ಅವಳೆ ಇವಳು...
ಅವಳೆ ಇವಳು ಇವಳೆ ಅವಳು ನನ್ನ ಮೋಹ ರಾಗಿಣಿ
ಒಲುಮೆ ಬಲುಮೆ ಚಿಲುಮೆಯರಳೆ ಚೆಲುವ ಮೋಹಿನಿ
ಅಂತರಂತರಂಗದೊಳಗೆ ಮೀಟಿ ಪ್ರೇಮ ಹೂ ನಗೆ
ಬಂತು ಮನಕೆ ವೇಣುಗಾನ ಚಿತ್ತದೊಳಗೆ ಸವಿಬಗೆ
ರೂಪವರಳಿ ತನುವು ಹೊರಳಿ ತೀರ ಸೇರಿ ನಲಿಯಿತು
ಬಾಳ ಪಯಣದೊಳಗೆ ಭಾವ ವಿಶ್ವರೂಪ ತಳೆಯಿತು
ಎಂಥಯೆಂಥ ಪ್ರೀತಿಯೆಂಥ ತಾರೆಯಂತೆ ಮಿನುಗಿದೆ
ಬೆಸುಗೆಯೊಳಗೆ ಸೆಡವುಯಿಂದು ಜನುಮ ಪಡೆದಿದೆ
***
ಗಝಲ್
ಹೊಡೆತ ಕೊಟ್ಟ ಮೇಲೆ ನೋವಾಯಿತೋ ಕೇಳಬೇಡ ಗೆಳೆಯಾ
ನಡತೆ ಹಾಳಾದ ನಂತರ ಯಾಕಾಯಿತೋ ಹೋಗಬೇಡ ಗೆಳೆಯಾ
ಮಿಡತೆ ಹಾರಿದ ಮೇಲೆ ರಂಗೋಲಿಯು ಎಲ್ಲಿದೆಯೋ ಹೇಳು
ಕುಡಿತ ನಿಂತ ಕ್ಷಣ ಏನಾಯಿತೋ ನೋಡಬೇಡ ಗೆಳೆಯಾ
ಸಿಡಿತ ಮನಗಳ ನೋವ ನೋಡಿದಾಗ ಏನಾದೆಯೋ ನೀನು
ದುಡಿತ ದೇಹಗಳ ದಣಿವು ಹಾಡಾಯಿತೋ ಕಾಡಬೇಡ ಗೆಳೆಯಾ
ಹಿಡಿತ ತಪ್ಪಿದ ಬದುಕಿನಲ್ಲಿ ಎಲ್ಲವೂ ವ್ಯರ್ಥವಾಗಿ ಕಂಡವು
ಕಡಿತ ಎಂದಿಹ ಮನವದು ಹೊನ್ನಾಯಿತೋ ಮೌನಬೇಡ ಗೆಳೆಯಾ
ಮಿಡಿತ ಇರದೆಲೆ ದೇಹವು ಬಹುವಾಗಿ ಕೊರಗೀತೆ ಈಶಾ
ನುಡಿತ ಇದೆ ಬಾಳದು ಹೋಳಾಯಿತೋ ಸಾಯಬೇಡ ಗೆಳೆಯಾ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
