ಇ-ಲೋಕ

ಇ-ಲೋಕ

ಬರಹ

ವಾಹನ ಶೆಡ್‌ನಿಂದ ವಿದ್ಯುಚ್ಛಕ್ತಿ
ಕ್ಯಾಲಿಫೋರ್ನಿಯಾದ ಗೂಗಲ್ ಕಚೇರಿಯಲ್ಲಿ,ವಾಹನ ನಿಲುಗಡೆಗೆ ನಿರ್ಮಿಸಿರುವ ಶೆಡ್ಡಿನಿಂದ ಸಾವಿರ ಮನೆಗಳಿಗೆ ಬೇಕಾದಷ್ಟು ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತದೆ. ಸೌರಫಲಕಗಳನ್ನೇ ಬಳಸಿ, ಶೆಡ್ ನಿರ್ಮಿಸಿ ಸೌರ ವಿದ್ಯುಚ್ಛಕ್ತಿ ಉತ್ಪಾದಿಸಲಾಗುತ್ತಿದೆ.ಒಂಭತ್ತು ಸಾವಿರ ಫಲಕಗಳನ್ನು ನೇರವಾಗಿ ಬಳಸಿದ್ದರೆ. ಇನ್ನಷ್ಟನ್ನು ಮಾಡಿನ ಮೇಲೆ ಅಳವಡಿಸಿ ವಿದ್ಯುತ್ ಉತ್ಪಾದಿಸಲಾಗಿದೆ.ಎನರ್ಜಿ ಇನೋವೇಶನ್ಸ್ ಎನ್ನುವ ಕಂಪೆನಿಗೆ ಈ ಯೋಜನೆಯನ್ನು
ಗೂಗಲ್ ಕಂಪೆನಿ ಗುತ್ತಿಗೆ ನೀಡಿದೆ.

ಚಿಕಿತ್ಸೆಗೆ ಭಾರತಕ್ಕೆ ಆಗಮಿಸುವ ವಿಮೆಯಿಲ್ಲದ ಅಮೆರಿಕನ್ನರು
ಅಮೆರಿಕಾದಲ್ಲಿ ಆರೋಗ್ಯ ವಿಮೆಯಿಲ್ಲದವರದು ಇಕ್ಕಟ್ಟಿನ ಸ್ಥಿತಿ. ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋಗಲೇ ಸಾಧ್ಯವಾಗದಷ್ಟು ಚಿಕಿತ್ಸೆದುಬಾರಿ . ಅಂತವರು ಚಿಕಿತ್ಸೆ ಪಡೆಯುವುದು ಅನಿವಾರ್ಯವಾದಾಗ ಭಾರತದೆಡೆಗೆ ಬರುವುದೀಗ ಮಾಮೂಲಿಯಾಗಿಬಿಟ್ಟಿದೆ.ಅಲ್ಲಿ ಮೂವತ್ತು ಸಾವಿರ ಡಾಲರು ತಗಲುವ ಶಸ್ತ್ರಚಿಕಿತ್ಸೆಯ ಮೂರನೇ ಒಂದು ಪಾಲು ಖರ್ಚಿನಲ್ಲಿ ಚಿಕಿತ್ಸೆ ಮಾತ್ರಾ ಅಲ್ಲದೆ ಬಂದು ಹೋಗುವ ವಿಮಾನ ಖರ್ಚು ಕೂಡಾ ಬರುತ್ತದೆ. ಜತೆಗೆ ನಮ್ಮಲ್ಲಿ ಅವರಿಗೆ ದೊರಕುವ ರಾಜಾಥಿತ್ಯದ ಬೋನಸ್ ಬೇರೆ.ಚಿಕಿತ್ಸೆಯ ಗುಣಮಟ್ಟದಲ್ಲಿ ಹೆಚ್ಚಿನವರಿಗೇ ಭಾರೀ ತೃಪ್ತಿ ಸಿಗುತ್ತದೆ-ಯಾಕೆಂದರೆ ಶಸ್ತ್ರಚಿಕಿತ್ಸಕರು ಹೆಚ್ಚಾಗಿ ಅಮೆರಿಕಾದಿಂದ ವಾಪಾಸಾದ ನುರಿತ ವೈದ್ಯರು.ಚೆನ್ನೈನ ಅಪೊಲೋ, ಮುಂಬೈನ ವರ್ಕಾಟ್, ಬೆಂಗಳೂರಿನ ಮಣಿಪಾಲ ಆಸ್ಪತ್ರೆಗಳಿಗೆ ಇಂತಹ ವಿಮೆರಹಿತ ಅಮೆರಿಕನ್ನರು ಚಿಕಿತ್ಸೆಗೆ ಬರುವುದು ಹೆಚ್ಚು.ಅಂದಹಾಗೆ ಅಮೆರಿಕಾದಲ್ಲಿ ನಲ್ವತ್ತಾರು ದಶಲಕ್ಷ ಅಮರಿಕನ್ನರಿಗೆ ವಿಮೆಯಿಲ್ಲದ ಪರಿಸ್ಥಿತಿ ಬರುತ್ತದೆ.
ಹಾಗೆಂದು ಎಲ್ಲರಿಗೂ ಇಲ್ಲಿನ ಚಿಕಿತ್ಸೆಯ ಬಗ್ಗೆ ಭರವಸೆಯಿಲ್ಲ. ಆದರೆ ಚಿಕಿತ್ಸೆಗೊಳಗಾದವರ ಶಾಭಾಶ್‌ಗಿರಿ ನಮ್ಮ ಆಸ್ಪತ್ರೆಗಳ ಪ್ರಸಿದ್ಧಿ ಹೆಚ್ಚಲು ಕಾರಣವಾಗುತ್ತಿದೆ.ಇನ್ನೊಂದು ವರ್ಗದ ಜನ ಸೌಂದರ್ಯ ಚಿಕಿತ್ಸೆಗಾಗಿ ಬರುವುದಿದೆ. ಬೊಜ್ಜು ಇಳಿಸಿಕೊಳ್ಳಲು, ಹಲ್ಲಿನ ಚಿಕಿತ್ಸೆಗೆ ಬರುವುದು ಅಂತಹ ರೋಗಿಗಳು.ನಮ್ಮಲ್ಲಿ ವೈದ್ಯಕೀಯ ಶಿಕ್ಷಣ ಇನ್ನೂ ದುಬಾರಿಯಾದರೆ ಅಚ್ಚರಿಯಿಲ್ಲ.

ದೂರವಾಣಿ ಕರೆ ಬಹುತೇಕ ಉಚಿತ
ಅಂತರ್ಜಾಲ ಬಳಸಿ ದೂರವಾಣಿ ಕರೆ ಮಾಡಲು ಅವಕಾಶ ನೀಡಿ ಸ್ಕೈಪ್ ಎಂಬ ಅಮೆರಿಕನ್ ಕಂಪೆನಿ ಜನರನ್ನು ದಂಗು ಬಡಿಸಿತ್ತು. ಅದೀಗ ಕರೆ ಮಾಡಲು ವಾರ್ಷಿಕ ಚಂದಾ ಮೂವತ್ತು ಡಾಲರು ಮಾಡಿ ಪ್ರಕಟಣೆ ನೀಡಿದೆ. ಈ ನಿಗದಿತ ಶುಲ್ಕ ತೆತ್ತು ಎಷ್ಟೂ ಕರೆ ಮಾಡಬಹುದು.ಆದರೆ ಕರೆ ಮಾಡಲು ಕಂಪ್ಯೂಟರ್‍ ಬಳಸಬೇಕಾದ ಪ್ರಮೇಯವೂ ಇದೆ. ವಿಶೇಷ ದೂರವಾಣಿ ಯಂತ್ರ ಬಳಸಿದರೆ, ಕಂಪ್ಯೂಟರ್‍ ಬೇಕಾಗಿಲ್ಲ. ಈ ಯಂತ್ರಗಳೂ ಉಚಿತ ಎಂದೆಣಿಸಬೇಡಿ!
ಟಿ-ಮೊಬೈಲ್ ಕಂಪೆನಿ ಇದೀಗ ಅಂತರ್ಜಾಲ ಮೂಲಕ ಮೊಬೈಲ್ ಕರೆ ಮಾಡುವ ಅಗ್ಗದ ಕರೆ ಸೌಲಭ್ಯವನ್ನು ಪರೀಕ್ಷಾರ್ಥವಾಗಿ ನೀಡುತ್ತಿದೆ. ಕರೆಯ ಗುಣಮಟ್ಟ ಇನ್ನೂ ಸಾಕಷ್ಟು ತೃಪ್ತಿದಾಯಕವಾಗಿಲ್ಲವಂತೆ. ಆದರೂ ಮೊಬೈಲ್ ಕರೆ ಇಳಿಸಲು ಈ ತಂತ್ರಜ್ಞಾನ ನೆರವಾಗಲಿದೆಯೆನ್ನುವುದು ಖಚಿತ.

ಲ್ಯಾಪ್‌ಟಾಪ್ ಮೂಲಕ ಕಳ್ಳರ ಪತ್ತೆ!
ಬ್ರೆಜಿಲಿನ ವ್ಯಾಪಾರಿ ಜರ್ಮನಿಯ ಪ್ರವಾಸದಲ್ಲಿದ್ದ. ಆತನ ಬ್ರೆಜಿಲಿನ ಮನೆ ಹಿಂದಿನ ಅಂಕಣವೊಂದರಲ್ಲಿ ಪ್ರಸ್ತಾಪಿತವಾಗಿದ್ದ 'ಸ್ಮಾರ್ಟ್ ಮನೆ". ಹಾಗಾಗಿ ಆತನ ಮನೆಗೆ ಕಳ್ಳರು ನುಗ್ಗಿದಾಗ ಆತನ ಮೊಬೈಲ್ ಫೋನಿಗೆ ಕಿರು ಸಂದೇಶದ ಆಗಮನವಾಯಿತು.ಒಡನೆಯೇ ಆತ ತನ್ನ ಲ್ಯಾಪ್‌ಟಾಪ್ ಚಾಲೂ ಮಾಡಿ ಅಂತರ್ಜಾಲ ಮೂಲಕ ತನ್ನ ಮನೆಯಲ್ಲಿ ಸ್ಥಾಪಿಸಿದ ವೆಬ್‌ಕ್ಯಾಮರಾದ ಚಿತ್ರಗಳನ್ನು ನೋಡತೊಡಗಿದ. ಆತನ ಮನೆ ಹೊಕ್ಕ ಕಳ್ಳರು ಆತನ ಕೋಟುಗೀಟು ತೊಟ್ಟು ಚಂದ ನೋಡುತ್ತಿದ್ದರು. ಆತ ತನ್ನ ಪತ್ನಿಗೆ ಫೋನಾಯಿಸಿದರೆ, ಆಕೆಯ ಉತ್ತರ ಬರದು. ನಂತರ ಪೊಲೀಸರನ್ನು ಸಂಪರ್ಕಿಸಿ, ಕಳ್ಳರನ್ನು ಬಂಧನಕ್ಕೆ ಗುರಿಪಡಿಸಲು ಆತನಿಗೆ ಸಾಧ್ಯವಾಯಿತು.

ಹಕ್ಕುಸ್ವಾಮ್ಯ ಶೋಧನೆಗೆ ಗೂಗಲ್ ನೆರವು

ಏಳು ದಶಲಕ್ಷ ಪೇಟೆಂಟ್‌ಗಳ ವಿವರದ ರಾಶಿಯಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಶೋಧಿಸುವುದು ಸುಲಭವೇ? ಅದಕ್ಕೆ ನೆರವು ನೀಡಲು ಪೇಟೆಂಟ್ ಬಗೆಗೇ ಶೋಧ ನಡೆಸುವ ವಿಶೇಷ ಸೇವೆ ಇನ್ನು ಲಭ್ಯ. ಸದ್ಯ ಶೋಧ ಅಮೆರಿಕನ್ ಹಕ್ಕುಸ್ವಾಮ್ಯಕ್ಕೆ ಮಾತ್ರಾ ಸೀಮಿತ.ಹಕ್ಕುಸ್ವಾಮ್ಯ ಸಂಖ್ಯೆ, ಹಕ್ಕುಸ್ವಾಮ್ಯ ಪಡೆದವನ ಹೆಸರು ಇತ್ಯಾದಿಗಳ ಮೂಲಕವೂ ಶೋಧ ಸಾಧ್ಯ.

ದಶಮಾನೋತ್ಸವ ಆಚರಿಸುತ್ತಿರುವ ಫ್ಲಾಶ್ ತಂತ್ರಾಂಶ
ಅಂತರ್ಜಾಲದಲ್ಲಿ ಜಾಲಪುಟಗಳನ್ನು ಶ್ರೀಮಂತಗೊಳಿಸುವಲ್ಲಿ ಅನಿಮೇಶನ್ ಚಿತ್ರಗಳಿಗೆ ಅಗ್ರಸ್ಥಾನವಿದೆ. ಪುಟಗಳಿಗೆ ಜೀವ ತುಂಬುವ ಇವುಗಳ ರಚನೆ ಸಾಧ್ಯವಾಗಿರುವುದು ಫ್ಲಾಶ್ ಎನ್ನುವ ತಂತ್ರಾಂಶದ ಮೂಲಕ. ತೊಂಭತ್ತರ ದಶಕದ ಮಧ್ಯಭಾಗದಲ್ಲಿ ಇದರ ಅಭಿವೃದ್ಧಿಯಾದಾಗ ತಂತ್ರಾಂಶಕ್ಕೆ ಫ್ಯೂಚರ್‍ ಫ್ಲಾಶ್ ಎಂದು ಹೆಸರಿತ್ತು. ಪಾತ್ರದ ವಿವಿಧ ಭಂಗಿಗಳ ಕಣಜದಿಂದ ಬೇಕಾದ ಭಂಗಿಗಳನ್ನು ಮತ್ತೆ ಎರವಲು ಪಡೆಯುವ ಮೂಲಕ, ಸೀಮಿತ ಚಿತ್ರಗಳ ಸಹಾಯದಿಂದ ಅನಿಮೇಶನ್ ಮೂಡಿಸುವ ಹೊಸ ತಂತ್ರಜ್ಞಾನ ಇದರಲ್ಲಿ ಬಳಸಲಾಗಿದೆ. ಹಾಗಾಗಿ ಪ್ರತಿ ಕ್ರಿಯೆಗೂ ಸರಣಿ ಚಿತ್ರ ಬರೆಯುವ ತಾಪತ್ರಯ ಫ್ಲಾಶ್ ಬಳಸಿದಾಗ ಇರುವುದಿಲ್ಲ. ಈಗ ನಿಧಾನವಾಗಿ ಈ ತಂತ್ರಾಂಶ ಮೊಬೈಲ್ ಪ್ರವೇಶಿಸುತ್ತಿದೆ.*ಅಶೋಕ್‌ಕುಮಾರ್‍ ಎ