನದಲ್ಲಿ ಹಿಡಿದಿಡುವುದು ಸಾಧವಿಲ್ಲ.. ಇದು ಎಲ್ಲ ನೆನಪುಗಳ ಒಂದು ತುಣುಕು ಮಾತ್ರ.. ಮಿಕ್ಕವುಗಳನ್ನು ಮುಂದೆ ಎಂದಾದರೂ ಬರೆಯುತ್ತೇನೆ.. ಓದಿಕೊಳ್ಳಿ..
ನಾನು ಪ್ರಸಾದಿ, ನಂಜುಂಡಿ, ದೊಡ್ಡಮ್ಮ ಚಿಕ್ಕಮ್ಮನ ಮಕ್ಕಳು. ಒಂದೇ ಓರಿಗೆಯವರು. ರಜದಲ್ಲಿ ಎಲ್ಲರೂ ಸೇರುತ್ತಿದ್ದುದು ಅಜ್ಜಿಯ ಮನೆ ಭೀಮಸಂದ್ರದಲ್ಲಿ. ಆ ಮನೆಯೋ, ಹಿಂದಿನಕಾಲದ ಮನೆಗಳಂತೆ ಒಂದು ಬೃಹದಾಕಾರದ ಮನೆ. ಮನೆಗೆ ಒಂದು ದೊಡ್ಡ ಹಿತ್ತಲು. ಅಲ್ಲಿ ಎರಡು ಕೊಟ್ಟಿಗೆ ಮನೆಗಳು. ಒಂದರಲ್ಲಿ ಯಾರೋ ಯಾವುದೊ ಕಾಲದಲ್ಲಿ ಸಂಗ್ರಹಿಸಿದ್ದ ವಸ್ತುಗಳು, ಹಳೆಯ ಮರ ಮುಟ್ಟುಗಳು ಇತ್ಯಾದಿಗಳನ್ನ ಒಟ್ಟಿಇಟ್ಟಿದ್ದರು. ಮತ್ತೊಂದರಲ್ಲಿ ಎಮ್ಮೆ ಕಟ್ಟುತ್ತಿದ್ದರು. ಆ ಕೊಟ್ಟಿಗೆಯ ಎದುರಿಗೆ ಇದ್ದ ಮುಸುರೆ ಬಾನಿ, ಮನೆಯಲ್ಲಿ ಮಿಕ್ಕದ ಅನ್ನ, ಸಾರು, ಹುಳಿ ಮಜ್ಜಿಗೆ ಇತ್ಯಾದವುಗಳನ್ನ ರಾತ್ರಿಯ ಮಟ್ಟಿಗೆ ಸಂಗ್ರಹಿಸಿ ಇಟ್ಟುಕೊಂಡಿರುತ್ತಿತ್ತು. ಬೆಳಿಗ್ಗೆ ಯಾರದರೊಬ್ಬರು ಅದಕ್ಕೆ ನೀರು ಹಾಕಿ, ಬೂಸಾ ಕಲಸುತ್ತಿದ್ದರು. ಮಕ್ಕಳಾದ ನಮಗೆ ಎಮ್ಮೆಯ ಹಗ್ಗ ಹಿಡಿದುಕೊಂಡು, ಮುಸುರೆ ತಿರುಗಿಸುತ್ತಾ, ಎಮ್ಮೆ ತನ್ನ ಪೂರ್ತಿ ಮೂತಿಯನ್ನು ಬಾನಿಯೊಳಕ್ಕೆ ಅದ್ದಿ 'ಸೋರ್ರರ್ರ್ರ್' ಎಂದು ಕುಡಿಯುವುದನ್ನು ನೋಡುವುದೇ ಸಂತೋಷದ ಕೆಲಸ. ಯಾರು ಎಮ್ಮೆಯ ಹಗ್ಗ ಹಿಡಿಯುತ್ತಾರೆ, ಯಾರು ಕಡ್ಡಿ ತಿರುಗಿಸುತ್ತಾರೆ ಎಂಬುದಕ್ಕೆ ನಮ್ಮ ನಡುವೆಯೇ ಪೈಪೋಟಿ.
ಕೊಟ್ಟಿಗೆಯ ಮುಂದೆ ಬಟ್ಟೆ ಒಗೆಯಲು ಒಂದು ಬಂಡೆ ಇತ್ತು. ಅದರ ಪಕ್ಕದಲ್ಲಿ ನೀರು ಸಂಗ್ರಹಿಸಲು ಒಂದು ತೊಟ್ಟಿ. ಆಗಿನ ಕಾಲದ ವಾಶಿಂಗ್ ಮೆಷಿನ್ ಗಳಾದ ಅಮ್ಮ, ದೊಡ್ಡಮ್ಮ, ಚಿಕ್ಕಮ್ಮಗಳೆಲ್ಲ ಇಲ್ಲಿ ಕೂತು ಬಟ್ಟೆ ಒಗೆದು ಬೆವರು ಸುರಿಸಿದವರೇ.. ಇದೆ ಬಂಡೆಯ ಸ್ವಲ್ಪ ಮುಂದೆ ಮನೆಯ ಮೇಲಕ್ಕೆ ಹಬ್ಬಿಸಿರುವ ನಿತ್ಯ ಮಲ್ಲಿಗೆಯ ಗಿಡ. ದಿನಾ ಬೆಳಿಗ್ಗೆ ಎದ್ದು ಒಂದು ಏಣಿ ಹಾಕಿಕೊಂಡು ನಾವೆಲ್ಲಾ ಮೇಲೆ ಹತ್ತಿ ಹೂ ಕೊಯ್ಯುತ್ತಿದ್ದೆವು. ಬುಟ್ಟಿಯ ತುಂಬಾ ಹೂ ತೆಗೆದುಕೊಂಡು ಹೋದರೆ ಅಜ್ಜಿಯ ಮುಖದಲ್ಲಿ ಏನೋ ಖುಷಿ. ಹೂ ತಂದು ಕೊಟ್ಟರೆ ಉಳಿದಿದ್ದ ರಾಮ ಪ್ರಸಾದವನ್ನೊ ಇಲ್ಲ ಬೆಲ್ಲದುoಡೆಯನ್ನೊ ಕೊಟ್ಟು ಕಳುಹಿಸುತ್ತಿದ್ದರು. ಅದೆ ನಮಗೆ performance linked bonus ತರಹ ಕೆಲಸ ಮಾಡುತ್ತಿತ್ತು.
ಹಿತ್ತಲಿನ ಇನ್ನೊಂದು ಕಡೆ ಸ್ವಲ್ಪ ಜಾಗದಲ್ಲಿ ಮಾವ ಕೈ ಕೃಷಿ ಕೈಗೊಂಡಿದ್ದರು. ಅಲ್ಲಿ ಯಾವುದಾದರೂ ಒಂದು ತರಕಾರಿ ಅಥವ ಸೊಪ್ಪು ಬೆಳೆಯುತ್ತಿದ್ದರು. ಅದರ ಪಕ್ಕದಲ್ಲಿ ಒಂದು ದಾಳಿಂಬೆ ಗಿಡ. ಅದು ನಮಗಿಂತ ಹೆಚ್ಚಾಗಿ ಕೋತಿ ಅಥವಾ ಪಕ್ಷಿಗಳಿಗೆ ಹೆಚ್ಚು ಆಪ್ತವಾಗಿತ್ತು. ಆದರೆ ನಾವೇನು ಕೋತಿಗಿಂತ ಕಡಿಮೆ ಇರಲಿಲ್ಲ. ಹೀಚೋ, ಕಾಯೋ, ಕಣ್ಣಿಗೆ ಬಿದ್ದ ತಕ್ಷಣ ಕಿತ್ತು ರುಚಿನೋಡದೆ ಬಿಡುತ್ತಿರಲಿಲ್ಲ.ಅಲ್ಲಿಂದಲೇ ಮನೆ ಮೇಲಕ್ಕೆ ಹತ್ತಲು ಅನುಕೂಲವಾಗುವಂತೆ ಕಲ್ಲುಗಳನ್ನು ಬಿಟ್ಟು ಪೌಳಿ ಕಟ್ಟಿದ್ದರು. ಅದನ್ನು ಹತ್ತಿ ಮೇಲಕ್ಕೆ ಹೋದರೆ ಮಣ್ಣಿನ ಮಾಳಿಗೆ. ಅದಕ್ಕೆ ಆಗಾಗ maintenance ಮಾಡಬೇಕಾಗಿ ಬರುತ್ತಿತ್ತು. ಅಪ್ಪಿಮಾವನ ನೇತೃತ್ವದಲ್ಲಿ ನಾವೆಲ್ಲ ಮೇಲೆ ಹತ್ತಿ ಅಲ್ಲಿ ಬೆಳೆದಿದ್ದ ಹುಲ್ಲನ್ನು ಕಿತ್ತು, ಒಳಗೆ ಸೋರುತ್ತಿರುವ ಜಾಗದಲ್ಲಿ ಸ್ವಲ್ಪ ಮಣ್ಣು ಹಾಕಿ ಮಟ್ಟಸ ಮಾಡುತ್ತಿದ್ದೆವು.ನಾವು ಒಬ್ಬರೇ ಮೇಲಕ್ಕೆ ಹತ್ತುವುದಕ್ಕೆ ಅಪ್ಪಣೆ ಇರಲಿಲ್ಲ. ಆದರೆ ಅಪ್ಪಣೆಗೆ ಕಾಯುವ ವಯಸ್ಸೇ ಅದು? ಯಾರಿಗೂ ಕಾಣದಂತೆ ಮೇಲಕ್ಕೆ ಹತ್ತಿ, ಹಿಂದಿದ್ದ ಬೇವಿನಮರದ ನೆರಳಲ್ಲಿ ಆಟವಾಡುತ್ತ ಕೂರುತ್ತಿದ್ದೆವು. ಅದೆ ಬೇವಿನ ಮರವಾದ ತೊಗಟೆಯನ್ನು ಕೆತ್ತಿ, ಅದರಿಂದ ಒಸರುತ್ತಿದ್ದ ಅಂಟನ್ನು ಒಂದು ಬಾಟಲಿಯಲ್ಲಿ ಸಂಗ್ರಹಿಸುವುದು ನಮ್ಮ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಬೇವಿನ ಮರವೇ ಕಾಣೆಯಾಗುತ್ತಿರುವ ಇಂದಿನ ದಿನದಲ್ಲಿ, ಅಂಟು ಎಂದರೆ Fevicol ಆಗಿರುವ ಈ ದಿನಗಳಲ್ಲಿ, ಬೇವಿನ ಮರದಿಂದ ಗೋಂದು ಒಸರುತ್ತದೆ ಎಂಬುದೇ ಇಂದಿನ ಮಕ್ಕಳಿಗೆ ಒಂದು ವಿಚಿತ್ರ ಸಂಗತಿಯಾದರೆ ಆಶ್ಚರ್ಯವೆನಿಲ್ಲ . ಇದೆ ಗೋಂದು ಅಂದಿನ ಮುಖ್ಯ ಸಂಪರ್ಕ ಸಾಧನವಾಗಿದ್ದ ಅಂತರ್ದೇಶಿಯ ಪತ್ರಕ್ಕೆ ಹಚ್ಚಿ ಅಂಟಿಸಲು ಉಪಯೋಗವಾಗುತ್ತಿತ್ತು. ನಾವು ಹುಣಸೇಘಟ್ಟದಲ್ಲಿದ್ದಾಗ ಭೀಮಸಂದ್ರದಿಂದ ಬರುತ್ತಿದ್ದ ಪತ್ರಗಳನ್ನು ಒಡೆಯುವ ಮೊದಲು ನಾನು ಆ ಗೋಂದಿನ ಸುವಾಸನೆಗಾಗಿ ಪತ್ರವನ್ನು ಆಘ್ರಾಣಿಸುತ್ತಿದ್ದೆ. ಆ ಮರದ ಅಂಟಿನ ಘಮ ನನ್ನ ನೆನಪಿನಲ್ಲಿ ಚಿರಶಾಶ್ವತವಾಗಿ ಮುದ್ರೆಯೊತ್ತಿದೆ.
ಇನ್ನು ಮನೆಯ ಒಳಗೆ ಬಾಗಿಲು ತೆರೆದ ತಕ್ಷಣ ದೊಡ್ಡದಾದ ವರಾಂಡ. ಬಲಕ್ಕೆ ಬಚ್ಚಲು ಮನೆ, ಅದರಿಂದ ಹಿತ್ತಲಿಗೆ ಬಾಗಿಲು, ಎಡಕ್ಕೆ ಒಂದು ಚಿಕ್ಕ ಕೋಣೆ. ಯಾವ ಕಾರಣಕ್ಕೋ ಏನೋ ಗೊತ್ತಿಲ್ಲ, ಅದಕ್ಕಿಡಿಸಿದ್ದ ಬಾಗಿಲು ನಾಲ್ಕೂವರೆ ಅಡಿಯದ್ದಾಗಿತ್ತು. ಚಿಕ್ಕವನಾಗಿದ್ದ ಅದರಲ್ಲಿ ಸಲೀಸಾಗಿ ಓಡಾಡುತ್ತಿದ್ದ ನಾನು, ಮುಂದೆ ದೊಡ್ದವನಾದಮೇಲೆ ಅನೇಕ ಬಾರಿ ಅದರ ಮೇಲ್ಕಟ್ಟಿಗೆ ತಲೆ ಹೊಡೆದುಕೊಂಡಿದ್ದೇನೆ. ಅದು ನಮ್ಮ ಕಾಂತಮಾವನ ಓದುವ ಕೊಠಡಿ. ಆದರೆ ಅದರಲ್ಲಿ ಅವರಿಗಿಂತ ಹೆಚ್ಚಾಗಿ ತಿಂಗಳಿಗೆ ಮೂರುದಿನದಂತೆ ಚಿಕ್ಕಮ್ಮ ದೊಡ್ದಮ್ಮಗಳು ಧಾಳಿಇಟ್ಟು ಕಾಂತಮಾವನನ್ನು ಅಲ್ಲಿಂದ ಹೊರದಬ್ಬುತ್ತಿದ್ದರು. ಮಹರಾಯ ಗೊಣಗದೆ ಪುಸ್ತಕಗಳೊಂದಿಗೆ ಬಂದು ಹಾಲ್ ನಲ್ಲಿ ಬೇರೂರುತ್ತಿದ್ದರು. ನಾವು ಚಿಕ್ಕವರಾಗಿದ್ದಾಗ ನಮಗೆ ಇದೆ ರೂಂ ನಲ್ಲಿ ಅನೇಕ ಬಾರಿ ಉಪದೇಶಗಳು ನಡೆದಿವೆ. ಕೆಲಬಾರಿ ಬರಿಯ ಮಾತಿನಲ್ಲಿ, ಕೆಲಬಾರಿ ಒಂದು ಸಣ್ಣ ಕಡ್ಡಿಯ ಜೊತೆಗೆ. ಇದ್ದುದರಲ್ಲೇ ಪ್ರಸಾದಿಯ ಬಾಯಿ ಸ್ವಲ್ಪ ಜಾಸ್ತಿ.. ಬೆಂಗಳೂರಿನಲ್ಲಿ ಓಡುತ್ತಿದ್ದವ ಬೇರೆ.. ನಮ್ಮ ಗುಂಪಿನ Rebel star ಅವನೇ. ಈ ಎಲ್ಲ ಉಪದೇಶಗಳಿಗೂ ರೆಬೆಲ್ ಅಂತ್ಯ ಕೊಟ್ಟು ರೂಮಿನಿಂದ ಹೊರಬರುತ್ತಿದ್ದ. ಅವನ ಬಾಲವಾಗಿ ನಾವೂ ಹೊರಬರುತ್ತಿದ್ದೆವು. ಆದರೆ ನಂಜುಂಡಿಗೆ ಅಪ್ಪಿಮಾವನ ಧ್ವನಿ ಕೇಳಿ ನಡುಕ ಬರುತ್ತಿತ್ತು. ಅವರು ಏನು ಹೇಳಿದರೆ ಅದನ್ನು ಚಾಚೂ ತಪ್ಪದೆ ಕೇಳುತ್ತಿದ್ದ. ನನ್ನದು ಯಥಾಪ್ರಕಾರ ಎಲ್ಲೆಡೆಯೂ ಸಲ್ಲುವ ಮನೋಭಾವ.. ಅಲ್ಲಿಗೂ ಸೈ, ಇಲ್ಲಿಗೂ ಜೈ...
ವರಾಂಡ ದಾಟಿ ಮುಂದೆ ಹೋದರೆ ಒಂದು ವಿಶಾಲ ವಾದ ಹಾಲ್. ಮಾಳಿಗೆಯ ಭಾರ ತಡೆಯಲು ತೊಲೆಗೆ ಆಧಾರವಾಗಿ ನಿಲ್ಲಿಸಿದ್ದ ಎರಡು ಬೃಹತ್ ಕಂಭಗಳು. ಈ ಕಲ್ಲಿನ ಕಂಭಗಳ ಮಧ್ಯೆ ಎರಡು ಹಾಸಿಗೆ ಹಾಸುವಷ್ಟು ಜಾಗವಿತ್ತು. ಆ ಎರಡು ಹಾಸಿಗೆಯ ಮೇಲೆ ನಾನು, ನಂಜುಂಡಿ ಪ್ರಸಾದಿ ಮಲಗುತ್ತಿದ್ದೆವು. ನಂಜುಂಡಿಗೆ ಸಂಜೆ ನಿದ್ದೆ ಬೇಗ ಬಂದುಬಿಡುತ್ತಿತ್ತು. ೭.೩೦ - ೮.೦೦ ಕ್ಕೆಲ್ಲ ಎಲ್ಲೇ ಇರಲಿ ಹೇಗೆ ಇರಲಿ ಮಲಗಿಬಿಡುತ್ತಿದ್ದ. ಅವನು ಬೇರು ಬಿಟ್ಟ ಸ್ಥಳದಿಂದ ಎಬ್ಬಿಸಿ ಯಾರಾದರು ಹಾಸಿಗೆಯ ಮೇಲೆ ಮಲಗಿಸುತ್ತಿದ್ದರು. ಆ ಕಡೆಗೆ ನಾನು, ಈ ಕಡೆಗೆ ಪ್ರಸಾದಿ. ಆದರೆ ಈ ಮಹಾಶಯ ಬೆಳೆಗ್ಗೆ ೫.೦೦ - ೫.೩೦ ಕ್ಕೆಲ್ಲ ಎದ್ದು ಬಿಡುತಿದ್ದ. ಮಾಡಲು ಇನ್ನೇನು ಕೆಲಸ? ನಮ್ಮ ಕಿವಿಯಲ್ಲಿ ಬಂದು "ಆಜು ಗುಜು ಗುಜು....ಆಜು ಗುಜು ಗುಜು....ಆಜು ಗುಜು ಗುಜು..." ಎಂದೆನನ್ನೋ ಹೇಳಿ, ಹೊದ್ದಿಗೆ ಎಳೆದು ನಮ್ಮನ್ನು ಗೋಳು ಹೊಯ್ದುಕೊಳ್ಳುತ್ತಿದ್ದ. ಏನೋ ಒಂದು ಕಪಿ ಚೇಷ್ಟೆ ಮಾಡಿ ನಮ್ಮಿಂದ ಬೈಸಿಕೊಳ್ಳುತ್ತಿದ್ದ...
ಆಗ ಶಂಕರ್ ನಾಗ್ ಚಿತ್ರಗಳ ಕಾಲ. ಎಲ್ಲ ಯುವಕರೂ ಶಂಕರ್ ನಾಗ್ ರಂತೆ ಕರಾಟೆ ಕಿಂಗ್ ಗಳಾಗಬೇಕು ಎಂದು ಆಶಿಸುತ್ತಿದ್ದ ಕಾಲ. ನಮ್ಮ ಮಾವ ಏನೂ ಕಡಿಮೆ ಇಲ್ಲ.. ಮನೆಯಲ್ಲೇ ಕರಾಟೆ ಮಾಡಲು ಹೋಗಿ, ಕಂಭಕ್ಕೆ ಒದ್ದು ಕಿರು ಬೆರಳಿಗೆ ಅಸಾಧ್ಯವಾಗಿ ಪೆಟ್ಟುಮಾಡಿಕೊಂಡು ಕೆಲ ಕಾಲ ನರಳಿದ್ದು ನೆನಪಿದೆ..
ಹಾಲ್ ನ ಎಡ ಹಾಗು ಬಲ ತುದಿಯಲ್ಲಿ ಒಂದೊಂದು ಕೋಣೆಗಳು. ಎಡಬದಿಯ ಕೋಣೆ ಬಟ್ಟೆ ಬದಲಾಯಿಸಲು ಐರನ್ ಮಾಡಿದ ಬಟ್ಟೆ ಇಡಲು ಬಳಸುತ್ತಿದ್ದ ಕೋಣೆ. ಅದರಲ್ಲಿ ಒಂದು ಹಳೆಯ ಕಾಲದ ವಾಲ್ವ್ ರೇಡಿಯೋ ಇಟ್ಟು. ಸಿಗ್ನಲ್ ಗಾಗಿ ಮೇಲೆ ಒಂದು ಸೊಳ್ಳೆಪರದೆಯ ರೀತಿಯ ಆಂಟೆನಾಕ್ಕೆ ಒಂದು ವೈರ್ ಸಿಕ್ಕಿಸಲಾಗಿತ್ತು. ಇದರಲ್ಲೇ ನಾವೂ ಎಲ್ಲ ಚಿತ್ರಗೀತೆಗಳನ್ನೂ, ವಾರ್ತೆಗಳನ್ನೂ ಹಾಗು ಅರ್ಥವೆ ಆಗದಿದ್ದ ಕಾಮೆಂಟ್ರಿಗಳನ್ನು ಕೇಳುತ್ತಿದ್ದಿದು. ಆ ರೇಡಿಯೋ ಹಾಕಿ, ಅದರಲ್ಲಿರುವ ವ್ಯಾಕ್ಯೂಂ ಟ್ಯೂಬ್ ಕಾದು ಕಾಮೆಂಟ್ರಿ ಬರುವ ಹೊತ್ತಿಗೆ, ಭಾರತದ ಮೂರು ವಿಕೆಟ್ ಉದುರಿರುತ್ತಿತ್ತು!! ಕಾಮೆಂಟ್ರಿಕೇಳುವಾಗ ನಮಗೆ ಗೊತ್ತಗುತ್ತಿದ್ದಿದು ಇಷ್ಟೆ... ೧. ಕಾಮೆಂಟ್ರಿ ಕೇಳಬೇಕಾದರೆ ಗಲಾಟೆ ಮಾಡಬಾರದು ೨. ಕಾಂತಮಾವ 'ಹೋ' ಎಂದಾಗ ನಾವೂ ಚಪ್ಪಾಳೆ ತಟ್ಟಬೇಕು ೩. ಅವರು ಅಯ್ಯೋ ಅಂತ ಹಣೆ ಚೆಚ್ಚಿಕೊಂಡಾಗ, ವಿಕೆಟ್ ಬಿತ್ತು ಅಂತಲೋ, ಕ್ಯಾಚ್ ಬಿಟ್ಟ ಅಂತಲೋ ತಿಳಿದುಕೊಳ್ಳಬೇಕು. ಇಂದಿನ 3D TV ಯುಗದಲ್ಲಿ ಇದೆಲ್ಲವೂ ಯಾವುದೊ ಶತಮಾನದ ಪಳೆಯುಳಿಕೆಗಳಂತೆ ಕಂಡರೆ ಆಶ್ಚರ್ಯವಿಲ್ಲ.
ಬಲ ಬದಿಯ ಕೋಣೆಯಲ್ಲಿ ಎಲ್ಲಾ ಅಡುಗೆಗೆ ಬೇಕಾದ ಪದಾರ್ಥಗಳನ್ನು ಇದುವ ಕಲ್ಲಿನ ಬೆಂಚು, ಭತ್ತದ ಕಣಜ ಎಲ್ಲಾ ಇದ್ದವು. ನಮಗೆ ಬೇಕಾದ ಬೆಲ್ಲದ ತುಂಡು, ಕೊಬ್ಬರಿ ಚೂರು, ದ್ರಾಕ್ಷಿ, ಗೋಡಂಬಿ ಇತ್ಯಾದಿಗಳಿರುತ್ತಿದ್ದ ಈ ಕೋಣೆಗೆ ನಾವೂ ಆಗಾಗ ಧಾಳಿ ಇಡುತ್ತಿದ್ದೆವು. ಅಜ್ಜಿ ಸಾಕಿದ್ದ ಒಂದು ಬೆಕ್ಕು ಈ ಕಲ್ಲು ಬೆಂಚಿನ ತೆಳಗೆ ಅಥವಾ ಭತ್ತದ ಕಣಜದ ಮೇಲೆ, ವರ್ಷಕ್ಕೆರಡು ಬಾರಿ ನಿಯಮವೇನೋ ಎಂಬಂತೆ ಮರಿಹಾಕಿ ಬಾಣಂತನ ಮಾಡಿಸಿಕೊಳ್ಳುತ್ತಿತ್ತು. ನಾವು ಅದನ್ನ ಕುಚೋದ್ಯಕ್ಕಾಗಿ BBC ( ಬೆಕ್ಕು ಬ್ರೀಡಿಂಗ್ ಸೆಂಟರ್ ) ಅಂತ ಕರೆಯುತ್ತಿದ್ದೆವು. ಅಲ್ಲೇ ಇದ್ದ ಕಲ್ಲಿನ ಬೆಂಚ್ ತೆಳಗೆ ಅಜ್ಜಿ ಒಂದು ಚಿಪ್ಪಿನಲ್ಲಿ ಹಾಲು ಅನ್ನ ಕಲಸಿ ಬೆಕ್ಕಿಗೆ ಹಾಕುತ್ತಿದ್ದರು. ಊಟದ ಸಮಯಕ್ಕೆ ಸರಿಯಾಗಿ ಅದು ಎಲ್ಲಿದ್ದರೂ, ಮಿಯಾವ್ ಮಿಯಾವ್ ಎಂದು ಬಂದು ಬಾಲ ಎತ್ತಿಕೊಂಡು ಅಜ್ಜಿಯ ಕಾಲುಗಳನ್ನು ಸುತ್ತುತ್ತಿತ್ತು. ಅದು ಕಾಣದಿದ್ದರೆ ಅಜ್ಜಿ ಅದನ್ನು 'ಸೀಬಿ ಸೀಬಿ ಸೀಬಿ' ಎಂದು ಕೂಗುತ್ತಿದ್ದರು. ಎಲ್ಲಿದ್ದರು ತಕ್ಷಣ ಹಾಜರ್... ಅದಕ್ಕೆ ತನ್ನನ್ನೇ ಸೀಬಿ ಎಂದು ಕರೆಯುತ್ತಾರೆ ಎಂದು ಹೇಳಿಕೊತ್ತವರ್ಯಾರೋ? ಊಟ ಹಾಕಿದ ಮೇಲೆ ತಿಂದು ಹೊರಬಂದು ಮೀಸೆ ತಿಕ್ಕುತ್ತ, ಮುಂಗಾಲಿನಿಂದ ಮುಖ ಒರೆಸಿಕೊಳ್ಳುತ್ತಾ, ಕಿಟಕಿಯಲ್ಲಿ ಕುಳಿತು ಬಿಸಿಲು ಕಾಯಿಸುತ್ತಿತ್ತು. ಬಾಣಂತನದ ಸಮಯದಲ್ಲಿ ಹಾಲು ಅನ್ನ ತಿಂದು ನಾಲಿಗೆ ರುಚಿ ಕೆಟ್ಟರೆ, ಇಲಿಯನ್ನೋ, ಹೆಗ್ಗಣವನ್ನೊ ಬೇಟೆ ಆಡಿ, ನಾನ್ ವೆಜ್ ಭೋಜನಕ್ಕಾಗಿ ಅದರ ಹೆಣ ಎಳೆದುಕೊಂಡು ಬರುತ್ತಿತ್ತು. ರಾತ್ರಿಯೆಲ್ಲ ಬೆಕ್ಕು ಕಟ ಕಟ ಎಂದು ಇಲಿಯ ಮೂಳೆ ಕಡಿಯುವ ಸದ್ದು.. ಬೆಳಿಗ್ಗೆ ಎದ್ದು ನೋಡಿದರೆ, ಯಾವುದೊ ಬಯಾಲಜಿ ಲ್ಯಾಬ್ ಥರ ಇಲಿಯ ಅರ್ಧ ತಿಂದ ಜಠರ, ಪಿತ್ತಜನಕಾಂಗ, ಕರುಳು ಹಾಗು ಹೆಸರೇ ತಿಳಿಯದ ಇನ್ನು ಅನೇಕ ಅಂಗಗಳು ರೂಮಿನ ತುಂಬಾ ಹರಡಿರುತ್ತಿತ್ತು.. ಅವುಗಳ ಸುತ್ತ ಕೆಂಪು ಇರುವೆಗಳ ದಂಡು ಬೇರೆ..
"ಇದಕ್ಬೆಂಕಿ ಇಕ್ಕ.. ...ದ್ರ ಮುಂಡೆದು.. " ಅಂತ ಅಜ್ಜಿ ಶಾಪ ಹಾಕುತ್ತಿದ್ದರು. ಅಪ್ಪಿಮಾವ ಇಲಿಯ ಕಳೇಬರವನ್ನು ಜತನದಿಂದ ಒಟ್ಟು ಗೂಡಿಸಿ ಮನೆ ಪಕ್ಕದ ತಿಪ್ಪೆಯಲ್ಲಿ ಅದಕ್ಕೆ ಸಂಸ್ಕಾರ ಮಾಡುತ್ತಿದ್ದರು. ಆಮೇಲೆ ರೂಮಿನ ತುಂಬಾ ಫೆನಾಯಲ್ ನ ಘಮ ತುಂಬಿರುತ್ತಿತ್ತು. ಬೆಕ್ಕಿಗೆ ಒಂದು ದಿನ ಊಟ ಕಟ್.. ಹತ್ತಿರ ಬಂದರೆ ಅಜ್ಜಿ ಅದಕ್ಕೆ ಮಡಿ ಕೋಲಿನಿಂದ 'ಸೇವೆ' ಮಾಡುತ್ತಿದ್ದರು. "ಹತ್ರಕ್ ಬಂದ್ ನೋಡು ಇನ್ನೊಂದ್ಸಲ.... ಮುಂಡೇದೆ" ಅಂತ ಬೈಗುಳ ಬೇರೆ... ಮಾರನೆದಿನ ಕೋಪ ತಣಿದ ಮೇಲೆ ಮತ್ತೆ 'ಸೀಬಿ ಸೀಬಿ ಸೀಬಿ' ......ಅದಕ್ಕೆ ಹಾಲು ಅನ್ನದ ಸೇವೆ... ಅಜ್ಜಿ ಮತ್ತು ಬೆಕ್ಕಿನ ಲವ್ - ಹೇಟ್ relationship ನನಗೆ ತುಂಬಾ ಅಚ್ಚರಿ ಎನಿಸುತ್ತಿತ್ತು. ನನಗೆ ಆ ಬೆಕ್ಕಿನ ಮರಿಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಆಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಒಂದು ಹಂಚಿಕಡ್ಡಿ ಹಿಡಿದುಕೊಂಡು ಅಲ್ಲಾಡಿಸುತ್ತ, ಬೆಕ್ಕಿನ ಮರಿ ಅದನ್ನು ಹಿಡಿಯಲು ಆಕಡೆ ಈ ಕಡೆ ಎಗರುವುದನ್ನು ನೋಡುತ್ತಾ ಗಂಟೆ ಗಟ್ಟಲೆ ಕಾಲ ಕಳೆಯುತ್ತಿದ್ದೆವು.
ಇನ್ನು ಈ ರೂಮಿನ ಪಕ್ಕದಲ್ಲೇ ಅಡುಗೆಮನೆ ಹಾಗು ದೇವರ ಮನೆ. ಆ ದೇವರ ಮನೆಗೆ ಹೊಕ್ಕೆವೆಂದರೆ, ಭಕ್ತಿ ಎಂಬುದು ಜರ್ಕಿನ್ ಥರ ಮೈಮೇಲೆ ಬಂದು ಕೂರುತ್ತಿತ್ತು. ಅಜ್ಜಿಯೋ, ದೊಡ್ದಮ್ಮನೋ ದೊಡ್ಡ ಧನಿಯಲ್ಲಿ ದೇವರ ನಾಮಗಳನ್ನ ಹಾಡುತ್ತಾ, ಶನಿವಾರದಹೊತ್ತು ರಾಮ ಕಥೆ ಓದುತ್ತಾ ಮನೆಯಲ್ಲಿ ಧಾರ್ಮಿಕ ವಾತಾವರಣವನ್ನು ಮೂಡಿಸಿದ್ದರು. ಶನಿವಾರದ ಹೊತ್ತು ಮಕ್ಕಳಾದ ನಮಗೆ ರಾಮಪ್ರಸಾದದ ಮೇಲೆ ನಿಗಾ.. ಆದರೆ ಕಥೆ ಕೇಳಿದರೇನೇ ಪ್ರಸಾದ ಎಂಬ ನಿಯಮವಿದ್ದುದರಿಂದ ಸಂಯಮದಿಂದ ಕುಳಿತು ಕಥೆ ಕೇಳುತ್ತಿದ್ದೆವು. ಇಂದಿನ ಮಕ್ಕಳಿಗೆ ನಾವೇನು ಕೊಡುತ್ತಿದ್ದೇವೆ? ಬರಿ ಕೊಲಿವರಿ ಡಿ....
ಕಾಲನ ಹೊಡೆತಕ್ಕೆ ಎಲ್ಲರೂ ತಲೆಬಾಗಬೇಕಗುತ್ತದೆ... ನೀರಿನ ತೊಂದರೆ ಹಾಗು ಇತರೆ ಕಾರಣಗಳಿಂದ ಮನೆ ಬಿಡಬೇಕಾದ ಪರಿಸ್ಥಿತಿ ಬಂತು. ಹತ್ತಿರದಲ್ಲೇ ಇನ್ನೊಂದು ಮನೆ ಕಟ್ಟಿಸಿ ಅಪ್ಪಿಮಾವ ಅಲ್ಲಿಗೆ ಶಿಫ್ಟ್ ಆದರು.. ಈ ಮನೆಯಲ್ಲಿ ಯಾರಾದರೂ ಇರಬೇಕಲ್ಲ.. ಇಷ್ಟು ದೊಡ್ಡ ಮನೆಗೆ ಬಾಡಿಗೆಗೆ ಬರಲು ಯಾರೂ ಒಪ್ಪಲಿಲ್ಲ. ಅಪ್ಪಿಮಾವ ಈ ಮನೆಯನ್ನ ೪ ಚಿಕ್ಕ ಚಿಕ್ಕ ಮನೆಗಳಾಗಿ ಪರಿವರ್ತಿಸಿ ಬಾಡಿಗೆಗೆ ಕೊಟ್ಟಿದ್ದಾರೆ...
ಇಂದು ಅಜ್ಜಿಯೂ ಇಲ್ಲ, ಹಿಂದಿನ ಮನೆಯೂ ಇಲ್ಲ..
ಮನೆ ಪರಿವರ್ತನೆ ಆದಮೇಲೆ ನಾನು ಅದರೊಳಕ್ಕೆ ಕಾಲಿಟ್ಟಿಲ್ಲ.. ಆ ಮನೆಯ ನೆನಪು, ಆಡಿದ ಆಟ, ಮಾಡಿದ ತುಂಟತನ, ಅನುಭವಿಸಿದ ಆನಂದ ಮನದಲ್ಲಿ ಶಾಶ್ವತವಾಗಿ ಮನೆ ಮಾಡಿದೆ...
ಕಾಲನ ಕೈಯಿ ಎಲ್ಲಾ ಕದ್ದು
ಉಳಿಯಿತು ನೆನಪಷ್ಟೆ ......