ಈರುಳ್ಳಿ ಸಿಪ್ಪೆಯ ಆರೋಗ್ಯಕರ ಉಪಯೋಗಗಳು
ನಾವು ಯಾವುದಾದರೂ ವಸ್ತು ತುಂಬಾ ತೆಳು ಇದೆ ಎನ್ನುವುದಕ್ಕೆ ಈರುಳ್ಳಿ ಸಿಪ್ಪೆಯಂತೆ ಎಂದು ಹೇಳುವುದಿದೆ. ಈರುಳ್ಳಿ ಎಂಬುದು ಬಹು ತೆಳು ಸಿಪ್ಪೆಗಳಂತಹ ವಸ್ತುಗಳು ಸೇರಿ ಆಗಿರುವ ಒಂದು ಅಪರೂಪದ ಬಹು ಉಪಯೋಗಿ ತರಕಾರಿ. ಈರುಳ್ಳಿಯ ಎಲ್ಲಾ ಭಾಗಗಳು ಅಡುಗೆಗೆ ಬಳಕೆಯಾದರೂ ಹೊರ ಮೈಯಲ್ಲಿರುವ ತೆಳುವಾದ ಒಣ ಸಿಪ್ಪೆ ಬಳಸದೇ ಬಿಸಾಕಿ ಬಿಡುತ್ತಾರೆ. ಈರುಳ್ಳಿ ಸಸ್ಯ ನಿಜಕ್ಕೂ ಬಹು ಉಪಯೋಗಿ. ಅದರ ಸೊಪ್ಪು ಬಹಳ ಆರೋಗ್ಯದಾಯಕ. ಸೊಪ್ಪು ಸೂಪುಗಳಿಗೆ, ಪಲ್ಯ ಮಾಡುವುದಕ್ಕೆ ಬಳಕೆಯಾದರೆ, ಹೂವು ಸಹಾ ಅಡುಗೆ ಖಾದ್ಯಗಳಲ್ಲಿ ಉಪಯೋಗಕ್ಕೆ ಬರುತ್ತದೆ.
ಬಹಳಷ್ಟು ಮಂದಿ ಈರುಳ್ಳಿಯ ಹೊರ ಮೈಯಲ್ಲಿರುವ ಸಿಪ್ಪೆಯನ್ನು ಬಿಸಾಕುತ್ತಾರೆ ಅಥವಾ ಗಿಡಗಳ ಬುಡಕ್ಕೆ ಗೊಬ್ಬರ ರೂಪದಲ್ಲಿ ಹಾಕುತ್ತಾರೆ. ಈರುಳ್ಳಿ ಸಿಪ್ಪೆಯಲ್ಲಿರುವ ಫ್ಲೇವನಾಯ್ಡುಗಳು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ಇದು ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿರಿಸಲು ಸಹಕಾರಿ. ಈರುಳ್ಳಿ ಸಿಪ್ಪೆಗಳು ಫ್ಲೇವನಾಯ್ಡುಗಳಿಂದ ಸಮೃದ್ಧವಾಗಿವೆ.
ನಮ್ಮ ಕೂದಲಿನ ಆರೈಕೆಯಲ್ಲಿ ಈರುಳ್ಳಿ ಸಿಪ್ಪೆಯನ್ನು ಬಳಸಬಹುದಾಗಿದೆ. ಇದು ಕೂದಲಿನ ಆರೋಗ್ಯವನ್ನು ಸುಧಾರಿಸಲು ಬಹುಪಾಲು ನೆರವಾಗುತ್ತದೆ. ಇದಕ್ಕಾಗಿ ನೀವು ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಸುಮಾರು ಒಂದು ಗಂಟೆಯ ಕಾಲ ನೆನೆಸಿ, ಬಳಿಕ ಆ ನೀರಿನಿಂದ ನಿಮ್ಮ ತಲೆ ಕೂದಲನ್ನು ತೊಳೆಯಿರಿ. ಇದರಿಂದ ಅಕಾಲದಲ್ಲಿ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.
ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ ಎ ಪ್ರಮಾಣ ಸಾಕಷ್ಟಿದೆ. ಇದು ನಮ್ಮ ಕಣ್ಣಿನ ದೃಷ್ಟಿಯನ್ನು ಸುಧಾರಿಸುವಲ್ಲಿ ನೆರವಾಗುತ್ತದೆ. ರಾತ್ರಿ ಕುರುಡುತನದಂತಹ ಕಾಯಿಲೆ ಬರುವುದನ್ನು ತಡೆಗಟ್ಟುತ್ತದೆ. ಇದಕ್ಕಾಗಿ ಈರುಳ್ಳಿ ಸಿಪ್ಪೆಯಿಂದ ಚಹಾ ತಯಾರಿಸಿ ನಿಯಮಿತವಾಗಿ ಕುಡಿಯಿರಿ. ಇದು ನಿಮ್ಮ ತ್ವಚೆಯ ಶುಷ್ಕತನವನ್ನೂ ನಿವಾರಿಸುತ್ತದೆ.
ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಈರುಳ್ಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಅದನ್ನು ಒಂದು ಬಾಣಲೆಗೆ ಹಾಕಿ ಬಿಸಿ ನೀರಿನಲ್ಲಿ ಕುದಿಸಿ ಅದನ್ನು ಚೆನ್ನಾಗಿ ಸೋಸಿ ಕುಡಿಯಿರಿ. ಇದು ನಿಮ್ಮ ಹೃದಯದ ಸಮಸ್ಯೆಯನ್ನು ನಿವಾರಿಸುವಲ್ಲಿ ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ. ಹೃದ್ರೋಗಿಗಳಿಗೆ ಈರುಳ್ಳಿ ಸಿಪ್ಪೆ ಒಂದು ರೀತಿಯಲ್ಲಿ ವರದಾನವೆಂದೇ ಹೇಳಬಹುದು.
ಈರುಳ್ಳಿ ಸಿಪ್ಪೆಯಲ್ಲಿ ಅಲ್ಪ ಪ್ರಮಾಣದಲ್ಲಿ ವಿಟಮಿನ್ ಸಿ ಸಹ ಕಂಡು ಬರುತ್ತದೆ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ನಿಮ್ಮ ದೇಹದಲ್ಲಿ ಕಂಡುಬರುವ ವೈರಲ್ ಸೋಂಕಿನ ನಿವಾರಣೆಗಾಗಿ ಈರುಳ್ಳಿ ಸಿಪ್ಪೆಯನ್ನು ಬಳಸಿ. ನಿಮಗೆ ಕಾಡುವ ಕೆಮ್ಮು, ಶೀತ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ.
ಈರುಳ್ಳಿ ಸಿಪ್ಪೆಯ ಹಾಗೇ ಹಸಿ ಈರುಳ್ಳಿ ಸೇವನೆಯೂ ಆರೋಗ್ಯಕ್ಕೆ ಬಹಳ ಉಪಕಾರಿ. ಮಾಂಸಹಾರ ಸೇವನೆ ಮಾಡುವವರು ತಾವು ಊಟ ಮಾಡುವಾಗ ಒಂದೆರಡು ತುಂಡು ಹಸಿ ಈರುಳ್ಳಿ ಸೇವನೆ ಮಾಡಿದರೆ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ