ಅರೇಬಿಯಾದ ೧೦೦೧ ರಾತ್ರಿಗಳು…. ಒಂದು ಮೆಲುಕು

ಅರೇಬಿಯಾದ ೧೦೦೧ ರಾತ್ರಿಗಳು…. ಒಂದು ಮೆಲುಕು

ಬರಹ

ಮಂಜುನಾಥ್ ಕುಣಿಗಲ್ ಅವರ ಅನುಭವ ಓದಿ ಬರೆಯಬೇಕೆನ್ನಿಸಿತು ನನ್ನ ಅನುಭವದ ಬಗ್ಗೆ.

ಹೊಟ್ಟೆಪಾಡಿಗಾಗಿ ಸ್ವಂತ ದೇಶವನ್ನು ಬಿಟ್ಟು ಪರನಾಡಿಗೆ ವಲಸೆ ಹೋಗುವವರ ಪಾಡು ಹೇಳಿತೀರದು. ತಮ್ಮ ಪ್ರೀತಿಯ ತಂದೆ ತಾಯಿಯರನ್ನು, ಸೋದರ ಸೋದರಿಯರನ್ನು, ಮಡದಿ ಮಕ್ಕಳನ್ನು ಬಿಟ್ಟು ಹೋಗುವುದು ಅತ್ಯಂತ ದುಃಖಕರ. ಪರನಾಡು ಎಷ್ಟಿದ್ದರೂ ಪರನಾಡೇ. ಭಾಷೆ, ಸಂಸ್ಕೃತಿ, ಜನರ ಒಡನಾಟ ಎಲ್ಲವೂ ಭಿನ್ನ, ಹೊಸತು. ಒಮ್ಮೆ ದೇಶ ಬಿಟ್ಟವನು ಕೆಲವು ಕಾಲದ ನಂತರ ತ್ರಿಶಂಕು ಸ್ಥಿತಿಯಲ್ಲಿ ತೊಳಲಾಡುತ್ತಾನೆ . ಇತ್ತ ಭಾರತೀಯನೂ ಅಲ್ಲ ಅತ್ತ ತಾನು ಆಯ್ಕೆ ಮಾಡಿದ ದೇಶದವನೂ ಅಲ್ಲ. ಹೀಗೇ ೧೯೯೦ ಜೂನ್ ೨೧ ಕ್ಕೆ ನನ್ನ ಪ್ರೀತಿಪಾತ್ರರಿಗೆ, ದೇಶಕ್ಕೆ ವಿದಾಯ ಹೇಳಿ ಮರಳು ಗಾಡಿನ ಪಾಲಾಗಲು ಸವೂದಿ ಅರೇಬಿಯಾ ದ ದಮ್ಮಾಮ್ ನಗರ ತಲುಪಿದೆ. ತಂದೆ ತಾಯಿ, ಪ್ರೀತಿಯ ಸೋದರ ಸೋದರಿಯರನ್ನು ಎಂದಿಗೂ ಬಿಟ್ಟು ಅಗಲಿರದ ನನಗೆ ಹೇಳಿಕೊಳ್ಳಲಾರದ ಸಂಕಟ. ಅದರ ಮೇಲೆ ಈ ೫೨ ಡಿಗ್ರಿ ಸುಡುಬಿಸಿಲು, ಅದಕ್ಕೆ ಪೈಪೋಟಿಯಾಗಿ ಒಣ ನಿಷ್ಕರುಣ ಹವೆ. ಸೂರ್ಯ ಈ ನಾಡಿಗೆ ತುಂಬಾ ಆಪ್ತನೋ ಎನ್ನುವಷ್ಟು ಹತ್ತಿರ. ಸ್ವಲ್ಪ ಜನ ಭಾರತೀಯರನ್ನು ನೋಡಿದ ನಂತರ ಒಂದಷ್ಟು ಸಮಾಧಾನವಾದರೂ ಕನ್ನಡಿಗರಾರೂ ಸ್ವಲ್ಪ ಕಾಲ ಕಾಣಲು ಸಿಗದೇ ಕಂಗಾಲಾದೆ. ಕೆಲ ವಾರಗಳ ಬಳಿಕ ಭಟ್ಕಳದವರೊಬ್ಬರು ಸಿಕ್ಕ ನಂತರ ನೆಮ್ಮದಿ.

ಇಲ್ಲಿಯದು ಒಂದು ರೀತಿಯ ಯಾಂತ್ರಿಕ ಜೀವನ. ಥಳಕು ಬಳುಕು, ಝಗಝಗಿಸುವ ಬೆಳಕು ಇವನ್ನು ಬಿಟ್ಟರೆ ಒಳಗೆ ಟೊಳ್ಳು, ಸತ್ವ ಇಲ್ಲ. ಆತ್ಮವಿಲ್ಲದ ಹಾಗೆ. ಎಲ್ಲವೂ ಇದೆ, ಏನೂ ಇಲ್ಲ ಅನ್ನೋ ಭಾವ. ಮೇಲೆ ಹೇಳಿದ ಹಾಗೆ ಪರಿಸ್ಥಿತಿಗೆ ಕಟ್ಟು ಬಿದ್ದು ಮಾತ್ರ ಸಾಗರೋಲ್ಲಂಘನ ಮಾಡಬೇಕು. ತಮಾಷೆಗೋ, ಮೋಜಿಗೋ ಅಲ್ಲ. ಒಂದಿಷ್ಟು ದಿನ ಒಂದಷ್ಟು ಅತ್ತು, ಒಳಗೊಳಗೇ ಕೊರಗಿ ಇಲ್ಲಿನ ಬದುಕಿಗೆ ಹೊಂದಿಕೊಳ್ಳ ತೊಡಗಿದೆ. ಆ ಸಮಯದಲ್ಲಿ ಟೆಲಿಫೋನ್ ಬಹು ದುಬಾರಿ. ಹಾಗಾಗಿ ಪತ್ರಗಳ ಮೂಲಕವೇ ಸಂಪರ್ಕ. ತಿಂಗಳು, ೨ ತಿಂಗಳಿಗೊಮ್ಮೆ ಮನೆಯವರ ( ಮನೆಯವರು ಅಂದರೆ ಹೆತ್ತವರು, ಕುಟುಂಬಸ್ಥರು. ಮದುವೆ ಆಗಿರಲಿಲ್ಲ) ಸ್ವರ ಕೇಳಿ ಪುಳಕಿತನಾಗುತ್ತಿದ್ದೆ.

ಊರಿನ ನೆನಪು ಎಷ್ಟೆಂದರೆ ವಾಚು ನೋಡುವಾಗಲೆಲ್ಲಾ ಭಾರತದ ಸಮಯ ಲೆಕ್ಕ ಹಾಕಿ (ಸೌದಿ ನಮ್ಮ ದೇಶಕ್ಕಿಂತ ೨.೫ ಗಂಟೆ ಹಿಂದೆ) ಕಲ್ಪಿಸಿಕೊಳ್ಳುವುದು. ಮನೆಯವರು ಊಟ ಮಾಡುತ್ತಿರಬೇಕು, ಚಹಾ ಸೇವಿಸುತ್ತಿರಬೇಕು, ತಮ್ಮ ತಂಗಿ ಶಾಲೆಯಿಂದ ಬಂದಿರಬೇಕು, ಪಡ್ಡೆ ಹುಡ್ಗರ ಗಾಳಿಪಟ, ಗೋಲಿಯಾಟ ಜೋರಾಗಿ ಸಾಗುತ್ತಿರಬೇಕು, ಮಿತ್ರರು ಕೃಷ್ಣ ಭವನದಲ್ಲಿ ಬೆಣ್ಣೆ ಕಾಲಿ ಹೊಡೆಯುತ್ತಿರಬೇಕು, ಹೀಗೇ ನೂರು ಕಲ್ಪನೆಗಳು. ಕಲ್ಪನೆಗಳೇ ಸಂಗಾತಿ. ದಿನಗಳು ಬಹಳ ನಿಧಾನವಾಗಿ ಕುಂಟುತ್ತಾ, ತೆವಳುತ್ತಾ ಸಾಗುತ್ತಿದ್ದವು. ಹೀಗಿರುವಾಗ ಒಂದು ದಿನ, ಆಗೆಸ್ಟ್ ೨ ರಂದು ಬರಸಿಡಿಲಿನಂಥ ಸುದ್ದಿ. ಪಕ್ಕದ ಇರಾಕ್ ಸೇನೆ ಕುವೈತ್ ನೊಳಕ್ಕೆ ನುಸುಳಿ ಆಕ್ರಮಿಸಿಕೊಂಡಿದೆ ಎಂದು. ಬಂದು ಇನ್ನೂ ೨ ತಿಂಗಳ ಸಂಬಳ ನೋಡಿಲ್ಲ. ಆಗಲೇ ವಕ್ಕರಿಸಿತು ಗ್ರಹಚಾರ. ಇರಾಕಿನ ಸದ್ದಾಂ ಕುವೈತಿಗೆ ತನ್ನ ಸೈನ್ಯ ಕಳಿಸಿ ಅದು ತನ್ನ ೧೯ ನೆ ಪ್ರಾಂತ್ಯ ಎಂದು ಘೋಷಿಸಿಬಿಟ್ಟ. ರಾತ್ರೋ ರಾತ್ರಿ ಕುವೈತಿನ ರಾಜ ಹೆಲಿಕಾಪ್ಟರಿನಲ್ಲಿ ದಮ್ಮಾಮ್ ನಗರ ತಲುಪಿದ. ನಾನಿದ್ದ ಸ್ಥಳದಿಂದ ಕುವೈತ್ ಮತ್ತು ಇರಾಕ್ ಬಹಳ ಸಮೀಪ. ಸದ್ದಾಮನ ತುಂಟಾಟದ ಅರಿವಿದ್ದ ಸೌದಿ ರಾಜ ಕೂಡಲೇ ಅಮೆರಿಕೆಯ ಮೊರೆ ಹೊಕ್ಕ. ಎಲ್ಲ ಕಡೆಗಳಲ್ಲೂ ಸೈನಿಕ ತಾಣಗಳನ್ನು ತೆರೆದಿದ್ದ ಅಮೇರಿಕೆಗೆ ಮಧ್ಯ ಪ್ರಾಚ್ಯದಲ್ಲಿ ಕಾಲೂರಲು ಸದ್ದಾಂ ಅನುವು ಮಾಡಿ ಕೊಟ್ಟ.
ಇದೇ ಸಮಯದಲ್ಲೇ ಬಿನ್ ಲಾಡೆನ್ ನ ಬಾಲ ಮೊಳಕೆ ಒಡೆದಿದ್ದು. ಯಾವ ಕಾರಣಕ್ಕೂ ಅಮೇರಿಕೆಯನ್ನು ಕರೆಸಬಾರದು, ರಷ್ಯ ವಿರುದ್ಧ ಹೋರಾಡಿದ ಹೋರಾಟಗಾರರನ್ನು ಆಫ್ಘಾನಿಸ್ತಾನದಿಂದ ಇಲ್ಲಿಗೆ ತಂದು ಸದ್ದಮನನ್ನು ಓಡಿಸುತ್ತೇನೆ ಎಂದಾಗ ಸೌದಿ ಗಳು ಹೋಗಾಚೆ ಎಂದು ಅಮೇರಿಕೆಗೆ ಫೋನಾಯಿಸಿದರು.

ಇಲ್ಲೇ ಅವನಿಗೂ ಸೌದಿ ರಾಜ ಮನೆತನಕ್ಕೋ ಬಂದ ತಕರಾರು.

ಶುರುವಾಯಿತು ಯುದ್ಧದ ಮಾತುಗಳು. ಸದ್ದಾಮನ ಬತ್ತಳಿಕೆಯಲ್ಲಿ ಏನೇನಿದೆ, ಯಾವ ರೀತಿಯಲ್ಲಿ ಅವನ ವಾಯುಸೇನೆ ಇರಾನನ್ನು ದಮನಗೊಳಿಸಿತು. ಯಾವ ರೀತಿ ನಿರ್ದಯವಾಗಿ ತನ್ನ ವೈರಿಗಳೊಂದಿಗೆ ನಡೆದುಕೊಳ್ಳುತ್ತಿದ್ದ. ಪುಂಖಾನು ಪುಂಖವಾಗಿ ಕಥೆಗಳು ಹಾರಾಡಲು ತೊಡಗಿದವು. ಅಮೆರಿಕೆಯ ಎಚ್ಚರಿಕೆಗೂ, ಅರಬರ ದಯನೀಯ ಒಲೈಸುವಿಕೆಗೂ, ಮಿತ್ರ ರಾಷ್ಟ್ರಗಳ ಹಿತ ನುಡಿಗಳಿಗೂ, ವಿಶ್ವದ ಅಂಗಲಾಚುವಿಕೆಗೂ ಸದ್ದಾಂ ಕಿವುಡನಂತೆ ವರ್ತಿಸಿದನೆ ಹೊರತು ಕುವೈತಿನಿಂದ ಕಾಲು ತೆಗೆಯುವ ಮನ ಮಾಡಲಿಲ್ಲ. ಅಮೆರಿಕೆಯ ಅಧ್ಯಕ್ಷ ಬುಷ್ ( ಇತ್ತೀಚಿನ ಬುಷ್ ನ ಅಪ್ಪ) ವಿಶ್ವಸಂಸ್ಥೆಗೆ ವಿದೇಶಾಂಗ ಕಾರ್ಯದರ್ಶಿ "ಜಿಮ್ ಬೇಕರ್" ಅನ್ನು ಕಳಿಸಿ ನಿರ್ಣಯಗಳನ್ನು ಹೊರಡಿಸಿದ. ಇರಾಕ್ ಕುವೈಟನ್ನು ಬಿಡದಿದ್ದರೆ ಹೊಡೆತ ಗ್ಯಾರಂಟೀ ಎಂದು. ಅಂದಿನ ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅಮೆರಿಕೆಯ ಈ ನಿಲುವಿಗೆ ಸಂಪೂರ್ಣ ಬೆಂಬಲ ನೀಡಿ ತಾನೂ ಅಖಾಡಕ್ಕೆ ಧುಮಿಕಿದಳು. ಇತ್ತ ವಿಶ್ವದ ಆಗರ್ಭ ಶ್ರೀಮಂತ ಕುವೈತಿನ ರಾಜ ರಾಜ್ಯ ಕಳಕೊಂಡು ಅಳುತ್ತಾ ವಿಶ್ವದ ರಾಜಧಾನಿಗಳನ್ನು ಅಲೆಯತೊಡಗಿದ. ಇವ್ಯಾವುದೂ ಸದಾಮನ ಕಣ್ಣು ತೆರೆಸಲು ವಿಫಲವಾದವು. ವಿನಾಶ ಕಾಲೇ ವಿಪರೀತಃ ಬುದ್ಧಿ. ಸದ್ದಾಮ್ ಕುವೈತ್ ತನ್ನ ಬುಟ್ಟಿಗೆ ಬಿತ್ತು ಎಂದು ತೋಳದ ನಗೆ ನಕ್ಕ. ಇರಾಕಿಗೂ ಒಬ್ಬ ಚಾಣಾಕ್ಷ ವಿದೇಶ ಸಚಿವ. ಹೆಸರು ತಾರಿಕ್ ಅಜೀಜ್. ದಿನಕ್ಕೊಂದರಂತೆ ಆತನ ಹೇಳಿಕೆ. ನಮ್ಮ ಮೇಲೆ ಕೈ ಹಾಕಿದರೆ ಅರೇಬಿಯಾ ಪ್ರಾಂತ್ಯಕ್ಕೆ ಬೆಂಕಿ ಹಾಕಿ ಬಿಡುತ್ತೇವೆ, ಸೌದಿ ತೈಲ ಬಾವಿಗಳಿಗೆ ಬೆಂಕಿ ಕೊಟ್ಟು ಬಿಡುತ್ತೇವೆ ಅಂತ.

ಜಿಗಣೆ ಥರ ಅಂಟಿಕೊಂಡ ಇರಾಕ್ ಕುವೈತ್ ಅನ್ನು ಬಿಡಲು ವಿಶ್ವ ಸಂಸ್ಥೆ ಜನವರಿ ೧೫ ರ ಗಡು ನೀಡಿತು. ಎಲ್ಲ ರೀತಿಯ ಮಾತುಕತೆಗಳಿಂದ ಪರಿಹಾರ ಕಾಣದಾದಾಗ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಪೆರೆಸ್ ಡಿ ಕ್ವೆಯಾರ್ ಬಗ್ದಾದ್ ಬಂದು ಸದ್ದಾಮನನ್ನು ಕಂಡು ಮನವೊಲಿಸಲು ನೋಡಿದರು. ಕುವೈತ್ ನನ್ನದು ಅಂತ ಮಂತ್ರ ಪಠಿಸಿದನೆ ಹೊರತು ಬಿಡುವ ಮಾತನ್ನಾಡಲಿಲ್ಲ ಸದ್ದಾಮ್. ಇದೆಲ್ಲ ನೋಡುತ್ತಿದ್ದ ನಮಗೆ ಪ್ರಾಣ ಸಂಕಟ. ಏನಪ್ಪಾ ಮಾಡೋದು, ಹೋಗೋಣ ಎಂದರೆ ಕಂಪನಿ ಒಪ್ಪುತ್ತಿಲ್ಲ. ಎಲ್ಲ ಸರಿಯಾಗುತ್ತದೆ, ಅಮೆರಿಕೆಯ ಸೈನ್ಯ ಬಂದಿದೆ, ಸದ್ದಾಮಿನ ತಿಥಿ ಶೀಘ್ರವೇ ಇದೆ ಅಂತ ಹೇಳಿ ನಮ್ಮನ್ನು ನಿಲ್ಲಿಸಿಕೊಂಡರು. ಜನವರಿ ಬಂತು, ಗಡುವಿನ ೧೪ ದಿನಗಳೂ ಕಳೆದವು.

ಜನವರಿ ೧೯೯೧, ೧೫ ನೆ ತಾರೀಖು ರಾತ್ರಿ ೩ ರ ಸುಮಾರಿಗೆ ಅಮೇರಿಕ, ಬ್ರಿಟನ್, ಸೌದಿ, ಕುವೈತ್, ಫ್ರಾನ್ಸ್ ಯುದ್ಧ ವಿಮಾನಗಳು ಧಾಳಿ ಆರಂಭಿಸಿದವು. ಎಲ್ಲೆಲ್ಲೂ ಸೈರನ್ನುಗಳು. ನಮಗೆ ಗ್ಯಾಸ್ ಮಾಸ್ಕ್ಗಳನ್ನು ಕೊಟ್ಟಿದ್ದರು. ಸದ್ದಾಂ ಅನಿಲಾಸ್ತ್ರ ಬಳಸಿದರೆ ಅಂತ. ನಮಗೆ ಪುಕ ಪುಕ. ಪರದೇಶದಲ್ಲಿ ಬಂದು ಸಾಯುವಂತಾಯಿತಲ್ಲ ಅಂತ. ಅತ್ತ ಮನೆಯವರದು ಹರಕೆಯೋ ಹರಕೆ. ಸದ್ದಾಂ ಧಾಳಿ ಮಾಡುವ ಮೊದಲೇ ಇಲ್ಲಿ ಸೈರನ್ನುಗಳ ಅರಚಾಟ. ಭಯ ಹುಟ್ಟಿಸುವ ಸೈರನ್ನುಗಳು. ಸೈರನ್ ಕೇಳಿದಾಗಲೆಲ್ಲಾ ಶೌಚಾಲಯಕ್ಕೆ ಓಡುತ್ತಿದ್ದೆ. ಇದನ್ನು ನೋಡಿ ಕೆಲವರಿಗೆ ನಗು. ಈ ಮಧ್ಯೆ ನಾನು ಸೌದಿ ಗೆ ಕಾಲಿಟ್ಟ ಘಳಿಗೆ ಸರಿಯಿಲ್ಲ ಎಂದು ಕೆಲವರ ಮೂದಲಿಕೆ. ಒಟ್ಟಿನಲ್ಲಿ ನಮ್ಮ ಬದುಕು ನರಕ. ೪೫ ದಿನಗಳ ಅವಿರತ ಧಾಳಿಗಳಿಂದ ನುಚ್ಚು ನೂರಾದ ಇರಾಕ್ ಸೋಲೊಪ್ಪಿಕೊಂಡು ಕುವೈತಿನಿಂದ ಕಾಲ್ತೆಗೆಯಿತು. ಕುವೈತ್ ಸ್ವತಂತ್ರವಾಯಿತು. ನನ್ನ ಶೌಚಾಲಯ ಭೇಟಿ ನಿಂತಿತು.

ಒಟ್ಟಿನಲ್ಲಿ ಎಂದೂ ಮರೆಯಲಾಗದ ಅನುಭವ ಮರಳುಗಾಡಿನದು.